Budgets History: ಭಾರತದ ಆರ್ಥಿಕತೆಯ ಬೆನ್ನೆಲುಬಿನ ಬಜೆಟ್; 78 ವರ್ಷಗಳ ಸುದೀರ್ಘ ಹಾದಿಯ 10 ಆಸಕ್ತಿದಾಯಕ ಅಂಶಗಳು
Budgets History:ಭಾರತದ ಬಜೆಟ್ ಮಂಡನೆಗೆ ತನ್ನದೇ ಆದ ಇತಿಹಾಸ ಹಾಗೂ ಮಹತ್ವವಿದೆ. ಭಾರತದ ಈ ಆಯವ್ಯಯದ ಹಾದಿನ ಕುತೂಹಲಕಾರ ಅಂಶಗಳು ಇಲ್ಲಿವೆ.

Budgets History: ವಿಶ್ವದಲ್ಲಿಯೇ ಪ್ರಮುಖ ಆರ್ಥಿಕತೆಯ ಜತೆಗೆ ಪ್ರಗತಿಯ ಹಾದಿಯಲ್ಲಿರುವ ಭಾರತದ ಜೀವಾಳವೇ ಆರ್ಥಿಕತೆ. ಅದರ ಹಿಂದೆ ಇರುವ ಲೆಕ್ಕಾಚಾರವೇ ಬಜೆಟ್. ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಆಯವ್ಯಯ ಮಂಡನೆ ಪ್ರತಿ ವರ್ಷ ನಡೆದುಕೊಂಡು ಬಂದಿದೆ. ಪ್ರಧಾನಿಯಾದವರೂ ಬಜೆಟ್ ಮಂಡಿಸಿದ ಉದಾಹರಣೆಯಿದೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರೂ ಇದ್ದಾರೆ. ಒಂದು ಬಾರಿ ಬಜೆಟ್ ಮಂಡನೆ ಮಾಡಿದವರೂ ಇದ್ದಾರೆ. ಬಜೆಟ್ ಮಂಡಿಸುತ್ತಿದ್ದ ಸಮಯವೂ ಸಂಜೆಯಿಂದ ಬೆಳಗ್ಗಗೆ ಬದಲಾದ ಉದಾಹರಣೆಯೂ ಇದೆ. ಇತಿಹಾಸದಲ್ಲಿ ಇಬ್ಬರು ಮಹಿಳೆಯರು ಬಜೆಟ್ ಮಂಡಿಸಿದ ಉದಾಹರಣೆ ಭಾರತದಲ್ಲಿದೆ. ಮೂರು ದಶಕದ ಹಿಂದೆ ಮಂಡನೆಯಾದ ಬಜೆಟ್‌ಗಳಿಂದ ಭಾರತ ಆರ್ಥಿಕವಾಗಿ ಕ್ರಾಂತಿಕಾರಿಯಾಗಿ ಬದಲಾವಣೆ ಕಂಡ ಹೆಜ್ಜೆ ಗುರುತುಗಳೂ ಇವೆ. ಈ ಎಲ್ಲಾ ವಿಶೇಷಗಳ ನೋಟ ಇಲ್ಲಿದೆ.
- ಮೊದಲ ಬಜೆಟ್
ಸ್ವತಂತ್ರ ಭಾರತದ ಮೊಟ್ಟಮೊದಲ ಕೇಂದ್ರ ಬಜೆಟ್ ಅನ್ನು 1947ರ ನವೆಂಬರ್ 26, ರಂದು ಮೊದಲ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು.
2. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಅವಧಿಯಲ್ಲಿ ಹಣಕಾಸು ಮಂತ್ರಿಯಾಗಿದ್ದ ಅವಧಿ ಹಾಗೂ ಒಟ್ಟು ನಂತರ ಪ್ರಧಾನಿ ಎಲ್‌ಬಿ ಶಾಸ್ತ್ರಿ ಅವರ ಅಡಿಯಲ್ಲಿ ಸೇರಿ 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಮೊರಾರ್ಜಿ ದೇಸಾಯಿ ಅವರು 1959ರ ಫೆಬ್ರವರಿ 28 ರಂದು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದರು ಮತ್ತು ಮಧ್ಯಂತರವನ್ನು ಮಂಡಿಸುವ ಮೊದಲು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣ ಬಜೆಟ್‌ಗಳನ್ನು ಮಂಡಿಸಿದರು. 1962 ರಲ್ಲಿ ಒಂದು. ಇದರ ನಂತರ ಎರಡು ಪೂರ್ಣ ಬಜೆಟ್‌ಗಳು ಬಂದವು. ನಾಲ್ಕು ವರ್ಷಗಳ ನಂತರ, ಅವರು 1967 ರಲ್ಲಿ ಮತ್ತೊಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು, ನಂತರ 1967, 1968 ಮತ್ತು 1969 ರಲ್ಲಿ ಮೂರು ಪೂರ್ಣ ಬಜೆಟ್‌ಗಳನ್ನು ಮಂಡಿಸಿದರು, ಹೀಗೆ ಒಟ್ಟು 10 ಬಜೆಟ್‌ಗಳನ್ನು ಮಂಡಿಸಿದ ದಾಖಲೆ ದೇಸಾಯಿ ಅವರ ಹೆಸರಲ್ಲಿದೆ.
3. ಎರಡನೇ ಅತಿ ಹೆಚ್ಚು ಬಜೆಟ್‌ಗಳು
ಮೂರು ಸರ್ಕಾರಗಳಲ್ಲಿ ವಿತ್ತ ಸಚಿವ ಪಿ ಚಿದಂಬರಂ ಅವರು ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದಾರೆ. 1996ರ ಮಾರ್ಚ್ 19ರಂದು ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಐಕ್ಯರಂಗ ಸರ್ಕಾರದ ಅವಧಿಯಲ್ಲಿ ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದರು. ಅವರು ಮುಂದಿನ ವರ್ಷ ಅದೇ ಸರ್ಕಾರದ ಅಡಿಯಲ್ಲಿ ಮತ್ತೊಂದು ಬಜೆಟ್ ಮಂಡಿಸಿದರು. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಾಗ ಮತ್ತೆ ಹಣಕಾಸು ಖಾತೆಗೆ ಮರಳಿದರು. ಅವರು 2004 ಮತ್ತು 2008 ರ ನಡುವೆ ಐದು ಬಜೆಟ್‌ಗಳನ್ನು ಮಂಡಿಸಿದರು. ಒಂದು ವರ್ಷ ಕೇಂದ್ರ ಗೃಹ ಸಚಿವರಾಗಿ ನಂತರ, ಅವರು ಮತ್ತೆ ಹಣಕಾಸು ಸಚಿವರಾದರು. 2013 ಮತ್ತು 2014 ರಲ್ಲಿ ಬಜೆಟ್ ಮಂಡಿಸಿದ್ದು ಚಿದಂಬರಂ ಅವರೇ/.
4. ಮೂರನೇ ಅತಿ ಹೆಚ್ಚು ಬಜೆಟ್
ಪ್ರಣಬ್ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಎಂಟು ಬಜೆಟ್‌ಗಳನ್ನು ಮಂಡಿಸಿದ್ದರು. ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 1982, 1983 ಮತ್ತು 1984 ರಲ್ಲಿ ಬಜೆಟ್‌ಗಳನ್ನು ಮತ್ತು ಫೆಬ್ರವರಿ 2009 ಮತ್ತು ಮಾರ್ಚ್ 2012 ರ ನಡುವೆ ಐದು ನೇರ ಬಜೆಟ್‌ಗಳನ್ನು ಮಂಡಿಸಿದರು.
5. ಮನಮೋಹನ್ ಸಿಂಗ್ ಮೋಡಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಿ ವಿ ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ 1991 ಮತ್ತು 1995 ರ ನಡುವೆ ಐದು ನೇರ ಬಜೆಟ್‌ಗಳನ್ನು ಮಂಡಿಸಿದರು.
6. ಸುದೀರ್ಘ ಬಜೆಟ್ ಭಾಷಣ
ನಿರ್ಮಲಾ ಸೀತಾರಾಮನ್ ಅವರು 2020ರ ಫೆಬ್ರವರಿ 1ರಂದು ಎರಡು ಗಂಟೆ 40 ನಿಮಿಷಗಳ ಕಾಲ ತಮ್ಮ ಬಜೆಟ್ ಪ್ರಸ್ತುತಪಡಿಸಿ ಸುದೀರ್ಘ ಬಜೆಟ್ ಭಾಷಣದ ದಾಖಲೆ ಬರೆದಿದ್ದಾರೆ. ಆ ಸಮಯದಲ್ಲಿ, ಅವರು ಬಜೆಟ್ ಭಾಷಣವನ್ನು ಮೊಟಕುಗೊಳಿಸಿದರೂ ಸುಧೀರ್ಘ ಅವಧಿಯದ್ದಾಗಿ ದಾಖಲಾಯಿತು.
7. ಅತಿ ಕಡಿಮೆ ಬಜೆಟ್ ಭಾಷಣ
1977 ರಲ್ಲಿ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರ ಮಧ್ಯಂತರ ಬಜೆಟ್ ಭಾಷಣವು ಇಲ್ಲಿಯವರೆಗೆ ಕೇವಲ 800 ಪದಗಳ ಚಿಕ್ಕದ್ದು ಎನ್ನುವ ವಿಶೇಷತೆ ಹೊಂದಿದೆ.
8. ಬಜೆಟ್ ಮಂಡನೆ ಸಮಯ ಬದಲಾವಣೆ
ಹಿಂದೆಲ್ಲಾ ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿತ್ತು. ಸಂಜೆ ಸಮಯವು ವಸಾಹತುಶಾಹಿ ಯುಗದ ಅಭ್ಯಾಸವನ್ನು ಮುಂದುವರಿಸಿತ್ತು, ಭಾರತವು ಬ್ರಿಟಿಷ್ ಬೇಸಿಗೆ ಸಮಯಕ್ಕಿಂತ 4 ಗಂಟೆ 30 ನಿಮಿಷಗಳು ಮುಂದಿದೆ. ಈ ವೇಳೆ ಲಂಡನ್‌ನಲ್ಲಿ ಹಗಲಿನ ಸಮಯ. ಬೆಳಿಗ್ಗೆ ಬಿಸಿಲು ಇರುವುದರಿಂದ ಸಂಜೆ ವೇಳೆ ವಾತಾವರಣ ಆಹ್ಲಾದಕರವಾಗಿರಲಿದೆ ಎನ್ನುವ ಅಂಶವನ್ನೂ ಹಿಂದೆ ಗಮನಿಸಲಾಗುತ್ತಿತ್ತು. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿದಾಗ ಸಮಯವನ್ನು ಬದಲಾಯಿಸಲಾಯಿತು. ಅಂದಿನಿಂದ ಈಗಲೂ 11 ಗಂಟೆಗೆ ಬಜೆಟ್ ಮಂಡನೆಯಾಗುತ್ತಿದೆ
9. ದಿನಾಂಕ ನಿಗದಿ ಬದಲು
ಮಾರ್ಚ್ ಅಂತ್ಯದೊಳಗೆ ಸಂಸತ್ತಿನ ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ಏಪ್ರಿಲ್ 1 ರಂದು ಹಣಕಾಸು ವರ್ಷದ ಆರಂಭದಿಂದ ಬಜೆಟ್ ಅನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಲು 2017 ರಲ್ಲಿ ಬಜೆಟ್ ಮಂಡನೆ ದಿನಾಂಕವನ್ನು ಫೆಬ್ರವರಿ 1 ಕ್ಕೆ ಬದಲಾಯಿಸಲಾಯಿತು.
ಫೆಬ್ರವರಿ 29 ರಂದು ಬಜೆಟ್ ಮಂಡಿಸುವುದರಿಂದ ಸಂಸತ್ತಿನ ಅನುಮೋದನೆ ಪ್ರಕ್ರಿಯೆಯ 2-3 ತಿಂಗಳುಗಳ ಲೆಕ್ಕಾಚಾರದ ನಂತರ ಮೇ/ಜೂನ್ ಮೊದಲು ಅನುಷ್ಠಾನವನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ವಿಳಂಬತೆಯಿಂದ ಆರ್ಥಿಕ ವರ್ಷದ ಲೆಕ್ಕಾಚಾರದ ಮೇಲೆ ವ್ಯತ್ಯಾಸ ಆಗಬಹುದು ಎಂದು ದಿನಾಂಕವನ್ನು ಎಂಟು ವರ್ಷದ ಹಿಂದೆ ಫೆಬ್ರವರಿ 1 ಕ್ಕೆ ಬದಲಾಯಿಸಲಾಯಿತು.
10. ನಿರ್ಮಲಾ ಬಜೆಟ್
ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿಯೇ ಈವರೆಗೂ ಏಳು ಬಜೆಟ್ ಮಂಡಿಸಿದ್ದು, ಎಂಟನೇ ಬಜೆಟ್ ಅನ್ನು ಇಂದು ಮಂಡಿಸುತ್ತಿದ್ದಾರೆ. ಈ ಹಿಂದೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬಜೆಟ್ ಮಂಡಿಸಿದ್ದರು. ಆದರೆ ಹಣಕಾಸು ಸಚಿವಾಗಿ ಈ ಜವಾಬ್ದಾರಿ ನಿಭಾಯಿಸಿದವರು ನಿರ್ಮಲಾ ಸೀತಾರಾಮನ್. 2019 ರಲ್ಲಿ ಪ್ರಧಾನಿ ಮೋದಿ ಅವರು ನಿರ್ಣಾಯಕ ಎರಡನೇ ಅವಧಿಗೆ ಗೆದ್ದಾಗ ನಿರ್ಮಲಾ ಅವರು ಭಾರತದ ಮೊದಲ ಪೂರ್ಣಪ್ರಮಾಣದ ಮಹಿಳಾ ಹಣಕಾಸು ಸಚಿವರಾಗಿ ನೇಮಕಗೊಂಡರು. 2024 ರಲ್ಲಿ ಮೂರನೇ ಬಾರಿಗೆ ಮೋದಿ ಅಧಿಕಾರಕ್ಕೆ ಬಂದ ನಂತರ, ಸೀತಾರಾಮನ್ ತಮ್ಮ ಹಣಕಾಸು ಖಾತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
