ಜಾರ್ಜ್ ಫರ್ನಾಂಡೀಸ್ ಎಂಬ ಹೆಜ್ಜಾಲದ ನೆರಳಿನಲ್ಲಿ ಮರೆಯಾದ ಧರ್ಮನಿರಪೇಕ್ಷ, ವೈಚಾರಿಕ ಹೆಣ್ಣು ಲೈಲಾ ಕಬೀರ್
ಲೈಲಾ ಕಬೀರ್ ನಿಧನ: ಪ್ರಖರ ಸಮಾಜವಾದಿ ಚಿಂತಕ ಮತ್ತು ಮಾಜಿ ರಕ್ಷಣಾ ಸಚಿವ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಪತ್ನಿ ಲೈಲಾ ಕಬೀರ್ ಈಚೆಗೆ ನಿಧನರಾದರು. ಜಾರ್ಜ್ ಫರ್ನಾಂಡೀಸ್ ಎಂಬ ಹೆಜ್ಜಾಲದ ನೆರಳಲ್ಲಿ ಮರೆಯಾದ ಧರ್ಮ ನಿರಪೇಕ್ಷ ಮನಸ್ಸಿನ ವೈಚಾರಿಕ ಪ್ರಜ್ಞೆ ದಟ್ಟವಾಗಿದ್ದ ಹೆಣ್ಣುಮಗಳಿಗೆ ಈ ಬರಹದ ಮೂಲಕ ನುಡಿನಮನ ಸಲ್ಲಿಸಿದ್ದಾರೆ ಹಿರಿಯ ಪತ್ರಕರ್ತ ಮುರಳೀಧರ ಖಜಾನೆ.

ಲೈಲಾ ಕಬೀರ್ ನಿಧನ: ಕಳೆದ ಗುರುವಾರ (ಮೇ 15) ಶಾಶ್ವತವಾಗಿ ಕಣ್ಣು ಮುಚ್ಚಿದ ಲೈಲಾ, ಜಾರ್ಜ್ ಫರ್ನಾಂಡಿಸ್ ಅವರ Alter Ego (ಪರ್ಯಾಯ ವ್ಯಕ್ತಿತ್ವ) ಆಗಿದ್ದರು. ಜಾರ್ಜ್ ಅವರ ನಿರ್ಧಾರಗಳನ್ನು, ತಿಳುವಳಿಕೆಯನ್ನು ಪ್ರಶ್ನಿಸುವ ಮಟ್ಟಿಗಿನ ಸೈದ್ಧಾಂತಿಕ ತಿಳುವಳಿಕೆ ಬದ್ಧತೆ ಲೈಲಾಗೆ ಇತ್ತು. ಆದರೆ ಆಕೆ ಜಾರ್ಜ್ ಫರ್ನಾಂಡೀಸ್ ಎಂಬ ಹೆಜ್ಜಾಲದ ನೆರಳಲ್ಲಿ ಮರೆಯಾದ ಧರ್ಮ ನಿರಪೇಕ್ಷ ಮನಸ್ಸಿನ ವೈಚಾರಿಕ ಪ್ರಜ್ಞೆ ದಟ್ಟವಾಗಿದ್ದ ಹೆಣ್ಣು ಮಗಳು. ಇಂಥ ಹೆಣ್ಣುಮಗಳ ನೆನಪಿನಲ್ಲಿ ಈ ಬರಹ.
ಕಳೆದ ಗುರುವಾರ ಲೈಲಾ ಕಬೀರ್ ತೀರಿಕೊಂಡರಂತೆ. ಬಹಳ ಕಾಲ ತಮ್ಮನ್ನ ಕಾಡಿದ ಕ್ಯಾನ್ಸರ್ ರೋಗದೊಂದಿಗೆ ಸೆಣೆಸಾಡಿ ತಮ್ಮ 88ನೇ ವಯಸ್ಸಿನಲ್ಲಿ ಆಕೆ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು. ಜೀವನದುದ್ದಕ್ಕೂ ಹೋರಾಟದಲ್ಲೇ ಕಳೆದ ಲೈಲಾ ಕಬೀರ್ ಆತ್ಮ ಅವರ ಸಾವಿನ ನಂತರ ಈಗ ಶಾಂತವಾಗಿರಬಹುದು ಎಂಬುದೊಂದು ನಂಬಿಕೆ ಅಷ್ಟೆ. ಆದರೆ ಅದೂ ಸ್ಪಷ್ಟವಿಲ್ಲ.
ಲೈಲಾ ಕಬೀರ್ ಅವರಂಥವರ ಸಾವು ಇಂದು ಮಾಧ್ಯಮಗಳಿಗೆ ಸುದ್ದಿಯಾಗುವ ಸಾಧ್ಯತೆ ತೀರಾ ಕಡಿಮೆ. ಅಂಥದ್ದರಲ್ಲಿ ಕೆಲವು ಪತ್ರಿಕೆಗಳು ಆಕೆಯ ಸಾವನ್ನು ಕುರಿತು ಬರೆದಿದ್ದು, ಸಹಜವಾಗಿಯೇ ಆಶ್ಚರ್ಯ ಹುಟ್ಟಿಸಿತು. ಏಕೆಂದರೆ ಎಷ್ಟೇ ದೊಡ್ಡ ಧರ್ಮ ನಿರಪೇಕ್ಷ ವ್ಯಕ್ತಿತ್ವದವರಾಗಿದ್ದರೂ, ಅಷ್ಟೇ ವೈಚಾರಿಕ ನಿಲುವನ್ನು ತಮ್ಮ ಜೀವನದುದ್ದಕ್ಕೂ ಪ್ರದರ್ಶಿಸಿದರೂ, ಜಾರ್ಜ್ ಫರ್ನಾಂಡೀಸ್ ಎಂಬ ಆಲದ ಮರದ ನೆರಳಿನಡಿಯಲ್ಲೇ ಇದ್ದ ಲೈಲಾ ಕೊನಗೂ ಅವರ ಪತ್ನಿಯಾಗಿದ್ದರು ಎನ್ನುವ ಕಾರಣಕ್ಕೆ ಸುದ್ದಿಯಾದರೂ ಎಂದು ಅನ್ನಿಸುತ್ತದೆ. ಆದರೆ ಒಂದಂತೂ ನಿಜ ಲೈಲಾ, ಜಾರ್ಜ್ ಅವರ Alter Ego (ಪರ್ಯಾಯ ವ್ಯಕ್ತಿತ್ವ) ಆಗಿದ್ದರು. ಜಾರ್ಜ್ ಅವರ ನಿರ್ಧಾರಗಳನ್ನು, ತಿಳುವಳಿಕೆಯನ್ನು ಪ್ರಶ್ನಿಸುವ ಮಟ್ಟಿಗಿನ ಸೈದ್ಧಾಂತಿಕ ತಿಳುವಳಿಕೆ ಬದ್ಧತೆ ಲೈಲಾಗೆ ಇತ್ತು.
ಸೈದ್ಧಾಂತಿಕ ಭಿನ್ನಾಭಿಪ್ರಾಯ
ಲೈಲಾ ಕಬೀರ್ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿರಲಿಕ್ಕಿಲ್ಲ. ಸೈದ್ಧಾಂತಿಕ ಕಾರಣಕ್ಕಾಗಿ ಒಂದು ಕಾಲದ ಕ್ರಾಂತಿಕಾರಕ ಮನೋಭಾವದ ಸಮಾಜವಾದಿ, ಕಾರ್ಮಿಕ ನಾಯಕ, ಬರೋಡಾ ಡೈನಾಮೈಟ್ ಹಗರಣದ (ಈ ಪ್ರಕರಣ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರಾದ ಜಾರ್ಜ್ ಫರ್ನಾಂಡೀಸ್ ಮತ್ತು ಇತರ 24 ಮಂದಿಯ ವಿರುದ್ಧ ಹೂಡಿದ್ದ ಕ್ರಿಮಿನಲ್ ಪ್ರಕರಣ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಸರ್ಕಾರಿ ಸಂಸ್ಥೆಗಳು ಮತ್ತು ರೈಲ್ವೆ ಹಳಿಗಳನ್ನು ಸ್ಫೋಟಿಸಲು ಡೈನಾಮೈಟ್ ಕಳ್ಳಸಾಗಣೆ ಮಾಡಿದ ಆರೋಪವನ್ನು ಸಿಬಿಐ ಜಾರ್ಜ್ ಮತ್ತು ಇತರರ ಮೇಲೆ ಹೊರಿಸಿತ್ತು. ಈ ಆರೋಪಿಗಳನ್ನು 1976ರಲ್ಲಿ ಬಂಧಿಸಿ ತಿಹಾರ್ ಜೈಲಿನಲ್ಲಿ ಇಡಲಾಗಿತ್ತು) ಅರೋಪಿಯೆಂದು ಎಪ್ಪತ್ತರ ದಶಕದಲ್ಲಿ ಕ್ರಾಂತಿಕಾರಿಗಳಿಗೊಂದು ದಂತಕತೆಯಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರನ್ನು ವಿರೋಧಿಸಿದವರು ಜಾರ್ಜ್ ಅವರ ʻಧರ್ಮʼ ಪತ್ನಿಯಾದ ಲೈಲಾ ಕಬೀರ್.
'ಜಾರ್ಜ್ ಫರ್ನಾಂಡೀಸ್ ಅವರ ಬದುಕು ಮತ್ತು ಕಾಲʼ ಎಂಬ ಜಾರ್ಜ್ ಜೀವನ ಚರಿತ್ರೆಯನ್ನು ಬರೆದಿರುವ ರಾಹುಲ್ ರಾಮಗುಂಡಂ ಅವರು ಜಾರ್ಜ್ ಮತ್ತು ಲೈಲಾ ಅವರ ಮದುವೆಯನ್ನು ನೆನಪಿಸಿಕೊಂಡಿರುವುದು ಹೀಗೆ; ಜುಲೈ 22, 1971 ಬೆಳಿಗ್ಗೆ ಮುಂದೆ ಬಾಂಗ್ಲಾ ದೇಶದ ರಾಷ್ಟ್ರಗೀತೆಯಾದ ರವೀಂದ್ರನಾಥ ಟ್ಯಾಗೋರ್‌ರ ʻಅಮರ್ ಸೋನಾರ್ ಬಾಂಗ್ಲಾʼ ಗೀತೆಯೊಂದಿಗೆ ಜಾರ್ಜ್ ಮತ್ತು ಲೈಲಾ ಪತಿ-ಪತ್ನಿಯರೆಂದು ಸೇರಿದ ಬಹುಮಂದಿ ಒಪ್ಪಿ ಘೋಷಿಸಿದರು. ಅಂದು ಸಂಜೆ ನಡೆದ ಆರತಕ್ಷತೆ ಎನ್ನಬಹುದಾದ ಕಾರ್ಯಕ್ರಮದಲ್ಲಿ ತೀರಾ ಹತ್ತಿರದವರು ಬಂದಿದ್ದರು. ಆದರೆ ತಮ್ಮ ಅನಾರೋಗ್ಯದ ಕಾರಣ ಬರಲಾಗದ ಮೈನ್ ಸ್ಟ್ರೀಮ್ ಪತ್ರಿಕೆಯ ಸಂಪಾದಕ ನಿಖಿಲ್ ಚಕ್ರವರ್ತಿ ಅವರು ಫಯಾಜ್ ಅಹ್ಮದ್ ಫಯಾಜ್ ಅವರ ಪದ್ಯದ ಪುಸ್ತಕವೊಂದನ್ನು ಉಡುಗೊರೆಯಾಗಿ ಕಳುಹಿಸಿದ್ದರು. “ಇದು ಕೇವಲ ಒಂದು ಹೆಣ್ಣು-ಗಂಡಿನ ಸಂಬಂಧವಲ್ಲ. ಭವಿಷ್ಯದ ಭಾರತದ ದಿಕ್ಕು ಬದಲಿಸುವ ಚಿಂತನೆಗೆ ಜೊತೆಯಾದ ಜೋಡಿ” ಎಂದು ಲೈಲಾ ಭಾವಿಸಿದ್ದರಂತೆ.
ʻಪ್ರತಿಪಕ್ಷʼ ಪತ್ರಿಕೆಯ ಪ್ರಕಾಶಕಿ
ಈ ಲೈಲಾ ಕಬೀರ್ ಮುಸ್ಲಿಮ್ ಧರ್ಮಕ್ಕೆ ಸೇರಿದ ತಂದೆ; ಹುಮಾಯೂನ್ ಕಬೀರ್ ಹಿಂದೂ ಧರ್ಮಕ್ಕೆ ಸೇರಿದ ಶಾಂತಾದೇವಿ ಅವರ ಮಗಳು. ಶಾಂತಾದೇವಿ ರವೀಂದ್ರನಾಥ ಟ್ಯಾಗೋರ್ ಅವರ ಅನುಯಾಯಿ. ಲೈಲಾ ಬ್ರಿಟಿಷ್ ಆಡಳಿತದಲ್ಲಿ ಸ್ವದೇಶಿ ಚಳವಳಿಯ ನೇತಾರರಾಗಿದ್ದ ಬಿಪಿನ್ ಚಂದ್ರ ಪಾಲ್ ಕುಟುಂಬಕ್ಕೂ ಸೇರಿದವರು. ಹುಮಾಯೂನ್ ಕಬೀರ್ ಅವರು ನೆಹರೂ ಸರ್ಕಾರದಲ್ಲಿ ಶಿಕ್ಷಣ ಕಾರ್ಯದರ್ಶಿಯಾಗಿದ್ದು ನಂತರ ಶಿಕ್ಷಣ ಸಚಿವರಾಗಿ, ಲೇಖಕರಾಗಿದ್ದವರು. ಚಿಕ್ಕವಳಿದ್ದಾಗಿನಿಂದಲೇ, ಸದಾ ಸಮಾಜ ಸೇವೆಯಲ್ಲಿ ತೊಡಗಿರುತ್ತಿದ್ದ ತಂದೆ ತಾಯಿಯ ಬೆಚ್ಚಗಿನ ಪ್ರೀತಿಯಿಂದ ವಂಚಿತರಾಗಿಯೇ ಬೆಳೆದವರು.
ಹೀಗೆ ಸಮಾಜ ಸೇವೆಯ ವಾತಾವರಣದಲ್ಲಿ ಬೆಳೆದ ಲೈಲಾ ಆಕ್ಸ್‌ಫರ್ಡ್‌ನಲ್ಲಿ ನರ್ಸಿಂಗ್ ಕಲಿತು ದೆಹಲಿಯ ನರ್ಸಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದವರು. ಜೊತೆಯಲ್ಲಿ ರೆಡ್ ಕ್ರಾಸ್ ಸೇರಿ, ಬಾಂಗ್ಲಾದಿಂದ ಬರುತಿದ್ದ ವಲಸಿಗರಿಗೆ ಶುಶ್ರೂಷೆ ಮಾಡುತ್ತಿದ್ದರು. ಮದುವೆಯ ನಂತರ ಸಾಂಸಾರಿಕ ಒತ್ತಡದಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಲು ಲೈಲಾ ನಿರ್ಧರಿಸಿದಾಗ, ಆಕೆಯನ್ನು ಸಕ್ರಿಯವಾಗಿಸಲು ಜಾರ್ಜ್ ಅವರು ಆಗಷ್ಟೇ ಆರಂಭವಾಗಿದ್ದ ʻಪ್ರತಿಪಕ್ಷʼ ಪತ್ರಿಕೆಯ ಪ್ರಕಟಣಾ ಹೊಣೆಯನ್ನು ಹೊರಿಸಿದರು.
ಮದುವೆಯಾದ ಮೊದಲ ಹತ್ತು ವರ್ಷದಲ್ಲಿ ಲೈಲಾ ಕಂಡಿದ್ದು ಜಾರ್ಜ್ ಅವರ ಬಿರುಸಿನ ರಾಜಕಾರಣದ ಮುಖ. ಅದು ಜಾರ್ಜ್‌ರ ಬಂಡಾಯದ ಬದುಕಿನ ಅಧ್ಯಾಯ. ಇದರ ಕಾವು ತಟ್ಟಿದ್ದು ಹೆಚ್ಚಾಗಿ ಲೈಲಾಗೆ. ತುರ್ತು ಪರಿಸ್ಥಿತಿಯಲ್ಲಿ ಜಾರ್ಜ್ ಭೂಗತ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಹಜವಾಗಿಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪೋಲೀಸರ ಹದ್ದಿನ ಕಂಗಳಿಂದ ಉಳಿದುಕೊಳ್ಳುವುದರ ಜೊತೆಗೆ ಒಂದೂವರೆ ವರ್ಷದ ಕಂದಮ್ಮನನ್ನು ಕಾಪಾಡುವ ಹೊಣೆಯೂ ಲೈಲಾ ಮೇಲೆ ಬಿತ್ತು.
ಲೈಲಾಗೆ ಇಂದಿರಾ ಗಾಂಧಿ ಬರೆದ ಪತ್ರ
ಲೈಲಾ ಅವರಿಗೆ ತಂದೆಯ ಕಾರಣದಿಂದ ಜವಾಹರ್‌ಲಾಲ್ ನೆಹರೂ ಕುಟುಂಬದೊಂದಿಗೆ ಒಳ್ಳೆಯ ಸಂಬಂಧ ಇತ್ತು. ಇಂದಿರಾ ಗಾಂಧಿಯನ್ನು ʻಇಂದುʼ ಎಂದು ಕರೆಯುವಷ್ಟು ಸದರವಿತ್ತು. ಲೈಲಾ ಅವರನ್ನು ಜಾರ್ಜ್ ಮದುವೆಯಾಗುವ ಸುದ್ದಿ ಕೇಳಿದ ಇಂದಿರಾ, ಲೈಲಾಗೆ ಪತ್ರವೊಂದನ್ನು ಬರೆದಿದ್ದರಂತೆ. ‘ನೀನೇನು ಮಾಡುತ್ತಿದ್ದೀಯ ಎಂಬುದು ನಿನಗೆ ಅರಿವಿದೆ ಎಂದು ಭಾವಿಸಿದ್ದೇನೆ’. ಪತ್ತದಲ್ಲಿದ್ದ ಈ ಅರ್ಥಪೂರ್ಣವಾದ ಸಾಲುಗಳು ಇವು. ಏಕೆಂದರೆ 1974ರ ಐತಿಹಾಸಿಕ ರೈಲ್ವೆ ಕಾರ್ಮಿಕ ಚಳವಳಿಯ ನೇತೃತ್ವ ವಹಿಸಿ, ದೇಶದಾದ್ಯಂತ ರೈಲುಗಳು ನಿಲ್ಲುವಂತೆ ಮಾಡಿದ ಕಾರಣ, ಇಂದಿರಾ ಗಾಂಧಿಗೆ ಜಾರ್ಜ್ ಫೋಬಿಯಾ ಇತ್ತೆಂದು ಲೈಲಾಗೆ ಆಗಲೇ ಅರಿವಾಗಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಡೈನಾಮೈಟ್ ಹಗರಣ ಸುತ್ತಿಕೊಂಡಿದ್ದ ಕಾರಣ, ಜಾರ್ಜ್ ಪೋಲಿಸರ ಕೈಗೆ ಸಿಕ್ಕಿಕೊಂಡರೆ ಅವರನ್ನು ಎನ್‌ಕೌಂಟರ್ ಮಾಡುವಂಥ ಪರಿಸ್ಥಿತಿಯೂ ಇತ್ತೆಂದು, ಬಂಧನಕ್ಕೊಳಗಾದರೆ ತುರಂಗವಾಸ ಖಚಿತ ಎಂಬುದು ಲೈಲಾಗೆ ಮನವರಿಕೆಯಾಗಿತ್ತು. ಅಷ್ಟೇ ಅಲ್ಲ. ಜಾರ್ಜ್ ಕೈಗೆ ಸಿಕ್ಕದಿದ್ದರೆ, ಸಿಬಿಐ ಲೈಲಾ ಅವರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿತ್ತು. ಲೈಲಾ ಮನೆಯ ಸುತ್ತ ಪೋಲಿಸರು ಕೋಟೆಕಟ್ಟಿ ಕಾಯುತ್ತಿದ್ದರು.
ವಿದೇಶಿ ಸಮಾಜವಾದಿಗಳ ನೆರವು
ಆಗ ಲೈಲಾಗೆ ತಮ್ಮ ಪತಿಯ ತಂತ್ರವನ್ನು ಅನುಸರಿಸುವುದು ಅನಿವಾರ್ಯವಾಯಿತು. ಮನೆಯ ಹಿಂದಿನ ಓಣಿಯಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂಕಳಲ್ಲಿ ಇಟ್ಟುಕೊಂಡು ಓಡುತ್ತಾ, ದೆಹಲಿ ವಿಮಾನ ನಿಲ್ದಾಣ ತಲುಪಿದರು. ಆ ಸಂದರ್ಭದಲ್ಲಿ ಅವರ ನೆರವಿಗೆ ಬಂದವರು, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿಯ ಸಮಾಜವಾದಿಗಳು. ಆಗ ಲೈಲಾ ಬಳಿ ಇದ್ದದ್ದು, ಕೇವಲ ನೂರು ಡಾಲರ್ ಹಣ ಮಾತ್ರ. ಅಷ್ಟನ್ನು ಕೈಯಲ್ಲಿಟ್ಟುಕೊಂಡು, ಲುಫ್ತಾನ್ಸಾ ವಿಮಾನದಲ್ಲಿ ದೆಹಲಿಯಿಂದ ಲೈಲಾ ಕೆನಡಾಕ್ಕೆ ಹಾರಿದರು. ಆಗ ಲೈಲಾಗೆ ಕೆಂಡದಂಥ ಸುಡುವ ಜ್ವರ. ಅಂತಹ ಸಂದರ್ಭದಲ್ಲಿ ಅವರು ಕೆನಡಾ ತಲುಪಿದರು. ಅಲ್ಲಿಂದ ಅಮೆರಿಕಾದಲ್ಲಿರುವ ತಮ್ಮ ತಮ್ಮನ ಮನೆಗೆ ಸೇರಿಕೊಂಡು, ತಮ್ಮನ್ನು ಮತ್ತು ತಮ್ಮ ಮಗುವನ್ನು ಕಾಪಾಡಿಕೊಂಡರು. ನಿಧಾನವಾಗಿ ಲೈಲಾ ಕಾಲುಕಿತ್ತದ್ದು ಗಮನಕ್ಕೆ ಬಂದ ಇಂದಿರಾ ಸರ್ಕಾರ ಲೈಲಾ ಅವರ ಪಾಸ್‌ಪೋರ್ಟ್ ಅನ್ನು ರದ್ದು ಮಾಡಿತು. ಅಮೆರಿಕಾ ರಕ್ಷಣೆ ನೀಡಿತು. ಅಮೆರಿಕಾದಲ್ಲಿದ್ದುಕೊಂಡು, ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಲೈಲಾ ವಿಶ್ವದ ಗಮನಕ್ಕೆ ತಂದುದೇ ಅಲ್ಲದೆ, ವಿಶ್ವಸಂಸ್ಥೆಯಲ್ಲಿಯೂ ಪ್ರಸ್ತಾಪವಾಗುವಂತೆ ಮಾಡಿದರು. ಈ ಪ್ರಕ್ರಿಯೆಯಲ್ಲಿ ಅವರ ನೆರವಿಗೆ ನಿಂತವರು, ಫ್ರಾನ್ಸ್ ನ ಫ್ರಾಂಕೋ ಮಿತರಾಂದ್, ಜರ್ಮನಿಯ ಛಾನ್ಸಲರ್ ವಿಲಿ ಬ್ರಾಂಡ್ ಹಾಗೂ ಆಸ್ಟ್ರೇಲಿಯಾದ ಬ್ರೂನೋ ಕ್ರಿಯಾಸ್ಕಿ.
ಮೊರಾರ್ಜಿ ಸರ್ಕಾರ ಪತನ ಸಹಿಸದ ಲೈಲಾ
ತುರ್ತು ಪರಿಸ್ಥಿತಿ ಕಳೆಯಿತು. ನಂತರ ನಡೆದ ಚುನಾವಣೆಯಲ್ಲಿ ಫರ್ನಾಂಡಿಸ್ ಮುಝಾಫರ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸಿಂಹಸ್ವಪ್ನವಾಗಿ ಕೊಕೋಕೋಲಾದಂಥ ಸಂಸ್ಥೆಗಳಲ್ಲಿ ನಡುಕ ಉಂಟುಮಾಡಿದರು. ಆದರೆ ಅವರು ಮೊರಾರ್ಜಿ ಸರ್ಕಾರ ಪತನಕ್ಕೆ ಕಾರಣವಾದದ್ದನ್ನು ಲೈಲಾ ಕ್ಷಮಿಸಲಿಲ್ಲ. “ಹಿಂದಿನ ದಿನ ಸಂಸತ್ ನಲ್ಲಿ ಮೊರಾರ್ಜಿ ಅವರನ್ನು ಸಮರ್ಥಿಸಿಕೊಂಡು ʻಘರ್ಜಿಸಿದʼ ಜಾರ್ಜ್ ರಾತ್ರೋರಾತ್ರಿ ಬದಲಾದದ್ದು ನನಗೆ ಆಶ್ಚರ್ಯವನ್ನುಂಟು ಮಾಡಿತು. ಅಂದಿನ ಇಡೀ ರಾತ್ರಿ ನಡೆದ ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ವಾಗ್ವಾದವನ್ನು ಇಂದು ನೆನಪಿಸಿಕೊಳ್ಳಲೂ ಬಯಸುವುದಿಲ್ಲ” ಎಂದು ಒಮ್ಮೆ ಲೈಲಾ ಹೇಳಿದ್ದು ನೆನಪಾಗುತ್ತದೆ.
ಹೀಗೆ ನಿಧಾನವಾಗಿ ಬೆಳೆದ ಅವರ ಭಿನ್ನಾಭಿಪ್ರಾಯದ ಬಿರುಕು ದಿನದಿಂದ ದಿನಕ್ಕೆ ಕಂದರವಾಯಿತು. 1984ರಿಂದ 2009ರವರೆಗೆ ಅವರು ಜಾರ್ಜ್‌ರಿಂದ ದೂರ ಉಳಿದರು. ಜಾರ್ಜ್ ಅವರಿಂದ ವಿವಾಹ ವಿಚ್ಛೇದನ ಬಯಸಿದರು. ಆದರೆ, ಜಾರ್ಜ್ ಒಪ್ಪಲಿಲ್ಲ. ಲೈಲಾ ವಿವಾಹ ವಿಚ್ಛೇದನದ ಪತ್ರ ಕಳುಹಿಸಿದಾಗ, ಅವರು ತೀರಿಕೊಂಡ ತಾಯಿಯ ಎರಡು ಬಂಗಾರದ ಬಳೆಗಳನ್ನು ಲೈಲಾಗೆ ಕಳುಹಿಸಿ, 'ಇದನ್ನು ಇಟ್ಟುಕೊಂಡು ನಾನು ಇನ್ನೇನು ಮಾಡಲಿʼ ಎಂದು ಪತ್ರ ಬರೆದರು. “ಹಾಗಾಗಿ ನಾನೂ ವಿಚ್ಛೇದನಕ್ಕೆ ಅವರನ್ನು ಒತ್ತಾಯಿಸಲಿಲ್ಲ. ಅವರನ್ನು ಅವರ ದಾರಿಯಲ್ಲಿ ನಡೆಯಲು ಬಿಟ್ಟು, ನನ್ನ ದಾರಿ ನಾನು ಹಿಡಿದೆ” ಎಂದು ಸಂದರ್ಶನವೊಂದರಲ್ಲಿ ಲೈಲಾ ಹೇಳಿದ್ದರು.
ಅಲಝೈಮರ್ ಮತ್ತೆ ಕೂಡಿಸಿದ ಬಂಧ
ಜಾರ್ಜ್‌ಗೆ ಅಲಝೈಮರ್ ಕಾಯಿಲೆಯಿದೆ ಎಂದು 2009ರಲ್ಲಿ ಗೊತ್ತಾದಾಗ, ಲೈಲಾ ಹಳೆಯದನ್ನೆಲ್ಲ ಮರೆತು ಹಿಂತಿರುಗಿ ಬಂದು ಜಾರ್ಜ್ ನೆರವಿಗೆ ನಿಂತರು. ಅಂದಿನಿಂದ 2019 ರಲ್ಲಿ ಜಾರ್ಜ್ ಇಹಲೋಕ ಯಾತ್ರೆ ಮುಗಿಸುವ ತನಕದ ದಿನಗಳ ಬಗ್ಗೆ ಲೈಲಾ ಹೇಳುವುದನ್ನು ಕೇಳಿದರೆ, ಮನುಷ್ಯತ್ವವಿರುವವರ ಕಣ್ಣಾಲಿಗಳಾಗಲಿ ಒದ್ದೆಯಾಗದಿರಲು ಸಾಧ್ಯವೇ ಇಲ. ಅಂಥ ಹೃದಯ ಹಿಂಡುವ ಸನ್ನಿವೇಶಗಳು ಅವು. ಎಲ್ಲ ಪ್ರಜ್ಞೆಗಳನ್ನು ಕಳೆದುಕೊಂಡು ಜೀವಂತ ತರಕಾರಿ ಸ್ಥಿತಿಯಲ್ಲಿದ್ದ, ಜಾರ್ಜ್ ಅವರನ್ನು ಚಿಕ್ಕ ಮಗುವಿನಂತೆ ಆರೈಕೆ ಮಾಡುವುದು, ನರ್ಸಿಂಗ್ ತರಬೇತಿ ಇದ್ದ ಲೈಲಾಗೆ ಮಾತ್ರ ಸಾಧ್ಯವೆಂದೆನ್ನಿಸುತ್ತದೆ.
ಜಾರ್ಜ್ ಅವರನ್ನು ಅವರ ಸರ್ಕಾರಿ ನಿವಾಸದಿಂದ ಕರೆತಂದು ತಾವು ಮತ್ತು ಜಾರ್ಜ್ ಆ ಕಾಲಕ್ಕೆ ಕಟ್ಟಿದ ಪಂಚಶೀಲ ಕಾಲೋನಿಯ ಮನೆಗೆ ಕರೆತಂದರು. ಕೊನೆಯ ಕ್ಷಣದವರೆಗೂ ಆರೈಕೆ ಮಾಡಿದರು. ಜಾರ್ಜ್ ನರಳುವುದನ್ನು ನೋಡಲು ಸಾಧ್ಯವಾಗದೆ ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಅಳವಡಿಸಿ ಆಗಾಗ ನೋಡುತ್ತಾ, ಮೌನವಾಗಿ ಬಿಕ್ಕಳಿಸುತ್ತಿದ್ದರು. “ನಾನು ನನ್ನ ಪಿಎಚ್‌ಡಿ ಗಾಗಿ ದೆಹಲಿಗೆ ಹೋದಾಗ ಮೊದಲ ಬಾರಿಗೆ ಲೈಲಾ ಅವರನ್ನು ಭೇಟಿಯಾದೆ. ಆಗ ಅವರು 26 ತುಘಲಕ್ ಕ್ರೆಸೆಂಟ್ ಮನೆಯಲ್ಲಿದ್ದರು. ಆಗವರು ಶ್ರೀಮತಿ ಫರ್ನಾಂಡೀಸ್ . ಆಗಾಗ ಅವರನ್ನು ಭೇಟಿಯಾಗುತ್ತಿದ್ದೆ. ಜಾರ್ಜ್ ಅಲಝೈಮರ್ ನಿಂದ ನರಳುತ್ತಿದ್ದಾಗ, ಲೈಲಾ ಮೇಡಂ ನೋಡಿಕೊಂಡ ರೀತಿಯನ್ನು ನಾನೆಂದೂ ಮರೆಯಲಾರೆ” ಎಂದು ಕಿಸಾನ್ ಸಂಘರ್ಷ ಸಮಿತಿಯ ಡಾ ಸುನಿಲಮ್ ನೆನಪಿಸಿಕೊಂಡರು.
ಜಾರ್ಜ್ ತೀರಿಕೊಂಡ ನಂತರ ಅವರಿಗೆ ಸಂಬಂಧಿಸಿದ ಕಾಗದ ಪತ್ರಗಳು, ಛಾಯಾಚಿತ್ರಗಳನ್ನು ತೀನ್ ಮೂರ್ತಿ ಭವನದ ರಾಜಕೀಯ ನಾಯಕರ ಭಂಡಾರಕ್ಕೆ ನೀಡಿದರು. ಜಾರ್ಜ್‌ಗೆ ಸೇರಿದ ಸಾವಿರಾರು ಪುಸ್ತಕಗಳನ್ನು ವಿಶ್ವವಿದ್ಯಾಲಯಗಳಿಗೆ ನೀಡಿದರೂ, ಒಂದಕ್ಕೂ ಹಕ್ಕು ಸ್ಥಾಪಿಸುವ ಪ್ರಯತ್ನ ಮಾಡಲಿಲ್ಲವೆಂಬುದು ಅವರ ಸಮೀಪವರ್ತಿಗಳು ಹೇಳುತ್ತಿರುವ ಮಾತು. ಜಾರ್ಜ್ ಅವರ ನೆರಳಿನಲ್ಲಿ ತಮ್ಮ ಪುತ್ರನನ್ನು ರಾಜಕೀಯಕ್ಕೆ ತರಲು ಬಯಸಲಿಲ್ಲ. ಅದು ಜಾರ್ಜ್ ಅವರಿಗೂ ಇಷ್ಟವಿರಲಿಲ್ಲ. ಈ ಇಬ್ಬರ ಒಬ್ಬನೇ ಮಗ ಸೀನ್ ಫರ್ನಾಂಡೀಸ್ ಇಂದು ಇನ್ವೆಸ್ಟ್‌ಮೆಂಟ್ ಬ್ಯಾಂಕರ್. ತಾಯಿ ಲೈಲಾ ತೀರಿಕೊಂಡಾಗ ಸೀನ್ ಪಕ್ಕದಲ್ಲೇ ಇದ್ದರು.
ಲೈಲಾ ಕಬೀರ್ ಕೊನೆಯ ದಿನಗಳು
ಕೊನೆಯ ದಿನಗಳಲ್ಲಿ ಲೈಲಾ ಯಾರನ್ನೂ ನೋಡಲು ಬಯಸುತ್ತಿರಲಿಲ್ಲ. ಅವರನ್ನು ಕಾಡುತ್ತಿದ್ದ ಕ್ಯಾನ್ಸರ್ ಉಲ್ಬಣವಾಗಿತ್ತು. ಯಾರ ಅನುಕಂಪವೂ ಅವರಿಗೆ ಬೇಡವಾಗಿತ್ತು. ಅವರು ಒಂಟಿಯಾಗಿರಲು ಬಯಸುತ್ತಿದ್ದರು. ದೂರವಾಣಿ ಕರೆಗಳನ್ನು ಕೂಡ ಸ್ವೀಕರಿಸುತ್ತಿರಲಿಲ್ಲ. ಕ್ಯಾನ್ಸರ್ ವಿರುದ್ಧ ನಿರಂತರವಾಗಿ ಸೆಣೆಸುತ್ತಲೇ ಇದ್ದರು. ತಮ್ಮ ಅಂತ್ಯ ಖಚಿತವೆಂದು ಗೊತ್ತಾದಾಗ, ತಮ್ಮ ಅಂತ್ಯಕ್ರಿಯೆ ಯಾವ ರೀತಿ ಆಗಬೇಕು ಎಂದು ಮೊದಲೇ ನಿರ್ಧರಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸಾವನ್ನು ಎದುರುಗೊಳ್ಳಲು ಅವರು ಸಜ್ಜಾದಾಗ ಅವರನ್ನು ಜವರಾಯ ಕರೆದೊಯ್ದ. ಲೈಲಾರಂಥ ಮಾನವೀಯ ಮನಸ್ಸನ್ನು ಮತ್ತಷ್ಟು ನರಳಿಸಲು ಜವರಾಯನಿಗೆ ಕೂಡ ಇಷ್ಟವಿರಲಿಲ್ಲ ಎನ್ನಬಹುದು.
ಲೈಲಾ ತೀರಿಕೊಂಡಾಗ, ಅನ್ನಿಸಿದ್ದು, ಜಾರ್ಜ್ ಜೊತೆಗೆ ಲೈಲಾ ಇದ್ದುದರಿಂದಲೇ ಜಾರ್ಜ್ –ನಾವೆಲ್ಲ ನೋಡಿದ ಜಾರ್ಜ್ ಆಗಲು ಸಾಧ್ಯವಾಯಿತು. ಲೈಲಾ ಬಗ್ಗೆ ಹಲವು ಸಮಾಜವಾದಿ ಗೆಳೆಯರಿಂದ ಕೇಳಿದ ಕಥೆಗಳು, ಉಪಕಥೆಗಳು, ಕೇಳಿದ ಆಧಾರದ ಮೇಲೆ ಲೈಲಾ ಅವರ ಅಕ್ಷರ ಚಿತ್ರವೊಂದನ್ನು ಬರೆಯಲು ಸಾಧ್ಯವಾಗಿದೆ ಎಂದಷ್ಟೇ ಈ ಬರಹಗಾರ ಇಲ್ಲಿ ಹೇಳಬಹುದು.
ಬರಹ: ಮುರಳೀಧರ ಖಜಾನೆ


