ಕನ್ನಡ ಸುದ್ದಿ  /  Nation And-world  /  Kerala News High Court Conduct Mitigation Investigation Attingal Twin Murder Case, Perumbavoor Jisha Murder Case Pcp

Kerala Court News: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮರಣದಂಡನೆಗೆ ಗುರಿಯಾದ ಅಪರಾಧಿಗಳ ಮಿಟಿಗೇಷನ್‌ ತನಿಖೆಗೆ ಕೇರಳ ಹೈಕೋರ್ಟ್‌ ಆದೇಶ

Mitigation investigation: 2014 ರ ಅಟ್ಟಿಂಗಲ್ ಅವಳಿ ಕೊಲೆ ಪ್ರಕರಣದಲ್ಲಿನಿನೋ ಮ್ಯಾಥ್ಯೂಗೆ ಮರಣದಂಡನೆ ವಿಧಿಸಲಾಗಿದೆ. 2016ರ ಪೆರುಂಬಾವೂರ್ ಜಿಶಾ ಕೊಲೆ ಪ್ರಕರಣದ ಅಪರಾಧಿ ಅಮೀರುಲ್ ಇಸ್ಲಾಂಗೂ ಮರಣದಂಡನೆ ವಿಧಿಸಲಾಗಿದೆ.

ಕೇರಳ ಹೈಕೋರ್ಟ್‌ (ಎಚ್‌ಟಿ ಫೈಲ್‌ ಫೋಟೊ)
ಕೇರಳ ಹೈಕೋರ್ಟ್‌ (ಎಚ್‌ಟಿ ಫೈಲ್‌ ಫೋಟೊ)

ಎರ್ನಾಕುಲಂ: ಮರಣದಂಡನೆಗೆ ಗುರಿಯಾಗಿರುವ ಇಬ್ಬರು ಅಪರಾಧಿಗಳ ಶಿಕ್ಷೆಯನ್ನು ತಗ್ಗಿಸುವ ಸಲುವಾಗಿ ಕೇರಳ ಹೈಕೋರ್ಟ್‌ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ "ಮಿಟಿಗೇಷನ್‌ ಇನ್ವೆಷ್ಟಿಗೇಷನ್‌ಗೆ ನಿರ್ಧರಿಸಿದೆ. ಇಬ್ಬರು ಅಪರಾಧಿಗಳಾದ ನಿನೋ ಮ್ಯಾಥ್ಯೂ ಮತ್ತು ಮಹಮ್ಮದ್ ಅಮೀರುಲ್ ಇಸ್ಲಾಂ ಅವರ ಜೈಲಿನಲ್ಲಿನ ನಡವಳಿಕೆ, ಜೈಲಿನಲ್ಲಿ ಅವರ ವರ್ತನೆ, ಅವರು ಮಾಡಿರುವ ಕೆಲಸಗಳ ವಿವರದ ಕುರಿತು ವರದಿ ಸಲ್ಲಿಸುವಂತೆ ಜೈಲಿನ ಮಹಾನಿರ್ದೇಶಕರಿಗೆ ನ್ಯಾಯಾಲಯ ಸೂಚಿಸಿದೆ.

2014 ರ ಅಟ್ಟಿಂಗಲ್ ಅವಳಿ ಕೊಲೆ ಪ್ರಕರಣದಲ್ಲಿನಿನೋ ಮ್ಯಾಥ್ಯೂಗೆ ಮರಣದಂಡನೆ ವಿಧಿಸಲಾಗಿದೆ. 2016ರ ಪೆರುಂಬಾವೂರ್ ಜಿಶಾ ಕೊಲೆ ಪ್ರಕರಣದ ಅಪರಾಧಿ ಅಮೀರುಲ್ ಇಸ್ಲಾಂಗೂ ಮರಣದಂಡನೆ ವಿಧಿಸಲಾಗಿದೆ. ಇವರಿಬ್ಬರ ಶಿಕ್ಷೆಯನ್ನು ತಗ್ಗಿಸುವ ಸಲುವಾಗಿ ಅವರಿಬ್ಬರ ಸಾಮಾಜಿಕ ಆರ್ಥಿಕ ಹಿನ್ನೆಲೆ, ಮಾನಸಿಕ ಸ್ಥಿತಿಗಳು, ಅವರ ಬದುಕಿನಲ್ಲಿ ನಿಂದನೆ ಅಥವಾ ನಿರ್ಲಕ್ಷ್ಯ ಇತ್ಯಾದಿ ಇತಿಹಾಸವನ್ನು ಪರಿಶೀಲಿಸಲು ಹೈಕೋರ್ಟ್‌ ನಿರ್ಧರಿಸಿದೆ. ನಿನೋನನ್ನು ತಿರುವನಂತಪುರಂ ಜಿಲ್ಲೆಯ ಪೂಜಾಪುರ ಜೈಲಿನಲ್ಲಿ ಇರಿಸಲಾಗಿದ್ದು, ಮುಹಮ್ಮದ್ ತ್ರಿಶೂರ್ ಜಿಲ್ಲೆಯ ವಿಯ್ಯೂರ್ ಜೈಲಿನಲ್ಲಿ ಇರಿಸಲಾಗಿದೆ.

ಶಿಕ್ಷೆ ತಗ್ಗಿಸುವ ಸಲುವಾಗಿ ಮಿಟಿಗೇಷನ್‌ ತನಿಖೆಗೆ ಆದೇಶಿಸಿರುವುದು ಕೇರಳದ ಇತಿಹಾಸದಲ್ಲಿ ಇದೇ ಮೊದಲು. ನ್ಯಾಯಮೂರ್ತಿ ಅಲೆಕ್ಸಾಂಡರ್ ಥಾಮಸ್ ಮತ್ತು ಸಿ ಜಯಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ನಿನೋ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಸಂದರ್ಶನ ನಡೆಸಿ ವಿವರಗಳನ್ನು ಪಡೆಯಲು ಪ್ರಾಜೆಕ್ಟ್‌ 39ಎ ಜತೆ ಸಂಬಂಧ ಹೊಂದಿರುವ ಸಿಪಿ ಶ್ರುತಿ ಅವರನ್ನು ಕೋರ್ಟ್‌ ನೇಮಿಸಿದೆ. ನೂರಿಯಾ ಅನ್ಸಾರಿ ಅವರು ಅಮೀರ್-ಉಲ್ ಇಸ್ಲಾಂ ಬಗ್ಗೆ ತನಿಖೆ ನಡೆಸಲಿದ್ದಾರೆ.

ಇವರಿಬ್ಬರ ಸಂದರ್ಶನ ಸೇರಿದಂತೆ ವಿವಿಧ ಮೌಲ್ಯಮಾಪನ ಮಾಡಲು ಅವಕಾಶ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ವೈದ್ಯಕೀಯ ದಾಖಲೆಗಳು, ಜೈಲು ನಡವಳಿಕೆ, ಶೈಕ್ಷಣಿಕ, ವೃತ್ತಿಪರ ಅಥವಾ ಉದ್ಯೋಗಾವಕಾಶಗಳ ಪ್ರಮಾಣಪತ್ರಗಳು ಸೇರಿದಂತೆ ಅಪರಾಧಿಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ವಸ್ತುಗಳನ್ನು ನೂರಿಯಾ ಅನ್ಸಾರಿ ಮತ್ತು ಸಿಪಿ ಶ್ರುತಿ ಅವರಿಗೆ ಒದಗಿಸುವಂತೆ ಜೈಲಿನ ಅಧಿಕಾರಿಗಳಿಗೆ ಕೋರ್ಟ್‌ ಸೂಚಿಸಿದೆ. ಅಂತಿಮವಾಗಿ ಈ ಅಪರಾಧಿಗಳ ಕುರಿತ ವಿವರವನ್ನು ಮುಚ್ಚಿದ ಕವರ್‌ನಲ್ಲಿ ಸಲ್ಲಿಸುವಂತೆ ಕೋರ್ಟ್‌ ಸೂಚಿಸಿದೆ.

ಇಬ್ಬರೂ ಅಪರಾಧಿಗಳನ್ನು ಸಂಬಂಧಪಟ್ಟ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಇಬ್ಬರು ಮನೋವೈದ್ಯರು ಮತ್ತು ಸರ್ಕಾರಿ ಸೇವೆಯಲ್ಲಿರುವ ಕ್ಲಿನಿಕಲ್ ಸೈಕಾಲಜಿಸ್ಟ್‌ನಿಂದ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಪರಾಧಿಗಳ ಹಿನ್ನೆಲೆ, ಅಪರಾಧಕ್ಕೆ ಕಾರಣವಾಗುವ ಅವರ ವೈಯಕ್ತಿಕ ಸಂದರ್ಭಗಳು, ಅವರ ಮಾನಸಿಕ ಆರೋಗ್ಯ, ವಯಸ್ಸು ಇತ್ಯಾದಿಗಳನ್ನು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಕೂಡ ಈ ಹಿಂದೆ ಮಿಟಿಗೇಷನ್‌ ತನಿಖೆಯ ಅಗತ್ಯವನ್ನು ತಿಳಿಸಿತ್ತು.

ಏಕೆ ಮರಣದಂಡನೆ ವಿಧಿಸಲಾಗಿತ್ತು?

ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ 29 ವರ್ಷದ ಜಿಶಾ ತನ್ನ ಮನೆಯಲ್ಲಿ ಕೊಲೆಯಾಗಿದ್ದಳು. 2016ರ ಏಪ್ರಿಲ್ 28ರಂದು ಪೆರುಂಬವೂರ್‌ನಲ್ಲಿರುವ ತನ್ನ ಮನೆಯಲ್ಲಿ ಹತ್ಯೆಗೀಡಾಗಿದ್ದಳು. ಬಳಿಕ ಪೊಲೀಸರು ಅಸ್ಸಾಮಿ ಕಾರ್ಮಿಕ ಅಮೀರ್-ಉಲ್-ಇಸ್ಲಾಂನನ್ನು ಬಂಧಿಸಿದ್ದರು. ಎರ್ನಾಕುಲಂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ವಿಧಿಸಿತ್ತು.

2014 ರ ಅಟ್ಟಿಂಗಲ್ ಅವಳಿ ಕೊಲೆ ಪ್ರಕರಣದಲ್ಲಿ ಅನುಶಾಂತಿ ಮತ್ತು ನಿನೋ ಮ್ಯಾಥ್ಯೂ ಎಂಬ ಇಬ್ಬರು ಟೆಕ್ಕಿಗಳನ್ನು ಬಂಧಿಸಲಾಗಿತ್ತು. ಇಲ್ಲಿ ಅನುಶಾಂತಿಯವರ ಅತ್ತೆ ಮತ್ತು ಅವರ ಮೂರು ವರ್ಷದ ಮಗಳ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ನಿನೋ ಮ್ಯಾಥ್ಯೂಗೆ ಮರಣದಂಡನೆ ಮತ್ತು ಅನುಶಾಂತಿಗೆ ಡಬಲ್‌ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

IPL_Entry_Point