Man Eater Tiger: ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನರಭಕ್ಷಕ ಹುಲಿ ಉಪಟಳ, ತೀವ್ರಗೊಂಡ ಹೋರಾಟ, 2 ದಿನ ನಿಷೇಧಾಜ್ಞೆ ಜಾರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Man Eater Tiger: ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನರಭಕ್ಷಕ ಹುಲಿ ಉಪಟಳ, ತೀವ್ರಗೊಂಡ ಹೋರಾಟ, 2 ದಿನ ನಿಷೇಧಾಜ್ಞೆ ಜಾರಿ

Man Eater Tiger: ಕರ್ನಾಟಕ ಕೇರಳ ಗಡಿ ಭಾಗದಲ್ಲಿ ನರಭಕ್ಷಕ ಹುಲಿ ಉಪಟಳ, ತೀವ್ರಗೊಂಡ ಹೋರಾಟ, 2 ದಿನ ನಿಷೇಧಾಜ್ಞೆ ಜಾರಿ

ಕರ್ನಾಟಕ ಹಾಗೂ ಕೇರಳ ಗಡಿ ಭಾಗದ ಮಾನಂದವಾಡಿ ಸುತ್ತಮುತ್ತ ನರಭಕ್ಷಕ ಹುಲಿಯ ಉಪಟಳದಿಂದ ಜನ ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿರುವುದಿಂದ ಸೋಮವಾರದಿಂದ ಎರಡು ದಿನ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಂಡಿದೆ.

ಕೇರಳದ ಮಾನಂತವಾಡಿ ಭಾಗದಲ್ಲಿ ನರಭಕ್ಷಕ ಹುಲಿ ಉಪಟಳದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೇರಳದ ಮಾನಂತವಾಡಿ ಭಾಗದಲ್ಲಿ ನರಭಕ್ಷಕ ಹುಲಿ ಉಪಟಳದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮೈಸೂರು: ಕರ್ನಾಟಕ ಹಾಗೂ ಕೇರಳದ ಗಡಿ ಭಾಗದಲ್ಲಿ ನರಭಕ್ಷಕ ಹುಲಿಯ ಉಪಟಳ ಜೋರಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಪತ್ನಿಯನ್ನು ಕೊಂದು ಹಾಕಿದ ಹುಲಿ ಆಕೆಯ ದೇಹದ ಭಾಗವನ್ನು ತಿಂದು ಹಾಕಿದೆ. ಹುಲಿ ಹಿಡಿಯಲು ಹೋದ ಕಾರ್ಯಪಡೆ ಸಿಬ್ಬಂದಿ ಮೇಲೂ ದಾಳಿ ಮಾಡಿದೆ. ಹುಲಿ ಉಪಟಳದಿಂದ ಪ್ರತಿಭಟನೆಗಳು ತೀವ್ರಗೊಂಡಿವೆ. ಹುಲಿಯನ್ನು ಕೊಂದು ಹಾಕಬೇಕು. ಈ ಭಾಗದಲ್ಲಿ ಮಿತಿ ಮೀರಿರುವ ವನ್ಯಜೀವಿಗಳ ಹಾವಳಿ ತಗ್ಗಿಸಲು ತುರ್ತು ಕ್ರಮ ವಹಿಸಬೇಕು ಎನ್ನುವ ಬೇಡಿಕೆಯೊಂದಿಗೆ ಕೇರಳ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿರುವ ಮಾನಂದವಾಡಿಯ ಜನ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅದೂ ಕೇರಳದ ಅರಣ್ಯ ಸಚಿವರ ಕಾರಿಗೆ ಘೇರಾವ್‌ ಹಾಕಿ ಮುಂದೆ ಹೋಗಲು ಅವಕಾಶ ನೀಡದೇ ಆಕ್ರೋಶ ಹೊರ ಹಾಕಿದ್ದಾರೆ. ಈ ಕಾರಣದಿಂದ ಸೋಮವಾರದಿಂದ ಎರಡು ದಿನಗಳ ಕಾಲ ಮಾನಂದವಾಡಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗಡಿ ಭಾಗದಲ್ಲಿ ಹುಲಿ ಗದ್ದಲ

ಕರ್ನಾಟಕದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ವಯನಾಡು ಜಿಲ್ಲೆಯಲ್ಲಿ ಹುಲಿ ಗದ್ದಲ ಮೂರು ದಿನದಿಂದ ಜೋರಾಗಿದೆ. ಅದರಲ್ಲೂ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ತಾಗಿಕೊಂಡಂತೆ ಇರುವ ಮಾನಂದವಾಡಿ ಗ್ರಾಮದ ಸಮೀಪದಲ್ಲಿಯೇ ಹುಲಿ ದಾಳಿಗೆ ಅರಣ್ಯ ಇಲಾಖೆ ನೌಕರರೊಬ್ಬರ ಪತ್ನಿ ರಾಧಾ ಎಂಬುವವರು ಬಲಿಯಾಗಿದ್ದರು. ಪೂಚಂಪಲ್ಲಿ ಎಂಬಲ್ಲಿನ ಪ್ರಿಯದರ್ಶಿನಿ ಎಸ್ಟೇಟ್‌ ಪ್ರದೇಶದಲ್ಲಿ ಕಾಫಿ ಕೀಳುವಾಗ ದಾಳಿ ಮಾಡಿದ ಹುಲಿ ರಾಧಾ ಎಂಬುವವರನ್ನು ಕೊಂದು ಹಾಕಿತ್ತು. ದೇಹದ ಭಾಗವನ್ನೂ ತಿಂದು ಬಿಟ್ಟು ಹೋಗಿತ್ತು. ದೇಹದ ಭಾಗದ ಎಸ್ಟೇಟ್‌ ಭಾಗದಲ್ಲಿಯೇ ಪತ್ತೆಯಾಗಿತ್ತು. ರಾಧಾ ಸಾವಿನ ವಿಚಾರ ತಿಳಿದು ಮಾನಂದವಾಡಿ ಸುತ್ತಮುತ್ತಲಿನ ಭಾಗದ ಜನ ಆಕ್ರೋಶವನ್ನು ಹೊರ ಹಾಕಿದ್ದರು. ಅಲ್ಲದೇ ಹುಲಿಯನ್ನು ಕೊಂದು ಹಾಕಬೇಕು. ಅದು ನರಭಕ್ಷಕ ಹುಲಿ. ಈ ಭಾಗದಲ್ಲಿ ಹುಲಿ, ಕಾಡಾನೆ ಉಪಟಳದಿಂದ ಜನ ರೋಸಿ ಹೋಗಿದ್ದಾರೆ. ಬದುಕುವುದೇ ಕಷ್ಟವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದರು.

ಭಾನುವಾರ ಅರಣ್ಯ ಇಲಾಖೆಯ ಹುಲಿ ಕಾರ್ಯಪಡೆಯ ವಿಶೇಷ ತಂಡ ಈಗಾಗಲೇ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಸಿಬ್ಬಂದಿಯೊಬ್ಬರ ಮೇಲೆ ಹುಲಿ ಮಾಡಿದ್ದು, ಅವರಿಗೆ ಗಾಯಗಳಾಗಿವೆ. ಇದರಿಂದಾಗಿ ಈ ಭಾಗದಲ್ಲಿ ಹುಲಿ ಭಯ ಇನ್ನೂ ಹೆಚ್ಚಿದೆ.

ಹೋರಾಟ ತೀವ್ರ

ಈ ನಡುವೆ ಸ್ಥಳೀಯರ ಹೋರಾಟ ತೀವ್ರಗೊಂಡ ಕಾರಣದಿಂದ ಕೇರಳ ಅರಣ್ಯ ಸಚಿವ ಸಸೀಂದ್ರನ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು. ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿ ಪತ್ನಿ ಸಾಯಿಸಿದ ಹಾಗೂ ಮತ್ತೊಬ್ಬ ಸಿಬ್ಬಂದಿ ಮೇಲೆ ದಾಳಿ ಮಾಡಿದ ಹುಲಿ ಕಂಡಲ್ಲಿ ಕೊಂದು ಹಾಕಲು ಸೂಚಿಸಲಾಗಿದೆ. ಇದನ್ನು ನರಭಕ್ಷಕ ಹುಲಿ ಎಂದು ಘೋಷಿಸಲಾಗುವುದು ಎಂದು ಹೇಳಿದ್ದರು. ಆದರೂ ತೃಪ್ತರಾಗದ ಸ್ಥಳೀಯರು ಅರಣ್ಯ ಇಲಾಖೆ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ವಾಹನಕ್ಕೆ ಮುತ್ತಿಗೆ ಹಾಕಿದ್ದರು. ಸೋಮವಾರದಿಂದ ಹೋರಾಟ ತೀವ್ರಗೊಳಿಸುವುದಾಗಿ ಘೋಷಿಸಿದ್ದರು.

ಈ ಕಾರಣದಿಂದಾಗಿ ಮಾನಂದವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಸ್ಥಳೀಯಾಡಳಿತ ಆದೇಶಿಸಿದೆ. ಈ ಭಾಗದಲ್ಲಿ ಕರ್ನಾಟಕದವರಿಗೆ ಒಡನಾಟ ಇರುವ ಜತೆಗೆ ಪ್ರವಾಸಿಗರು ಈ ಮಾರ್ಗದಲ್ಲಿ ವಯನಾಡು ಕಡೆ ಹೋಗುವುದರಿಂದ ಅಡಚಣೆಯೂ ಆಗಬಹುದು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಜ ಸಂಚಾರಕ್ಕೆ ಅವಕಾಶವಿದೆ. ಅಗತ್ಯ ಸೇವೆಗಳು ಇರಲಿವೆ. ಉಳಿದಂತೆ ನಿಷೇಧಾಜ್ಞೆ ಇರುವುದರಿಂದ ಹೆಚ್ಚು ಜನ ಸೇರಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ಧಾರೆ.

ಹುಲಿ ಶವ ಪತ್ತೆ

ಈ ನಡುವೆ ಘಟನೆ ನಡೆದ ಸಮೀಪದಲ್ಲಿಯೇ ಹುಲಿಯ ಶವ ಪತ್ತೆಯಾಗಿರುವ ಮಾಹಿತಿ ಲಭಿಸಿದೆ. ಕೇರಳ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಅದು ಈಗ ದಾಳಿ ಮಾಡಿರುವ ಹುಲಿಯೋ ಅಥವಾ ಬೇರೆಯದ್ದೋ ಎನ್ನುವುದು ಖಚಿತವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ನಾಗರಹೊಳೆ, ಬಂಡೀಪುರ, ಕೇರಳದ ವಯನಾಡು ಹಾಗೂ ತಮಿಳುನಾಡಿನ ಮದುಮಲೈ ಹುಲಿಧಾಮಗಳ ಹೊಂದಿಕೊಂಡಂತೆ ಇರುವುದರಿಂದ ಈ ಭಾಗದಲ್ಲಿ ಹುಲಿ ಸಂಖ್ಯೆ ಹೆಚ್ಚಿದೆ. ವಯಸ್ಸಾದ ಹುಲಿಗಳು ಕಾಡಿನಿಂದ ಹೊರಕ್ಕೆ ಬಂದು ದಾಳಿ ಮಾಡುವ ಪ್ರಕರಣಗಳು ಹೆಚ್ಚಿವೆ. ಎರಡು ವರ್ಷದ ಹಿಂದೆ ಕೇರಳದಲ್ಲಿ ಹುಲಿಯೊಂದು ದಾಳಿ ಮಾಡಿದಾಗ ಕಂಡಲ್ಲಿ ಕೊಲ್ಲಲು ಆದೇಶಿಸಲಾಗಿತ್ತು. ಕರ್ನಾಟಕದ ಗಡಿ ಭಾಗದಲ್ಲೂ ದಾಳಿ ಪ್ರಕರಣಗಳು ನಡೆಯುತ್ತಲೇ ಇವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.