Punjab Police: 'ಬ್ರಿಂದನ್‌ವಾಲೆ 2.0' ಎಂಬ 'ಡೇಂಜರಸ್ ಮ್ಯಾನ್' ಬಂಧನಕ್ಕೆ ಪಂಜಾಬ್ ಪೊಲೀಸರು ಹೆಣೆದ 'ಆ್ಯಕ್ಷನ್ ಪ್ಲ್ಯಾನ್' ಏನು?
ಖಲಿಸ್ತಾನ ಬೆಂಬಲಿಗರಿಂದ 'ಬ್ರಿಂದನ್‌ವಾಲೆ 2.0' ಎಂದು ಕರೆಯಲ್ಪಡುವ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್, ಭಾರತದ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಕಂಡುಬರುತ್ತಿವೆ. ಈ ಮಧ್ಯೆ ಪರಾರಿಯಾಗಿರುವ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಹೆಣೆದಿರುವ ಯೋಜನೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಚಂಡಿಗಢ: ಖಲಿಸ್ತಾನ ಬೆಂಬಲಿಗರಿಂದ 'ಬ್ರಿಂದನ್‌ವಾಲೆ 2.0' ಎಂದು ಕರೆಯಲ್ಪಡುವ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್, ಭಾರತದ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಕಂಡುಬರುತ್ತಿವೆ. ಸಿಖ್ ಯುವಕರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಪ್ರಯತ್ನದಲ್ಲಿರುವ ಅಮೃತ್‌ಪಾಲ್ ಸಿಂಗ್, ಪಾಕಿಸ್ತಾನದ ಬಾಹ್ಯ ಗುಪ್ತಚರ ಇಲಾಖೆ ಐಎಸ್‌ಐ ನೆರವಿನೊಂದಿಗೆ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಗಳು ದಟ್ಟವಾಗತೊಡಗಿವೆ.
ಟ್ರೆಂಡಿಂಗ್ ಸುದ್ದಿ
ಈ ಮಧ್ಯೆ ಪರಾರಿಯಾಗಿರುವ ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಹೆಣೆದಿರುವ ಯೋಜನೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕೇಂದ್ರ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಪಂಜಾಬ್ ಪೊಲೀಸರು ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ.
ಅಮೃತ್‌ಪಾಲ್ ಸಿಂಗ್‌ನನ್ನು ಈಗಾಗಲೇ ತಲೆಮರೆಸಿಕೊಂಡಿರುವ ಅಪರಾಧಿ ಎಂದು ಘೋಷಿಸಿರುವ ಪಂಜಾಬ್ ಪೊಲೀಸರು, ಆತನ ಬಂಧನಕ್ಕಾಗಿ ರಾಜ್ಯದ ಮೂಲೆ ಮೂಲೆಯಲ್ಲೂ ಜಾಲ ಬೀಸಿದ್ದಾರೆ. ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಬಾಹನ ತಪಾಸಣೆ, ಗಡಿಗಳಲ್ಲಿ ಹೆಚ್ಚಿನ ನಿಗಾ ಇರಿಸುವ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಕಳೆದ ಮಾರ್ಚ್ 2ರಂದು ಪಂಜಾಬ್ ಮುಖ್ಯಮಂತ್ರಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ರು. ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಬಂಧನಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಇಬ್ಬರೂ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದರು. ಇದಾದ ಬಳಿಕ ಅಮೃತ್‌ಪಾಲ್ ಸಿಂಗ್ ಬಂಧನದ 'ಆ್ಯಕ್ಷನ್ ಪ್ಲ್ಯಾನ್'ನ್ನು ಪಂಜಾಬ್ ಪೊಲೀಸರು ಜಾರಿಗೊಳಿಸಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು ಪಂಜಾಬ್ ಪೊಲೀಸರು ಅಮೃತ್‌ಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್‌ನನ್ನು ಬಂಧಿಸಿದ್ದರು. ಈ ವೇಳೆ ಭುಗಿಲೆದ್ದ ಪ್ರತಿಭಟನೆಯಲ್ಲಿ, 'ವಾರಿಸ್ ಪಂಜಾಬ್ ದೇ' ಸಂಗಟನೆಯ ಬೆಂಬಲಿಗರು, ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಅಮೃತ್‌ಪಾಲ್ ಸಿಂಗ್, ಕೇಂದ್ರ ಗಥಹ ಸಚಿವ ಅಮಿತ್ ಶಾ ಅವರಿಗೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಂದಿದ್ದ ಸ್ಥಿತಿಯೇ ಬರಲಿದೆ ಎಂದು ನೇರವಾಗಿ ಎಚ್ಚರಸಿದ್ದ.
ಅಮೃತ್‌ಪಾಲ್ ಸಿಂಗ್ ಅಪಾಯಕಾರಿ ವ್ಯಕ್ತಿ ಎಂಬುದನ್ನು ಅರಿತ ಪಂಜಾಬ್ ಪೊಲೀಸರು, ಆತನ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. 'ವಾರಿಸ್ ಪಂಜಾಬ್ ದೇ' ಸಂಘಟನೆಯ ಒಟ್ಟು 78 ಸದಸ್ಯರನ್ನು ಪಂಜಾಬ್ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನ್ನ ಬಂಧನದ ಸುಳಿವನ್ನು ಅರಿತ ಅಮೃತ್‌ಪಾಲ್ ಸಿಂಗ್ ಇದೀಗ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಪಂಜಾಬ್ ರಾಜ್ಯದ ಮೂಲೆ ಮೂಲೆಯನ್ನೂ ಶೋಧಿಸುತ್ತಿದ್ದಾರೆ.
ಈಗಾಗಲೇ ಅಮೃತ್‌ಪಾಲ್ ಸಿಂಗ್‌ನ ಕುಟುಂಬವನ್ನು ಸಂಪರ್ಕಿಸಿರುವ ಪಂಜಾಬ್ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಠಿಣ ನಿರ್ಧಾರ ತಳೆಯುವ ಮೊದಲೇ ಶರಣಾಗುವಂತೆ ಆತನಿಗೆ ತಿಳಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಅಮೃತ್‌ಪಾಲ್ ಸಿಂಗ್ ಎಲ್ಲಿದ್ದಾನೆ ಎಂಬುದು ತಮಗೆ ಗೊತ್ತಿಲ್ಲ ಎಂದು ಆತನ ತಂದೆ ತಾರ್ಸೆಮ್ ಸಿಂಗ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ತಲೆಮರೆಸಿಕೊಂಡಿರುವ ಅಮೃತ್‌ಪಾಲ್ ಸಿಂಗ್ ಪಾಕಿಸ್ತಾನದಲ್ಲಿ ಆಶ್ರಯ ಪಡೆಯುವ ಸಾಧ್ಯತೆಯೂ ಇರುವುದರಿಂದ, ಗಡಿಯಲ್ಲಿ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಗುಪ್ತಚರ ಇಲಾಖೆ ಕೂಡ ಆತನ ಚಲನವಲನಗಳ ಮೇಲೆ ನಿಗಾ ಇರಿಸಿದೆ. ವಿಶೇಷವಾಗಿ ಗಡಿಯಲ್ಲಿ ನಡೆಯುವ ಯಾವುದೇ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಒಟ್ಟಿನಲ್ಲಿ ಅಮೃತ್‌ಪಾಲ್ ಸಿಂಗ್‌ನಿಂದಾಗಿ ಪಂಜಾಬ್ ಮತ್ತೊಂದು ಬಾರಿ ಭಯೋತ್ಪಾದನೆಯ ಅಗ್ನಿಕುಂಡದಲ್ಲಿ ಬೇಯುವುದನ್ನು ತಪ್ಪಿಸಲು, ಕೇಂದ್ರ ಗೃಹ ಇಲಾಖೆ ಮತ್ತು ಪಂಜಾಬ್ ಪೊಲೀಸ್ ಇಲಾಖೆ ಶತಪ್ರಯತ್ನ ನಡೆಸುತ್ತಿದೆ ಎಂದು ಹೇಳಬಹುದು.