ಕೇರಳ ಲೋಕಸಭಾ ಫಲಿತಾಂಶ; ಆಡಳಿತಾರೂಢ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ನಡುವೆ ಅರಳಿತು ಬಿಜೆಪಿಯ ಕಮಲ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇರಳ ಲೋಕಸಭಾ ಫಲಿತಾಂಶ; ಆಡಳಿತಾರೂಢ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ನಡುವೆ ಅರಳಿತು ಬಿಜೆಪಿಯ ಕಮಲ

ಕೇರಳ ಲೋಕಸಭಾ ಫಲಿತಾಂಶ; ಆಡಳಿತಾರೂಢ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ನಡುವೆ ಅರಳಿತು ಬಿಜೆಪಿಯ ಕಮಲ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕೇರಳದ 20 ಸ್ಥಾನಗಳ ಪೈಕಿ ಯುಡಿಎಫ್‌ ಪ್ರಾಬಲ್ಯದ ಪ್ರದರ್ಶನ ತೋರಿದೆ. ರಾಜ್ಯದ ಆಡಳಿತಾರೂಢ ಎಲ್‌ಡಿಎಫ್‌ಗೆ ಭಾರಿ ಹಿನ್ನೆಡೆಯಾಗಿದ್ದು, ಎಲ್‌ಡಿಎಫ್ ಹಾಗೂ ಯುಡಿಎಫ್‌ ನಡುವೆ ಬಿಜೆಪಿಯ ಕಮಲ ಅರಳಿದೆ. ಲೋಕಸಭಾ ಫಲಿತಾಂಶದ ವಿವರ ಇಲ್ಲಿದೆ.

ಕೇರಳ ಲೋಕಸಭಾ ಫಲಿತಾಂಶ; ಆಡಳಿತಾರೂಢ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ನಡುವೆ ಅರಳಲೆತ್ನಿಸಿದೆ ಬಿಜೆಪಿಯ ಕಮಲ (ಸಾಂಕೇತಿಕ ಚಿತ್ರ)
ಕೇರಳ ಲೋಕಸಭಾ ಫಲಿತಾಂಶ; ಆಡಳಿತಾರೂಢ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ನಡುವೆ ಅರಳಲೆತ್ನಿಸಿದೆ ಬಿಜೆಪಿಯ ಕಮಲ (ಸಾಂಕೇತಿಕ ಚಿತ್ರ) (Creative - Manju Kotagunasi)

ತಿರುವನಂತಪುರ: ಲೋಕಸಭಾ ಚುನಾವಣೆ ಫಲಿತಾಂಶ (Lok Sabha Election Results) ಪ್ರಕಟವಾಗಿದ್ದು, ಕೇರಳದ 20 ಲೋಕಸಭಾ ಸ್ಥಾನಗಳ ಪೈಕಿ ಆಡಳಿತಾರೂಢ ಎಲ್‌ಡಿಎಫ್‌ 1 ಸ್ಥಾನದಲ್ಲಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 18 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಬಿಜೆಪಿ ಒಂದು ಸ್ಥಾನದಲ್ಲಿ ಗೆದ್ದು ತನ್ನ ಖಾತೆ ತೆರೆದಿದೆ.

ಕೇರಳದ 20 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 26 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಶೇಕಡಾ 67.15 ರಷ್ಟು ಮತದಾನವಾಗಿದೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್‌), ರಾಜ್ಯದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.

ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಇಲ್ಲಿ ಖಾತೆ ತೆರೆಯುವ ಸುಳಿವನ್ನು ನೀಡಿತ್ತು. ಆಡಳಿತಾರೂಢ ಎಲ್‌ಡಿಎಫ್‌ಗೆ ಶೂನ್ಯ ಸಾಧನೆ ಮಾಡುವ ಸಾಧ್ಯತೆಯನ್ನೂ ಹೇಳಿತ್ತು. ಯುಡಿಎಫ್‌ಗೆ ಇಲ್ಲಿ ಬಹುತೇಕ ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿದಿತ್ತು.

ಕೇರಳದಲ್ಲಿ ಲೋಕಸಭಾ ಚುನಾವಣೆ 2024; ಹೈಪ್ರೊಫೈಲ್ ಕ್ಷೇತ್ರಗಳಿವು

ವಯನಾಡ್ - ರಾಹುಲ್ ಗಾಂಧಿ (ಕಾಂಗ್ರೆಸ್‌), ಕೆ ಸುರೇಂದ್ರನ್ (ಬಿಜೆಪಿ)

ತಿರುವನಂತಪುರ- ಶಶಿ ತರೂರ್ (ಕಾಂಗ್ರೆಸ್), ರಾಜೀವ್ ಚಂದ್ರಶೇಖರ್ (ಬಿಜೆಪಿ)

ವಡಗರ- ಕೆ ಶೈಲಜಾ (ಎಲ್‌ಡಿಎಫ್‌), ಶಫಿ ಪರಂಬಿಲ್ (ಯುಡಿಎಫ್)

ಪತ್ತನಂತಿಟ್ಟ - ಅನಿಲ್ ಆಂಟನಿ (ಬಿಜೆಪಿ), ಆಂಟೋ ಆಂಟನಿ (ಯುಡಿಎಫ್‌), ಥಾಮಸ್ ಐಸಾಕ್ (ಎಲ್‌ಡಿಎಫ್‌)

ತ್ರಿಶೂರ್ - ಸುರೇಶ್ ಗೋಪಿ (ಬಿಜೆಪಿ)

ವಯನಾಡಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರಿಗೆ ಸಿಪಿಐ(ಎಂ)ನ ಅನ್ನಿ ರಾಜಾ ಅವರಿಂದ ತೀವ್ರ ಪೈಪೋಟಿ ಎದುರಾಗಿದೆ. ಇಲ್ಲಿ ರಾಹುಲ್ ಗಾಂಧಿ ಎರಡನೆ ಸಲ ಜನಾದೇಶ ಬಯಸಿದ್ದರು.

ಬಿಜೆಪಿಯ ಸ್ಟಾರ್ ಅಭ್ಯರ್ಥಿ ಸುರೇಶ್ ಗೋಪಿ 2019 ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದರು. ಕಾಂಗ್ರೆಸ್ ಮತ್ತು ಸಿಪಿಐ ಅಭ್ಯರ್ಥಿಗಳು ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಪ್ರಭಾವಶಾಲಿ ಎನಿಸುವಂತೆ 2.93 ಲಕ್ಷ ಮತಗಳನ್ನು ಪಡೆದಿದ್ದರು. ಈಗ, ಸುರೇಶ್ ಗೋಪಿ ಅವರ ಜನಪ್ರಿಯತೆಯೊಂದಿಗೆ ಹಿಂದೂ ಮತಗಳು ಮತ್ತು ರಾಜ್ಯದಲ್ಲಿ ಸುಮಾರು 21% ಮತದಾರರನ್ನು ಹೊಂದಿರುವ ಕ್ರಿಶ್ಚಿಯನ್ ಸಮುದಾಯವನ್ನು ಓಲೈಸುವ ತನ್ನ ಸ್ವಂತ ಪ್ರಯತ್ನದ ಬಲದ ಮೇಲೆ ಗೆಲ್ಲಲು ಬಿಜೆಪಿ ಪಣತೊಟ್ಟಿತ್ತು.

ಇನ್ನು ತಿರುವನಂತಪುರಂನಲ್ಲಿ ಹಾಲಿ ಸಂಸದ ಶಶಿತರೂರ್ ಈಗಾಗಲೇ ಮೂರು ಬಾರಿ ಪ್ರತಿನಿಧಿಸಿ, ನಾಲ್ಕನೇ ಬಾರಿಗೆ ಜನಾದೇಶ ಕೋರಿದ್ದಾರೆ. ಇಲ್ಲಿಂದ ಕೇಂದ್ರ ಸಚಿವ ಕೇರಳದವರೇ ಆದ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಪೈಪೋಟಿ ಹೆಚ್ಚಿತ್ತು.

ಲೋಕಸಭಾ ಚುನಾವಣೆ 2024; ಕೇರಳದ ರಾಜಕೀಯ ಚಿತ್ರಣ

ಕೇರಳದಲ್ಲಿ ಈ ಬಾರಿ ಯುಡಿಎಫ್‌ ಒಕ್ಕೂಟದಿಂದ ಕಾಂಗ್ರೆಸ್‌ 16, ಐಯುಎಂಎಲ್‌ 2, ರೆವೆಲ್ಯೂ‍ಷನರಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಕೇರಳ ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಸ್ಪರ್ಧಿಸಿದ್ದವು. ಎಲ್‌ಡಿಎಫ್ ಒಕ್ಕೂಟದಿಂದ ಸಿಪಿಐ (ಎಂ) 15, ಸಿಪಿಐ 4, ಕೇರಳ ಕಾಂಗ್ರೆಸ್ (ಎಂ) 1ರಲ್ಲಿ ಸ್ಪರ್ಧಿಸಿದ್ದವು. ಎನ್‌ಡಿಎ ಒಕ್ಕೂಟದಿಂದ ಬಿಜೆಪಿ 16, ಭಾರತ ಧರ್ಮ ಜನಸೇನಾ 4 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

ಕೇರಳದಲ್ಲಿ ಏಕ ಪಕ್ಷದ ಸರ್ಕಾರ ರಚನೆಯಾಗದೇ ದಶಕಗಳೇ ಆಗಿವೆ. ಇಲ್ಲಿಯ ರಾಜಕಾರಣ ಏನಿದ್ದರೂ ಐಕ್ಯರಂಗ ಮತ್ತು ಎಡರಂಗ ಒಕ್ಕೂಟಗಳದ್ದೇ. ಸಮಾನ ಸಿದ್ಧಾಂತ ಮತ್ತು ಮಾನಸಿಕತೆಗಳನ್ನು ಹೊಂದಿದ ಸಣ್ಣಪುಟ್ಟ ಪಕ್ಷಗಳು ಸೇರಿ ಈ ಒಕ್ಕೂಟ ರಚಿಸಿಕೊಂಡಿವೆ.

ಕೇರಳದಲ್ಲಿ ಜಾತಿ ಸಮೀಕರಣವೂ ಇದ್ದು, ಈಳವರು ಅಥವಾ ಈಡಿಗರು ಇಲ್ಲಿನ ಏಕೈಕ ಅತಿ ದೊಡ್ಡ ಹಿಂದೂ ಸಮುದಾಯ. ಇವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡ 23 ಇದೆ. ಒಬಿಸಿ ವರ್ಗಕ್ಕೆ ಸೇರಿದ ಈಳವ ಸಮುದಾಯವು ಸಾಂಪ್ರದಾಯಿಕವಾಗಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್)ನ ಮತಬ್ಯಾಂಕ್‌ನ ಭಾಗವಾಗಿದೆ. ಆದಾಗ್ಯೂ, ಈ ಸಮುದಾಯದ ಅತಿದೊಡ್ಡ ಸಂಘಟನೆ ಎಸ್‌ಎನ್‌ಡಿಪಿ ಯೋಗಂ 2015 ರಲ್ಲಿ ಭಾರತ್ ಧರ್ಮ ಜನ ಸೇನೆ (ಬಿಡಿಜೆಎಸ್‌) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದೆ. ಇದು 2016 ರ ಅಸೆಂಬ್ಲಿ ಚುನಾವಣೆಯಿಂದ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಮಿತ್ರ ಪಕ್ಷವಾಗಿದೆ. ಎಸ್‌ಎನ್‌ಡಿಪಿಯ ತಳಮಟ್ಟದ ಕಾರ್ಯಕರ್ತರನ್ನು ತನ್ನೆಡೆ ಸೆಳೆದುಕೊಳ್ಳಲು ಬಿಡಿಜೆಎಸ್ ಪ್ರಯತ್ನಿಸಿದ್ದು, ಬಿಜೆಪಿ ಕೂಡ ತನ್ನ ನೆಲೆ ವಿಸ್ತರಣೆಗೆ ಪ್ರಯತ್ನಿಸಿದೆ. ಸಹಜವಾಗಿಯೇ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಲ್ಪಸಂಖ್ಯಾತರೇ ಮತಬ್ಯಾಂಕ್. ಹೀಗಾಗಿ ಐಯುಎಂಎಲ್‌ ಜೊತೆಗೂ ಅದು ಮೈತ್ರಿಮಾಡಿಕೊಂಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ 19 ಮತ್ತು ಎಲ್‌ಡಿಎಫ್ 1 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಯುಡಿಎಫ್‌ನಲ್ಲಿ ಕಾಂಗ್ರೆಸ್ 15 ಸ್ಥಾನ, ಐಯುಎಂಎಲ್ 2, ಆರ್‌ಎಸ್‌ಪಿ ಮತ್ತು ಕೇರಳ ಕಾಂಗ್ರೆಸ್ ತಲಾ 1 ಸ್ಥಾನ ಗೆದ್ದುಕೊಂಡಿದ್ದವು. ಇನ್ನುಳಿದ ಒಂದು ಸ್ಥಾನವನ್ನು ಎಲ್‌ಡಿಎಫ್‌ನ ಸಿಪಿಐ(ಎಂ) ಗೆದ್ದುಕೊಂಡಿತ್ತು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.