Swami Smaranananda: ರಾಮಕೃಷ್ಣ ಮಿಷನ್ ಅಧ್ಯಕ್ಷ ವಿಧಿವಿಶ, ಅದ್ಭುತ ಸ್ಮರಣಶಕ್ತಿಯ ಸ್ಮರಣಾನಂದಜಿ ಮಹಾರಾಜ್
ಕೋಲ್ಕತ್ತಾದಲ್ಲಿರುವ ರಾಮಕೃಷ್ಣ ಮಿಷನ್ ಅಧ್ಯಕ್ಷರಾಗಿದ್ದ ಸ್ವಾಮಿ ಸ್ಮರಣಾನಂದಜಿ ಮಹಾರಾಜ್(Swami Smaranananda) ವಿಧಿವಶರಾಗಿದ್ದಾರೆ. ಗದಗದಿಂದ ಅವರನ್ನು ಭೇಟಿಯಾಗಲು ಹೋಗಿದ್ದ ಸ್ವಾಮಿ ನಿಭರ್ಯಾನಂದ ಮಹಾರಾಜ್ ಅವರ ತಂಡದ ನೆನಪನ್ನು ಇಲ್ಲಿ ನೀಡಲಾಗಿದೆ.
![ಗದಗದ ಸ್ವಾಮಿ ನಿರ್ಭಯಾನಂದ ಮಹಾರಾಜ್ ಹಾಗೂ ತಂಡ ಸ್ಮರಣಾನಂದಮಹಾರಾಜ್ ಅವರನ್ನು ಭೇಟಿ ಮಾಡಿದ ಕ್ಷಣ, ಅವರು ಕೊಟ್ಟ ಚಾಕೊಲೇಟ್ ನೆನಪು. ಗದಗದ ಸ್ವಾಮಿ ನಿರ್ಭಯಾನಂದ ಮಹಾರಾಜ್ ಹಾಗೂ ತಂಡ ಸ್ಮರಣಾನಂದಮಹಾರಾಜ್ ಅವರನ್ನು ಭೇಟಿ ಮಾಡಿದ ಕ್ಷಣ, ಅವರು ಕೊಟ್ಟ ಚಾಕೊಲೇಟ್ ನೆನಪು.](https://images.hindustantimes.com/kannada/img/2024/03/27/550x309/swamy_gg_1711546936281_1711546942919.jpg)
ಕೋಲ್ಕತಾ: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ಮಂಗಳವಾರ ಸಂಜೆ ಕೋಲ್ಕತ್ತಾದಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು 2017 ರಲ್ಲಿ 16 ನೇ ಅಧ್ಯಕ್ಷರಾದರು. ಮಂಗಳವಾರ ಬೇಲೂರು ಮಠದಲ್ಲಿ ಅಂತ್ಯಕ್ರಿಯೆ ನಡೆಯಿತು. ಅನಾರೋಗ್ಯದ ಕಾರಣದಿಂದ ಅವರನ್ನು ಮಿಷನ್ ನಡೆಸುತ್ತಿರುವ ದಕ್ಷಿಣ ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 5 ರಂದು, ಈ ವರ್ಷದ ಎರಡನೇ ಬಾರಿಗೆ ಬಂಗಾಳಕ್ಕೆ ಭೇಟಿ ನೀಡಿದಾಗ, ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.
ತಮಿಳುನಾಡು ಮೂಲದ ಸ್ವಾಮೀಜಿ ಅವರು ಸಣ್ಣ ವಯಸ್ಸಿನಲ್ಲೇ ರಾಮಕೃಷ್ಣ ಮಿಷನ್ ಸೇರಿದ್ದರು. ಆನಂತರ ಅಲ್ಲಿಯೇ ವಿವಿಧ ಹಂತಗಳಲ್ಲಿ ಕೆಲಸ ಮಾಡಿ ಅಧ್ಯಕ್ಷರೂ ಆಗಿದ್ದರು.
ಮೋದಿ, ಬ್ಯಾನರ್ಜಿ ಸಂತಾಪ
"ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಅವರು ತಮ್ಮ ಜೀವನವನ್ನು ಆಧ್ಯಾತ್ಮಿಕತೆ ಮತ್ತು ಸೇವೆಗೆ ಮುಡಿಪಾಗಿಟ್ಟರು. ಅವರು ಅಸಂಖ್ಯಾತ ಹೃದಯಗಳು ಮತ್ತು ಮನಸ್ಸುಗಳ ಮೇಲೆ ಅಳಿಸಲಾಗದ ಗುರುತನ್ನು ಬಿಟ್ಟಿದ್ದಾರೆ. ಅವರ ಸಹಾನುಭೂತಿ ಮತ್ತು ಬುದ್ಧಿವಂತಿಕೆ ತಲೆಮಾರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಹಲವು ವರ್ಷಗಳಿಂದ ನಾನು ಅವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದೆ. 2020 ರಲ್ಲಿ ನಾನು ಬೇಲೂರು ಮಠಕ್ಕೆ ಭೇಟಿ ನೀಡಿದ್ದಾಗ ಅವರೊಂದಿಗೆ ಸಂವಹನ ನಡೆಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಕೆಲವು ವಾರಗಳ ಹಿಂದೆ, ಕೋಲ್ಕತ್ತಾದಲ್ಲಿ, ನಾನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಬೇಲೂರು ಮಠದ ಅಸಂಖ್ಯಾತ ಭಕ್ತರೊಂದಿಗೆ ನನ್ನ ಆಲೋಚನೆಗಳಿವೆ. ಓಂ ಶಾಂತಿ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
"ರಾಮಕೃಷ್ಣ ಮಠ ಮತ್ತು ಮಿಷನ್ನ ಪೂಜ್ಯ ಅಧ್ಯಕ್ಷ ಶ್ರೀಮತ್ ಸ್ವಾಮಿ ಸ್ಮರಣಾನಂದಜಿ ಮಹಾರಾಜ್ ಅವರ ನಿಧನದ ಸುದ್ದಿಯಿಂದ ತೀವ್ರ ದುಃಖಿತನಾಗಿದ್ದೇನೆ. ಈ ಮಹಾನ್ ಸನ್ಯಾಸಿ ತಮ್ಮ ಜೀವಿತಾವಧಿಯಲ್ಲಿ ರಾಮಕೃಷ್ಣೀಯರ ವಿಶ್ವ ವ್ಯವಸ್ಥೆಗೆ ಆಧ್ಯಾತ್ಮಿಕ ನಾಯಕತ್ವವನ್ನು ನೀಡಿದ್ದಾರೆ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರಿಗೆ ಸಾಂತ್ವನದ ಮೂಲವಾಗಿದ್ದಾರೆ. ಅವರ ಎಲ್ಲಾ ಸಹ ಸನ್ಯಾಸಿಗಳು, ಅನುಯಾಯಿಗಳು ಮತ್ತು ಭಕ್ತರಿಗೆ ನನ್ನ ಆಳವಾದ ಸಂತಾಪವನ್ನು ತಿಳಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸಂತಾಪ ಸೂಚಿಸಿದ್ದಾರೆ.
ಗದಗ ತಂಡದ ನೆನಪು
ಕಳೆದ ವರ್ಷ ಜೂನ್ 21ರಂದು ಕರ್ನಾಟಕದ ಗದಗ ತಂಡ ಸ್ಮರಣಾನಂದ ಮಹಾರಾಜ್ ಭೇಟಿಗೆ ಕೋಲ್ಕತ್ತಾಕ್ಕೆ ಹೋಗಿತ್ತು. ಈ ಕುರಿತು ಬ್ರಹ್ಮಚಾರಿ ಅದ್ವೈತ ಚೈತನ್ಯ ಅವರು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ಗದುಗಿನಲ್ಲಿ ಸ್ಥಾಪಿತವಾಗಲಿರುವ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಸ್ಥಾಪನೆಯ ಕುರಿತಂತೆ ಸ್ವಾಮಿ ಸ್ಮರಣಾನಂದಜಿ ಅವರ ಅನುಮತಿ ಹಾಗೂ ಆಶೀರ್ವಾದವನ್ನು ಪಡೆಯಲು ಗದಗ ವಿಜಯಪುರ ವಿವೇಕಾನಂದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಮಹಾರಾಜ್, ಮಾಜಿ ಶಾಸಕ ಡಿ.ಆರ್ ಪಾಟೀಲ್, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ವಿಷ್ಣುಕಾಂತ್ ಚಟಪಲ್ಲಿ ಅವರೊಂದಿಗೆ ಬೇಲೂರು ಮಠದಲ್ಲಿ ಸ್ವಾಮೀಜಿಯವರ ಬಳಿ ಹೋಗಿದ್ದೆವು. ಪೂಜ್ಯರು ಪ್ರಸಾದ ರೂಪವಾಗಿ ಚಾಕಲೇಟ್ಗಳನ್ನು ನೀಡಿದರು. ಅವುಗಳನ್ನು ನಾನು ಸೇವಿಸದೆ, ಹಾಗೆಯೇ ರಕ್ಷಿಸಿದಟ್ಟಿದ್ದೇನೆ. ಆ ಚಾಕ್ಲೆಟ್ಗಗಳು, ಅವರ ಆಶೀರ್ವಾದಪೂರ್ವಕ ನುಡಿಗಳು ಇಂದು ವಿಶೇಷವಾಗಿ ಗುರುದೇವರನ್ನು ನೆನಪಿಸುತ್ತಿವೆ .
ಸ್ವಾಮಿ ವಿವೇಕಾನಂದ ರ ಪುತ್ಥಳಿಯ ಮಾಹಿತಿಯನ್ನು ಪಡೆದ ಪರಮಪೂಜ್ಯರು ಅತಿ ದೊಡ್ಡದು ಎಂದು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮೆಲ್ಲಾ ದೈಹಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಕ್ರೋಢೀಕೃತಗೊಳಿಸಿ ತೆಗೆದ ಉದ್ಗಾರ, ಆ ದಿವ್ಯ ಮುಖರಾವಿಂದವನ್ನು ನೆನಪಿಸಿಕೊಂಡರೆ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆ. ಶ್ರೀ ಸ್ವಾಮಿ ನಿರ್ಭಯಾನಂದ ಅವರಿಗೆ ಮತ್ತು ಪ್ರೊ ವಿಷ್ಣುಕಾಂತ್ ಚಟಪಲ್ಲಿ ಇವರಿಗೆ ವಿಶೇಷ ಆಶೀರ್ವಾದ ಮಾಡಿದ ನಂತರ ಶಡಿ.ಆರ್ ಪಾಟೀಲ್ ಇವರ ಸರದಿ ಬಂದಿತು. ಪೂಜ್ಯರ ಮುಖದಲ್ಲಿ ಅದೇನೋ ಬದಲಾವಣೆ, ವಿಶ್ವ ವ್ಯಾಪಿಯಾಗಿರುವ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾಗಿ ಈ ಇಳಿ ವಯಸ್ಸಿನಲ್ಲಿ ಇಷ್ಟೊಂದು ವಿಷಯಗಳನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುವುದು ಪೂಜ್ಯ ಸ್ವಾಮಿ ಸ್ಮರಣಾನಂದಜೀ ಅವರಿಗೆ ಮಾತ್ರ ಸಾಧ್ಯ ಎನಿಸುವಂತೆ ಇತ್ತು. ನೀವು ಬೆಳಗಾವಿ ರಾಮಕೃಷ್ಣ ಆಶ್ರಮಕ್ಕೆ ನೆರವಾದಿರಿ ಎಂದು ಹೇಳುತ್ತಾ ಡಿ ಆರ್ ಪಾಟೀಲ್ ರವರು ಬೆಳಗಾವಿಯಲ್ಲಿ ರಾಮಕೃಷ್ಣ ಆಶ್ರಮ ವನ್ನು ಸ್ಥಾಪಿಸಲು ನೀಡಿದ ಹೃತ್ಪೂರ್ವಕ ಕೊಡುಗೆಯನ್ನು ಸ್ಮರಿಸಿಕೊಂಡರು, ಅವರನ್ನು ಹೃದಯ ತುಂಬಿ ಆಶೀರ್ವದಿಸಿದರು .ಈ ಸಂದರ್ಭದಲ್ಲಿ ಪಾಟೀಲರಂತೂ ಧನ್ಯತಾಭಾವದ ಪ್ರವಾಹದಲ್ಲಿ ಕೊಚ್ಚಿ ಹೋದರು.
ಅವರ ದಿವ್ಯ ಪ್ರಭಾವದಲ್ಲಿ ಇದ್ದ ಇತರೆ ಸಾಧುಗಳು ಮತ್ತು ನಾವೆಲ್ಲರೂ ಆಶ್ಚರ್ಯಚಕಿತರಾಗಿ ಅವರಿಬ್ಬರ ಸಂಭಾಷಣೆಯನ್ನು ನೋಡುತ್ತಿದ್ದೆವು. ಅವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದ ಸಾವಿರಕ್ಕೂ ಹೆಚ್ಚು ಭಕ್ತರನ್ನು ನಾವು ಇನ್ನೂ ಹೆಚ್ಚು ಕಾಯಿಸುವುದು ಸರಿ ಹೋಗುವುದಿಲ್ಲ ಎಂದು ಭಾವಿಸಿ, ತಕ್ಷಣ ಅಲ್ಲಿಂದ ಹೊರಟೆವು.
ಸ್ಮರಣಾನಂದಜಿ ಅವರು ಮಹಾಸಮಾಧಿ ಹೊಂದಿದರು. ಈ ಸುದ್ದಿ ತಿಳಿದ ನಂತರ ಈ ಘಟನೆ ನನ್ನ ಸ್ಮೃತಿಪಟಲದಲ್ಲಿ ಮಿಂಚಿನಂತೆ ಹರಿದಾಡಿತು. ನಾನು ಸಂಗ್ರಹಿಸಿಟ್ಟು ಕೊಂಡಿರುವ ಪೂಜ್ಯರ ಆಶೀರ್ವಾದ ಪೂರ್ವಕ ಚಾಕ್ಲೇಟ್ ಗಳು ಮತ್ತು ಮೇಲೆ ಉಲ್ಲೇಖಿತವಾದ ಘಟನೆ ಸ್ಮರಣೆಗೆ ಬಂದಿತು. ಆದರ್ಶಪ್ರಾಯವಾದ ಆಧ್ಯಾತ್ಮಿಕ ಜೀವನವನ್ನು ನಡೆಸಿ ರಾಮಕೃಷ್ಣ ರಲ್ಲಿ ಲೀನರಾದ ಪರಮಾದ್ಭುತ ಸ್ಮರಣ ಶಕ್ತಿಯ ಸ್ವಾಮಿ ಸ್ಮರಣಾಜಿನಂದಜಿ ಯವರಿಗೆ ಸಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ ಈ ನೆನಪಿನ ಬುತ್ತಿಯನ್ನು ಓದುಗರಿಗೆ ಧನ್ಯತಾಭಾವದಿಂದ ಉಣ ಬಡಿಸುವೆ ಎಂದು ಬ್ರಹ್ಮಚಾರಿ ಅದ್ವೈತ ಚೈತನ್ಯ ನೆನಪು ಮಾಡಿಕೊಂಡಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ