Kerala News: ಕೊಚ್ಚಿನ್ - ದುಬೈ ನಡುವೆ ಪ್ಯಾಸೆಂಜರ್ ಶಿಪ್ ಸಂಚಾರ ಶೀಘ್ರ, ಟಿಕೆಟ್ ದರ 10,000 ರೂಪಾಯಿ ಮತ್ತು ಗಮನಿಸಬೇಕಾದ 5 ಅಂಶಗಳು
ದುಬೈ – ಕೊಚ್ಚಿನ್ ನಡುವೆ ಪ್ಯಾಸೆಂಜರ್ ಶಿಪ್ ಸೇವೆ ಶೀಘ್ರವೇ ಶುರುವಾಗಲಿದೆ. ವಿಮಾನ ಯಾನಕ್ಕೆ ಹೋಲಿಸಿದರೆ ಪ್ರಯಾಣದ ದರ ಕಡಿಮೆ ಇರಲಿದ್ದು, ಪ್ರಯಾಣದ ಅವಧಿ ಹೆಚ್ಚಿರಲಿದೆ. ಸದ್ಯ ಈ ಪ್ಯಾಸೆಂಜರ್ ಶಿಪ್ ಸುದ್ದಿ ಕೇರಳದಲ್ಲಿ ಸಂಚಲನ ಮೂಡಿಸಿದೆ. ಇದರ ವಿವರ ಇಲ್ಲಿದೆ.
ಕಾಸರಗೋಡು: ಮಧ್ಯಮ ವರ್ಗದ ಜೀವನಶೈಲಿಯಲ್ಲಿ ಹಣ ಉಳಿತಾಯ ಮಾಡುವ ಮನಸ್ಸಿರುವ ದುಬೈಗೆ ತೆರಳುವ ಕೇರಳಿಗರಿಗೆ ಹಾಗೂ ದುಬೈನಿಂದ ಕೇರಳಕ್ಕೆ ಮರಳುವವರಿಗೆ ಶುಭ ಸುದ್ದಿ.
ಕೇವಲ 10 ಸಾವಿರ ರೂಪಾಯಿಯಲ್ಲಿ ನೀವು ಕೊಚ್ಚಿನ್‌ನಿಂದ ದುಬೈಗೆ ಹಾಗೂ ದುಬೈನಿಂದ ಕೊಚ್ಚಿನ್‌ಗೆ ಸಂಚರಿಸಬಹುದು. ಕುಟುಂಬ ಪ್ರಯಾಣ ಮಾಡುವವರಿಗೂ ಇದು ಅನುಕೂಲ. ಹಾಗೆಯೇ ಒಮ್ಮೆ ದುಬೈ ನೋಡಬೇಕು ಎಂದು ಹೋಗುವವರಿಗೂ ಇದು ಲಾಭ.
1 ಕೊಚ್ಚಿನ್ - ದುಬೈ ನಡುವೆ ಪ್ಯಾಸೆಂಜರ್ ಶಿಪ್ ಸಂಚಾರ ಯಾವಾಗ ಶುರು
ದುಬೈನಿಂದ ಕೊಚ್ಚಿನ್ ಪ್ಯಾಸೆಂಜರ್ ಹಡಗು ಸೇವೆ ನವೆಂಬರ್ ನಲ್ಲಿ ಆರಂಭಗೊಳ್ಳಲಿದೆ. ಇದರಿಂದ ಅನಿವಾಸಿ ಮಲೆಯಾಳಿಗಳಿಗೆ ಅನುಕೂಲ. ಕುಟುಂಬ ಪ್ರಯಾಣಕ್ಕೆ ಇಲ್ಲಿದೆ ಮನರಂಜನಾ ಸೌಲಭ್ಯ. ಮೂರು ದಿನಗಳ ಕಾಲ ಜಾಲಿ ಟ್ರಿಪ್ ಮಾಡಬಹುದು.
2 ಕೊಚ್ಚಿನ್ - ದುಬೈ ನಡುವೆ ಪ್ಯಾಸೆಂಜರ್ ಶಿಪ್‌ನಲ್ಲಿ ಪ್ರಯಾಣದ ಅವಧಿ ಎಷ್ಟು ದಿನ
ಇದರಲ್ಲಿ ಪ್ಲಸ್ ಮತ್ತು ಮೈನಸ್ ಎರಡೂ ಇದೆ. ದುಬೈ ನಿಂದ ಕೊಚ್ಚಿ ವರೆಗೆ ಹಡಗು ಪ್ರಯಾಣಕ್ಕೆ ಮೂರು ದಿನಗಳು ಬೇಕು. ಅಂದರೆ ರಜೆ ಹಾಕಿ ಊರಿಗೆ ಹೊರಡುವವರು, ಮೂರು ದಿನ ಹಡಗಲ್ಲೇ ಕಾಲ ಕಳೆಯಬೇಕು.
3 ಕೊಚ್ಚಿನ್ - ದುಬೈ ನಡುವೆ ಪ್ಯಾಸೆಂಜರ್ ಶಿಪ್‌ನಲ್ಲಿ ಪ್ರಯಾಣದ ಪ್ಲಸ್ ಮತ್ತು ಮೈನಸ್ ಪಾಯಿಂಟ್ಸ್ ಏನು
ವಿಮಾನದಲ್ಲಿ ಕೆಲವೇ ಗಂಟೆಗಳಲ್ಲಿ ಮನೆಗೆ ತಲುಪಬಹುದು. ಇದು ಕೇವಲ ಪ್ರಯಾಣದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೋಗುವವರಿಗೆ ಮೈನಸ್. ಆದರೆ ಹಡಗಿನಲ್ಲಿ ಪ್ಲಸ್ ಪಾಯಿಂಟ್ ಗಳು ಹಲವಾರಿವೆ. ಅವುಗಳಲ್ಲಿ ವಿಶೇಷವಾಗಿ ದುಬೈ ಯಾತ್ರಿಕರಿಗೆ ಇದು ಹೊಸ ಅನುಭವ ನೀಡುತ್ತದೆ.
4 ಕೊಚ್ಚಿನ್ - ದುಬೈ ನಡುವೆ ಪ್ಯಾಸೆಂಜರ್ ಶಿಪ್‌ನಲ್ಲಿ ಎಷ್ಟು ಜನ ಪ್ರಯಾಣಿಸಬಹುದು
ಹಡಗಿನಲ್ಲಿ 1,250 ಜನರು ಪ್ರಯಾಣಿಸಲು ಅವಕಾಶವಿದೆ. ಒಬ್ಬ ವ್ಯಕ್ತಿ 200 ಕೆಜಿಯಷ್ಟು ಸಾಮಾನು, ಸರಂಜಾಮು ಸಾಗಿಸಬಹುದು. ತಮಗಿಷ್ಟವಾದ ಆಹಾರ ಆಯ್ಕೆ ಮಾಡಬಹುದು. ಕುಟುಂಬ ಪ್ರಯಾಣದ ಸಂದರ್ಭ, ಮನರಂಜನಾ ಸೌಲಭ್ಯಗಳ ಪ್ರಯೋಜನವನ್ನೂ ಪಡೆಯಬಹುದು. ಅಲ್ಲದೆ ಪ್ರಯಾಣದರವೂ ಕಡಿಮೆ.
5 ಕೊಚ್ಚಿನ್ - ದುಬೈ ನಡುವೆ ಪ್ಯಾಸೆಂಜರ್ ಶಿಪ್‌ನಲ್ಲಿ ಪ್ರಯಾಣ ದರ ಎಷ್ಟು
ಸೀಸನ್ ಗಳಲ್ಲಿ 25 ಸಾವಿರ ರೂಪಾಯಿಗಿಂತ ಹೆಚ್ಚಿನ ಟಿಕೆಟ್ ದರ ವಿಮಾನಗಳಿಗೆ ಇದೆ. ಹಡಗು ಸೇವೆ ಆರಂಭಿಸಿದರೆ, ಟಿಕೆಟ್ ಗೆ 440ರಿಂದ 660 ಯುಎಇ ದಿರ್ಹಂ ವರೆಗೆ ದರ ನಿಗದಿಯಾಗಬಹುದು. ಅಂದರೆ, 10 ಸಾವಿರ ರೂಗಳಿಂದ 15 ಸಾವಿರ ರೂಗಳವರೆಗೆ ದರ ನಿಗದಿಯಾಗುತ್ತದೆ.
ಕೊಚ್ಚಿನ್ - ದುಬೈ ನಡುವೆ ಪ್ಯಾಸೆಂಜರ್ ಶಿಪ್ ವಸರ್ಸ್ ವಿಮಾನ ಯಾನ, ಯಾವುದು ಬೆಸ್ಟ್
ದುಬೈ ಕೊಚ್ಚಿ ಮಧ್ಯೆ ಪ್ಯಾಸೆಂಜರ್ ಹಡಗು ಸೇವೆಯನ್ನು ನವೆಂಬರ್ ನಲ್ಲಿ ಪ್ರಾರಂಭಿಸಿದರೆ, ಲಾಭವಾಗುವುದು ಅನಿವಾಸಿ ಮಲೆಯಾಳಿಗರಿಗೆ. ಕಡಿಮೆ ವೆಚ್ಚದಲ್ಲಿ ಮನೆಗೆ ಮರಳಲು ಇದು ಸಹಕಾರಿಯಾಗುತ್ತದೆ. ಕೇರಳ ರಾಜ್ಯ ಸರಕಾರ, ಶಾರ್ಜಾ ಇಂಡಿಯನ್ ಅಸೋಸಿಯೇಶನ್, ನೋರ್ಕ, ಅನಂತಪುರ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಹಕಾರದಲ್ಲಿ ಈ ಹಡಗು ಸೇವೆ ಆರಂಭಗೊಳ್ಳಲಿದೆ.
ಮೊದಲು ಪ್ರಾಯೋಗಿಕ ಪರೀಕ್ಷೆ ನೆಲೆಯಲ್ಲಿ ಸೇವೆ ಆರಂಭಗೊಳ್ಳುತ್ತದೆ. ಅದು ಯಶಸ್ವಿಯಾದರೆ, ಹೆಚ್ಚಿನ ಸೇವೆ ಆರಂಭಿಸಲಾಗುವುದು. ಕೊಚ್ಚಿ ಅಲ್ಲದೆ, ಬೇಪುರ್ ಮತ್ತು ವಿಯಿಂಞಗೆ ಹೆಚ್ಚುವರಿ ಸೇವೆ ಸಿಗುವ ಸಾಧ್ಯತೆಗಳೂ ಇವೆ.
ಪ್ರಸ್ತುತ ಸನ್ನಿವೇಶದಲ್ಲಿ ವಿಮಾನ ಟಿಕೆಟ್ ದರ ಗಗನಕ್ಕೇರುತ್ತಿದೆ. ಕಡಿಮೆ ದರದಲ್ಲಿ ಹಡಗು ಪ್ರಯಾಣ ಇದರಿಂದ ಲಾಭವಾಗಲಿದೆ. ಹಗಡು ಸೇವೆಗೆ ಹೆಚ್ಚಿನ ಜನಪ್ರಿಯತೆ ಲಭಿಸಿದರೆ, ವಿಮಾನಯಾನ ದರವೂ ಕಡಿಮೆ ಆಗಬಹುದು. ಇದರಿಂದ ಎರಡು ಲಾಭವಿದೆ. ತುರ್ತು ಆಗಮಿಸುವವರಿಗೆ ವಿಮಾನ, ಹಾಯಾಗಿ ಬರಲು ಹಡಗು.
-ವರದಿ- ಹರೀಶ ಮಾಂಬಾಡಿ