ಕನ್ನಡ ಸುದ್ದಿ  /  Nation And-world  /  Know What Arvind Kejriwal Says About Exit Polls For Poor Aap Show In Gujarat

Arvind Kejriwal: ಫಲಿತಾಂಶದ ದಿನ ಮಾತಾಡ್ತೆನೆ: ಚುನಾವಣೋತ್ತರ ಸಮೀಕ್ಷೆ ತಲೆಕೆಳಗಾಗುತ್ತೆ ಎಂದ ಕೇಜ್ರಿವಾಲ್!‌

ಗುಜರಾತ್‌ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳನ್ನು ನಿರಾಕರಿಸಿರುವ ಆಮ್‌ ಆದ್ಮಿ ಪಕ್ಷ(ಆಪ್)ದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಫಲಿತಾಂಶ ಘೋಷಣೆಯಾದ ದಿನ(ಡಿ.08-ಗುರುವಾರ) ಎಲ್ಲವೂ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಫಲಿತಾಂಶ ಬಂದ ದಿನ ಎಲ್ಲವೂ ಗೊತ್ತಾಗಲಿದೆ ಎಂದು ಕೇಜ್ರಿವಾಲ್‌ ಹೇಳಿರುವುದು ಗಮನ ಸೆಳೆದಿದೆ..

ಅರವಿಂದ್‌ ಕೇಜ್ರಿವಾಲ್‌ (ಸಂಗ್ರಹ ಚಿತ್ರ)
ಅರವಿಂದ್‌ ಕೇಜ್ರಿವಾಲ್‌ (ಸಂಗ್ರಹ ಚಿತ್ರ) (PTI)

ನವದೆಹಲಿ: ಗುಜರಾತ್‌ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳನ್ನು ನಿರಾಕರಿಸಿರುವ ಆಮ್‌ ಆದ್ಮಿ ಪಕ್ಷ(ಆಪ್)ದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಫಲಿತಾಂಶ ಘೋಷಣೆಯಾದ ದಿನ(ಡಿ.08-ಗುರುವಾರ) ಎಲ್ಲವೂ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅರವಿಂದ್‌ ಕೇಜ್ರಿವಾಲ್‌, ಫಲಿತಾಂಶದ ದಿನ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳು ಎಂದು ಸಾಬೀತಾಗಲಿದೆ ಎಂದು ಹೇಳಿದರು.

ಗುಜರಾತ್‌ನ ಆಡಳಿತಾರೂಢ ಬಿಜೆಪಿಗೆ ಸವಾಲೆಸೆಯಲು, ಆಪ್‌ ವಿಧಾನಸಭೆ ಚುನಾವಣೆಯಲ್ಲಿ ಅದ್ದೂರಿ ಪ್ರಚಾರ ನಡೆಸಿತ್ತು. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಾರದೇ ಹೋದರೂ, ಕಾಂಗ್ರೆಸ್‌ನ್ನು ಹಿಂದಿಕ್ಕಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳು ಆಪ್‌ಗೆ ಹೀನಾಯ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿದ್ದು, ಇದು ಸಹಜವಾಗಿ ಆಪ್‌ ನಾಯಕರಿಗೆ ಅಪಥ್ಯವಾಗಿದೆ.

ನಿನ್ನೆ(ಡಿ.05-ಸೋಮವಾರ) ನಡೆದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಪ್‌ ಮುನ್ನಡೆ ಸಾಧಿಸಲಿದೆ. ಆದರೆ ಆದರೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಲಿದೆ ಎಂದು ಹೇಳಲಾಗಿದೆ.

ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ, ಗುಜರಾತ್‌ನಲ್ಲಿ ಆಪ್‌ ೧೦ಕ್ಕಿಂತ ಹೆಚ್ಚು ಸ್ಥಾನ ಗಳಿಸದು ಎಂದೇ ಹೇಳಲಾಗಿದೆ. ಇದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುವ ಆಪ್‌ ಕನಸಿಗೆ ಭಗ್ನ ತಂದಿದೆ. ಇದೇ ಕಾರಣಕ್ಕೆ ಈ ಚುನಾವಣೋತ್ತರ ಸಮೀಕ್ಷೆಗಳು ತಪ್ಪು ಎಂದು ಹೇಳುತ್ತಿರುವ ಆಪ್‌ ನಾಯಕರು, ವಾಸ್ತವವಾಗಿ ಪಕ್ಷವು 100 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆ.

ಫಲಿತಾಂಶಗಳು ಪಕ್ಷದ ಪಾಲಿಗೆ ಸಕಾರಾತ್ಮಕವಾಗಿವೆ. ನಾವು ಖಂಡಿತವಾಗಿಯೂ ಗುಜರಾತ್‌ನಲ್ಲಿ ಮ್ಯಾಜಿಕ್‌ ಮಾಡಲಿದ್ದೇವೆ. ಹೊಸ ಪಕ್ಷವೊಂದು ಚುನಾವಣೆಯಲ್ಲಿ ಶೇ. 15 ರಿಂದ 20 ರಷ್ಟು ಮತಗಳನ್ನು ಪಡೆಯುವುದು ಸಣ್ಣ ಸಂಗತಿಯಲ್ಲ. ಅದೂ ಕೂಡ ಬಿಜೆಪಿ ಭದ್ರಕೋಟೆಯಲ್ಲಿ ನಾವು ತೀವ್ರ ಸ್ಪರ್ಧೆಯೊಡ್ಡಲು ಯಶಸ್ವಿಯಾಗಿರುವುದು ಸಂತಸದ ಸಂಗತಿ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಸದ್ಯ ಚುನಾವಣೋತ್ತರ ಸಮೀಕ್ಷೆಗಳ ಆಧಾರದಲ್ಲಿ ಪಕ್ಷದ ಪ್ರದರ್ಶನದ ಬಗ್ಗೆ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಫಲಿತಾಂಶ ಬಂದ ಬಳಿಕ ನಮ್ಮ ಸ್ಪರ್ಧೆ ಅದೆಷ್ಟು ತೀವ್ರವಾಗಿತ್ತು ಎಂಬುದು ಗೊತ್ತಾಗಲಿದೆ. ನಾವು ಖಂಡಿತವಾಗಿಯೂ ಗುಜರಾತ್‌ ಚುನಾವಣೆಯಲ್ಲಿ ಜಯ ಸಾಧಿಸುತ್ತೇವೆ ಎಂದು ಅರವಿಂದ್‌ ಕೇಜ್ರಿವಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಗುಜರಾತ್‌ ಚುನಾವಣೋತ್ತರ ಸಮೀಕ್ಷೆಗಳನ್ನು ಸ್ವಾಗತಿಸಿರುವ ಬಿಜೆಪಿ ನಾಯಕರು, ಬಿಜೆಪಿಗೆ ಸತತ ಏಳನೇ ಬಾರಿ ಅಧಿಕಾರ ನೀಡಲಿರುವ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ, ಬಿಜೆಪಿ ಜನರ ಪಕ್ಷವಾಗಿ ಹೊರಹೊಮ್ಮಿರುವುದು ಸಂತಸದ ಸಂಗತಿ ಎಂದು ರಾಜ್ಯ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮುನ್ಸಿಪಲ್ ಕಾರ್ಪೊರೇಷನ್‌ಗಳ ಮರು ಏಕೀಕರಣದ ನಂತರದ ಮೊದಲ ದೆಹಲಿ ಪಾಲಿಕೆ ಚುನಾವಣೆಯಲ್ಲಿ, ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ಆಪ್‌ ದೊಡ್ಡ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜು ಮಾಡಿವೆ.

ದೆಹಲಿ ಪಾಲಿಕೆ ಚುನಾವಣೋತ್ತರ ಸಮೀಕ್ಷೆಗಳನ್ನು ಸ್ವಾಗತಿಸಿರುವ ಅರವಿಂದ್‌ ಕೇಜ್ರಿವಾಲ್‌, ಆಪ್‌ ಮೇಲೆ ಮತ್ತೊಮ್ಮೆ ನಂಬಿಕೆ ತೋರಿದ ದೆಹಲಿಯ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ದೆಹಲಿ ಪಾಲಿಕೆಯ ಚುಕ್ಕಾಣಿಯನ್ನು ಆಪ್‌ ಹಿಡಿಯಲಿದೆ ಎಂದೂ ಕೇಜ್ರಿವಾಲ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಗುಜರಾತ್‌ ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿರುವ ಆಪ್‌, ದೆಹಲಿ ಪಾಲಿಕೆ ಚುನಾವಣೋತ್ತರ ಸಮೀಕ್ಷೆಗಳನ್ನು ಸ್ವಾಗತಿಸಿದೆ.

IPL_Entry_Point