Rahul Gandhi: ಕಣಿವೆಯಲ್ಲಿ ಎಲ್ಲವೂ ಸರಿ ಇದೆ ಎಂದಾದರೆ ಅಮಿತ್ ಶಾ ಜಮ್ಮು ಟು ಶ್ರೀನಗರ ನಡೆದು ಬರಲಿ: ರಾಹುಲ್ ಸವಾಲ್!
ಜಮ್ಮು ಮತ್ತು ಕಾಶ್ಮೀರದ ಕಾನೂನು ಮತ್ತು ಸುವ್ಯವಸ್ಥೆ ಸರಿ ಇದೆ ಎನ್ನುವುದೇ ನಿಜವಾದರೆ, ಅಮಿತ್ ಶಾ ಅವರು ಜಮ್ಮುವಿನಿಂದ ಶ್ರೀನಗರದವರೆಗೆ ನಡೆದುಕೊಂಡು ಬರಲಿ ನೋಡೋಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಸೂಕ್ತ ಭಧ್ರತೆ ಕಲ್ಪಿಸುವಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ವಿಫಲರಾಗಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ ವೇಳೆ ಭದ್ರತಾ ಲೋಪವನ್ನು ಉಲ್ಲೇಖಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಜಮ್ಮು ಮತ್ತು ಕಾಶ್ಮೀರದ ಕಾನೂನು ಮತ್ತು ಸುವ್ಯವಸ್ಥೆ ಸರಿ ಇದೆ ಎನ್ನುವುದೇ ನಿಜವಾದರೆ, ಅಮಿತ್ ಶಾ ಅವರು ಜಮ್ಮುವಿನಿಂದ ಶ್ರೀನಗರದವರೆಗೆ ನಡೆದುಕೊಂಡು ಬರಲಿ ನೋಡೋಣ ಎಂದು ರಾಹುಲ್ ಗಾಂಧಿ ಇದೇ ವೇಳೆ ಸವಾಲು ಹಾಕಿದ್ದಾರೆ.
ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಬಿಹೆಪಿ ಹೇಳುತ್ತಿದೆ. ಅವರು ಹೇಳುತ್ತಿರುವುದು ನಿಜವೇ ಆದರೆ, ಅಮಿತ್ ಶಾ ಜಮ್ಮುವಿನಿಂದ ಶ್ರೀನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.
ಭಾರತ್ ಜೋಡೋ ಯಾತ್ರೆಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ ಎಂದು ನಾವು ಹೇಳಿದರೆ, ಬಿಜೆಪಿಯವರು ಅದನ್ನು ಆಧಾರರಹಿತ ಆರೋಪ ಎನ್ನುತ್ತಾರೆ. ಆದರೆ ಕಣಿವೆಯಲ್ಲಿ ಒಬ್ಬ ಬಿಜೆಪಿ ನಾಯಕನೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ಸಾಮಾನ್ಯ ಘಟನೆಯಾಗಿವೆ. ಜನರು ನಿತ್ಯವೂ ಭಯದಲ್ಲಿ ಕಾಲ ಜೀವನ ನಡೆಸುತ್ತಿದ್ದಾರೆ. ಕಣಿವೆ ಜನರ ನೈತಿಕ ಸ್ಥೈರ್ಯ ಹೆಚ್ಚಿಸಲು ಅಮಿತ್ ಶಾ ಅವರು ಜಮ್ಮುವಿನಿಂದ ಶ್ರೀನಗರದ ಲಾಲ್ ಚೌಕ್‌ವರೆಗೆ ಪಾದಯಾತ್ರೆ ನಡೆಸಲಿ ಎಂದು ರಾಹುಲ್ ಗಾಂಧಿ ಸವಾಲೆಸೆದರು.
ಭಾರತ್ ಜೋಡೋ ಯಾತ್ರೆಯ ಸಮಾರೋ ಸಮಾರಂಭ ನಡೆಯಲಿದೆ. ಕಾಂಗ್ರೆಸ್ ಸೇರಿದಂತೆ ಹಲವು ಸಮಾನ ಮನಸ್ಕ ರಾಜಕೀಯ ಪಕ್ಷಗಳ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ, ಈ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸುವ ನಿರೀಕ್ಷೆ ಇದೆ ಎಂದು ರಾಹುಲ್ ಗಾಂಧಿ ಇದೇ ವೇಳೆ ನುಡಿದರು.
"ರಾಹುಲ್ ಗಾಂಧಿ ಅವರು ಅನಿಯಂತ್ರಿತ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ" ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದರು.
"ಬನಿಹಾಲ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯಾತ್ರೆಗೆ ಸೇರುತ್ತಾರೆ ಎಂದು ಆಯೋಜಕರು ಪೊಲೀಸರಿಗೆ ಏಕೆ ತಿಳಿಸಲಿಲ್ಲ? ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ ಮತ್ತು ಕಾಶ್ಮೀರ ಪೊಲೀಸರು ಅದನ್ನು ಒತ್ತಿ ಹೇಳಿದ್ದಾರೆ" ಎಂದು ಗೌರವ್ ಭಾಟಿಯಾ ಕಿಡಿಕಾರಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪಡೆ ಕೂಡ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಕಣಿವೆಯ ಪೊಲೀಸ್ ಇಲಾಖೆ, ಬನಿಹಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂಬ ಮಾಹಿತಿಯನ್ನು ಆಯೋಜಕರು ನಮಗೆ ನೀಡಿರಲಿಲ್ಲ ಎಂದು ಹೇಳಿತ್ತು.
ಇನ್ನು ಭಾರತ್ ಜೋಡೋ ಯಾತ್ರೆಯನ್ನು ತಮ್ಮ ಜೀವನದ ಅತ್ಯಂತ ಸಿಹಿ ಅನುಭವ ಎಂದು ಕರೆದಿರುವ ರಾಹುಲ್ ಗಾಂಧಿ, ದೇಶದ ಜನರು ಸೌಹಾರ್ದಯುತವಾಗಿ ಬದುಕುವುದನ್ನು ಇಷ್ಟಪಡುತ್ತಾರೆ ಎಂಬ ಸತ್ಯವನ್ನು ನಾನು ಈ ಯಾತ್ರೆಯಿಂದ ತಿಳಿದುಕೊಂಡಿದ್ದೇನೆ ಎಂದು ಹೇಳಿದರು. ನಾನು ಹೋದಲೆಲ್ಲಾ ಜನರು ನನಗೆ ಪ್ರೀತಿಯನ್ನು ತೋರಿದರು. ಇದಕ್ಕಾಗಿ ನಾನು ಈ ದೇಶದ ಜನರಿಗೆ ಸದಾ ಆಭಾರಿಯಾಗಿರುತ್ತೇನೆ ಎಂದು ರಾಹುಲ್ ಗಾಂಧಿ ಭಾವುಕರಾಗಿ ನುಡಿದರು.
ಸಂಬಂಧಿತ ಲೇಖನ