ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ ಭೇಟಿ; ಸುಂಕ ಘೋಷಣೆ ಬೆನ್ನಲ್ಲೇ ಮಹತ್ವದ ಒಪ್ಪಂದಕ್ಕೆ ಸಹಿ; ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ ಭೇಟಿ; ಸುಂಕ ಘೋಷಣೆ ಬೆನ್ನಲ್ಲೇ ಮಹತ್ವದ ಒಪ್ಪಂದಕ್ಕೆ ಸಹಿ; ಪ್ರಮುಖ ಅಂಶಗಳು

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ ಭೇಟಿ; ಸುಂಕ ಘೋಷಣೆ ಬೆನ್ನಲ್ಲೇ ಮಹತ್ವದ ಒಪ್ಪಂದಕ್ಕೆ ಸಹಿ; ಪ್ರಮುಖ ಅಂಶಗಳು

ಅಮೆರಿಕ ಪ್ರವಾಸ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಯುಎಸ್‌ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಉಭಯ ನಾಯಕರು ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸಿದ್ದು, ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉಭಯ ನಾಯಕರ ಭೇಟಿಯ ಪ್ರಮುಖ ಅಂಶಗಳು ಇಲ್ಲಿವೆ.

ಡೊನಾಲ್ಡ್ ಟ್ರಂಪ್ ಭೇಟಿಯಾದ ನರೇಂದ್ರ ಮೋದಿ; ಒಪ್ಪಂದಕ್ಕೆ ಸಹಿ
ಡೊನಾಲ್ಡ್ ಟ್ರಂಪ್ ಭೇಟಿಯಾದ ನರೇಂದ್ರ ಮೋದಿ; ಒಪ್ಪಂದಕ್ಕೆ ಸಹಿ (REUTERS)

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಮಹತ್ವದ ಬೆಳವಣಿಗೆ. ಜನವರಿ 20ರಂದು ಎರಡನೇ ಅವಧಿಗೆ ಯುಎಸ್‌ಎ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಹಿಂದಿರುಗಿದ ನಂತರ, ಟ್ರಂಪ್‌ ಅವರನ್ನು ಮೋದಿ ಮೊದಲ ಬಾರಿಗೆ ಭೇಟಿಯಾದರು. ವಿಶ್ವದ ಇಬ್ಬರು ಪ್ರಭಾವಿ ನಾಯಕರು ತಮ್ಮ ಆತ್ಮೀಯತೆಯನ್ನು ಪರಸ್ಪರ ಶ್ಲಾಘಿಸಿದರು. ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಹಾಗೂ ವ್ಯಾಪಾರ ಒಪ್ಪಂದಗಳನ್ನು ಆಶಿಸಿದರು. ಟ್ರಂಪ್‌ ಭೇಟಿಗೂ ಮುನ್ನ, ಅಮೆರಿಕ ಅಧ್ಯಕ್ಷರ ಆಮದು ಸುಂಕ‌ (reciprocal tariff) ಯೋಜನೆಗಳ ಘೋಷಣೆ ಬಗ್ಗೆ ಭಾರಿ ಕಳವಳವಿತ್ತು.

ಮೋದಿ ಅವರನ್ನು ಭೇಟಿಯಾಗುವ ಮುನ್ನವೇ ಭಾರತ ಸೇರಿದಂತೆ ಅಮೆರಿಕದ ವ್ಯಾಪಾರ ಪಾಲುದಾರರ ಮೇಲೆ ಆಮದು ಸುಂಕ ವಿಧಿಸುವ ಯೋಜನೆಗಳ ಕುರಿತು ಟ್ರಂಪ್ ಘೋಷಿಸಿದರು. ಟ್ರಂಪ್‌ ಹಾಗೂ ಮೋದಿ ಭೇಟಿಯ ಪ್ರಮುಖ ಅಂಶಗಳಿವು.

ಫೆ.14ರ ಶುಕ್ರವಾರ (ಅಮೆರಿಕದಲ್ಲಿ ಗುರುವಾರ) ಶ್ವೇತಭವನದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಟ್ರಂಪ್‌, "ಭಾರತದೊಂದಿಗೆ ಅದ್ಭುತ ವ್ಯಾಪಾರ ಒಪ್ಪಂದಗಳನ್ನು" ನಿರೀಕ್ಷಿಸುವುದಾಗಿ ಹೇಳಿದರು.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಸುಂಕಗಳನ್ನು ಘೋಷಿಸಿದರು. ಅಮೆರಿಕವು ಇತರ ದೇಶಗಳು ತನ್ನ ಮೇಲೆ ವಿಧಿಸುವ ಮೊತ್ತದಷ್ಟೇ ಸುಂಕ ವಿಧಿಸುತ್ತದೆ ಎಂದು ಹೇಳಿದರು. ಇದೇ ವೇಳೆ ಭಾರತವು ಅತಿ ಹೆಚ್ಚು ಶುಲ್ಕ ವಿಧಿಸುವ ದೇಶಗಳಲ್ಲಿ ಒಂದು ಎಂದು ಎಂದು ಹೇಳಿದರು.

ಎರಡು ದಿನಗಳ ಯುಎಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಗುರುವಾರ ವಾಷಿಂಗ್ಟನ್ ಡಿಸಿಗೆ ಬಂದಿಳಿದರು. ಪ್ರಧಾನಿ ಮೋದಿ ಅವರ ಯುಎಸ್ ಭೇಟಿಯ ಪ್ರಮುಖ ಅಂಶವೆಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದ್ವಿಪಕ್ಷೀಯ ಸಭೆ. ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೂರು ವಾರಗಳಲ್ಲಿ, ಈ ಭೇಟಿ ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕ ನಾಯಕ ಹೊರಡಿಸಿದ ಸುಂಕದ ಭೀತಿ ನಡುವೆ ಮೋದಿ ಅವರ ವಾಷಿಂಗ್ಟನ್ ಭೇಟಿ ಎಲ್ಲರ ಗಮನ ಸೆಳೆದಿದೆ.

ಆತ್ಮೀಯ ಸ್ನೇಹಿತ

"ಅವರು ನನ್ನ ಉತ್ತಮ ಸ್ನೇಹಿತ. ಬಹಳ ಸಮಯದಿಂದ ನಾವು ಆತ್ಮೀಯರಾಗಿದ್ದೇವೆ" ಎಂದು ಓವಲ್ ಕಚೇರಿಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುತ್ತಾ ಟ್ರಂಪ್ ಹೇಳಿದರು. ಈ ಭೇಟಿಯು ಅದ್ಭುತ ವ್ಯಾಪಾರ ಒಪ್ಪಂದಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ಸುಂಕ ಘೋಷಣೆ

ಇತರ ದೇಶಗಳು ಆಮದುಗಳ ಮೇಲೆ ವಿಧಿಸುವ ತೆರಿಗೆ ದರಗಳಿಗೆ ಹೊಂದಿಕೆಯಾಗುವಂತೆ ಅಮೆರಿಕದಲ್ಲಿಯೂ ಸುಂಕಗಳನ್ನು ಹೆಚ್ಚಿಸುವ ಯೋಜನೆಯನ್ನು ಟ್ರಂಪ್ ಬಿಡುಗಡೆ ಮಾಡಿದರು. ಭಾರತವು ಅತಿ ಹೆಚ್ಚು ಸುಂಕ ವಿಧಿಸುವ ದೇಶ ಎಂದು ಟ್ರಂಪ್‌ ಹೇಳಿದರು. ಪ್ರಧಾನಿ ಮೋದಿ ಅವರ ಭೇಟಿಗೂ ಮುಂಚೆಯೇ ಈ ಘೋಷಣೆ ಬಂದವು. “ಹೆಚ್ಚು ಅಥವಾ ಕಡಿಮೆ ಇಲ್ಲ. ಅವರು ನಮಗೆ ತೆರಿಗೆ ಅಥವಾ ಸುಂಕವನ್ನು ವಿಧಿಸುತ್ತಾರೆ. ನಾವು ಕೂಡಾ ನಿಖರವಾಗಿ ಅಷ್ಟೇ ಸುಂಕವನ್ನು ವಿಧಿಸುತ್ತೇವೆ. ಆ ಪ್ರಮಾಣ ಎಷ್ಟು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ,” ಎಂದು ಡೊನಾಲ್ಡ್ ಟ್ರಂಪ್ ಸುಂಕ ಘೋಷಿಸುತ್ತಾ ಹೇಳಿದ್ದಾರೆ.

ಒಪ್ಪಂದಕ್ಕೆ ಸಹಿ

ಅಮೆರಿಕವನ್ನು ಭಾರತಕ್ಕೆ ತೈಲ ಮತ್ತು ನೈಸರ್ಗಿಕ ಅನಿಲದ ಪ್ರಮುಖ ಪೂರೈಕೆದಾರನನ್ನಾಗಿ ಮಾಡಲು ಪ್ರಧಾನಿ ಮೋದಿ ಅವರೊಂದಿಗೆ ಮಹತ್ವದ ಒಪ್ಪಂದವನ್ನು ಟ್ರಂಪ್ ಘೋಷಿಸಿದರು. ಅಮೆರಿಕದ ಪರಮಾಣು ತಂತ್ರಜ್ಞಾನವನ್ನು ಸ್ವಾಗತಿಸಲು ಭಾರತದಲ್ಲಿ ಮಾಡಿದ ಕಾನೂನು ಸುಧಾರಣೆಯನ್ನು ಡೊನಾಲ್ಡ್ ಟ್ರಂಪ್ ಎತ್ತಿ ತೋರಿಸಿದರು. ಇದು ಭಾರತೀಯ ಮಾರುಕಟ್ಟೆಯಲ್ಲಿ ಅಮೆರಿಕದ ಪರಮಾಣು ಉದ್ಯಮಕ್ಕೆ ಮಹತ್ವದ ಬೆಳವಣಿಗೆಯನ್ನು ಸೂಚಿಸುತ್ತದೆ.

MAGA ಮತ್ತು MIGA

ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ "MAGA" (ಮೇಕ್ ಅಮೆರಿಕ ಗ್ರೇಟ್ ಅಗೈನ್) ಮತ್ತು ಭಾರತದ "ವಿಕಸಿತ್ ಭಾರತ್ 2047" ದೃಷ್ಟಿಕೋನದ ನಡುವಣ ಸಾಮ್ಯತೆಯನ್ನು ವಿವರಿಸಿದರು. ಇದನ್ನು "ಮೇಕ್ ಇಂಡಿಯಾ ಗ್ರೇಟ್ ಅಗೈನ್" (MIGA) ಎಂದು ಕರೆದರು. MAGA ಮತ್ತು MIGA ಎರಡನ್ನೂ ಒಟ್ಟುಗೂಡಿಸಿ, ಉಭಯ ರಾಷ್ಟ್ರಗಳ ನಡುವಿನ ಪಾಲುದಾರಿಕೆಯು "mega" ಪಾಲುದಾರಿಕೆಗೆ ಕಾರಣವಾಗುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ವಾಷಿಂಗ್ಟನ್ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್‌ ಭೇಟಿಗೂ ಮುನ್ನ ವಾಷಿಂಗ್ಟನ್ ಡಿಸಿಯ ಬ್ಲೇರ್ ಹೌಸ್‌ನಲ್ಲಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ಮತ್ತು ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರೊಂದಿಗೆ ಸಭೆ ನಡೆಸಿದರು. ಇದೇ ವೇಳೆ ಬ್ಲೇರ್ ಹೌಸ್‌ನಲ್ಲಿ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಭೇಟಿಯಾದರು. ಆ ನಂತರ ವಿಶ್ವದ ನಂಬರ್‌ ವನ್‌ ಶ್ರೀಮಂತ ಉದ್ಯಮಿ ಹಾಗೂ ಟೆಸ್ಲಾ ಮೋಟಾರ್ಸ್‌ ಸಿಇಒ ಎಲಾನ್‌ ಮಸ್ಕ್‌ ಭೇಟಿಯಾದರು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.