Karnataka Budget: ಹಸಿದವರಿಗೆ ಅನ್ನ ನೀಡುವ ಸರ್ಕಾರವಿದು, ಅಧಿವೇಶನ ಭಾಷಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಹೇಳಿದ 15 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Karnataka Budget: ಹಸಿದವರಿಗೆ ಅನ್ನ ನೀಡುವ ಸರ್ಕಾರವಿದು, ಅಧಿವೇಶನ ಭಾಷಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಹೇಳಿದ 15 ಅಂಶಗಳು

Karnataka Budget: ಹಸಿದವರಿಗೆ ಅನ್ನ ನೀಡುವ ಸರ್ಕಾರವಿದು, ಅಧಿವೇಶನ ಭಾಷಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಹೇಳಿದ 15 ಅಂಶಗಳು

Karnataka Budget session begins: ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಭಾಷಣ ಮಾಡಿದ್ದಾರೆ. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿದೆ.

Karnataka Budget: ಹಸಿದವರಿಗೆ ಅನ್ನ ನೀಡುವ ಸರ್ಕಾರವಿದು, ಬಜೆಟ್‌ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದ ಮುಖ್ಯಾಂಶಗಳು
Karnataka Budget: ಹಸಿದವರಿಗೆ ಅನ್ನ ನೀಡುವ ಸರ್ಕಾರವಿದು, ಬಜೆಟ್‌ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣದ ಮುಖ್ಯಾಂಶಗಳು

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನ ಇಂದು ಜುಲೈ 3ರಿಂದ ಆರಂಭವಾಗಿದ್ದು, ಜುಲೈ 14ರವರೆಗೆ ನಡೆಯಲಿದೆ. ಇಂದು ಮಧ್ಯಾಹ್ನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಭಾಷಣ ಮಾಡಿದ್ದಾರೆ. ಹೊಸ ಭರವಸೆ, ಹೊಸ ಕನಸುಗಳನ್ನು ಹೊತ್ತು ವಿಧಾನಸಭೆಗೆ ಆಗಮಿಸಿರುವ ತಮ್ಮೆಲ್ಲರಿಗೂ ಕರ್ನಾಟಕ ವಿಧಾನ ಮಂಡಲದ ಈ ಜಂಟಿ ಅಧಿವೇಶನಕ್ಕೆ ಸ್ವಾಗತ ಎಂದು ಮಾತು ಆರಂಭಿಸಿದ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹಲವು ಪ್ರಮುಖಾಂಶಗಳನ್ನು ತಿಳಿಸಿದ್ದಾರೆ.

ಅಧಿವೇಶನದಲ್ಲಿ ರಾಜ್ಯಪಾಲರು ಹೇಳಿದ್ದೇನು?

1. ಬಸವಣ್ಣನವರ ತತ್ತ್ವಕ್ಕೆ ತಕ್ಕಂತೆ ಆಡಳಿತ: ಹೊಸ ಸರ್ಕಾರವೊಂದನ್ನು ಆರಿಸುವಾಗ ಜನರ ನಿರೀಕ್ಷೆಗಳೂ ಹೊಸತಾಗಿರುತ್ತವೆ. ಹಳೆಯದಕ್ಕಿಂತ ಭಿನ್ನವಾದ ಮತ್ತು ತಮ್ಮ ಆಶೋತ್ತರಗಳನ್ನು ಪ್ರತಿಬಿಂಬಿಸುವ ಅಡಳಿತವೊಂದನ್ನೇ ಅವರು ನಿರೀಕ್ಷಿಸುತ್ತಿರುತ್ತಾರೆ. ಕಳೆದ 34 ವರ್ಷಗಳಲ್ಲಿ ಯಾರಿಗೂ ನೀಡದ ಬಹುಮತದೊಂದಿಗೆ ಈ ಸರ್ಕಾರವನ್ನು ಜನರು ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆ ಹುಸಿಮಾಡದೆ ಇರಲು ಬಸವಣ್ಣನವರ 'ನುಡಿದಂತೆ ನಡೆಯಬೇಕು' ಎಂಬುದನ್ನು ಸರಕಾರ ಅಳವಡಿಸಿಕೊಂಡಿದೆ.

2. ಜನಕೇಂದ್ರಿತ ಆರ್ಥಿಕತೆ: ಮುಂದಿನ ಐದು ವರ್ಷಗಳಲ್ಲಿ ನನ್ನ ಸರಕಾರವು ಜನಕೇಂದ್ರಿತವಾದ ಆರ್ಥಿಕತೆಗೆ ಒತ್ತು ನೀಡುತ್ತದೆ. ಇದರ ಮೂಲಕ ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಂಸ್ಕೃತಿಕವಾಗಿ ಚೈತನ್ಯರೂಪಿಯಾದ ಆರ್ಥಿಕ ಶಕ್ತಿಯಾಗಿ ಕರ್ನಾಟಕ ಹೊರ ಹೊಮ್ಮುವಂತೆ ಮಾಡುವುದು ನನ್ನ ಸರ್ಕಾರದ ಗುರಿಯಾಗಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ಹೇಳಿದ್ದಾರೆ.

ನವಸಮಾಜ ನಿರ್ಮಾಣ

3. ಜಾತಿ-ಧರ್ಮಗಳ ಬೇಧದ ವಿರುದ್ಧ ಈ ನೆಲವು ಮೊದಲಿನಿಂದಲೂ ಹೋರಾಡುತ್ತ ಬಂದಿದೆ. ಕರ್ನಾಟಕದ ಮೊದಲ ಲಭ್ಯ ಕೃತಿ ಕವಿರಾಜಮಾರ್ಗದಲ್ಲಿ ಪರ ಧರ್ಮಗಳನ್ನು, ಪರ ಬದುಕಿನ ನೀತಿಗಳನ್ನು ಗೌರವಿಸುವುದೇ ನಿಜವಾದ ಬಂಗಾರದ ಒಡವೆ' ಎಂದು ಹೇಳಿದ್ದಾರೆ. ಆನಂತರ ಕನ್ನಡದ ಆದಿಕವಿ ಪಂಪ 'ಮನುಷ್ಯ ಜಾತಿ ತಾನೊಂದೆ ವಲಂ ಅಂದರೆ ಇಡೀ ಮನುಷ್ಯ ಸಂಕುಲವೇ ಒಂದು' ಎಂದು ಹೇಳಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಇದನ್ನು 'ಸರ್ವ ಜನಾಂಗದ ಶಾಂತಿಯ ತೋಟʼ ಎಂದಿದ್ದಾರೆ. ಕರ್ನಾಟಕ ಸರಕಾರದಿಂದ ಜನರು ಇಂತಹ ಆಡಳಿತವನ್ನೇ ಬಯಸಿದ್ದಾರೆ.

4. ಸಾರ್ವಜನಿಕವಾಗಿ ಸಂವಿಧಾನಬದ್ಧವಾದ, ಶಾಂತಿ ಮತ್ತು ಪ್ರೇಮಭಾವದಿಂದ ಇರಲು ಬೇಕಾದ ಮನೋಭಾವವನ್ನು ಎಲ್ಲರಲ್ಲೂ ತರಲು ನಾವು ಪುಯತ್ನಿಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ಬುದ್ಧ, ಬಸವ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್, ಕುವೆಂಪುರವರಂತಹವರು ಕನಸು ಕಂಡಿದ್ದ ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ನಾವು ಪ್ರಾಮಾಣಿಕ ಪುಯತ್ನ ಮಾಡುತ್ತೇವೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

5. ಸಂಕುಚಿತವಾದಿ ಮನಸ್ಸುಗಳು ಗಂಡು ಹೆಣ್ಣುಗಳ ನಡುವ ಹಾಗೂ ಸಮಾಜದ ವಿವಿಧ ಸಮುದಾಯಗಳ ನಡುವ ತಾರತಮ್ಯ, ಒಡುಗಳನ್ನು ಸೃಷ್ಟಿಸಿತ್ತು. ಸಮಾಜದ ವಿವಿಧ ಪದರಗಳಲ್ಲಿ ಈ ರೀತಿಯ ಮನಸ್ಥಿತಿಯ ಅವಶೇಷಗಳು ಇನ್ನೂ ಜೀವಂತವಾಗಿ ಉಳಿದುಕೊಂಡಿವೆ. ಅದಕ್ಕೆ ವಿರುದ್ಧವಾಗಿಯೇ ಬಾಬಾಸಾಹೇಬ್ ಅಂಬೇಡ್ಕರವರ ನೇತೃತ್ವದಲ್ಲಿ ಸಂವಿಧಾನ ದಾರಿಯಲ್ಲಿ ನಡೆದು ಸಮಾಜದ ಎಲ್ಲ ವರ್ಗಗಳ ಜನರನ್ನು ಅಭಿವೃದ್ಧಿ ಮತ್ತು ನೆಮ್ಮದಿಯ ಕಡೆಗೆ ಮುನ್ನಡೆಸಲು ನನ್ನ ಸರ್ಕಾರವು ಬದ್ಧವಾಗಿದೆ. ದ್ವೇಷರಹಿತ, ಪ್ರೀತಿಯುಕ್ತ ಸಮಾಜವನ್ನು ನಿರ್ಮಾಣ ಮಾಡಲು ಈ ಸರ್ಕಾರವು ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಹೊಸ ಆಡಳಿತದ ಮಾದರಿ

6. ಇಂದು ಶಾಸನಾತ್ಮಕ ಸ್ವಾಯತ್ತತೆಗಳನ್ನು ಸಮರ್ಥವಾಗಿ ಬಲಪಡಿಸಬೇಕಾಗಿದೆ. ಇವೆಲ್ಲದರ ಪರಿಣಾಮವಾಗಿ ಒಮ್ಮೆ ಇಡೀ ದೇಶದಲ್ಲಿ ತಲೆಯೆತ್ತಿ ನಿಂತಿದ್ದ, ದೇಶದ ಬೊಕ್ಕಸಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಈ ರಾಜ್ಯವು ಒಂದು ರೀತಿಯ ಸಂಕಟದ ಸ್ಥಿತಿಯಲ್ಲಿ ನಿಂತುಬಿಟ್ಟಿದೆ. ಈ ಆರ್ಥಿಕ ಸ್ಥಿತಿಯಿಂದ ಕರ್ನಾಟಕವನ್ನು ಮೇಲೆತ್ತುವುದು ನನ್ನ ಸರ್ಕಾರದ ಆದ್ಯತೆಯಾಗಲಿದೆ. ರಾಜ್ಯದ ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿಯನ್ನು ನನ್ನ ಸರಕಾರ ದೇಶಕ್ಕೆ ಪರಿಚಯಿಸಲಿದೆ ಎಂದು ರಾಜ್ಯಪಾಲರು ತಮ್ಮ ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ

7. ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಪ್ರಸ್ತುತ 5 ಕೆಜಿ ಅಕ್ಕಿಯನ್ನು ಕೊಡಲಾಗುತ್ತಿದೆ. ಇದರ ಜೊತೆಗೆ ನನ್ನ ಸರ್ಕಾರದ ಅನ್ನಭಾಗ್ಯ, ಯೋಜನೆಯಡಿ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಪುತಿ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ಕೊಡಲು ತಕ್ಷಣದಿಂದಲೇ ಪ್ರಾರಂಭಿಸುತ್ತಿದ್ದೇವೆ. ಇದರ ಮೂಲಕ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ಹಸಿವು ಮುಕ್ತ ನಾಡನ್ನು ಕಟ್ಟಲು ನಾವು ಬದ್ಧರಾಗಿದ್ದೇವೆ. ತಕ್ಷಣದಿಂದಲೇ ಈ ಯೋಜನೆಯನ್ನು ಪ್ರಾರಂಭಿಸುತ್ತಿರುವುದರಿಂದ ಅಗತ್ಯವಿರುವ ಹೆಚ್ಚುವರಿ ಅಕ್ಕಿ ದೊರೆಯುವವರೆಗೆ ಪ್ರತಿ ತಿಂಗಳು, ಬಡತನ ರೇಖೆಗಿಂತ ಕೆಳಗೆ ಇರುವ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ. ಅಕ್ಕಿಗೆ ಬದಲಿಯಾಗಿ ರೂ.34 ರಂತ ಹಣವನ್ನು ಅವರವರ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡಲಾಗುವುದು ಎಂದರು.

8. ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು, ನಿರಾಶ್ರಿತರು ಮುಂತಾದವರ ಹಸಿವನ್ನು ತಣಿಸಲು ಹಿಂದೆ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು. ಈ ಕ್ಯಾಂಟೀನ್‌ಗಳು ಲಕ್ಷಾಂತರ ಜನರ ಹಸಿದ ಹೊಟ್ಟೆ ತುಂಬಿಸಿ ತೃಪ್ತಿ ನೀಡಿವೆ. ಇವುಗಳನ್ನು ಇನ್ನೂ ಸಮರ್ಥವಾಗಿ ನಾವು ನಡೆಸುತ್ತೇವೆ. ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನ್‌ಗಳ ಮೂಲಕ ನನ್ನ ಸರ್ಕಾರವು ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ ಎಂದು ರಾಜ್ಯಪಾಲರು ತಮ್ಮ ಅಧಿವೇಶನ ಭಾಷಣದಲ್ಲಿ ಹೇಳಿದ್ದಾರೆ.

ಯುವನಿಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಬೆಂಬಲ

9. ಯುವನಿಧಿ ಯೋಜನೆಯ ಅಡಿಯಲ್ಲಿ 2022-23 ರಲ್ಲಿ ಉತ್ತೀರ್ಣರಾಗಿ 6 ತಿಂಗಳೊಳಗೆ ಉದ್ಯೋಗ ದೊರಕದ ನಿರುದ್ಯೋಗಿ ಪದವೀಧರ/ ಸ್ನಾತಕೋತ್ತರ ಪದವೀಧರರಿಗೆ ತಿಂಗಳಿಗೆ de.3,000/- ಮತ್ತು ನಿರುದ್ಯೋಗಿ ಡಿಪೋ ಮಾದಾರರಿಗೆ ಪ್ರತಿ ತಿಂಗಳಿಗೆ ರೂ.1,500/- ನೀಡುವ ಯೋಜನೆಯನ್ನು ನನ್ನ ಸರ್ಕಾರವು ರೂಪಿಸಿದೆ. ಈ ಯೋಜನೆಯಡಿ ಅವರಿಗೆ 24 ತಿಂಗಳುಗಳ ಕಾಲ ಅಥವಾ ಉದ್ಯೋಗ ಸಿಗುವವರೆಗೆ/ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಭಿಗಳಾಗುವವರೆಗೆ ಯಾವುದು ಮೊದಲೋ - ಅಲ್ಲಿಯವರೆಗೆ ಭತ್ಯೆಯನ್ನು ನೀಡಲಾಗುವುದು, ಇದರಿಂದಾಗಿ ಯುವಕರು ಮತ್ತು ಅವರ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಬೆಂಬಲ ಮತ್ತು ಘನತೆಯನ್ನು ಒದಗಿಸಿದಂತಾಗುವುದು ಎಂದರು.

ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌

10. ಗ್ರಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದರಿಂದ ಸುಮಾರು 2.14 ಕೋಟಿ ಕುಟುಂಬಗಳ ಗ್ರಾಹಕರಿಗೆ ಪುಯೋಜನವಾಗುತ್ತದೆ. ಇದರಿಂದಾಗಿ ರಾಜ್ಯದ ಶೇ.98 ರಷ್ಟು ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ ಎಂಬುದು ನನ್ನ ಸರ್ಕಾರಕ್ಕೆ ಸಂತೋಷ ನೀಡುವ ಸಂಗತಿಯಾಗಿದೆ ಎಂದು ರಾಜ್ಯಪಾಲರು ತಮ್ಮ ಅಧಿವೇಶನದ ಭಾಷಣದಲ್ಲಿ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣ

11. ರಾಜ್ಯ ಸರಕಾರವು ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಎಂబ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯಡಿ ತತ್ತರಿಸಿರುವ ಮಹಿಳೆಯರಿಗೆ ಇದರಿಂದಾಗಿ ಆರ್ಥಿಕ ಚೈತನ್ಯ ಲಭಿಸಲಿದೆ. ತಿಂಗಳು ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಯರಿಗೆ 2,000/- ರೂಪಾಯಿ ನೀಡುತ್ತೇವೆ ಎಂದರು. ಇಂದು ಜಗತ್ತಿನ ಅನೇಕ ದೇಶಗಳು ಜನಕೇಂದ್ರಿತ ಆರ್ಥಿಕತೆಯನ್ನು ಪ್ರತಿಪಾದಿಸುತ್ತಿವೆ. ಈ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯ (Universal Basic Income) ಎಂಬ ಪರಿಕಲ್ಪನೆಯು ಪಬಲಗೊಳ್ಳುತ್ತಿದೆ. ಇದು ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ತುಸುವಾದರೂ ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ. ಮಾನವೀಯತೆ ಮತ್ತು ಅಭಿವೃದ್ಧಿಪರ ಚಿಂತನೆಯೊಂದಿಗೆ ವಿಕಾಸವಾಗುತ್ತಿರುವ ಈ ಆರ್ಥಿಕ ನೀತಿಯು, ಸಂಪತ್ತು, ಕೆಲವರ ಕೈಯಲ್ಲೇ ಕೇಂದ್ರೀಕೃತಗೊಳ್ಳುವುದನ್ನು ಇಲ್ಲವಾಗಿಸುತ್ತದೆ. ಒಂದರ್ಥದಲ್ಲಿ ಇದು ಬೆಲೆ ಏರಿಕೆ ಹಾಗೂ ಕಡಿಮೆ ಆದಾಯದಿಂದ ತತ್ತರಿಸಿರುವ ಜನರಿಗೆ ಘನತೆಯನ್ನು ತಂದುಕೊಡುತ್ತದೆ. ನನ್ನ ಸರ್ಕಾರವು ಈ ಯೋಜನಗಳ ಮೂಲಕ ಹೊಸ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ ಎಂದರು.

ಭ್ರಷ್ಟಚಾರ ಮಟ್ಟಹಾಕುವ ನಿರ್ಧಾರ

12. ಹಲವು ಕಾರಣಗಳಿಂದ ನಮ್ಮ ವ್ಯವಸ್ಥೆಯೊಳಗ ಬಿಟ್ಟಿದ ಇದನ್ನು ತೊಡೆದು ಹಾಕುವುದು ದೊಡ್ಡ ಸವಾಲು. ಸವಾಲನ್ನು ಎದುರಿಸಿ, ಭ್ರಷ್ಟಾಚಾರವನ್ನು ಮಾಡಲು ನಾನು ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇವೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಅಡಳಿತಾತ್ಮಕ, ಶಾಸನಾತ್ಮಕ ಕ್ರಮಗಳನ್ನು ಈ ಸರ್ಕಾರವು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ

13. ಶಾಲಾ ಶಿಕ್ಷಣವು ಸಮಾಜದ ಅಡಿಪಾಯವಂದು ಗುರುತಿಸಲ್ಪಟ್ಟಿದೆ. ಪ್ರತಿ ಮಗುವಿನ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ನಾವು ವಿಶೇಷವಾದ ಯೋಜನೆಗಳನ್ನು ರೂಪಿಸಿ, ಅನುಷ್ಠಾನ ಮಾಡುತ್ತೇವೆ. ಪ್ರತಿ ಮಗುವು ಕೂಡ ದೇಶದ ಸಂಪತ್ತು ಎಂಬ ಪ್ರಾಥಮಿಕ ತಿಳುವಳಿಕೆಯ ಮೂಲಕ ಆಡಳಿತ ನಡೆಸಲು ನಾವು ಬದ್ಧರಾಗಿದ್ದೇವೆ. ಶಿಕ್ಷಣದ ಜೊತೆಗೆ ಮಕ್ಕಳ ಅರೋಗ ರಕ್ಷಣೆಯೂ ನನ್ನ ಸರ್ಕಾರದ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನನ್ನ ಸರ್ಕಾರವು ಸಮರ್ಥವಾಗಿ ನಿಭಾಯಿಸುತ್ತದೆ. . ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ತರಗತಿಗಳಲ್ಲಿ ಪ್ರಾಧ್ಯಾಪಕರಂತೆಯೇ ಸ್ಥಳೀಯ ಜ್ಞಾನದ ಪರ್ವತಗಳಾಗಿರುವ ರೈತರು, ಕುಶಲಕರ್ಮಿಗಳು, ವಿವಿಧ ಕ್ಷೇತ್ರಗಳ ತಜ್ಞರು ಪಾಲ್ಗೊಳ್ಳುವುದು ಅಗತ್ಯ. ಅದಕ್ಕೆ ಬೇಕಿರುವ ಆಡಳಿತಾತ್ಮಕ ಚೌಕಟ್ಟುಗಳನ್ನು ನನ್ನ ಸರ್ಕಾರ ರೂಪಿಸಿ ಅನುಷ್ಠಾನ ಮಾಡುತ್ತದೆ ಎಂದು ರಾಜ್ಯಪಾಲರು ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ.

ಬಡವರ ಕಲ್ಯಾಣ, ಆರೋಗ್ಯ ವ್ಯವಸ್ಥೆ ಸುಧಾರಣೆ

14. ಪೌರಕಾರ್ಮಿಕರು, ಚಾಲಕರು, ಬೀದಿಬದಿ ವ್ಯಾಪಾರಿಗಳು, ಗಾರ್ಮಂಟ್ ಕೆಲಸಗಾರರು, ಕಣ್ಮರ ಕಾರ್ಮಿಕರು, ಅಸಂಘಟಿತ ಮತ್ತು ಗಿಗ್ ಕಾರ್ಮಿಕರು, ಹಿರಿಯ ನಾಗರಿಕರು, ವಿಶೇಷ ಚೇತನರು, ದೇವದಾಸಿಯರು, ಲೈಂಗಿಕ ಅಲ್ಪಸಂಖ್ಯಾತರು. ಸೇರಿದಂತೆ ಎಲ್ಲ ವರ್ಗಗಳ ಕಲ್ಯಾಣವನ್ನು ಕೈಗೆತ್ತಿಕೊಳ್ಳಲಿದೆ. ಅಲ್ಲದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರಿಗೆ, ಶಿಕ್ಷಣ, ಹಾಸ್ಟೆಲ್, ವಸತಿ ಮತ್ತು ಉದ್ಯೋಗಗಳ ಸವಲತ್ತುಗಳನ್ನು ಒದಗಿಸುವುದಕ್ಕಾಗಿ ನನ್ನ ಸರ್ಕಾರವು ಕ್ರಿಯಾಶೀಲವಾದ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದೆ. ಎಲ್ಲರಿಗೂ, ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ನೀಡಬೇಕೆಂಬ ಮಹತ್ತರವಾದ ಗುರಿಯನ್ನು ನಿಗದಿಪಡಿಸಿಕೊಂಡಿದೆ ಎಂದರು.

ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ವಸತಿ

15. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ವಸತಿಯನ್ನು ಕಲ್ಪಿಸುವುದು ಸರ್ಕಾರದ ಪ್ರಧಾನ ಆದ್ಯತೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಆದ್ಯತೆಯ ಮೇಲೆ ವಸತಿರಹಿತರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಳ್ಳಲು ರಾಜ್ಯದ ಜನರಿಗೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲು ಸರ್ಕಾರವು ಬದ್ಧವಾಗಿದೆ ಎಂದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.