ಕೇರಳದ ಚರ್ಚ್‌ಗೆ ಸೇರಿದ ಜಮೀನಲ್ಲಿ ಕಾಣಸಿಕ್ಕಿದವು ದೇಗುಲದ ಅವಶೇಷ, ದೇವಪ್ರಶ್ನೆಯಲ್ಲಿ ಕಂಡುಬಂತು ವಿಶೇಷ ಇತಿಹಾಸ
ಕೇರಳದ ಪಾಲಾಯಿ ಎಂಬಲ್ಲಿ ಚರ್ಚ್ ಕ್ಯಾಂಪಸ್‌ನಲ್ಲಿ ಕೃಷಿಗಾಗಿ ನೆಲ ಅಗೆಯುವಾಗ ದೇವಸ್ಥಾನದ ಅವಶೇಷಗಳು ಪತ್ತೆಯಾಗಿವೆ. ಅಲ್ಲಿ ಪೂಜೆ ನಡೆಸುವುದಕ್ಕೆ ಚರ್ಚ್ ಆಡಳಿತ ಮಂಡಳಿ ಅವಕಾಶ ನೀಡಿದ್ದು, ದೇವಪ್ರಶ್ನೆಯ ಮೂಲಕ ಇತಿಹಾಸ ತಿಳಿಯುವ ಪ್ರಯತ್ನ ಮುಂದುವರಿದಿದೆ.

ಕೇರಳದ ಚರ್ಚ್ ಕ್ಯಾಂಪಸ್‌ನಲ್ಲಿ ಉತ್ಖನನ ಮಾಡುವಾಗ ದೇವಾಲಯದ ಅವಶೇಷಗಳು ಕಾಣಸಿಕ್ಕವು. ಇದಾದ ಬಳಿಕ, ದೇವಪ್ರಶ್ನೆ (ಜ್ಯೋತಿಷ್ಯ ಶಾಸ್ತ್ರದ ಒಂದು ಪ್ರಕ್ರಿಯೆ) ನಡೆಸುವುದಕ್ಕೆ ಚರ್ಚ್ ಆಡಳಿತ ಮಂಡಳಿ ಹಿಂದೂಗಳಿಗೆ ಅವಕಾಶ ಮಾಡಿಕೊಟ್ಟಿತು. ಆ ದೇವಪ್ರಶ್ನೆಯಲ್ಲಿ ಪ್ರಾಚೀನ ದೇವಾಲಯಕ್ಕೆ ಸಂಬಂಧಿಸಿದ ಇತಿಹಾಸ ವಿಶೇಷಗಳು ಕಂಡುಬಂದವು. ಈ ಕ್ರಿಶ್ಚಿಯನ್ - ಹಿಂದೂ ಸಾಮರಸ್ಯ ದೇಶದ ಗಮನಸೆಳೆದಿದೆ. ಅಂದ ಹಾಗೆ, ಕೇರಳದ ಪಾಲಾಯಿಯಲ್ಲಿರುವ ಕ್ಯಾಥೋಲಿಕ್ ಚರ್ಚ್ ಕ್ಯಾಂಪಸ್‌ನಲ್ಲಿ ಈ ಪ್ರಾಚೀನ ದೇವಾಲಯದ ಅವಶೇಷ ಕಾಣಸಿಕ್ಕಿರುವುದು. ಅಲ್ಲಿ ಈಗ ಹಿಂದೂಗಳು ಪ್ರಾರ್ಥನೆ ಸಲ್ಲಿಸುವುದಕ್ಕೆ ಚರ್ಚ್ ಆಡಳಿತ ಅವಕಾಶ ಮಾಡಿಕೊಟ್ಟಿದೆ.
ಕೇರಳದ ಚರ್ಚ್‌ಗೆ ಸೇರಿದ ಜಮೀನಲ್ಲಿ ದೇಗುಲದ ಅವಶೇಷ
ಕೇರಳದ ಪಾಲಾಯಿಯಲ್ಲಿರುವ ಕ್ಯಾಥೋಲಿಕ್ ಚರ್ಚ್ ಕ್ಯಾಂಪಸ್‌ನಲ್ಲಿ ಕೃಷಿ ಕೆಲಸಕ್ಕಾಗಿ ನೆಲ ಅಗೆಯವಾಗ ಶಿವಲಿಂಗ ಸೇರಿ ದೇಗುಲದ ಅನೇಕ ಅವಶೇಷಗಳು ಕಾಣಸಿಕ್ಕಿದ್ದವು. 1.8 ಎಕರೆ ಪ್ರದೇಶದಲ್ಲಿ ಈ ಅವಶೇಷಗಳಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕೆಸವಿನ ಕೃಷಿಗಾಗಿ ನೆಲ ಅಗೆಯುವಾಗ 1.8 ಎಕರೆ ಪ್ರದೇಶದಲ್ಲಿ ಈ ಅವಶೇಷ ಕಂಡುಬಂದಿದೆ. ಈ ಸ್ಥಳವು ಪಾಲಾಯಿ ಸಮೀಪದ ವೆಳ್ಳಪಾಡು ಶ್ರೀ ವನದುರ್ಗಾ ಭಗವತೀ ದೇವಸ್ಥಾನದಿಂದ 1 ಕಿಮೀ ದೂರದಲ್ಲಿದೆ. ಈಗ ಈ ದೇವಸ್ಥಾನದ ಆಡಳಿತ ಮಂಡಳಿಯು ಇದಕ್ಕೆ ಸಂಬಂಧಿಸಿದ ದೇವಪ್ರಶ್ನೆ ಮುಂದುವರಿಸಲು ತೀರ್ಮಾನಿಸಿದೆ ಎಂದು ವರದಿ ಹೇಳಿದೆ.
ಪೂಜೆ ನಡೆಸುವುದಕ್ಕೆ ಅನುಮತಿ ನೀಡಿದು ಚರ್ಚ್ ಆಡಳಿತ ಮಂಡಳಿ
ಶ್ರೀವನದುರ್ಗಾ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ವಿನೋದ್ ಕೆಎಸ್ ಹೇಳಿರುವ ಪ್ರಕಾರ, ಚರ್ಚ್ ಕ್ಯಾಂಪಸ್‌ನಲ್ಲಿ ಈ ದೇವಸ್ಥಾನದ ಅವಶೇಷ ಫೆ 4 ರಂದು ಪತ್ತೆಯಾಗಿದೆ. ಇದಾಗಿ ಎರಡು ದಿನಗಳ ಬಳಿಕವಷ್ಟೇ ಸ್ಥಳೀಯರಿಗೆ ಈ ವಿಚಾರ ತಿಳಿಸಲಾಗಿದೆ. ಆಗ ಕೂಡಲೇ ಸ್ಥಳೀಯರು ಅಲ್ಲಿಗೆ ತೆರಳಿ ದೀಪ ಹಚ್ಚಿದರು. ಇದಕ್ಕೆ ಚರ್ಚ್ ಆಡಳಿತ ಮಂಡಳಿಯೂ ಅವಕಾಶ ಮಾಡಿಕೊಟ್ಟಿದ್ದು, ಸರ್ಕಾರಾತ್ಮಕವಾಗಿ ಹಿಂದೂಗಳಿಗೆ ಸಹಕರಿಸಿದೆ. ಅಷ್ಟೇ ಅಲ್ಲ, ದೇವಪ್ರಶ್ನೆ ನಡೆಸಿ ದೇವಸ್ಥಾನದ ಪುನರುತ್ಥಾನಕ್ಕೆ ಕ್ರಮ ತೆಗೆದುಕೊಳ್ಳಲು ಚರ್ಚ್ ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.
ಪಾಲಾಯಿ ಡಯೋಸಿಸ್‌ನ ಚಾನ್ಸಲರ್ ಫಾದರ್ ಜೋಸೆಫ್ ಕುಟ್ಟಿಯಾಂಕಲ್ ಅವರು ಈ ಕುರಿತು ಮಾತನಾಡಿದ್ದು, ಚರ್ಚ್ ಕ್ಯಾಂಪಸ್‌ನಲ್ಲಿ ಕೃಷಿಗಾಗಿ ನೆಲೆ ಅಗೆಯುವಾಗ ಹಿಂದೂ ದೇವಾಲಯದ ಅವಶೇಷ ಸಿಕ್ಕಿದ್ದು ನಿಜ ಎಂದು ದೃಢೀಕರಿಸಿದ್ದಾರೆ. ಚರ್ಚ್ ಹಾಗೂ ಸ್ಥಳೀಯ ಹಿಂದೂ ಸಮುದಾಯದ ನಡುವೆ ಸೌಹಾರ್ದಯುತ ಸಂಬಂಧವಿದೆ. ಈ ಸಂಬಂಧ ಹೀಗೆಯೇ ಉಳಿಯಬೇಕು. ಹಿಂದೂ ಸಮುದಾಯದ ಭಾವನೆಗಳನ್ನು ಗೌರವಿಸುತ್ತ ಶಾಂತಿ ಮತ್ತು ಪರಸ್ಪರ ಪ್ರೀತಿಗೆ ಆದ್ಯತೆ ನೀಡಿ ಎಲ್ಲದಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದ್ದಾಗಿ ವರದಿ ವಿವರಿಸಿದೆ.
ಪ್ರಾಚೀನ ದೇಗುಲದ ಇತಿಹಾಸ ತಿಳಿಯಲು ದೇವಪ್ರಶ್ನೆ
ಕೃಷಿ ಕೆಲಸಕ್ಕಾಗಿ ನೆಲ ಅಗೆಯುವಾಗ ಸಿಕ್ಕ ಪ್ರಾಚೀನ ದೇವಾಲಯದ ಇತಿಹಾಸ ತಿಳಿಯುವುದಕ್ಕಾಗಿ ದೇವಪ್ರಶ್ನೆ ನಡೆಸಲು ಸ್ಥಳೀಯ ಹಿಂದುಗಳು ತೀರ್ಮಾನಿಸಿದ್ದಾರೆ. ಚರ್ಚ್‌ನ ನಿರ್ಧಾರ ಪ್ರಶಂಸಾರ್ಹ. ಪೂರ್ವಜರು ಕೇರಳದ ದೇವಾಲಯದ ಬಗ್ಗೆ ಹೇಳಿರುವ ಉಲ್ಲೇಖಗಳಿವೆ. ಒಂದು ಕಾಲದಲ್ಲಿ ಈ ದೇವಾಲಯ ಬ್ರಾಹ್ಮಣ ಕುಟುಂಬದ ಅಧೀನದಲ್ಲಿತ್ತು. ಒಂದೂವರೆ ಶತಮಾನದ ಹಿಂದೆ ಈ ದೇವಾಲಯ ನಾಶವಾಗಿದ್ದು, ಬಳಿಕ ಭೂಮಿ ಪರಾಭಾರೆಯಾಗಿ ಕ್ರಿಶ್ಚಿಯನ್ ಸಮುದಾಯದವರ ಪಾಲಾಗಿತ್ತು. ಈಗ ಅವರು ಕೃಷಿ ಕೆಲಸಕ್ಕೆ ಮುಂದಾದ ವೇಳೆ ದೇವಾಲಯದ ಅವಶೇಷ ಮೇಲಕ್ಕೆ ಬಂದಿದ್ದು, ಈಗ ಪುನರುತ್ಥಾನಕ್ಕೆ ಪ್ರಯತ್ನ ನಡೆದಿದೆ. ಜನರಿಗೆ ದೇವಸ್ಥಾನದ ಇತಿಹಾಸ ತಿಳಿಯುವ ಕುತೂಹಲವಿದೆ ಎಂದು ಕೇರಳದ ಪಾಲಾಯಿ ಮೀನಾಚಿಲ್‌ನ ಹಿಂದೂ ಮಹಾಸಂಘಂನ ಅಧ್ಯಕ್ಷ ವಕೀಲ ರಾಜೇಶ್ ಪಾಲಾಟ್ ವಿವರಿಸಿದ್ದಾಗಿ ವರದಿ ಹೇಳಿದೆ.
