ಲೋಕಸಭೆ ಚುನಾವಣೆ; ಅಲ್ಪಸಂಖ್ಯಾತರೇ ಹೆಚ್ಚಿರುವ ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿಯಿಂದ 4ನೇ ಬಾರಿ ಪಿಸಿ ಮೋಹನ್ ಕಣಕ್ಕೆ
ಅಲ್ಪಸಂಖ್ಯಾತರೇ ಹೆಚ್ಚಿರುವ ಬೆಂಗಳೂರು ಸೆಂಟ್ರಲ್ ನಲ್ಲಿ ಬಿಜೆಪಿ ಗೆಲುವು ಅಬಾಧಿತ ಎಂದು ಹೇಳಲಾಗುತ್ತಿದೆ. ಹೀಗಾಗಿ ನಾಲ್ಕನೇ ಬಾರಿಗೆ ಪಿಸಿ ಮೋಹನ್ ಸ್ಪರ್ಧಿಸಿದ್ದು, ಈ ಬಾರಿ ಕೂಡ ಗೆಲುವಿನ ದಡ ದಾಟಲಿದ್ದಾರೆಯೇ ಎಂಬುದು ಕುತೂಹಲದ ಪ್ರಶ್ನೆ. ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ನೀಡಲು ಮುಂದಾಗಿದೆ. (ರಾಜಕೀಯ ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)
ಹೆಸರೇ ಸೂಚಿಸುವಂತೆ ಬೆಂಗಳೂರಿನ ಹೃದಯ ಭಾಗದ 8 ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಈ ಕ್ಷ್ಎತ್ರ ಅಸ್ತಿತ್ವಕ್ಕೆ ಬಂದಾಗ ನಡೆದ ಚುನಾವಣೆಯಿಂದಲೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ವಶದಲ್ಲಿದೆ.
ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಇಲ್ಲಿನ ವಿಶೇಷ. ಈ ಕ್ಷೇತ್ರದಲ್ಲಿ ಮುಸ್ಲಿಮರು ಶೇ.17.5, ಎಸ್ ಸಿ ಮತ್ತು ಎಸ್ ಟಿ ಶೇ.18 ಮತ್ತು ಕ್ರಿಶ್ಚಿಯನ್ನರು ಶೇ.4.4ರಷ್ಟಿದ್ದಾರೆ. 2019ರಲ್ಲಿ 21,98,362 ಮತದಾರರಿದ್ದು, ಈ ವರ್ಷ ತುಸು ಹೆಚ್ಚಾಗಿರುವ ಸಾಧ್ಯತೆಗಳಿವೆ.
9 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3 ರಲ್ಲಿ ಗೆಲುವು ಸಾಧಿಸಿದೆ. ಸಚಿವರಾದ ಕೆ.ಜೆ.ಜಾರ್ಜ್(ಸರ್ವಜ್ಞ ನಗರ), ದಿನೇಶ್ ಗುಂಡೂರಾವ್( ಗಾಂಧಿನಗರ), ಜಮೀರ್ ಅಹಮದ್ ಖಾನ್(ಚಾಮರಾಜಪೇಟೆ) ರಿಜ್ವಾನ್ ಅರ್ಷದ್ (ಶಿವಾಜಿ ನಗರ), ಎನ್.ಎ.ಹ್ಯಾರಿಸ್(ಶಾಂತಿನಗರ) ಕಾಂಗ್ರೆಸ್ ಶಾಸಕರು. ಸುರೇಶ್ ಕುಮಾರ್ (ರಾಜಾಜಿನಗರ), ರಘು(ಸಿವಿ ರಾಮನ್ ನಗರ) ಮತ್ತು ಮಂಜುಳ ಲಿಂಬಾವಳಿ(ಮಹದೇವಪುರ) ಬಿಜೆಪಿ ಶಾಸಕರು.
ಈ ಕ್ಷೇತ್ರದಲ್ಲಿ ಐಟಿ ಬಿಟಿ ಕಂಪನಿಗಳಂತೆ ಕೊಳಚೆ ಪ್ರದೇಶಗಳೂ ಹೆಚ್ಚು. ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಫಲವಾಗಿ ವರ್ಷದಿಂದ ವರ್ಷಕ್ಕೆ ಕೊಳಚೆ ಪ್ರದೇಶಗಳ ಅಭಿವೃದ್ದಿಯಾಗುತ್ತಿದೆ.
ಹಾಲಿ ಸಂಸದ ಪಿ ಸಿ ಮೋಹನ್ ಬಿಜೆಪಿ ಅಭ್ಯರ್ಥಿ
ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಮೋಹನ್ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಅವರು 2009, 2014 ಮತ್ತು 2019ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿ ಜೆಡಿಎಸ್ ಇವರ ಬೆನ್ನಿಗಿರುವುದು ಇವರ ಹಾದಿಯನ್ನು ಸುಗಮ ಮಾಡಿಕೊಡಲಿದೆಯೇ ಎಂದು ಕಾದು ನೋಡಬೇಕಿದೆ.
ಈ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ಸಂಪ್ರದಾಯವಾಗಿದ್ದು, ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪಕ್ಷದ ವರಿಷ್ಠರು ಶಾಸಕರಾದ ಎನ್.ಎ.ಹ್ಯಾರಿಸ್ ಅಥವಾ ರಿಜ್ವಾನ್ ಅರ್ಷದ್ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ಬಯಸಿದೆ. ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಪುತ್ರ ಹಾಗೂ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸ್ಪರ್ಧೆಗೆ ಹ್ಯಾರಿಸ್ ಅಸಮ್ಮತಿ ಸೂಚಿಸಿದ್ದಾರೆ.
ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಗೆ ಎದುರಾಳಿಯಾಗಿದ್ದ ರಿಜ್ವಾನ್ ಅರ್ಷದ್ ಸ್ಪರ್ದೆ ಮಾಡುವುದು ಅಂತಿಮವಾಗಿಲ್ಲ. ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. 2019ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿ, 70,968 ಮತಗಳ ಅಂತರದಿಂದ ಪರಾಭವಾಗೊಂಡಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಮತ್ತೆ ಕಣಕ್ಕಿಳಿಸಿದರೆ ಗೆಲುವು ಸುಲಭವಾಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರ; ಗೆಲುವಿನ ಅಂತರದಲ್ಲಿ ಕುಸಿತ
2014ರಲ್ಲಿ ಮೋಹನ್ ಅವರು ರಿಜ್ವಾನ್ ವಿರುದ್ದ 1,32,000 ಮತ ಮತ್ತು 2009 ರಲ್ಲಿ ಕಾಂಗ್ರೆಸ್ ನ ಎಚ್.ಟಿ.ಸಾಂಗ್ಲಿಯಾನಾ ಅವರನ್ನು 50 ಸಾವಿರ ಮತಗಳ ಅಂತರದಿಂದ ಮಣಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಮೀರ್ ಅಹಮದ್ 1,62,552 ಮತಗಳನ್ನು ಪಡೆದು ಗಮನ ಸೆಳೆದಿದ್ದರು.
ವರ್ಷದಿಂದ ವರ್ಷಕ್ಕೆ ಬಿಜೆಪಿಯ ಗೆಲುವಿನ ಅಂತರ ಕುಸಿಯುತ್ತಾ ಹೋಗಿರುವುದು ಗಮನಾರ್ಹ ಸಂಗತಿ. ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿರುವುದಾಗಿ ಮೋಹನ್ ಪ್ರತಿಪಾದಿಸುತ್ತಿದ್ದಾರೆ. ಅನೇಕ ರಸ್ತೆಗಳು, ರೈಲ್ವೇ ಕ್ರಾಸಿಂಗ್ ಗಳು, ಶಾಲಾ ಕಾಲೇಜುಗಳ ಅಭಿವೃದ್ದಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಈ ಬಾರಿ ಸಬ್ ಅರ್ಬನ್ ರೈಲು ಮತ್ತು ನಮ್ಮ ಮೆಟ್ರೋ ವಿಸ್ತರಣೆಗೆ ಒತ್ತು ನೀಡುವುದಾಗಿ ಹೇಳುತ್ತಿದ್ದಾರೆ.
ಮಹಿಳಾ ಅಭ್ಯರ್ಥಿ ಕಡೆಗೆ ಕಾಂಗ್ರೆಸ್ ಒಲವು?
ಬೆಂಗಳೂರಿನ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ತುಮಕೂರು ಜಿಲ್ಲೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಜ್ಜಯ್ಯ ಭವಿಷ್ಯ ನುಡಿಡಿದ್ದಾರೆ ಎಂದು ಶಿವಕುಮಾರ್ ಆಪ್ತರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಶಿವಕುಮಾರ್ ಯೋಚಿಸಿದ್ದಾರೆ ಎಂಬ ಮಾಹಿತಿ ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ.
ರಾಮೇಶ್ವರಂ ಕೆಫೆ ಸ್ಫೋಟದ ನಂತರ ಅಲ್ಪಸಂಖ್ಯಾತರಿಗೆ ಬದಲಾಗಿ ಪಕ್ಷದ ಯುವ ಘಟಕದ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ರೀತಿ ಮಾಡಿದರೆ ರಾಜ್ಯಾದ್ಯಂತ ಅಲ್ಪಸಂಖ್ಯಾತರ ಕೋಪಕ್ಕೆ ತುತ್ತಾಗಬಹುದು ಎಂಬ ಭಯವೂ ಇದೆ.
ಕಾಂಗ್ರೆಸ್ 5 ಗ್ಯಾರಂಟಿಗಳು, ಮೂವರು ಸಚಿವರು ಮತ್ತು ಇಬ್ಬರು ಶಾಸಕರು ಮತ್ತು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮತಗಳನ್ನು ನೆಚ್ಚಿಕೊಂಡಿದೆ.
(ರಾಜಕೀಯ ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)
ವಿಭಾಗ