ಅಂಗನವಾಡಿಯಲ್ಲಿ ಬಿರಿಯಾನಿ, ಚಿಕನ್ ಫ್ರೈ ಕೊಡಿ ಎಂದ ಪುಟ್ಟ ಬಾಲಕ, ಸ್ಪಂದಿಸಿದ್ರು ಕೇರಳದ ಸಚಿವೆ ವೀಣಾ ಜಾರ್ಜ್- ವಿಡಿಯೋ ವೈರಲ್
Kerala Anganwadi Food: ಮನೆಯಲ್ಲಿ ಉಪ್ಪಿಟ್ಟು ಮಾಡಿದರೆ ತಿನ್ನದಿರುವ ಜನಗಳಿರುವಾಗ, ಪುಟ್ಟ ಮಕ್ಕಳಿಗೆ ಉಪ್ಪಿಟ್ಟು ಕೊಟ್ಟರೆ ಕೇಳ್ತಾರಾ… ಅವರಿಗೂ ಬಗೆಬಗೆಯ ಆಹಾರ ತಿನ್ನಬೇಕೆಂಬ ಆಸೆ ಇರೋದಿಲ್ವಾ.. ಹೌದು, "ಅಂಗನವಾಡಿಯಲ್ಲಿ ಬಿರಿಯಾನಿ, ಚಿಕನ್ ಫ್ರೈ ಕೊಡಿ' ಎಂದ ಪುಟ್ಟ ಬಾಲಕನ ವಿಡಿಯೋ ವೈರಲ್ ಆಯಿತು. ಕೇರಳದ ಸಚಿವೆ ಅದಕ್ಕೆ ಸ್ಪಂದಿಸಿ ಹೇಳಿರುವುದಿಷ್ಟು-

Kerala Anganwadi Food: ಸಾಮಾಜಿಕ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಕೆಲವೊಂದು ವಿಚಾರಗಳು ಬಹಳ ಬೇಗ ಗಮನಸೆಳೆಯುತ್ತವೆ. ಅಂಗನವಾಡಿ ಆಹಾರ ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೇರಳದ ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳಿಗೆ ಉಪ್ಪಿಟ್ಟು ಕೊಡ್ತಾರೆ. ಆದರೆ, ಈ ಉಪ್ಪಿಟ್ಟು ಪುಟ್ಟ ಮಕ್ಕಳಿಗೆ ಇಷ್ಟವಾಗುತ್ತಿಲ್ಲ. ಅದನ್ನು ಪುಟ್ಟ ಬಾಲಕನೊಬ್ಬ ನೇರವಾಗಿ ಹೇಳಿದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಕೇರಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಸ್ಪಂದಿಸಿರುವುದು ಎಲ್ಲರ ಗಮನಸೆಳೆದಿದೆ.
ಅಂಗನವಾಡಿಯಲ್ಲಿ ಬಿರಿಯಾನಿ, ಚಿಕನ್ ಫ್ರೈ ಕೊಡಿ ಎಂದ ಪುಟ್ಟ ಬಾಲಕ- ವಿಡಿಯೋ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ವೀಣಾ ಜಾರ್ಜ್ ಅವರು ಸೋಮವಾರ ಶಂಕು ಎಂಬ ಮಗುವಿನ ವಿಡಿಯೋವನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ಆ ಮಗುವಿನ ವಿನಂತಿ ಪ್ರಕಾರ, ಅಂಗನವಾಡಿಯ ಮೆನು ಪರಿಷ್ಕರಿಸಲಾಗುವುದು ಎಂದು ಘೋಷಿಸಿದ್ದಾರೆ.
ಆ ಪುಟ್ಟ ಬಾಲಕ ಬಹಳ ಮುಗ್ಧವಾಗಿ ಮಾಡಿರುವ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದ ಸಚಿವೆ ವೀಣಾ ಜಾರ್ಜ್, ಶಂಕು ಮತ್ತು ಆತನ ತಾಯಿಗೆ ಶುಭ ಹಾರೈಸಿದ್ದಾರೆ. ಅಲ್ಲದೆ, ಶಂಕು ಮಾಡಿದ ಮನವಿಯನ್ನು ಪರಿಗಣಿಸಲಾಗಿದೆ. ಅಂಗನವಾಡಿಗೆ ಪೂರೈಕೆಯಾಗುವ ಆಹಾರ ಪೌಷ್ಟಿಕಾಂಶಗಳಿಂದ ಕೂಡಿರುವುದನ್ನು ಖಾತರಿಮಾಡಿಕೊಳ್ಳಲಾಗುತ್ತದೆ. ಈಗ ಮಗುವಿನ ಮನವಿಯನ್ನು ಮಾನ್ಯಮಾಡಿ ಮೆನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದರು.
ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ ಪುಟ್ಟ ಸಂಭಾಷಣೆ ಇದೆ. ಅಂಗನವಾಡಿ ಟೀಚರ್ ಮತ್ತು ಬಾಲಕ ಶಂಕು ನಡುವಿನ ಮಾತುಕತೆ ಇದು. ಈ ಮಾತುಕತೆಯನ್ನು ವಿಡಿಯೋ ಮಾಡಿದ್ದು ಆತನ ತಾಯಿ ಎಂಬುದನ್ನು ಸಚಿವೆ ವೀಣಾ ಜಾರ್ಜ್ ಹೇಳಿಕೊಂಡಿದ್ದಾರೆ. ಬಾಲಕ ಮತ್ತು ಟೀಚರ್ ನಡುವಿನ ಮಾತುಕತೆ ಗಮನಿಸೋಣ.
ಬಾಲಕ - ಬಿನಿಯಾನಿ ತರೆಣು (ಬಿರಿಯಾನಿ ಕೊಡಬೇಕು)
ಟೀಚರ್- ಎವಿಡೆ (ಎಲ್ಲಿ)
ಬಾಲಕ - ಅಂಗನವಾಡೀಲಿ (ಅಂಗನವಾಡಿಯಲ್ಲಿ)
ಟೀಚರ್ - ಅಂಗನವಾಡೀಲಿ ಎಂದೋ ವೇಂಡೆ (ಅಂಗನವಾಡಿಯಲ್ಲಿ ಏನು ಬೇಕು)
ಬಾಲಕ - ಬಿನಿಯಾನಿ, ಉಪ್ಮಾ, ಉಪ್ಮಾ ಬಿಟ್ಟಿಟ್ ಬಿನಿಯಾನಿ ( ಬಿರಿಯಾನಿ, ಉಪ್ಪಿಟ್ಟು, ಉಪ್ಪಿಟ್ಟು ಬಿಟ್ಟು ಬಿರಿಯಾನಿ)
ಟೀಚರ್- ಸಣ್ಣ ನಗುವಿನೊಂದಿಗೆ ಕೇಳ್ತಾರೆ - ಉಪ್ಮಾ ಉಪ್ಮಾ ಬಿಟ್ಟಿಟ್.. ( ಉಪ್ಪಿಟ್ಟು, ಉಪ್ಪಿಟ್ಟು ಬಿಟ್ಟು… )
ಬಾಲಕ - ಅದೂಂ.. ಪೊರಿಚ್ಚ ಕೋಯಿಯೂಂ… (ಅದರ ಜೊತೆಗೆ ಚಿಕನ್ ಫ್ರೈ)
ಟೀಚರ್- ಹ್ಞಾಂ ಪರೆಯಾ ಕೇಟ್ಟೋ, ಪರಾಧಿ ಅರಿಯಿಕ್ಕಾ ಕೇಟ್ಟೋ (ಹ್ಞಾಂ ಹೇಳ್ತೇನೆ ಆಯಿತಾ. ಅಹವಾಲು ತಿಳಿಸ್ತೇನೆ ಆಯಿತಾ )
ಬಾಲಕ - ಹ್ಞೂಂ..
ಸಚಿವೆ ವೀಣಾ ಜಾರ್ಚ್ ಏನು ಹೇಳಿದ್ದಾರೆ
ಬೇಬಿಕುಳಂ ಗ್ರಾಮ ಪಂಚಾಯಿತಿನ ಒಂದನೇ ನಂಬರ್ ವಾರ್ಡ್‌ನ ಅಂಗನವಾಡಿಯಲ್ಲಿ ಶಂಕು ಎಂಬ ಮುದ್ದು ಹೆಸರಿನೊಂದಿಗೆ ಕರೆಯಲ್ಪಡುತ್ತಿರುವ ರಿಜುಲ್ ಎಸ್ ಸುಂದರ್ ಎಂಬ ಪುಟ್ಟ ಬಾಲಕನ ಬಹಳ ಮುಗ್ಧ ವಿನಂತಿ ಅದು. ಆ ವಿಡಿಯೋ ಶೂಟ್ ಮಾಡಿ, ಹೊರ ಜಗತ್ತಿಗೆ ಆ ವಿನಂತಿ ತಿಳಿಯುವಂತೆ ಮಾಡಿದ್ದು ಆತನ ತಾಯಿ ಎಂಬುದು ನಮಗೆ ಗೊತ್ತಾಗಿದೆ. ಈಗಾಗಲೇ ಮೊಟ್ಟೆ ಹಾಗೂ ಹಾಲು ತಲುಪಿಸುತ್ತಿದ್ದೇವೆ. ಈಗ ಈ ವಿನಂತಿಯನ್ನೂ ಪರಿಗಣಿಸಿಕೊಂಡು ಮೆನು ಪರಿಷ್ಕರಿಸುವುದಕ್ಕೆ ಚಿಂತನೆ ನಡೆಸುತ್ತೇವೆ ಎಂದು ಕೇರಳದ ಸಚಿವೆ ವೀಣಾ ಜಾರ್ಜ್ ಹೇಳಿರುವುದು ವೈರಲ್ ವಿಡಿಯೋದಲ್ಲಿದೆ.
