Video: ಕೇರಳದಲ್ಲಿ ಬರೋಬ್ಬರಿ 150 ಜೋಡಿ ಅವಳಿಗಳ ಸಮಾಗಮ; ಒಂದೆಡೆ ಸೇರಲು ನೆರವಾಯ್ತು ವಾಟ್ಸಾಪ್ ಗ್ರೂಪ್
ಅವಳಿಗಳಿಗಾಗಿ ಕೇರಳದಲ್ಲಿ ಆಯೋಜಿಸಿದ್ದ ವಿಶೇಷ ಕೂಟವೊಂದು ಎಲ್ಲೆಡೆ ಸುದ್ದಿಯಾಗಿದೆ. ಅವಳಿ ವಿಸ್ಮಯ ಹೆಸರಿನಲ್ಲಿ ರಾಜ್ಯದೆಲ್ಲೆಡೆ ಇರುವ ಅವಳಿ ಹಾಗೂ ತ್ರಿವಳಿಗಳು ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಇಲ್ಲಿದೆ.

ದೇವರ ನಾಡು ಕೇರಳ ವಿಶೇಷ ಆಚರಣೆ ಹಾಗೂ ಹಬ್ಬಗಳಿಗೆ ಹೆಸರುವಾಸಿ. ಇಲ್ಲಿನ ಜನರ ಸಂಸ್ಕಾರ, ಸಂಪ್ರದಾಯಗಳೇ ವಿಭಿನ್ನ. ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಂಡರೂ, ತಮ್ಮ ಆಚಾರ ವಿಚಾರಗಳನ್ನು ಕೇರಳಿಗರು ಈಗಲೂ ಪಾಲಿಸುತ್ತಾರೆ. ಸಾಕ್ಷರತೆ ಹೆಚ್ಚಿರುವ ವಿದ್ಯಾವಂತ ಜನರಿರುವ ಕೇರಳದಲ್ಲಿ, ಭಿನ್ನ ವಿಭಿನ್ನ ಕಾರ್ಯಕ್ರಮಗಳು ಆಗಾಗ ನಡೆಯುತ್ತವೆ. ಇದಕ್ಕೆ ಹೊಸ ಸೇರ್ಪಡೆಯೇ ಅವಳಿಗಳ ಹಬ್ಬ. ಹೌದು, ಬರೋಬ್ಬರಿ 38 ಜೋಡಿ ಒಂದೇ ರೀತಿಯ ಅವಳಿಗಳು ಹಾಗೂ ಮೂರು ಜೊತೆ ತ್ರಿವಳಿಗಳು ಸೇರಿದಂತೆ ಕೇರಳ ರಾಜ್ಯದ ಒಟ್ಟು 150 ಅವಳಿಗಳು ಸೇರಿ ವಿಶೇಷ ಆಚರಣೆಯೊಂದನ್ನು ಮಾಡಿದ್ದಾರೆ. ಕೇರಳದ ವೃದ್ಧಾಶ್ರಮವೊಂದರಲ್ಲಿ ಒಟ್ಟಾದ ಈ ಎಲ್ಲರೂ, ಭಿನ್ನ ರೀತಿಯಲ್ಲಿ ತಮ್ಮ'ಒಡನಾಟ'ವನ್ನು ಆಚರಿಸಿದ್ದಾರೆ.
ಈ ಕೂಡುವಿಕೆಗೆ ಭಿನ್ನ ಹೆಸರನ್ನೂ ಇಡಲಾಗಿತ್ತು. ಅದುವೇ 'ಇರಟ್ಟೆ ವಿಸ್ಮಯಂ 24'. ಅಂದರೆ 'ಅವಳಿಗಳ ವಿಸ್ಮಯ 2024' ಎಂದರ್ಥ. ಅವಳಿ ವ್ಯಕ್ತಿಗಳಿಗಾಗಿ, ಅವಳಿಗಳು ಸೇರಿಕೊಂಡು ನಡೆಸಿದ ವಿಶೇಷ ಗೆಟ್ ಟುಗೆದರ್ ಇದು. ಹಲವಾರು ಚಟುವಟಿಕೆಗಳು, ಮನರಂಜನೆ, ಹಾಡು-ಹರಟೆ, ಮಾತುಕತೆಗಳೊಂದಿಗೆ ಇಲ್ಲಿ ಸೇರಿದ ಜೋಡಿ ಜೀವಗಳು ಎಂಜಾಯ್ ಮಾಡಿದ್ದಾರೆ.
ಇತ್ತೀಚೆಗೆ ಹುಟ್ಟಿಕೊಂಡ ಆಲ್ ಕೇರಳ ಟ್ವಿನ್ಸ್ ಕಮ್ಯುನಿಟಿ (AKTC) ಆಯೋಜಿಸಿದ ಈ ಕಾರ್ಯಕ್ರಮ ಕುರಿತು ಸುದ್ದಿಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕೊಚ್ಚಿ ಸಹಾಯಕ ಪೊಲೀಸ್ ಆಯುಕ್ತರಾದ ಪಿ ರಾಜ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ನೆಲೆಸಿರುವ ಕೆಲವು ಅವಳಿಗಳನ್ನು ಹೊರತುಪಡಿಸಿ, ಟ್ವಿನ್ಸ್ ಕಮ್ಯುನಿಟಿಯ ಬಹುತೇಕ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಬಗೆಬಗೆಯ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸೇರಿದ್ದ ಅವಳಿಗಳು ಎಂಜಾಯ್ ಮಾಡಿದರು. ತಮ್ಮ ನಡುವಿನ ವಿಶೇಷ ಬಂಧವನ್ನು ಗಟ್ಟಿಗೊಳಿಸುವುದಲ್ಲದೆ, ಅವಳಿಗಳಿಗೆ ತಮ್ಮ ಅನನ್ಯ ಅನುಭವಗಳನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮ ವೇದಿಕೆಯಾಯಿತು.
ಇದನ್ನೂ ಓದಿ | Kasaragod News: ಸೀತಾಂಗೋಳಿ ಪೆರ್ಣೆ ಭಗವತೀ ಕ್ಷೇತ್ರದಲ್ಲಿ ಕಳಿಯಾಟದ ಖುಷಿಯ ನೋಟ, ಇಲ್ಲಿವೆ ಆಕರ್ಷಕ ಚಿತ್ರಗಳು
ಈ ಕಾರ್ಯಕ್ರಮದಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಕೂಡಾ ಭಾಗವಹಿಸಿದ್ದರು. ಪೊನ್ನು ಮತ್ತು ಚಿನ್ನು ಎಂದೇ ಕರೆಯಲ್ಪಡುವ ಭಾಗ್ಯಲಕ್ಷ್ಮಿ ಮತ್ತು ಧನಲಕ್ಷ್ಮಿ ಹೆಸರಿನ ಅವಳಿ ಸಹೋದರಿಯರು ಹಾಜರಿದ್ದರು.
ಅವಳಿ ಕುಟುಂಬದ ಸಂಭ್ರಮ
ಕಾರ್ಯಕ್ರಮದಲ್ಲಿ ತೆಗೆಯಲಾದ ಫೋಟೋ ಹಾಗೂ ವಿಡಿಯೋಗಳನ್ನು ಎಕೆಟಿಸಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಮಲಯಾಳಂನಲ್ಲಿ ಶೀರ್ಷಿಕೆಯೊಂದಿಗೆ ಶೇರ್ ಮಾಡಿರುವ ವಿಡಿಯೋಗೆ 'ಅವಳಿ ಕುಟುಂಬ' ಎಂಬುದಾಗಿ ಕ್ಯಾಪ್ಷನ್ ಹಾಕಲಾಗಿದೆ.
ಎಕೆಟಿಸಿ ಹುಟ್ಟಿಕೊಂಡಿದ್ದೇ ಸೋಷಿಯಲ್ ಮೀಡಿಯಾದಿಂದ. ಆರಂಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದ ಸಂವಾದಗಳ ಮೂಲಕ ರೂಪುಗೊಂಡ ಎಕೆಟಿಸಿ, ಕೇರಳದಾದ್ಯಂತ 6ರಿಂದ 40 ವರ್ಷದೊಳಗಿನ 300 ಸದಸ್ಯರ ದೊಡ್ಡ ಸಮುದಾಯವಾಗಿ ಬೆಳೆದಿದೆ. ಕಾಸರಗೋಡಿನಿಂದ ರಾಜಧಾನಿ ತಿರುವನಂತಪುರದವರೆಗೂ ವಾಸಿಸುವ ಅವಳಿಗಳು ಈ ಗುಂಪಿನಲ್ಲಿದ್ದಾರೆ. 2024ರ ಜನವರಿಯಲ್ಲಿ ವಾಟ್ಸಾಪ್ ಗ್ರೂಪ್ ಮೂಲಕ ಆರಂಭವಾದ ಎಕೆಟಿಸಿ, ಇದೀಗ ಒಂದು ಕಡೆ ಒಟ್ಟಾಗಿ ಸಂಭ್ರಮಿಸಿದೆ.
ಕೇರಳ ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | 10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

ವಿಭಾಗ