ಕೇರಳದಲ್ಲಿ ದಲಿತ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; 60 ಮಂದಿ ವಿರುದ್ಧ ಪ್ರಕರಣ ದಾಖಲು, ಕೋಚ್ ಸೇರಿ 15 ಆರೋಪಿಗಳ ಬಂಧನ
ಕಳೆದ ಐದು ವರ್ಷಗಳಿಂದ ತನ್ನ ಸಹ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಪಾಠಿಗಳು ಸೇರಿದಂತೆ ಸುಮಾರು 60 ಜನರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 18 ವರ್ಷದ ದಲಿತ ಅಥ್ಲೀಟ್ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೋಚ್ ಸೇರಿ 15 ಆರೋಪಿಗಳನ್ನು ಬಂಧಿಸಿದ್ದಾರೆ.

ತಿರುವನಂತಪುರಂ: ಪತ್ತನಂತಿಟ್ಟ ಜಿಲ್ಲೆಯ 18 ವರ್ಷದ ದಲಿತ ಅಥ್ಲೀಟ್ ಮೇಲೆ ಕಳೆದ ಐದು ವರ್ಷಗಳಿಂದ ಸಹ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಸಹಪಾಠಿಗಳು ಸೇರಿದಂತೆ ಸುಮಾರು 60 ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಪತ್ತನಂತಿಟ್ಟ ಜಿಲ್ಲೆಯ ಎರಡು ಪೊಲೀಸ್ ಠಾಣೆಗಳಲ್ಲಿ 5 ಎಫ್ಐಆರ್ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಎಫ್ಐಆರ್ ದಾಖಲಾದ ಒಂದು ದಿನದ ನಂತರ ತರಬೇತುದಾರ ಸೇರಿದಂತೆ ಕನಿಷ್ಠ 15 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ (ಜನವರಿ 11) ತಿಳಿಸಿದ್ದಾರೆ.
ಶುಕ್ರವಾರ (ಜನವರಿ 10) ಆರು ಜನರನ್ನು ಬಂಧಿಸಲಾಗಿದ್ದು, ಶನಿವಾರ ಇನ್ನೂ 9 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತನಂತಿಟ್ಟ ಪೊಲೀಸ್ ವರಿಷ್ಠಾಧಿಕಾರಿ ವಿ.ಜಿ.ವಿನೋದ್ ಕುಮಾರ್ ಅವರು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ
ಜಿಲ್ಲಾ ಮಟ್ಟದ ಅಥ್ಲೀಟ್ ಆಗಿರುವ ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, 13 ನೇ ವಯಸ್ಸಿನಲ್ಲಿ ತನ್ನ ನೆರೆಹೊರೆಯ ಸ್ನೇಹಿತನಿಂದ ಪ್ರಾರಂಭಿಸಿ 62 ವ್ಯಕ್ತಿಗಳು ತನ್ನನ್ನು ನಿಂದಿಸಿದ್ದಾರೆ ಎಂದು ಹೇಳಿದ್ದಾರೆ. ಕಸ್ಟಡಿಯಲ್ಲಿರುವ ಕೆಲವು ಆರೋಪಿಗಳು ಈಕೆಯ ಸ್ನೇಹಿತರಾಗಿದ್ದು, ಶಂಕಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತೆಯ ವಿವರವಾದ ಹೇಳಿಕೆಯನ್ನು ಪತ್ತಿನಂತಿಟ್ಟ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್ ಪೆಕ್ಟರ್ ದಾಖಲಿಸಲಿದ್ದಾರೆ.
"ಸ್ನೇಹಿತ" ರೆಕಾರ್ಡ್ ಮಾಡಿದ್ದಾನೆ ಎಂದು ಹೇಳಲಾದ ಸಂತ್ರಸ್ತೆಯ ಅಶ್ಲೀಲ ಫೋಟೊಗಳು ಮತ್ತು ವಿಡಿಯೊಗಳನ್ನು ಆಕೆಯನ್ನು ಬೆದರಿಸಲು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ವರ್ಷಗಳಿಂದ ಪದೇ ಪದೆ ನಿಂದನೆಗೆ ಒಳಪಡಿಸಲು ಪೋಟೊಗಳು, ವಿಡಿಯೊಗಳನ್ನು ಬಳಸಲಾಗಿದೆ. ಇವುಗಳನ್ನು ದುಷ್ಕರ್ಮಿಗಳ ನಡುವೆ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೀರ್ಘಕಾಲದ ಶೋಷಣೆಯ ಅಪರೂಪದ ಮತ್ತು ಗೊಂದಲಕಾರಿ ಪ್ರಕರಣ
"ಇದು ದೀರ್ಘಕಾಲದ ಶೋಷಣೆಯ ಅಪರೂಪದ ಮತ್ತು ಗೊಂದಲಕಾರಿ ಪ್ರಕರಣವಾಗಿದೆ. ತನ್ನ ಮೇಲೆ ದೌರ್ಜನ್ಯ ಮಾಡಿದವರ ವಿರುದ್ಧ ದೂರು ದಾಖಲಿಸುವ ಸಂತ್ರಸ್ತೆಯ ಸಂಕಲ್ಪದಿಂದ ಇದು ತುಂಬಾ ಮಹತ್ವ ಪಡೆದುಕೊಂಡಿದೆ. ಜೊತೆಗೆ ಸಮಗ್ರ ತನಿಖೆಗೆ ಅನುವು ಮಾಡಿಕೊಡುತ್ತದೆ" ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಯ ಸಂಬಂಧಿತ ವಿಭಾಗಗಳಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989 ರ ವಿವಿಧ ವಿಭಾಗಗಳನ್ನು ಸಹ ಪೊಲೀಸರು ಅನ್ವಯಿಸಿದ್ದಾರೆ ಎಂದು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
