King Charles III Coronation: 7 ದಶಕದ ಕಾಯುವಿಕೆ ಅಂತ್ಯ, ಕಿಂಗ್ ಚಾರ್ಲ್ಸ್ IIIಗೆ ಪಟ್ಟಾಭಿಷೇಕ, ಭಾರತದ ಉಪರಾಷ್ಟ್ರಪತಿ ಭಾಗಿ
ಬ್ರಿಟನ್‌ನಲ್ಲಿಂದು ಇಂದು ಕಿಂಗ್ಸ್ ಚಾರ್ಲ್ಸ್ ಪಟ್ಟಾಭಿಷೇಕ (King Charles III’s Coronation) ಕಾರ್ಯಕ್ರಮ ನಡೆಯುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಾಣಿ ಎಲಿಜಬೆತ್ II ಅವರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್, ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಇಂದು ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ಸ್ ಕ್ರೌನ್ (ಕಿರೀಟ) ಅನ್ನು ಧರಿಸಲಿದ್ದಾರೆ.
ಬಂಕಿಂಗ್‌ಹ್ಯಾಮ್: ಬ್ರಿಟನ್‌ನಲ್ಲಿಂದು ಇಂದು ಕಿಂಗ್ಸ್ ಚಾರ್ಲ್ಸ್ ಪಟ್ಟಾಭಿಷೇಕ (King Charles III’s Coronation) ಕಾರ್ಯಕ್ರಮ ನಡೆಯುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಾಣಿ ಎಲಿಜಬೆತ್ II ಅವರ ಮರಣದ ನಂತರ ಕಾನೂನುಬದ್ಧವಾಗಿ ರಾಜನಾದ ಚಾರ್ಲ್ಸ್, ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಇಂದು ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ಸ್ ಕ್ರೌನ್ (ಕಿರೀಟ) ಅನ್ನು ಧರಿಸಲಿದ್ದಾರೆ. ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಜಗತ್ತಿನ ಸಾವಿರಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಲಂಡನ್‌ನ ಬೀದಿಗಳಲ್ಲಿ ಸಾವಿರಾರು ಜನರು ಸಂಭ್ರಮಿಸುತ್ತಿದ್ದಾರೆ. ಬಂಕಿಂಗ್‌ಹ್ಯಾಮ್ ಅರಮನೆಯಲ್ಲಿ ಸಂಭ್ರಮ ಸಡಗರ ಮನೆಮಾಡಿದೆ.
ಎಲಿಜಬೆತ್ ಇಲ್ಲದ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದ ಬ್ರಿಟನ್‌ಗೆ ಈ ಪಟ್ಟಾಭಿಷೇಕ ಕಾರ್ಯಕ್ರಮವು ಒಂದು ಮಹತ್ವದ ತಿರುವು ಎನ್ನಲಾಗಿದೆ. ರಾಜಪ್ರಭುತ್ವದ ಹೊಸ ಆರಂಭದಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬ್ರಿಟನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದು, ಬ್ರೆಕ್ಸಿಟ್ ಪರಿಣಾಮ, ಉಕ್ರೇನ್ ರಷ್ಯಾ ಯುದ್ಧ, ಸಾಂಕ್ರಾಮಿಕದ ತೊಂದರೆಗಳೂ ಇವೆ. ಇದರಿಂದಾಗಿ ಎಚ್ಚರಿಕೆಯಿಂದ ಈ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 1953 ರಲ್ಲಿ ಎಲಿಜಬೆತ್ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಹೋಲಿಸಿದರೆ ಇಂದಿನ ಕಾರ್ಯಕ್ರಮವು ಸರಳವಾಗಿದೆ. ಇಂದು ಕಿಂಗ್ಸ್ ಚಾರ್ಲ್ಸ್ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಚಾರ್ಲ್ಸ್ ಪತ್ನಿ ರಾಣಿ ಕ್ಯಾಮಿಲ್ಲಾ ಕೂಡ ಕಿರೀಟವನ್ನು ಧರಿಸಲಿದ್ದಾರೆ.
ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕವನ್ನು "ಅಸಾಧಾರಣ ರಾಷ್ಟ್ರೀಯ ಹೆಮ್ಮೆಯ ಕ್ಷಣ" ಎಂದು ಬಣ್ಣಿಸಿದ್ದಾರೆ. "ಇದು ಕೇವಲ ಚಮತ್ಕಾರವಲ್ಲ. ಇದು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಹೆಮ್ಮೆಯ ಅಭಿವ್ಯಕ್ತಿಯಾಗಿದೆ" ಎಂದು ಸುನಕ್ ಹೇಳಿದ್ದಾರೆ.
ಬ್ರಿಟನ್ ದೇಶದ ಮೊದಲ ಹಿಂದೂ ಪ್ರಧಾನ ಮಂತ್ರಿ ರಿಷಿ ಸುನಕ್ ನೇತೃತ್ವದಲ್ಲಿ ಬ್ರಿಟನ್‌ನ ಹಲವು ರಾಜಕೀಯ ವ್ಯಕ್ತಿಗಳು ಅತಿಥಿ ಗಣ್ಯರ ಪಟ್ಟಿಯಲ್ಲಿದ್ದಾರೆ. ವಿರೋಧ ಪಕ್ಷದ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಮತ್ತು ಮಾಜಿ ಪ್ರಧಾನಿಗಳಾದ ಜಾನ್ ಮೇಜರ್, ಟೋನಿ ಬ್ಲೇರ್, ಗಾರ್ಡನ್ ಬ್ರೌನ್, ಡೇವಿಡ್ ಕ್ಯಾಮರೂನ್, ಥೆರೆಸಾ ಮೇ, ಬೋರಿಸ್ ಜಾನ್ಸನ್ ಮತ್ತು ಲಿಜ್ ಟ್ರಸ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಬ್ರಿಟನ್ ರಾಜನು ಜಗತ್ತಿನಾದ್ಯಂತ 14 ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥನಾಗಿದ್ದಾನೆ. ಆದರೆ, ಆರು ರಾಷ್ಟ್ರಗಳಲ್ಲಿ, ಹೆಚ್ಚಿನ ಮತದಾರರು ಜನಾಭಿಪ್ರಾಯ ಸಂಗ್ರಹಣೆ ನಡೆದರೆ ರಾಜಪ್ರಭುತ್ವವನ್ನು ಬೆಂಬಲಿಸುವುದಕ್ಕಿಂತ ಪ್ರಜಾಪ್ರಭುತ್ವವಿರುವ ಗಣರಾಜ್ಯವನ್ನು ಆಯ್ಕೆ ಮಾಡುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಇಂದಿನ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಲಂಡನ್‌ನ ಮೆಟ್ರೋಪಾಲಿಟನ್ ಪೋಲೀಸ್ ಸ್ಟೇಷನ್‌ನ 11,500 ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜನರ ಗುಂಪಿನಲ್ಲಿರುವ ಅಪರಾಧಿಗಳನ್ನು ಗುರುತಿಸಲು ವಿಶೇಷ ಫೇಷಿಯಲ್ ರೆಕಾಗ್ನಿಷನ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು-ಗಂಟೆಗಳ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ರಾಜನಿಗೆ ಸೇಂಟ್ ಎಡ್ವರ್ಡ್ಸ್ ಕ್ರೌನ್ ನೀಡಲಾಗುತ್ತದೆ. ಇದು 1661 ರಲ್ಲಿ ಕಿಂಗ್ ಚಾರ್ಲ್ಸ್ II ರ ಪಟ್ಟಾಭಿಷೇಕಕ್ಕಾಗಿ ಮಾಡಿರುವ ಕಿರೀಟವಾಗಿದೆ. ಇದು ಎರಡು ಕೆ.ಜಿ. ತೂಕ ಹೊಂದಿದೆ. 444 ಬಗೆಯ ಬೆಳೆಬಾಳುವ ಕಲ್ಲುಗಳಿಂದ ಇದನ್ನು ಅಲಂಕರಿಸಲಾಗಿದೆ. ಇದು ಸ್ಕಾಟ್ಲೆಂಡ್ ರಾಜಪ್ರಭುತ್ವದ ಪುರಾತನ ಸಂಕೇತವಾಗಿದೆ. ಸಂಪೂರ್ಣ ವರದಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ಪತ್ರಿಕೆ ಲೈವ್‌ಮಿಂಟ್‌ನಲ್ಲಿ ಓದಿ.