ಕನ್ನಡ ಸುದ್ದಿ  /  Nation And-world  /  Kids In This Us State Now Require Parents' Consent To Use Social Media

ಮಕ್ಕಳು ಸೋಷಿಯಲ್‌ ಮೀಡಿಯಾ ಬಳಸಬೇಕಿದ್ರೆ ಹೆತ್ತವರ ಅನುಮತಿ ಕಡ್ಡಾಯ, ಉಟಾಹ್‌ನಲ್ಲಿ ಹೊಸ ಕಾನೂನು

ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಬಳಸುವ ಮಕ್ಕಳ ಖಾತೆಗಳನ್ನು ಲಾಗಿನ್‌ ಆಗುವ ಅವಕಾಶ ಪೋಷಕರಿಗೆ ದೊರಕಲಿದೆ. ಜತೆಗೆ ಮಕ್ಕಳು ರಾತ್ರಿಯ ವೇಳೆ ಸೋಷಿಯಲ್‌ ಮೀಡಿಯಾ ಪ್ರವೇಶಿಸದಂತೆ ಡಿಫಾಲ್ಟ್‌ ಕರ್ಪ್ಯೂ ವಿಧಿಸಲಾಗುತ್ತದೆ

ಮಕ್ಕಳು ಸೋಷಿಯಲ್‌ ಮೀಡಿಯಾ ಬಳಸಬೇಕಿದ್ರೆ ಹೆತ್ತವರ ಅನುಮತಿ ಕಡ್ಡಾಯ, ಉಟಾಹ್‌ನಲ್ಲಿ ಹೊಸ ಕಾನೂನು
ಮಕ್ಕಳು ಸೋಷಿಯಲ್‌ ಮೀಡಿಯಾ ಬಳಸಬೇಕಿದ್ರೆ ಹೆತ್ತವರ ಅನುಮತಿ ಕಡ್ಡಾಯ, ಉಟಾಹ್‌ನಲ್ಲಿ ಹೊಸ ಕಾನೂನು

ಉಟಾಹ್‌: ಅಮೆರಿಕದ ಉಟಾಹ್‌ನಲ್ಲಿ ಸೋಷಿಯಲ್‌ ಮೀಡಿಯಾ ಬಳಕೆಗೆ ಸಂಬಂಧಪಟ್ಟಂತೆ ಹೊಸ ಕಾನೂನು ರೂಪಿಸಲಾಗಿದೆ. ಸೋಷಿಯಲ್‌ ಮೀಡಿಯಾ ಬಳಸಲು ಅಲ್ಲಿನ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ. ಇನ್‌ಸ್ಟಾಗ್ರಾಂ ಮತ್ತು ಟಿಕ್‌ಟಾಕ್‌ನಂತಹ ಸೋಷಿಯಲ್‌ ಮೀಡಿಯಾ ಬಳಸಿ ವಯಸ್ಸು ದೃಢೀಕರಣ ಮಾಡುವುದು ಮಾತ್ರವಲ್ಲದೆ ಪೋಷಕರ ಒಪ್ಪಿಗೆ ಪಡೆಯಬೇಕಿದೆ.

ಈ ಕಾನೂನು ಮಾರ್ಚ್ 2024 ರಿಂದ ಜಾರಿಗೆ ಬರಲಿದೆ. ಸಾಮಾಜಿಕ ಮಾಧ್ಯಮಗಳ ಯುವ ವ್ಯಸನ, ಆನ್‌ಲೈನ್‌ ಬೆದರಿಕೆ, ಆನ್‌ಲೈನ್‌ ಮೂಲಕ ಮಕ್ಕಳ ಶೋಷಣೆ, ಮಕ್ಕಳ ವೈಯಕ್ತಿಕ ಮಾಹಿತಿ ಸಂಗ್ರಹ ಇತ್ಯಾದಿ ಭದ್ರತಾ ಅಪಾಯಗಳಿಗೆ ಪ್ರತಿಕ್ರಿಯೆಯಾಗಿ ಈ ಕಾನೂನನ್ನು ರೂಪಿಸಲಾಗಿದೆ.

ಇದರಿಂದ ಆನ್‌ಲೈನ್‌ ಮಾಧ್ಯಮಗಳನ್ನು ಬಳಸುವ ಯುವ ಜನತೆ ಕಡಿಮೆಯಾಗಬಹುದು ಮತ್ತು ಮುಕ್ತ ಸಂವಹನ ಸ್ವಾತಂತ್ರ್ಯದ ಮೇಲೆ ದೂರಗಾಮಿ ಪರಿಣಾಮ ಬೀರಬಹುದು ಎಂದು ಟೆಕ್‌ ಸಂಸ್ಥೆಗಳು ಮತ್ತು ನಾಗರಿಕ ಸ್ವಾತಂತ್ರ್ಯ ಗುಂಪುಗಳು ಎಚ್ಚರಿಸಿವೆ.

"ನಮ್ಮ ಯುವ ಜನತೆಯ ಮಾನಸಿಕ ಆರೋಗ್ಯಕ್ಕೆ ಸಾಮಾಜಿಕ ಮಾಧ್ಯಮ ಕಂಪನಿಗಳು ಹಾನಿ ಮಾಡುವುದನ್ನು ಮುಂದುವರೆಸಲು ನಾವು ಇನ್ನು ಮುಂದೆ ತಯಾರಿಲ್ಲ" ಎಂದು ನಿನ್ನೆ ನಡೆದ ಸಮಾರಂಭದಲ್ಲಿ ಎರಡು ಮಸೂದೆಗಳಿಗೆ ಸಹಿ ಮಾಡಿದ ಬಳಿಕ ಅಮೆರಿಕದ ಉಟಾಹ್‌ ಗವರ್ನರ್‌ ಸ್ಪೆನ್ಸರ್ ಕಾಕ್ಸ್ ಟ್ವೀಟ್ ಮಾಡಿದ್ದಾರೆ.

ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಬಳಸುವ ಮಕ್ಕಳ ಖಾತೆಗಳನ್ನು ಲಾಗಿನ್‌ ಆಗುವ ಅವಕಾಶ ಪೋಷಕರಿಗೆ ದೊರಕಲಿದೆ. ಜತೆಗೆ ಮಕ್ಕಳು ರಾತ್ರಿಯ ವೇಳೆ ಸೋಷಿಯಲ್‌ ಮೀಡಿಯಾ ಪ್ರವೇಶಿಸದಂತೆ ಡಿಫಾಲ್ಟ್‌ ಕರ್ಪ್ಯೂ ಅನ್ನು ರಚಿಸುವ ಅಗತ್ಯವನ್ನೂ ಈ ಮಸೂದೆ ಸೂಚಿಸಿದೆ.

ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಷಿಯಲ್‌ ಮೀಡಿಯಾ ಬಳಕೆದಾರರನ್ನು ವ್ಯಸನಕಾರಿ ಅಲ್ಗಾರಿದಮ್‌ಗಳಿಗೆ ಗುರಿಯಾಗಿಸಿದರೆ ಸಾಮಾಜಿಕ ಮಾಧ್ಯಮಗಳಿಗೆ ದಂಡ ವಿಧಿಸಬಹುದು. ಮಕ್ಕಳ ಮೇಲಿನ ಆರ್ಥಿಕ, ದೈಹಿಕ ಅಥವಾ ಭಾವನಾತ್ಮಕ ಹಾನಿಗೆ ಸಾಮಾಜಿಕ ಮಾಧ್ಯಮಗಳ ಮೇಲೆ ಮೊಕದ್ದಮೆ ಹೂಡಲು ಇದರಿಂದ ಪೋಷಕರಿಗೆ ಸುಲಭವಾಗಲಿದೆ.

"ರಾಷ್ಟ್ರಾದ್ಯಂತ ಈ ಮಸೂದೆ ಜಾರಿಗೆ ಬರಲಿದ್ದು, ಉಟಾಹ್‌ ಮೊದಲ ಹೆಜ್ಜೆ ಇಟ್ಟಿದೆ. ಇದನ್ನು ಫೆರಲ್‌ ಸರಕಾರ ಪರಿಗಣಿಸಲಿದೆ" ಎಂದು ರಾಜ್ಯ ಪ್ರತಿನಿಧಿ ಜೋರ್ಡಾನ್ ಟೆಸ್ಚರ್ ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷರಾದ ಜೋ ಬೈಡೆನ್‌ ಅವರು ಸೋಷಿಯಲ್‌ ಮೀಡಿಯಾವು ಯುವ ಜನತೆಯ ಮೇಲೆ ಬೀರುವ ಪರಿಣಾಮಗಳ ಕುರಿತು ಇತ್ತೀಚೆಗೆ ತಮ್ಮ ಭಾಷಣದಲ್ಲಿ ಹೇಳಿದ ಅಂಶವನ್ನು ಟೆಸ್ಚರ್‌ ನೆನಪಿಸಿದರು.

ಇತ್ತೀಚೆಗೆ ಫ್ರಾನ್ಸ್‌ನಲ್ಲಿಯೂ ಇದೇ ರೀತಿಯ ಕಾನೂನು ಜಾರಿಯಾಗಿತ್ತು. ಹೆತ್ತವರು ತಮ್ಮ ಮಕ್ಕಳ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವುದನ್ನು ನಿಷೇಧಿಸುವ ಹೊಸ ಶಾಸನ ಜಾರಿಗೆ ತರಲಾಗಿತ್ತು. ಆನ್‌ಲೈನ್‌ನಲ್ಲಿ ಮಕ್ಕಳ ಗೌಪ್ಯತೆ ರಕ್ಷಿಸಲು ಈ ಮಹತ್ವದ ಹೆಜ್ಜೆ ತೆಗೆದುಕೊಳ್ಳಲಾಗಿತ್ತು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪಕ್ಷದಿಂದ ಸಂಸದ ಬ್ರೂನೋ ಸ್ಟೂಡರ್ ಈ ಕಾನೂನು ಮಂಡಿಸಿದ್ದರು. ಇದನ್ನು ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಅಸೆಂಬ್ಲಿ ಸರ್ವಾನುಮತದಿಂದ ಅಂಗೀಕರಿಸಿತ್ತು.