ಕೇರಳದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ 15 ಅಡಿ ಎತ್ತರದಿಂದ ಬಿದ್ದ ಕಾಂಗ್ರೆಸ್ ಶಾಸಕಿ; ಗಂಭೀರ ಗಾಯ
ಕೇರಳದ ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್, 15 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೊಚ್ಚಿಯ ಕಲೂರ್‌ನಲ್ಲಿರುವ ಜವಾಹರಲಾಲ್ ನೆಹರೂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಘಟನೆ ನಡೆದಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಚ್ಚಿಯ ಜವಾಹರಲಾಲ್ ನೆಹರೂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗ್ಯಾಲರಿಯಿಂದ ಬಿದ್ದು, ಕೇರಳದ ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಗಂಭೀರ ಗಾಯಗೊಂಡಿದ್ದಾರೆ. ಭಾನುವಾರ (ಡಿಸೆಂಬರ್ 29) ಸಂಜೆ ಘಟನೆ ನಡೆದಿದ್ದು, ತಲೆ ಮತ್ತು ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 15 ಅಡಿ ಎತ್ತರದಿಂದ ಬಿದ್ದಿರುವುದರಿಂದ, ಉಮಾ ಥಾಮಸ್ ಅವರಿಗೆ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಶಾಸಕಿಯನ್ನು ಸ್ವಯಂಸೇವಕರು ಮತ್ತು ಇತರರು ಕ್ರೀಡಾಂಗಣದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆ ಬಿಡುಗಡೆ ಮಾಡಿದ ವೈದ್ಯಕೀಯ ಬುಲೆಟಿನ್ ಪ್ರಕಾರ, ಶಾಸಕಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಲೆ ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿದೆ. ಮುಖಕ್ಕೆ ಗಾಯವಾಗಿದ್ದು, ಪಕ್ಕೆಲುಬುಗಳಲ್ಲೂ ಫ್ರಾಕ್ಚರ್ ಆಗಿದೆ. ಶ್ವಾಸಕೋಶದಲ್ಲಿ ಆಂತರಿಕ ರಕ್ತಸ್ರಾವ ಉಂಟಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಹೇಳಿದೆ. ಹೀಗಾಗಿ ವೆಂಟಿಲೇಟರ್ ಬೆಂಬಲದೊಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
“ಶಾಸಕಿ ತಲೆಗೆ ಗಾಯವಾಗಿದೆ. ಕೆಲವು ಕಡೆ ಮೂಳೆಗಳು ಮುರಿದಿವೆ. ಮುಂದಿನ 24 ಗಂಟೆಗಳ ಕಾಲ ಆರೋಗ್ಯ ಮೇಲ್ವಿಚಾರಣೆ ಮಾಡಬೇಕಾಗಿದೆ. ನಾವು ಎಲ್ಲಾ ರೀತಿಯ ವೈದ್ಯಕೀಯ ಸಹಾಯವನ್ನು ಒದಗಿಸುತ್ತಿದ್ದೇವೆ” ಎಂದು ಪ್ರತಿಪಕ್ಷಪಕ್ಷದ ನಾಯಕ ವಿಡಿ ಸತೀಶನ್ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಕೈಗಾರಿಕಾ ಸಚಿವ ಪಿ.ರಾಜೀವ್, ಆರೋಗ್ಯ ಇಲಾಖೆಯ ತಜ್ಞ ವೈದ್ಯಕೀಯ ತಂಡವು ಶೀಘ್ರದಲ್ಲೇ ಆಸ್ಪತ್ರೆಯ ವೈದ್ಯರನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಆಗಿದ್ದೇನು?
ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ 'ಮೃದಂಗ ನಾದಂ' ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇರಳ ಸಂಸ್ಕೃತಿ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಇದನ್ನು ಉದ್ಘಾಟಿಸಬೇಕಿತ್ತು. ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಮಾ ಥಾಮಸ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ನಟಿ-ನೃತ್ಯಗಾರ್ತಿ ದಿವ್ಯಾ ಉನ್ನಿ ಸೇರಿದಂತೆ ಸುಮಾರು 12,000 ನೃತ್ಯಗಾರರು ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಗಿನ್ನೆಸ್ ದಾಖಲೆಗೆ ಸಜ್ಜಾಗಿದ್ದರು.
ಕಾಂಗ್ರೆಸ್ ಹಾಗೂ ಮಲಯಾಳಂ ಸುದ್ದಿ ಮೂಲಗಳ ಪ್ರಕಾರ, ಕಾರ್ಯಕ್ರಮಕ್ಕೆ ಹಾಕಿದ್ದ ಸ್ಟೇಜ್‌ನಲ್ಲಿ ಆಸನಗಳ ಸಾಲುಗಳ ನಡುವೆ ಸ್ವಲ್ಪವೇ ಅಂತರವಿತ್ತು. ಬದಿಯಲ್ಲಿ ರಿಬ್ಬನ್ ಬಳಸಿ ಅಡ್ಡಲಾಗಿ 'ಬ್ಯಾರಿಕೇಡ್' ಹಾಕಲಾಗಿತ್ತು. ಸುಮಾರು 15 ಅಡಿ ಎತ್ತರದಿಂದ ವಿಐಪಿ ಗ್ಯಾಲರಿಯಿಂದ ಕೆಳಗಿನ ಕಾಂಕ್ರೀಟ್ ನೆಲಕ್ಕೆ ಶಾಸಕಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ದಾಖಲು
ಘಟನೆ ಸಂಬಂಧ ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಲಯಾಳಂ ಸುದ್ದಿತಾಣಗಳಾದ ಮಾತೃಭೂಮಿ ಮತ್ತು ವನ್ ಇಂಡಿಯಾ ವರದಿ ಮಾಡಿದೆ. ಯಾವುದೇ ಸುರಕ್ಷತಾ ಕ್ರಮವಿಲ್ಲದೆ ವೇದಿಕೆ ನಿರ್ಮಾಣ ಮಾಡಿರುವ ಹಿನ್ನಲೆಯಲ್ಲಿ ಕೊಚ್ಚಿಯ ಪಲವರಿವಟ್ಟಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope