ಕನ್ನಡ ಸುದ್ದಿ  /  Nation And-world  /  Lok Sabha Election Allahu Akbar Slogans At Bjp Rally As Party Reaches Out To Muslims In Dinhata West Bengal Uks

ಲೋಕಸಭಾ ಚುನಾವಣೆ; ಬಿಜೆಪಿ ರ‍್ಯಾಲಿಯಲ್ಲಿ ಅಲ್ಲಾಹು ಅಕ್ಬರ್‌ ಘೋಷಣೆ, ಪಶ್ಚಿಮ ಬಂಗಾಳದಲ್ಲಿ ಬದಲಾಗಿದೆ ತಂತ್ರಗಾರಿಕೆ

ಲೋಕಸಭಾ ಚುನಾವಣೆ 2024ರ ಪ್ರಚಾರ ಬಿರುಸುಗೊಂಡಿದ್ದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರ‍್ಯಾಲಿಯಲ್ಲಿ “ಅಲ್ಲಾಹು ಅಕ್ಬರ್‌” ಘೋಷಣೆ ಮೊಳಗಿದ್ದು ಜನಮನ ಸೆಳೆದಿದೆ. ಭಾರತ್ ಮಾತಾ ಕಿ ಜೈ ಘೋ‍ಷಣೆಗೆ ಪ್ರಾಮುಖ್ಯತೆ ಇದ್ದ ಪಕ್ಷದಲ್ಲಿ ಈ ಪ್ರಮಾಣದ ಬದಲಾವಣೆಯೇ ಎಂದು ಹುಬ್ಬೇರುವಂತಹ ವಿದ್ಯಮಾನದ ವಿವರ ವರದಿ ಇಲ್ಲಿದೆ.

ಪಶ್ಚಿಮ ಬಂಗಾಳದ ದಿನ್‌ಹಟ್‌ನಲ್ಲಿ ಬಿಜೆಪಿ ರ‍್ಯಾಲಿಯ ಒಂದು ನೋಟ. ವಿಡಿಯೋ ಗ್ರ್ಯಾಬ್‌ ಚಿತ್ರ
ಪಶ್ಚಿಮ ಬಂಗಾಳದ ದಿನ್‌ಹಟ್‌ನಲ್ಲಿ ಬಿಜೆಪಿ ರ‍್ಯಾಲಿಯ ಒಂದು ನೋಟ. ವಿಡಿಯೋ ಗ್ರ್ಯಾಬ್‌ ಚಿತ್ರ

ಕೂಚ್‌ ಬೆಹರ್‌: ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಎಲ್ಲೆಡೆ ನಿಧಾನವಾಗಿ ಪಸರಿಸತೊಡಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಚಾರ ತೀವ್ರಗೊಂಡಿದ್ದು, ದಿನ್‌ಹಟಾದಲ್ಲಿ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಏರ್ಪಡಿಸಿದ್ದ ರ‍್ಯಾಲಿ ದೇಶದ ಗಮನಸೆಳೆದಿದೆ. ಬಿಜೆಪಿ ಅಭ್ಯರ್ಥಿ ನಿಶಿತ್ ಪ್ರಾಮಾಣಿಕ್ ಪರವಾಗಿ ನಡೆದ ರ‍್ಯಾಲಿಯಲ್ಲಿ “ಅಲ್ಲಾಹು ಅಕ್ಬರ್‌” ಘೋಷಣೆ ಮುಗಿಲು ಮುಟ್ಟಿದ್ದು ಅದಕ್ಕೆ ಕಾರಣ.

ಸಾಮಾನ್ಯವಾಗಿ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳ ರ‍್ಯಾಲಿ ಎಂದರೆ ಅಲ್ಲಿ “ಭಾರತ್ ಮಾತಾ ಕಿ ಜೈ” ಘೋ‍ಷಣೆಯೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ, ಹೊಸ ಬೆಳವಣಿಗೆ ಎಂಬಂತೆ “ಅಲ್ಲಾಹು ಅಕ್ಬರ್‌” ಘೋ‍ಷಣೆ ದಿನ್‌ಹಟಾದಲ್ಲಿ ಗುರುವಾರ ಎಲ್ಲರ ಹುಬ್ಬೇರುವಂತೆ ಮಾಡಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವರೂ ಆಗಿರುವ ನಿಶಿತ್ ಪ್ರಾಮಾಣಿಕ್ ಪರವಾಗಿ ನಡೆದ ರ‍್ಯಾಲಿಯ ವಿಡಿಯೋದಲ್ಲಿ “ಅಲ್ಲಾಹು ಅಕ್ಬರ್” ಘೋಷಣೆ ಮೊಳಗಿರುವುದು ಕಂಡುಬಂದಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಇದರ ಸಾಚಾತನವನ್ನು ದೃಢೀಕರಿಸುವುದು ಹಿಂದೂಸ್ತಾನ್ ಟೈಮ್ಸ್‌ ಕನ್ನಡದಿಂದ ಸಾಧ್ಯವಾಗಿಲ್ಲ. ಆದರೂ ಸುದ್ದಿಯ ಕಾರಣಕ್ಕೆ ಇದನ್ನು ಇಲ್ಲಿ ಕೊಡಲಾಗಿದೆ.

ಬಿಜೆಪಿ ರ‍್ಯಾಲಿಯಲ್ಲಿ “ಅಲ್ಲಾಹು ಅಕ್ಬರ್” ಘೋ‍ಷಣೆ ಇರುವ ವಿಡಿಯೋ

ಬಿಜೆಪಿ ಅಭ್ಯರ್ಥಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರೂ ಆಗಿರುವ ನಿಶಿತ್ ಪ್ರಾಮಾಣಿಕ್ ಪರವಾಗಿ ಸಿತಾಯಿ ಮತ್ತು ದಿನ್‌ಹಟಾ ಎಂಬ ಎರಡು ವಿಧಾನ ಸಭಾ ಕ್ಷೇತ್ರಗಳ ಮುಸ್ಲಿಮರ ರ‍್ಯಾಲಿಯನ್ನು ಶುಕ್ರವಾರ ಕೂಚ್‌ ಬೆಹರ್‌ ನಗರದಲ್ಲಿ ಆಯೋಜಿಸಲಾಗಿತ್ತು. ಈ ಭಾಗದ ಅಲ್ಪ ಸಂಖ್ಯಾತರ ರ‍್ಯಾಲಿಯಲ್ಲಿ “ಅಲ್ಲಾಹು ಅಕ್ಬರ್” ಘೋಷಣೆ ಹೊಸದಲ್ಲ. ಇಲ್ಲಿ ಭೇಟಾಗುರಿ ಪಂಚಾಯತ್‌ನಲ್ಲಿ ಮುಸ್ಲಿಮರು ಬಿಜೆಪಿ ಸದಸ್ಯರಾಗಿದ್ದಾರೆ ಎಂದು ಕೂಚ್‌ ಬೆಹರ್‌ನ ಶಾಸಕ ಸುಕುಮಾರ್ ರಾಯ್‌ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ವಿವರಿಸಿದೆ.

ಅಲ್ಪಸಂಖ್ಯಾತರ ರ‍್ಯಾಲಿಯಲ್ಲಿ “ಅಲ್ಲಾಹು ಅಕ್ಬರ್” ಘೋ‍ಷಣೆ ಹೊಸದಲ್ಲ

ಉತ್ತರ ಬಂಗಾಳದ ರಾಜ್‌ಬಾಂಶಿ ಮುಸ್ಲಿಮರು ವಿಶೇಷವಾಗಿ ಕೂಚ್‌ ಬೆಹರ್ ಜಿಲ್ಲೆಯ ಸುಕ್ತಬರಿ ಪ್ರದೇಶದಲ್ಲಿರುವವರು ಬಿಜೆಪಿಯ ಬೆಂಬಲಿಗರು. ಈ ತಿಂಗಳ ಆರಂಭದಲ್ಲಿ ಸಿಲಿಗುರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ಅವರು ಭಾಗವಹಿಸಿದ್ದರು ಎಂದು ಈ ಭಾಗದ ಬಿಜೆಪಿ ಬೆಂಬಲಿಗರು ಹೇಳುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ಪರಿಸ್ಥಿತಿ ಬದಲಾಗುತ್ತಿದೆ. ಟಿಎಂಸಿಯನ್ನು ಜನ ಈಗ ಕೋಮುವಾದಿ ಪಕ್ಷ ಎಂದು ಗುರುತಿಸಲಾರಂಭಿಸಿದ್ದಾರೆ. ಟಿಎಂಸಿ ತನ್ನ ನೆಲೆ ಭದ್ರಗೊಳಿಸಲು ಮುಸ್ಲಿಮರನ್ನು ತನ್ನ ಮತಬ್ಯಾಂಕ್ ಆಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇರುವುದು ಇದಕ್ಕೆ ಕಾರಣ ಎಂದು ವಿವರಿಸಿದ್ದಾರೆ ಶಾಸಕ ರಾಯ್‌.

ಎರಡು ತಿಂಗಳ ಹಿಂದೆ ನಿಶಿಕ್ ಪ್ರಾಮಾಣಿಕ್ ಆಯೋಜಿಸಿದ್ದ ರ‍್ಯಾಲಿಯಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರು “ಭಾರತ್ ಮಾತಾ ಕಿ ಜೈ” ಘೋ‍ಷಣೆ ಕೂಗಿದ್ದರು. ಪ್ರಧಾನಿ ಮೋದಿಯವರು ಇತ್ತೀಚೆಗಿನ ರ‍್ಯಾಲಿಯಲ್ಲಿ, ಸಂದೇಶ್‌ಖಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರತಿಯಾಗಿ ಟಿಎಂಸಿ ವಿರುದ್ಧ ಮತ ಚಲಾಯಿಸಬೇಕು. ವಿಶೇಷವಾಗಿ ಮುಸ್ಲಿಂ ಮಹಿಳೆಯರು ಈ ರೀತಿ ಟಿಎಂಸಿಯನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು ಎಂಬುದನ್ನು ರಾಯ್‌ ನೆನಪಿಸಿಕೊಂಡರು.

ಬದಲಾಗಿದೆ ಬಿಜೆಪಿಯ ತಂತ್ರಗಾರಿಕೆ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಲ್ಲಿ ಮುಸ್ಲಿಂ ವಿರೋಧಿ ಧೋರಣೆ ಹೊಂದಿತ್ತು. ತನ್ನ ಪ್ರಚಾರ ಅಭಿಯಾನದಲ್ಲೂ ಅದನ್ನೆ ಬಿಂಬಿಸಿತ್ತು. ಆದರೆ ಈಗ ಹಾಗಲ್ಲ. ಮುಸ್ಲಿಮರನ್ನೂ ಪಕ್ಷದೊಂದಿಗೆ ಸೇರಿಸಿಕೊಂಡು ಮುನ್ನಡೆಯಲಾರಂಭಿಸಿದೆ. ಪಕ್ಷ ಯಾವತ್ತಿದ್ದರೂ ಭಾರತೀಯ ಮುಸ್ಲಿಮರ ಪರವಾಗಿಯೇ ಇದೆ ಎಂದು ಪಕ್ಷದ ನಾಯಕರು ಹೇಳತೊಡಗಿದ್ದಾರೆ.