ಕನ್ನಡ ಸುದ್ದಿ  /  Nation And-world  /  Lok Sabha Election 2024 Bjp To Use Ai To Translate Pm Modi Speeches In Karnataka Other States Narendra Modi Kannada Uks

ಲೋಕಸಭಾ ಚುನಾವಣೆ 2024; ಈ ಸಲ ಕನ್ನಡದಲ್ಲೂ ಕೇಳಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣ, ಹೇಗೆ ಸಾಧ್ಯ ಇಲ್ಲಿದೆ ವಿವರ

ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದಲ್ಲಿ ಈ ಸಲ “ನಮಸ್ಕಾರ, ಹೇಗಿದ್ದೀರಿ ಕ್ಷೇಮವೇ…” ಎಂಬಿತ್ಯಾದಿ ಔಪಚಾರಿಕ ಕನ್ನಡದ ಮಾತುಗಳಿರಲ್ಲ. ಈ ಸಲ ಕನ್ನಡದಲ್ಲೂ ಕೇಳಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣ ಎಂದು ಬಿಜೆಪಿ ಹೇಳುತ್ತಿದೆ. ಇದು ಹೇಗೆ ಸಾಧ್ಯವಾಗುತ್ತಿದೆ ಎಂಬುದರ ವಿವರ ಇಲ್ಲಿದೆ.

ನಮೋ ಕನ್ನಡ; ಕನ್ನಡದಲ್ಲೂ ಕೇಳಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣ (ಸಾಂಕೇತಿಕ ಚಿತ್ರ)
ನಮೋ ಕನ್ನಡ; ಕನ್ನಡದಲ್ಲೂ ಕೇಳಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣ (ಸಾಂಕೇತಿಕ ಚಿತ್ರ) (@Namoinkannada)

ಬೆಂಗಳೂರು/ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ಕಾವು ನಿಧಾನವಾಗಿ ಏರತೊಡಗಿದೆ. ಈ ಸಲವೂ ಪ್ರಚಾರದಲ್ಲಿ ತಂತ್ರಜ್ಞಾನದ ಬಳಕೆಯೇ ಗಮನಸೆಳೆಯುವಂಥದ್ದು. ಅಂದ ಹಾಗೆ, ಈ ಸಲ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಕನ್ನಡದಲ್ಲೂ ಕೇಳಬಹುದು.

ಈಗಾಗಲೇ ಎಕ್ಸ್‌ನಲ್ಲಿ ನರೇಂದ್ರ ಮೋದಿ ಕನ್ನಡ (@Namoinkannada) ಖಾತೆಯ ಮೂಲಕ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು ಕನ್ನಡದಲ್ಲಿ ಲಭ್ಯ ಇವೆ. ಸದ್ಯ ಕನ್ನಡ ಭಾಷೆಯಲ್ಲದೆ, ಬಾಂಗ್ಲಾ, ತಮಿಳು, ತೆಲುಗು, ಪಂಜಾಬಿ, ಮರಾಠಿ, ಒಡಿಯಾ ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ಪ್ರಧಾನಿ ಮೋದಿಯವರ ಭಾಷಣ ಲಭ್ಯ ಇದೆ.

ಹೌದು ಪ್ರಧಾನಿ ಮೋದಿಯವರ ಭಾಷಣವನ್ನು ಇತರೆ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವುದಕ್ಕೆ ಈಗ ಆರ್ಟಿಪಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಬಳಸಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ನೈಜ ಸಮಯದಲ್ಲಿ ತಮಿಳಿಗೆ ಭಾಷಾಂತರಿಸಲು ಎಐ ಅನ್ನು ಬಳಸಿ ಪರೀಕ್ಷಿಸಲಾಗಿತ್ತು.

ನರೇಂದ್ರ ಮೋದಿ ಕನ್ನಡ (@Namoinkannada) ಎಕ್ಸ್ ಖಾತೆಯಲ್ಲಿ ಒಟ್ಟು 34 ಪೋಸ್ಟ್‌ಗಳಿದ್ದು, ಮೊದಲ ಪೋಸ್ಟ್‌ ಫೆಬ್ರವರಿ23ರಂದು ಅಪ್ಡೇಟ್ ಆಗಿದೆ.

ನರೇಂದ್ರ ಮೋದಿ ಕನ್ನಡ ಭಾಷಣ ಹೀಗಿದೆ ನೋಡಿ

ನರೇಂದ್ರ ಮೋದಿ ಕನ್ನಡ ಭಾಷಣದ ಭಾಷಾಂತರಕಾರ ಎಐ ಭಾಷಿಣಿ

ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಜನರನ್ನು ಉದ್ದೇಶಿಸಿ ಮಾತನಾಡುತ್ತ ಅವರೊಂದಿಗೆ ಸಂವಹನ ಸಂಪರ್ಕ ಸಾಧಿಸುವುದೇ ರಾಜಕಾರಣಿಗಳಿಗೆ ಬಹುದೊಡ್ಡ ಸವಾಲು. ಕಳೆದ ಚುನಾವಣೆಯಲ್ಲಿ ಹಿರಿಯ ನೇತಾರರು ಮಾಡಿದ ಹಿಂದಿ ಭಾಷಣಗಳನ್ನು ಭಾಷಾಂತರಕಾರರು ಕನ್ನಡದಲ್ಲಿ ವಿವರಿಸುವಾಗ ಮಾಡಿದ ಎಡವಟ್ಟುಗಳ ವಿಡಿಯೋ ಇಂದಿಗೂ ಟ್ರೋಲ್ ಆಗುತ್ತಿವೆ.

ಈ ನಿಟ್ಟಿನಲ್ಲಿ ನೋಡಿದರೆ, ಇಂತಹ ಸಮಸ್ಯೆಗೆ ಎಐ ಭಾಷಿಣಿ, ಬಿಜೆಪಿಯ ಹಿರಿಯ ನಾಯಕರಿಗೆ ಪರಿಹಾರ ಒದಗಿಸಿದಂತೆ ಕಾಣುತ್ತಿದೆ. ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ನಾಯಕರು ಈ ವಿದ್ಯಮಾನವನ್ನು ಒಂದು ಮೈಲಿಗಲ್ಲು ಎಂದು ಹೇಳಿಕೊಂಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪ್ರಚಾರದ ವೇಳೆ ಪ್ರಾದೇಶಿಕ ಮತದಾರರ ಜೊತೆಗಿನ ಸಂವಹನದಲ್ಲಿ ಭಾಷೆಯ ಕಾರಣಕ್ಕೆ ಉಂಟಾಗುವ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಬಿಜೆಪಿ ಈ ಬಾರಿ ಭಾಷಾಂತರ ಮಾಡುವುದಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಬಳಸುತ್ತಿದೆ. ಭಾಷಾಂತರಕ್ಕೆ ಬಳಸುವ ಎಐ ಟೂಲ್ ಹೆಸರು “ಭಾಷಿಣಿ”.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರಾಷ್ಟ್ರೀಯ ಭಾಷಾ ಅನುವಾದ ಮಿಷನ್ ಅಡಿಯಲ್ಲಿ 2022 ರಲ್ಲಿ 'ಭಾಷಿಣಿ' ಅನ್ನು ಪ್ರಾರಂಭಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ವಾರಣಾಸಿಯಲ್ಲಿ ನಡೆದ ಕಾಶಿ ತಮಿಳು ಸಂಗಮ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿಯವರ ಭಾಷಣವನ್ನು ಹಿಂದಿಯಿಂದ ತಮಿಳಿಗೆ ತಕ್ಷಣ ಅನುವಾದಿಸಿದಾಗ ಅದರ ಪರಿಣಾಮಕಾರಿತ್ವ ಪ್ರದರ್ಶನಗೊಂಡಿತು. ಅಲ್ಲಿಂದೀಚೆಗೆ ಅದರ ಬಳಕೆ ಹಂತ ಹಂತವಾಗಿ ಹೆಚ್ಚಿಸುತ್ತ ಹೋಗಿದ್ದಾರೆ.

ಸಾಮಾನ್ಯವಾಗಿ ಇದುವರೆಗೆ ಭಾಷಣ ಶುರುಮಾಡುವಾಗ ಔಪಚಾರಿಕವಾಗಿ ಆಯಾ ಪ್ರಾದೇಶಿಕ ಭಾಷೆಯನ್ನು ಬಳಸಲಾಗುತ್ತಿತ್ತು. ಜನರಿಗೆ ಶುಭಾಶಯ ಕೋರುವುದು ವಾಡಿಕೆಯಾಗಿತ್ತು. ಈ ಬಾರಿ ವಿಭಿನ್ನ ಅನುಭವವಾಗಲಿದೆ. ಆರಂಭದಲ್ಲಿ ಯಾವುದೇ ಔಪಚಾರಿಕ ಶುಭಾಶಯಗಳಿರಲ್ಲ. ಆದರೆ ಸಭಿಕರು ಪ್ರಧಾನಿ ಮೋದಿಯವರ ಭಾಷಣವನ್ನು ಸಂಪೂರ್ಣವಾಗಿ ಕನ್ನಡದಲ್ಲೇ ಕೇಳಲಿದ್ದಾರೆ ಎಂದು ಪ್ರಧಾನಿಯವರ ಪ್ರವಾಸ ಸಮನ್ವಯಕಾರ ಸಂಜೀವ ಕುಬಕಡ್ಡಿ ಅವರು ತಿಳಿಸಿದ್ದಾಗಿ ವರದಿ ಹೇಳಿದೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point