Kerala Malappuram boat capsize: ಕೇರಳದ ಮಲಪ್ಪುರಂನಲ್ಲಿ ಪ್ರವಾಸಿಗರಿದ್ದ ದೋಣಿ ಮಗುಚಿ 21 ಜನರ ದುರಂತ ಸಾವು, ಪ್ರಧಾನಿ ಸಂತಾಪ
Kerala Malappuram district boat capsize: ಕೇರಳದ ಮಲಪ್ಪುರಂನಲ್ಲಿ ಪ್ರವಾಸಿಗರಿದ್ದ ದೋಣಿ ಮಗುಚಿ 21 ಜನರು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಘಟನೆಯ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತನೂರು ತುವಾಲ್ ಬೀಚ್‌ನಲ್ಲಿ ಪ್ರವಾಸಿ ದೋಣಿಯೊಂದು ಮಗುಚಿ ಹಲವು ಮಂದಿ ಮೃತಪಟ್ಟ ಘಟನೆ ನಡೆದಿದೆ. ಬೋಟ್ ಮುಳುಗಿದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 21ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
""ಇದುವರೆಗೆ ನಾವು 21 ಮೃತದೇಹಗಳನ್ನು ಹೊರತೆಗೆದಿದ್ದೇವೆ. ದೋಣಿಯಲ್ಲಿದ್ದ ಜನರ ನಿಖರವಾದ ಸಂಖ್ಯೆ ನಮಗೆ ತಿಳಿದಿಲ್ಲ, ಆದ್ದರಿಂದ, ನಾವು ಇನ್ನಷ್ಟು ಜನರು ಇದ್ದಾರೆಯೇ ಎಂದು ಹುಡುಕಾಟ ಮುಂದುವರೆಸಿದ್ದೇವೆ. ಕೆಸರಿನಲ್ಲಿ ಜನರು ಮುಳುಗಿರಬಹುದೇ ಎಂದು ಶೋಧ ನಡೆಸುತ್ತಿದ್ದೇವೆ" ಎಂದು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಶಿಜು ಕೆಕೆ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಹಲವಾರು ವಾಹನಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಘಟನೆ ಬೆಳಕಿಗೆ ಬಂದ ತಕ್ಷಣ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯ ಆರೋಗ್ಯ ಇಲಾಖೆಯ ತುರ್ತು ಸಭೆಯನ್ನು ನಡೆಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಮರಣೋತ್ತರ ಪರೀಕ್ಷೆಯನ್ನು ಚುರುಕುಗೊಳಿಸುವಂತೆ ಆರೋಗ್ಯ ಸಚಿವರು ಸೂಚಿಸಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆಗೆ ಮರಣೋತ್ತರ ಪರೀಕ್ಷೆ ಆರಂಭಿಸುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಲಪ್ಪುರಂ ದೋಣಿ ಮುಳುಗಿದ ಘಟನೆಯಲ್ಲಿ ಉಂಟಾದ ಜೀವಹಾನಿಗೆ ಭಾನುವಾರ ಸಂತಾಪ ಸೂಚಿಸಿದ್ದಾರೆ. ತ್ವರಿತ ಮತ್ತು ಪರಿಣಾಮಕಾರಿ ರಕ್ಷಣಾ ಕಾರ್ಯ ಕೈಗೊಳ್ಳಲು ಆದೇಶ ನೀಡಿದ್ದಾರೆ.
"ಮಲಪ್ಪುರಂನ ತಾನೂರ್ ದೋಣಿ ಅಪಘಾತದಲ್ಲಿ ಸಂಭವಿಸಿದ ದುರಂತದ ಜೀವಹಾನಿ ವಿಷಯ ಕೇಳಿ ತೀವ್ರ ದುಃಖವಾಗಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಇದನ್ನು ಸಂಪುಟ ಸಚಿವರು ನೋಡಿಕೊಳ್ಳುತ್ತಿದ್ದಾರೆ. ದುಃಖದಲ್ಲಿರುವ ಕುಟುಂಬಗಳು ಮತ್ತು ಸ್ನೇಹಿತರಿಗೆ ಹೃತ್ಪೂರ್ವಕ ಸಂತಾಪ" ಎಂದು ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
"ಕೇರಳದ ಮಲಪ್ಪುರಂನಲ್ಲಿ ಸಂಭವಿಸಿದ ದೋಣಿ ದುರಂತದಿಂದ ಸಂಭವಿಸಿದ ಜೀವಹಾನಿ ಘಟನೆಯು ನೋವುಂಟು ಮಾಡಿದೆ. ಮೃತರ ಕುಟುಂಬಗಳಿಗೆ ಸಂತಾಪ. ಮೃತರ ಕುಟುಂಬಕ್ಕೆ ಪಿಎಂಆರ್‌ಎನ್‌ಎಫ್‌ನಿಂದ 2 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತದೆ"ಎಂದು ಭಾನುವಾರ ರಾತ್ರಿ ಪ್ರಧಾನಿ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಲಪ್ಪುರಂ ದೋಣಿ ಅಪಘಾತದ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ. "ದೋಣಿ ಮುಳುಗಿದ ಘಟನೆಯಲ್ಲಿನ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ. ದುಃಖಿತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ. ಎಲ್ಲರ ಸುರಕ್ಷಿತ ರಕ್ಷಣೆಗಾಗಿ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಘಟನೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. "ಕೇರಳದ ಮಲಪ್ಪುರಂನಲ್ಲಿ ಹೌಸ್‌ಬೋಟ್ ಮಗುಚಿದ ಸುದ್ದಿ ಕೇಳಿ ಕಂಗಲಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡಲು ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.