Tender Coconut Wine: ಬಂತು ಭಾರತದ ಮೊದಲ ಎಳನೀರು ವೈನ್; ಕೇರಳದ ರೈತರೊಬ್ಬರ 2 ದಶಕಗಳ ಪ್ರಯತ್ನ, ರುಚಿ ಹೇಗಿರಬಹುದು
Tender Coconut Wine: ಎರಡು ದಶಕಗಳ ಕಠಿಣ ಪರಿಶ್ರಮ, ಪ್ರಯೋಗ ಮತ್ತು ಸಮರ್ಪಣೆಯ ನಂತರ, ಕೇರಳದ ರೈತರೊಬ್ಬರು ಭಾರತದ ಮೊಟ್ಟಮೊದಲ ಎಳನೀರು ವೈನ್ ಅನ್ನು ಯಶಸ್ವಿಯಾಗಿ ಪರಿಚಯಿಸಿದ್ದಾರೆ. ಸಾಂಪ್ರದಾಯಿಕ ದ್ರಾಕ್ಷಿ ವೈನ್ ಗಳಿಗಿಂತ ಭಿನ್ನವಾಗಿ, ಇದು ಉಷ್ಣವಲಯದ ರುಚಿಗಳನ್ನು ಹೊಂದಿದೆ.

Tender Coconut Wine: ನೀವು ಬಗೆಬಗೆಯ ವೈನ್‌ಗಳ ಬಗ್ಗೆ ಕೇಳಿದ್ದೀರಿ. ಅದರಲ್ಲೂ ದ್ರಾಕ್ಷಿಯಿಂದ ತಯಾರಿಸಿದ ವೈನ್ ಭಾರತದಲ್ಲಿ ಜನಪ್ರಿಯ. ಹಣಸಿನ ಹಣ್ಣು, ಗೋಡಂಬಿ, ಗೋಧಿಯಿಂದ ತಯಾರಿಸುವ ವೈನ್ ಕೂಡ ಇವೆ. ಈಗ ಎಳನೀರಿನಿಂದಲೂ ವೈನ್ ತಯಾರಿಸಬಹುದು ಎನ್ನುವುದನ್ನು ಕೇರಳದ ಪ್ರಗತಿಪರ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ಸತತ ಎರಡು ದಶಕಗಳ ಕಾಲ ಅವರು ಪ್ರಯೋಗ ಮಾಡಿ ಈಗ ಭಾರತದ ಮೊದಲನೇಯ ಎಳನೀರು ವೈನ್ ಅನ್ನು ಪರಿಚಯಿಸಿದ್ದಾರೆ. ಕಡಿಮೆ ಆಲ್ಕೋ ಹಾಲ್‌ನೊಂದಿಗೆ ಎಳನೀರು ವೈನ್ ರುಚಿ ಬಹಳ ಜನರಿಗೆ ಹಿಡಿಸಿದೆ. ಈಗಾಗಲೇ ಬಗೆ ಬಗೆಯ ವೈನ್‌ಗಳು ಮಾರುಕಟ್ಟೆಯಲ್ಲಿ ಇರುವ ಹಾಗೆ ಮುಂದಿನ ದಿನಗಳಲ್ಲಿ ಎಳನೀರು ವೈನ್ ಕೂಡ ದೊಡ್ಡ ಮಟ್ಟದಲ್ಲಿ ಬಳಕೆಗೆ ಲಭ್ಯವಾಗಬಹುದು. ಜನರೂ ಕೂಡ ಎಳನೀರು ವೈನ್ ಅನ್ನು ಇನ್ನು ಮುಂದೆ ಬಳಕೆ ಮಾಡಲು ಸಾಧ್ಯವಾಗಬಹುದು.
ಯಶಸ್ವಿ ಪ್ರಯೋಗ
ಕೇರಳದ ಗಡಿ ಜಿಲ್ಲೆ ಕಾಸರಗೋಡಿನ ಭೀಮನಾಡಿ ಎನ್ನುವ ಗ್ರಾಮದ ನಿವೃತ್ತ ಅಧಿಕಾರಿಯಾಗಿರುವ, ಈಗ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ಸೆಬಾಸ್ಟಿಯನ್ ಪಿ ಅಗಸ್ಟಿನ್. ಹಲವಾರು ವರ್ಷಗಳಿಂದ ಕೃಷಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ. 15 ಎಕರೆ ತೋಟವೂ ಇದೆ. ತೆಂಗನ್ನು ಬೆಳೆಯುತ್ತಿದ್ದಾರೆ.
ತೆಂಗಿನ ಉತ್ಪನ್ನಗಳು ಹಲವು ಜನಪ್ರಿಯವಾಗಿದ್ದು ಜನ ಬಳಕೆಯಲ್ಲೂ ಇವೆ. ಆದರೆ ಎಳನೀರಿನಿಂದ ವೈನ್ ತಯಾರಿಸಬಹುದಾ ಎನ್ನುವ ಯೋಚನೆ ಅವರ ತಲೆಯಲ್ಲಿ ಬಂದಿತ್ತು. ಹಲವಾರು ತಜ್ಞರನ್ನು ಎಡತಾಕಿದರು. ಇತರೆ ವೈನ್‌ಗಳ ತಯಾರಿಯ ಮಾಹಿತಿಯನ್ನೂ ಪಡೆದುಕೊಂಡರು. ಅದರಲ್ಲಿರುವ ಆಲ್ಕೋಹಾಲ್ ಪ್ರಮಾಣ, ಜನ ಇಷ್ಟಪಡುವ ವೈನ್‌ಗಳ ವಿವರಗಳನ್ನು ಸಂಗ್ರಹಿಸಿದರು. ಕೊನೆಗೆ ತಮ್ಮ ತೋಟದ ಮನೆಯಲ್ಲೇ ಅವರು ಎಳನೀರು ವೈನ್ ತಯಾರಿಸುವ ಪ್ರಯೋಗಗಳನ್ನು ಆರಂಭಿಸಿದರು. ಒಂದೊಂದೇ ಹಂತ ಪರೀಕ್ಷಿಸಿದರು. ಅವರು ಅಂತಿಮವಾಗಿ ಭಾರತದ ಅಬಕಾರಿ ಇಲಾಖೆಯಿಂದ ವೈನ್ ಉತ್ಪಾದಿಸಲು ಅನುಮೋದನೆ ಪಡೆದರು.
ಹೇಗಿದೆ ವೈನ್ ರುಚಿ
ಈ ವಿಶೇಷ ಪಾನೀಯವು ಸುಲಭವಾಗಿ ಬಳಕೆಗೆ ಬರುತ್ತಿಲ್ಲ. ಇದರ ಹಿಂದೆ ಆಗಸ್ಟಿನ್ ಅವರ ಅಪಾರ ಶ್ರಮವಂತೂ ಇದೆ. ಇದಕ್ಕೆ ಪೂರಕವಾದ ಪಾಕವಿಧಾನವನ್ನು ಅಭಿವೃದ್ಧಿಪಡಿಸಿದ ವರ್ಷಗಳ ನಂತರ ಅಧಿಕಾರಶಾಹಿ ಅಡೆತಡೆಗಳನ್ನು ದಾಟಿಕೊಂಡು ಬಂದರು ಅಗಸ್ಟಿನ್. ತಮ್ಮ ಕುಶಲತೆ, ಪರಿಶ್ರಮ, ನಾವಿನ್ಯತೆಯ ಪ್ರಯೋಗಗಳನ್ನು ಕಾನೂನು ಚೌಕಟ್ಟಿನೊಳಗೆ ರೂಪಿಸಿದರು.
ಮಾವು, ಬಾಳೆಹಣ್ಣು, ಪಪ್ಪಾಯಿ, ಡ್ರ್ಯಾಗನ್ ಹಣ್ಣು ಮತ್ತು ಹಲಸಿನಂತಹ ಉಷ್ಣವಲಯದ ಹಣ್ಣುಗಳೊಂದಿಗೆ ಎಳೆಯ ತೆಂಗಿನಕಾಯಿಯ ಮಿಶ್ರಣ ಮಾಡುವುದರಿಂದ ಆಗಸ್ಟೀನ್ ತಾಜಾ ರುಚಿಯನ್ನು ಹೊಂದಿರುವ ಕಡಿಮೆ ಆಲ್ಕೋಹಾಲ್ ಇರುವ ಎಳನೀರು ವೈನ್ ರೂಪಿಸಿದರು.
ಈ ವೈನ್ ಶೇ 8 ರಿಂದ 10 ನಷ್ಟು ಆಲ್ಕೋಹಾಲ್ ಅಂಶದೊಂದಿಗೆ ಇರಲಿದ್ದು, ಹೆಚ್ಚು ಕಿಕ್ ಅನ್ನೇನು ನೀಡುವುದಿಲ್ಲ. ಇತರೆ ವೈನ್‌ಗಳಲ್ಲೂ ಕೂಡ ಆಲ್ಕೋಹಾಲ್ ಪ್ರಮಾಣ ಶೇ 10ರ ಆಜುಬಾಜಿನಲ್ಲಿಯೇ ಇದೆ. ಇದನ್ನು ತಮ್ಮ ಪರಿಚಯಸ್ಥರು, ವೈನ್ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವರಿಗೆ ನೀಡಿದರು. ಕೆಲವು ಸಲಹೆಗಳು, ಪ್ರಯೋಗಗಳ ನಂತರ ಈಗ ಅದು ಅಧಿಕೃತವಾಗಿ ಬಳಕೆಗೆ ಲಭ್ಯವಾಗಿದೆ. ವಿಭಿನ್ನ ರುಚಿಯ ಎಳನೀರು ವೈನ್ ಎಲ್ಲ ವರ್ಗದವರಿಗೂ ಇಷ್ಟವಾಗಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.
ಈಗಾಗಲೇ ಎಳನೀರು ವೈನ್ ಅನ್ನು ಬಾಟೆಲ್‌ಗಳ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಹಂತ ಹಂತವಾಗಿ ಎಲ್ಲೆಡೆ ಮಾರುಕಟ್ಟೆಯೂ ಆಗಬಹುದು. ಸದ್ಯಕ್ಕೆ ವೈನ್ ಅನ್ನು ಆಲ್ಕೋಹಾಲ್ ಅಥವಾ ಪಾನೀಯ ಮಳಿಗೆಗಳ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ.
ರೈತರು ಹೇಳೋದೇನು
ಗೋಡಂಬಿ, ಕಟ್ಟಾ ಹಲಸು, ಮತ್ತು ದ್ರಾಕ್ಷಿ ವೈನ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿವೆ. ಎಳೆನೀರಿನಲ್ಲೂ ವೈನ್ ತಯಾರಿಸಬಹುದಾ ಎನ್ನುವ ಯೋಚನೆಯೊಂದಿಗೆ ಪ್ರಯೋಗಕ್ಕೆ ಕೈ ಹಾಕಿದೆ. ಸತತ ಎರಡು ದಶಕಗಳ ನಂತರ ಇದಕ್ಕೆ ರೂಪ ಸಿಕ್ಕಿದೆ. ಎಳೆ ನೀರು ವೈನ್ ಕೂಡ ರುಚಿಕರ, ಜನಸಾಮಾನ್ಯರು ಬಳಸುವ ಹಂತಕ್ಕೆ ಬಂದಿದೆ. ತೆಂಗಿನಕಾಯಿಯನ್ನು ಆಧರಿಸಿದ ಹೊಸ ರೂಪದ ವೈನ್ ಈಗ ಮಾರುಕಟ್ಟೆಗೆ ಪ್ರವೇಶಿಸಿದೆ ಎಂದು ಸೆಬಾಸ್ಟಿಯನ್ ಪಿ ಅಗಸ್ಟಿನ್ ಹೇಳುತ್ತಾರೆ.
ಇತರ ವಿಧದ ದ್ರಾಕ್ಷಿ ವೈನ್‌ಗಿಂತ ಭಿನ್ನವಾಗಿ, ಕೋಮಲ ತೆಂಗಿನಕಾಯಿ ವೈನ್ ಅದರ ಕಡಿಮೆ ಸಂಕೀರ್ಣ, ಬಲವಾದ ಸುವಾಸನೆಯಿಂದಾಗಿ ವಿಶಿಷ್ಟವಾಗಿದೆ. ವಾಸ್ತವವಾಗಿ ಅದರ ಸೂಕ್ಷ್ಮ ಸುವಾಸನೆ ಮತ್ತು ಉಷ್ಣವಲಯದ ಪ್ರದೇಶಗಳಿಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವುದು ಖಚಿತ ಎನ್ನುವುದು ಆಗಸ್ಟಿನ್ ಅವರ ವಿಶ್ವಾಸದ ನುಡಿ.
ಚೀನಾದಂತಹ ದೇಶದಲ್ಲಿ ತೆಂಗಿನ ನೀರು ಆಧಾರಿತ ವೈನ್‌ಗಳಿಗೆ ಪರವಾನಗಿ ನೀಡುವುದರೊಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಲ್ಲಿನ ಇಲಾಖೆಗಳೇ ಪರಿಹರಿಸುತ್ತವೆ. ನಮ್ಮಲ್ಲಿ ಇಂತಹ ಪ್ರಯೋಗಗಳು ನಡೆದರೂ ಅಬಕಾರಿ ಹಿನ್ನೆಲೆ ಇರುವುದರಿಂದ ಎಲ್ಲದಕ್ಕೂ ಪಾರದರ್ಶಕತೆ ಜತೆಗೆ ಅನುಮತಿ ಬೇಕಾಗುತ್ತದೆ. ಭಾರತದಲ್ಲಿ ಹಲವು ಭಾಗಗಳಲ್ಲಿ ವೈನರಿಗಳಿದ್ದರೂ ಅವುಗಳಿಗೂ ಅಡೆತಡೆಗಳಿವೆ. ಪ್ರಾಮಾಣಿಕ ಪ್ರಯೋಗಗಳಿಗೆ ಬೆಲೆ ಖಂಡಿತಾ ಇದೆ ಎನ್ನುವುದು ಅವರ ನುಡಿ.
