ಕನ್ನಡ ಸುದ್ದಿ  /  Nation And-world  /  Know What Union Minister Nitin Gadkari Suggests To Mercedes Benz Car Manufacturing Company

Nitin Gadkari: ನಿಮ್ಮ ಕಾರನ್ನು ನನ್ನಿಂದಲೂ ಖರೀದಿಸಲಾಗಲ್ಲ: ಮರ್ಸಿಡೀಸ್-ಬೆಂಝ್‌ಗೆ ಗಡ್ಕರಿ ನೀಡಿದ ಸಲಹೆ ಏನು?

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್-ಬೆಂಝ್‌ಗೆ ಸ್ಥಳೀಯವಾಗಿ ಹೆಚ್ಚಿನ ಕಾರುಗಳನ್ನು ಉತ್ಪಾದಿಸುವಂತೆ ಸಲಹೆ ನೀಡಿದ್ದಾರೆ. ಸ್ಥಳೀಯ ಉತ್ಪಾದನೆ ಹೆಚ್ಚಿಸುವುದರಿಂದ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ನಿತಿನ್‌ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಮರ್ಸಿಡಿಸ್-ಬೆಂಝ್ ಜಂಟಿ ಉದ್ಯಮಗಳನ್ನು ಸ್ಥಾಪಿಸಬೇಕು ಎಂದೂ ಗಡ್ಕರಿ ಹೇಳಿದ್ದಾರೆ.

ನಿತಿನ್‌ ಗಡ್ಕರಿ (ಸಂಗ್ರಹ ಚಿತ್ರ)
ನಿತಿನ್‌ ಗಡ್ಕರಿ (ಸಂಗ್ರಹ ಚಿತ್ರ) (HT_PRINT)

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್-ಬೆಂಝ್‌ಗೆ ಸ್ಥಳೀಯವಾಗಿ ಹೆಚ್ಚಿನ ಕಾರುಗಳನ್ನು ಉತ್ಪಾದಿಸುವಂತೆ ಸಲಹೆ ನೀಡಿದ್ದಾರೆ. ಸ್ಥಳೀಯ ಉತ್ಪಾದನೆ ಹೆಚ್ಚಿಸುವುದರಿಂದ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ನಿತಿನ್‌ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಪುಣೆಯಲ್ಲಿನ ಚಕನ್‌ನಲ್ಲಿರುವ ಮರ್ಸಿಡೀಸ್‌ ಬೆಂಝ್ ಉತ್ಪಾದನಾ ಘಟಕದಲ್ಲಿ, ಸ್ಥಳೀಯವಾಗಿ ಜೋಡಿಸಲಾದ ಭಾರತದ ಮೊದಲ EQS 580 4MATIC ಎಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡಿ ಮಾತನಾಡಿದ ಗಡ್ಕರಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದೊಡ್ಡ ಮಾರುಕಟ್ಟೆ ಇದೆ ಎಂದು ಹೇಳಿದರು.

ನೀವು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ವೆಚ್ಚವನ್ನು ಕಡಿಮೆ ಮಾಡಬೇಕು. ಮಧ್ಯಮ ವರ್ಗದ ಜನರಿಗೂ ನಿಮ್ಮ ಕಾರು ತಲುಪಬೇಕು. ಸದ್ಯದ ಕಾರಿನ ಬೆಲೆ ನೋಡಿದರೆ, ನಿಮ್ಮ ಕಾರನ್ನು ನನ್ನಿಂದಲೂ ಖರೀದಿಸಲು ಸಾಧ್ಯವಿಲ್ಲ ಎಂದು ನಿತಿನ್‌ ಗಡ್ಕರಿ ಹಾಸ್ಯ ಚಟಾಕಿ ಹಾರಿಸಿದರು. EQS 580 4MATIC ಎಲೆಕ್ಟ್ರಿಕ್‌ ಕಾರಿನ ಬೆಲೆ 1.55 ಕೋಟಿ ರೂ. ಎಂಬುದು ವಿಶೇಷ.

ದೇಶದಲ್ಲಿ ಒಟ್ಟು 15.7 ಲಕ್ಷ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳಿವೆ. ಒಟ್ಟಾರೆ ಇವಿ ಮಾರಾಟವು ಶೇಕಡಾ 335 ರಷ್ಟು ಏರಿಕೆಯಾಗುವುದರೊಂದಿಗೆ ಬೃಹತ್ ಮಾರುಕಟ್ಟೆಯಾಗಿ ಪರಿಣಮಿಸಿದೆ. ದೇಶದಲ್ಲಿ ಬರಲಿರುವ ಎಕ್ಸ್‌ಪ್ರೆಸ್ ಹೆದ್ದಾರಿಗಳೊಂದಿಗೆ, ಮರ್ಸಿಡೀಸ್‌ ಬೆಂಝ್ ಇಂಡಿಯಾ ಈ ಕಾರುಗಳು ಉತ್ತಮ ಮಾರುಕಟ್ಟೆಯನ್ನು ಪಡೆಯಲಿವೆ ಎಂದು ಗಡ್ಕರಿ ನುಡಿದರು.

ಭಾರತೀಯ ಆಟೋಮೊಬೈಲ್ ಕ್ಷೇತ್ರದ ಗಾತ್ರ ಪ್ರಸ್ತುತ 7.8 ಲಕ್ಷ ಕೋಟಿ ರೂ.ಗಳಾಗಿದೆ. ಇದರಲ್ಲಿ ರಫ್ತು 3.5 ಲಕ್ಷ ಕೋಟಿ ರೂ.ಗಳಷ್ಟು ರಪ್ತು ವ್ಯವಹಾರ ನಡೆಯುತ್ತದೆ. ಇದನ್ನು 15 ಲಕ್ಷ ಕೋಟಿ ರೂ. ಮೌಲ್ಯದ ಉದ್ಯಮವನ್ನಾಗಿ ಮಾಡುವುದು ನನ್ನ ಕನಸು ಎಂದು ಗಡ್ಕರಿ ಇದೇ ವೇಳೆ ಹೇಳಿದರು.

ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಮರ್ಸಿಡಿಸ್-ಬೆಂಝ್ ಜಂಟಿ ಉದ್ಯಮಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದ ಗಡ್ಕರಿ, ಇದರಿಂದ ಕಂಪನಿಯು ತನ್ನ ಬಿಡಿ ಭಾಗಗಳ ವೆಚ್ಚವನ್ನು ಶೇ. 30ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಮರ್ಸಿಡೀಸ್-ಬೆಂಝ್‌ ಇಂಡಿಯಾ ತನ್ನ ಎಲೆಕ್ಟ್ರೋ-ಮೊಬಿಲಿಟಿ ಡ್ರೈವ್ ಅನ್ನು, ಭಾರತದಲ್ಲಿ ತನ್ನ ಆಲ್-ಎಲೆಕ್ಟ್ರಿಕ್ SUV EQC ಅನ್ನು ಅಕ್ಟೋಬರ್ 2020ರಲ್ಲಿ ಬಿಡುಗಡೆ ಮಾಡುವ ಮೂಲಕ ಪ್ರಾರಂಭಿಸಿದೆ.

ನಮ್ಮ ದಾಖಲೆಗಳ ಪ್ರಕಾರ, ನಮ್ಮಲ್ಲಿ 1.02 ಕೋಟಿ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಸಿದ್ಧವಾಗಿವೆ. ನಮ್ಮಲ್ಲಿ ಕೇವಲ 40 ಘಟಕಗಳಿವೆ. ನನ್ನ ಅಂದಾಜಿನ ಪ್ರಕಾರ ನಾವು ಒಂದು ಜಿಲ್ಲೆಯಲ್ಲಿ ನಾಲ್ಕು ಸ್ಕ್ರ್ಯಾಪಿಂಗ್ ಘಟಕಗಳನ್ನು ತೆರೆಯಬಹುದು. ದೇಶಾದ್ಯಂತ ನಾವು ಅಂತಹ 2,000 ಘಟಕಗಳನ್ನು ತೆರೆಯಬಹುದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಂದಾಜಿಸಿದರು.

ಸ್ಕ್ರ್ಯಾಪಿಂಗ್‌ ಘಟಕಗಳನ್ನು ಸ್ಥಾಪಿಸುವುದರಿಂದ ನಿಮಗೆ ಮರುಬಳಕೆಗಾಗಿ ಕಚ್ಚಾ ವಸ್ತುಗಳನ್ನು ಸುಲಭವಾಗಿ ಸಿಗುತ್ತವೆ. ಇದು ನಿಮ್ಮ ಘಟಕದ ವೆಚ್ಚವನ್ನು ಶೇ.30 ರಷ್ಟು ಕಡಿಮೆ ಮಾಡುತ್ತದೆ. ಕೇಂದ್ರ ಸರ್ಕಾರವು ಅಂತಹ ಸೌಲಭ್ಯಗಳನ್ನು ಪ್ರೋತ್ಸಾಹಿಸುತ್ತಿದ್ದು, ನಿಮ್ಮ ಕಡೆಯಿಂದ ನಾವು ಸಹಕಾರವನ್ನು ನಿರೀಕ್ಷಿಸುತ್ತಿರುವುದಾಗಿ ಸಚಿವ ನಿತನ್‌ ಗಡ್ಕರಿ ನುಡಿದರು.

EQS 580 4MATIC ಕಾರು ಒಮ್ಮೆ ಚಾರ್ಜ್‌ ಮಾಡಿದರೆ 857 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ. ಲಿಥಿಯಂ-ಐಯಾನ್ ಬ್ಯಾಟರಿಯ ಹೆಚ್ಚಿನ ಶಕ್ತಿಯ ಸಾಂದ್ರತೆ ಈ ಕಾರಿನ ವಿಶೇಷತೆ. ಇತ್ತೀಚಿನ ಲಿಥಿಯಂ-ಐಯಾನ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾದ ಶಕ್ತಿಯುತ 400-ವೋಲ್ಟ್ ಬ್ಯಾಟರಿಯನ್ನು ಈ ಕಾರು ಹೊಂದಿದೆ.

IPL_Entry_Point

ವಿಭಾಗ