ಗುರುವಾಯೂರಪ್ಪಾ! ನಿನ್ನಿಷ್ಟದ ತುಳಸಿ ನಿನಗೂ ಸಿಗದಂತಾಯಿತೇ; ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ತುಳಸಿ ಸಮರ್ಪಣೆಗೆ ನಿರ್ಬಂಧ, ಕಾರಣ ಹೀಗಿದೆ
Guruvayur Shri Krishna Temple: ಕೇರಳದ ತ್ರಿಶ್ಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲ ಸದ್ಯ ಸುದ್ದಿಯ ಕೇಂದ್ರ ಬಿಂದು. ಅಲ್ಲಿ ಈಗ ತುಳಸಿ ಸಮರ್ಪಣೆಗೆ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ಭಕ್ತರ ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗಿದೆ. ದೇವಾಲಯದ ಆಡಳಿತ ಮಂಡಳಿಯ ಕ್ರಮಕ್ಕೆ ಕಾರಣ ಇದು.

ಗುರುವಾಯೂರು: ಗುರುವಾಯೂರಪ್ಪಾ.. ನಿನ್ನಿಷ್ಟದ ತುಳಸಿ ನಿನಗೂ ಸಿಗದಂತಾಯಿತೇ ಎಂಬ ಪ್ರಶ್ನೆ ಭಕ್ತರದ್ದು. ಹೌದು, ಕೇರಳದ ಪ್ರಸಿದ್ಧ ಶ್ರೀಕೃಷ್ಣ ದೇಗುಲ ಗುರುವಾಯೂರಿಗೆ ಭೇಟಿ ಕೊಡುತ್ತಿರುವ ಪ್ರತಿ ಭಕ್ತರು ಕೃಷ್ಣನಿಗೆ ಪ್ರೀತಿ ಎಂದು ತುಳಸಿ ಮಾಲೆ ಕೊಂಡೊಯ್ಯುತ್ತಿದ್ದಾರೆ. ಆದರೆ, ಅದನ್ನು ಭಗವಂತನಿಗೆ ಸಮರ್ಪಿಸುವುದು ಸಾಧ್ಯವಾಗುತ್ತಿಲ್ಲ. ದೇವಾಲಯದ ಆಡಳಿತ ಮಂಡಳಿಯು ಗುರುವಾಯೂರ ಶ್ರೀಕೃಷ್ಣ ದೇಗುಲದಲ್ಲಿ ಗುರುವಾಯೂರಪ್ಪನಿಗೆ ತುಳಸಿ ಸಮರ್ಪಣೆಗೆ ನಿರ್ಬಂಧ ಹೇರಿದೆ ಎಂದು ಜನ್ಮಭೂಮಿ ವರದಿ ಮಾಡಿದೆ. ಗುರುವಾಯೂರಪ್ಪನಿಗೆ ತುಳಸಿ ಸಮರ್ಪಣೆ ಮಾಡುವುದಕ್ಕೆ ನಿರ್ಬಂಧ ಹೇರಿದ ವಿಚಾರ ಈಗ ಕೇರಳದಲ್ಲಿ ಸಂಚಲನ ಮೂಡಿಸಿದೆ. ಡೆಕ್ಕನ್ ಹೆರಾಲ್ಡ್ ಕೂಡ ಈ ಬಗ್ಗೆ ವರದಿ ಮಾಡಿದ್ದು, ದೇವಾಲಯದಲ್ಲಿ ತುಳಸಿ ಸಮರ್ಪಣೆಗೆ ನಿರ್ಬಂಧ ಹೇರಿದ್ದನ್ನು ಗುರುವಾಯೂರು ಶ್ರೀಕೃಷ್ಣ ದೇಗುಲದ ಆಡಳಿತ ಮಂಡಳಿ ಖಚಿತ ಪಡಿಸಿರುವುದಾಗಿ ಹೇಳಿದೆ.
ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ತುಳಸಿ ಸಮರ್ಪಣೆಗೆ ನಿರ್ಬಂಧಕ್ಕೆ ಕಾರಣ ಇದು
ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ಸಮರ್ಪಣೆಗೆ ಎಂದು ಭಕ್ತರು ತಂದುಕೊಡುವ ತುಳಸಿಯನ್ನು ಪ್ರತ್ಯೇಕಿಸುವ ಕೆಲಸ ಮಾಡುವಾಗ ದೇವಾಲಯದ ಸಿಬ್ಬಂದಿಗೆ ಅಲರ್ಜಿ ಮತ್ತು ಇತರೆ ಆರೋಗ್ಯ ಸಮಸ್ಯೆಗಳಾಗಿವೆ. ಅನೇಕರ ಕೈ ಚರ್ಮಗಳು ಎದ್ದು ಹೋಗಿರುವ ಉದಾಹರಣೆಗಳೂ ಇವೆ ಎಂದು ಗುರುವಾಯೂರು ದೇವಸ್ವಂ ಆಡಳಿತಾಧಿಕಾರಿ ಕೆ. ಪಿ. ವಿನಯನ್ ತಿಳಿಸಿದ್ದಾಗಿ ಜನ್ಮಭೂಮಿ ವರದಿ ಮಾಡಿದೆ.
ಬಹುತೇಕ ಭಕ್ತರು ಗುರುವಾಯೂರಿನ ದೇವಾಲಯದ ಹೊರಗೆ ಅಂಗಡಿಗಳಿಂದ ತುಳಸಿ ಮಾಲೆ ಖರೀದಿಸಿ ತರುತ್ತಾರೆ. ಆ ತುಳಸಿ ಮಾಲೆ (ತುಳಸಿ ಎಲೆಗಳ ಮಾಲೆ)ಗಳು ಕೈ ತುರಿಕೆ ಉಂಟುಮಾಡುತ್ತವೆ. ಅವುಗಳಲ್ಲಿ ಕೀಟನಾಶಕ ಬಳಕೆಯಾದ ಕಾರಣ ಸಮಸ್ಯೆ ಆಗುತ್ತಿದೆ. ತುಳಸಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಸುವಾಗ ಅದಕ್ಕೆ ಸಾಕಷ್ಟು ಕೀಟನಾಶಕಗಳನ್ನು ಬಳಸುತ್ತಿದ್ದಾರೆ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕೀಟನಾಶಕ ಬಳಸದ ತುಳಸಿ ದೇವರಿಗೆ ಸಮರ್ಪಣೆ
ಭಕ್ತರು ಕೊಂಡೊಯ್ದು ಕೊಡುವ ತುಳಸಿ, ಹೂ ಹಾರಗಳನ್ನು ದೇವಾಲಯದ ಸಿಬ್ಬಂದಿ ಮುಟ್ಟುವುದೇ ಇಲ್ಲ. ಏನೇ ಕೊಟ್ಟರೂ ಅದು ದೇವಸ್ಥಾನದಲ್ಲಿ ಒಂದು ಕಡೆ ಹಾಗೆಯೇ ಇರುತ್ತದೆ. ಅವುಗಳನ್ನು ದೇವರಿಗೆ ಪೂಜಿಸಲು ಅಥವಾ ಹಣ್ಣು ಹಂಪಲುಗಳಿದ್ದರೆ ಅವುಗಳನ್ನು ನೈವೇದ್ಯಕ್ಕೆ ಕೊಂಡೊಯ್ಯುತ್ತಿಲ್ಲ ಎಂದು ಭಕ್ತರು ದೂರುತ್ತಿರುವುದಾಗಿ ಜನ್ಮಭೂಮಿ ವರದಿ ಮಾಡಿದೆ.
ಭಕ್ತರು ತಂದುಕೊಡುವ ಹೂವು ಹಣ್ಣುಗಳನ್ನು ಕೆಲವು ತಿಂಗಳ ಹಿಂದೆಯೇ ನಿರ್ಬಂಧಿಸಲಾಗಿದೆ. ಇತ್ತೀಚೆಗೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ತಪ್ಪು ಕಲ್ಪನೆ ಬರುವಂತೆ ಮಾಡುತ್ತಿದ್ದಾರೆ. ದೇವರಿಗೆ ಕೀಟಕನಾಶಕ ಬಳಸದ ತುಳಸಿಯನ್ನು ದೇವಾಲಯದ ಆಡಳಿತ ಮಂಡಳಿಯೇ ತರಿಸಿ ಸಮರ್ಪಿಸುತ್ತಿದೆ ಎಂದು ದೇವಸ್ವಂ ಬೋರ್ಡ್ ಅಧ್ಯಕ್ಷ ವಿ ಕೆ ವಿಜಯನ್ ವಿವರಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇತ್ತೀಚೆಗೆ ಕೆಲವು ತಿಂಗಳ ಹಿಂದೆ ನೆರಿಯಂ ಒಲೆಂಡರ್ (ಮಲಯಾಳಂನಲ್ಲಿ “ಅರಳಿ”) (ಕನ್ನಡದಲ್ಲಿ ಕಣಗಿಲೆ ಹೂವು) ಅನ್ನು 24 ವರ್ಷದ ಯುವತಿಯೊಬ್ಬಳು ಪ್ರಸಾದ ಎಂದು ಸೇವಿಸಿದ್ದಳು. ಆಕೆಯ ಮರಣ ಸಂಭವಿಸಿತು. ಇದಾದ ಬಳಿಕ ಬಹುತೇಕ ದೇವಸ್ಥಾನಗಳಲ್ಲಿ ಹೂವು, ಹಣ್ಣುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲಾಗಿದೆ. ಇದೂ ಅಲ್ಲದೆ ಶಬರಿಮಲೆ ದೇವಸ್ಥಾನದಲ್ಲಿ ಅರವಣ ಪಾಯಸ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ ಕೀಟನಾಶಕ ಪ್ರಮಾಣ ಹೆಚ್ಚು ಕಂಡು ಬಂದು ವಿವಾದಕ್ಕೀಡಾಗಿತ್ತು. ಬಳಿಕ ಶಬರಿಮಲೆ ಆಡಳಿತ ಮಂಡಳಿ ಆ ಅರವಣ ಪಾಯಸಗಳನ್ನು ತ್ಯಾಜ್ಯಕ್ಕೆ ಹಾಕಿತ್ತು. ಸದ್ಯ ಗುರುವಾಯೂರು ಶ್ರೀಕೃಷ್ಣ ದೇಗುಲದ ದೇವರಿಗೆ ತುಳಸಿ ಸಮರ್ಪಣೆಗೆ ನಿರ್ಬಂಧ ಹೇರಿದ ಕ್ರಮ ವ್ಯಾಪಕ ಚರ್ಚೆಗೆ ಗುರಿಯಾಗಿದೆ.