Victoria Gowri: ವಕೀಲರ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್.. ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ ಸ್ವೀಕಾರ
ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶೆಯನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ವಕೀಲರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇತ್ತ ವಿಕ್ಟೋರಿಯಾ ಗೌರಿ ಅವರು ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನವದೆಹಲಿ: ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶೆಯನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ವಕೀಲರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇತ್ತ ವಿಕ್ಟೋರಿಯಾ ಗೌರಿ ಅವರು ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಹಾಗೂ ಭೂಷಣ್ ರಾಮಕೃಷ್ಣ ಗವಾಯಿ ಅವರ ನ್ಯಾಯಪೀಠವು, ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯವು ಗೌರಿಯ ಅರ್ಹತೆ ಮತ್ತು ಸೂಕ್ತತೆಗೆ ಸಂಬಂಧಿಸಿದೆ. ಇವೆರೆಡರ ನಡುವೆ ವ್ಯತ್ಯಾಸವಿದೆ. ನಾವು ಅರ್ಹತೆಯ ವಿಚಾರವಾಗಿ ಮಾತ್ರ ಕೆಲಸ ಮಾಡಬಹುದು. ಹೀಗಾಗಿ ನಾವು ರಿಟ್ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ ಎಂದು ತಿಳಿಸಿದೆ.
ನಾನೂ ಕೂಡ ರಾಜಕೀಯ ಹಿನ್ನೆಲೆಯುಳ್ಳವನು. ಇದು ನನ್ನ ಕರ್ತವ್ಯಕ್ಕೆ ಎಂದಿಗೂ ಅಡ್ಡಿಯಾಗಿಲ್ಲ ಎಂದು ನ್ಯಾ. ಗವಾಯಿ ಹೇಳಿದರು. ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ರಾಜು ರಾಮಚಂದ್ರನ್, "ರಾಜಕೀಯ ಹಿನ್ನೆಲೆ ಪ್ರಶ್ನೆಯೇ ಅಲ್ಲ. ಇದು ದ್ವೇಷದ ಭಾಷಣ. ಇದು ಸಂವಿಧಾನಕ್ಕೆ ಸಂಪೂರ್ಣವಾಗಿ ವಿರುದ್ಧವಾದ ದ್ವೇಷದ ಭಾಷಣ. ಅದು ಆಕೆಯನ್ನು ಪ್ರಮಾಣ ವಚನ ಸ್ವೀಕರಿಸಲು ಅನರ್ಹಗೊಳಿಸುತ್ತದೆ. ಅದು ಕೇವಲ ಕಾಗದದ ಪ್ರಮಾಣವಾಗಿರುತ್ತದೆ" ಎಂದು ವಾದಿಸಿದರು. ಆದರೆ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.
ವಕೀಲೆ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಕೊಲಿಜಿಯಂ ಶಿಫಾರಸಿನ ವಿರುದ್ಧ ಚೆನ್ನೈನ ವಕೀಲರ ಗುಂಪು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ಹಿಂದೆ ಅಲ್ಪಸಂಖ್ಯಾತರ ವಿರುದ್ಧ ಗೌರಿ ನೀಡಿದ ಹೇಳಿಕೆಗಳ ಕಾರಣದಿಂದ ಇವರಿಗೆ ಬಡ್ತಿ ನೀಡಿರುವುದನ್ನು ವಕೀಲರ ಗುಂಪು ವಿರೋಧಿಸಿದೆ. ಈ ರೀತಿ ಹೇಳಿಕೆ ನೀಡಿದ ಇವರನ್ನು ನ್ಯಾಯಾಧೀಶರಾಗಿ ನೇಮಕ ಮಾಡುವುದು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹದಗೆಡಿಸಬಹುದು ಎನ್ನುವ ಆತಂಕವನ್ನು ವಕೀಲರ ಗುಂಪು ವ್ಯಕ್ತಪಡಿಸಿತ್ತು.
ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆಎಂ ಜೋಸೆಫ್ ಅವರನ್ನೊಳಗೊಂಡ ಕೊಲಿಜಿಯಂ ಜನವರಿ 17 ರಂದು ಗೌರಿ ಮತ್ತು ಇತರ ನಾಲ್ವರು ವಕೀಲರ ಹೆಸರನ್ನು ಹೈಕೋರ್ಟ್ ನ್ಯಾಯಾಮೂರ್ತಿಗಳಾಗಿ ಅಂತಿಮಗೊಳಿಸಿತ್ತು. "ಭಾರತದ ಸಂವಿಧಾನದ ಸಂಬಂಧಪಟ್ಟ ನಿಬಂಧನೆಗಳ ಪ್ರಕಾರ ವಕೀಲರು, ನ್ಯಾಯಾಂಗದ ಅಧಿಕಾರಿಗಳನ್ನು ಅಲಹಾಬಾದ್ ಹೈಕೋರ್ಟ್, ಕರ್ನಾಟಕ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. ಅವರೆಲ್ಲರಿಗೂ ನನ್ನ ಶುಭಾಶಯಗಳು" ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದರು.
ಮದ್ರಾಸ್ ಹೈಕೋರ್ಟ್ (ಎಚ್‌ಸಿ) ಬಾರ್ ಕೌನ್ಸಿಲ್ ಸದಸ್ಯರು ಕೊಲಿಜಿಯಂನ ಶಿಫಾರಸನ್ನು ವಿರೋಧಿಸಿದ್ದರು. ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ಆ ಪತ್ರದಲ್ಲಿ "ಗೌರಿ ಅವರ ನೇಮಕವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಹಾಳು ಮಾಡುತ್ತದೆʼʼ ಎಂದು ಉಲ್ಲೇಖಿಸಿದ್ದರು. ಗೌರಿ ಅವರು ಈ ಹಿಂದೆ ಅಲ್ಪಾ ಸಂಖ್ಯಾಕರ ಕುರಿತು ನೀಡಿದ ತಮ್ಮ ಹೇಳಿಕೆಯನ್ನು ತಮ್ಮೆರಡು ಸಂದರ್ಶನಗಳಲ್ಲಿಯೂ ಸಮರ್ಥಿಸಿಕೊಂಡಿದ್ದಾರೆ.