ಪಿಎಂ ಮೋದಿ ಏನಾದ್ರೂ ಮತ್ತೆ ಗೆದ್ದರೆ ಮಟನ್ ಚಿಕನ್ ತಿನ್ನೋಕಾಗಲ್ಲ; ತಮಿಳುನಾಡಲ್ಲಿ ಡಿಎಂಕೆ ನಾಯಕನ ಪ್ರಚಾರದ ವಿಡಿಯೋ ವೈರಲ್
ತಮಿಳುನಾಡಿನಲ್ಲಿ ಬಿಜೆಪಿ ವಿರುದ್ಧ ಡಿಎಂಕೆ ಪ್ರಚಾರದ ಭರಾಟೆ ಜೋರಾಗಿದೆ. ಡಿಎಂಕೆ ನಾಯಕರೊಬ್ಬರ ಪ್ರಚಾರದ ವಿಡಿಯೋ ವೈರಲ್ ಆಗಿದ್ದು, ಪ್ರಧಾನಿ ಮೋದಿ ಏನಾದ್ರೂ ಮತ್ತೆ ಗೆದ್ದರೆ ಮಟನ್ ಚಿಕನ್ ತಿನ್ನೋಕಾಗಲ್ಲ ಎಂದು ಹೇಳುತ್ತಿರುವುದು ಗಮನಸೆಳೆದಿದೆ. ಈ ವೈರಲ್ ವಿಡಿಯೋದ ವಿವರ ವರದಿ ಇಲ್ಲಿದೆ.
ಚೆನ್ನೈ: ತಮಿಳುನಾಡಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ (Lok Sabha Election Campaign) ದ ಕಾವು ಮುಗಿಲುಮುಟ್ಟತೊಡಗಿದೆ. ಆಡಳಿತಾರೂಢ ಡಿಎಂಕೆ ರಾಜ್ಯದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವುದಕ್ಕೆ ಧ್ವನಿ ಬೇಕು ಎಂದು ಬಿಜೆಪಿ ವಿರುದ್ಧ ಭಾರಿ ಪ್ರಚಾರ ಅಭಿಯಾನ ನಡೆಸಿದೆ. ಈ ನಡುವೆ, ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಡಿಎಂಕೆ ನಾಯಕರೊಬ್ಬರ ಪ್ರಚಾರ ಭಾಷಣ ವೈರಲ್ ಆಗಿಬಿಟ್ಟಿದೆ.
ಪ್ರಚಾರದ ಭರದಲ್ಲಿ ರಾಜಕೀಯ ವಿರೋಧಿಗಳನ್ನು ಅವರ ಆಡಳಿತವನ್ನು ಹೇಗೆಲ್ಲ ಹೀಗಳೆಯಬಹುದೋ ಹಾಗೆಲ್ಲ ಹೀಗಳೆಯಲು ಪ್ರಯತ್ನಿಸುವುದು ಸಾಮಾನ್ಯ. ಇವುಗಳ ನಡುವೆ ವಿಲಕ್ಷಣ ಹೇಳಿಕೆಗಳು ಗಮನಸೆಳೆಯುತ್ತವೆ. ಅಂಥದ್ದೊಂದು ಹೇಳಿಕೆ ಈ ಡಿಎಂಕೆ ನಾಯಕನದ್ದು.
ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ನಾಯಕರೊಬ್ಬರು ಪ್ರಚಾರ ಭಾಷಣದಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಮರು ಆಯ್ಕೆ ಕುರಿತು ಪ್ರಸ್ತಾಪಿಸುತ್ತ ಹೇಳಿದ ಮಾತುಗಳು ಸ್ವಲ್ಪ ವಿಚಿತ್ರವಾಗಿದ್ದವು. ಜನಸಾಮಾನ್ಯರ ಭಾವನೆಗಳನ್ನು ಕದಡುವಂತೆ ಇದ್ದವು. ಪ್ರಧಾನಿ ಮೋದಿ ಏನಾದರೂ ಮತ್ತೆ ಮರು ಆಯ್ಕೆಯಾದರೆ, ನಾವು ಮಟನ್, ಚಿಕನ್ ಏನೂ ತಿನ್ನೋದಕ್ಕಾಗಲ್ಲ ನೋಡಿ ಎಂದು ಹೇಳಿರುವುದು ಕೇಳಿಬಂದಿದೆ.
ಡಿಎಂಕೆ ನಾಯಕನ ಪ್ರಚಾರ ಭಾಷಣದ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋ ಚೆನ್ನೈನಲ್ಲೇ ಶೂಟ್ ಮಾಡಿರುವುದು ಎಂದು ಹೇಳಲಾಗುತ್ತಿದೆ. ಇದನ್ನು ಇಂಡಿಯಾ ಡಾಟ್ ಕಾಮ್ ತನ್ನ ವರದಿಯಲ್ಲಿ ಬಳಸಿಕೊಂಡಿದೆ. ಇದನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ದೃಢೀಕರಿಸುವುದು ಸಾಧ್ಯವಾಗಿಲ್ಲ.
ಆದಾಗ್ಯೂ, ವಿಡಿಯೋದಲ್ಲಿರುವ ದೃಶ್ಯವನ್ನು ಗಮನಿಸಿದರೆ ಡಿಎಂಕೆಯ ಲೋಗೋ ಇದೆ. ಸ್ಥಳೀಯ ನಾಯಕ ಭಾಷಣ ಮಾಡುತ್ತ, "ಒಂದೇ ಒಂದು ಮಾತು ಹೇಳ್ತೇನೆ ಕೇಳಿ. ಒಂದೊಮ್ಮೆ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ನಾವು ಆಡಿನ ಮಾಂಸ ತಿನ್ನೋಕಾಗಲ್ಲ, ಕೋಳಿ ಮಾಂಸ ತಿನ್ನೋಕಾಗಲ್ಲ. ಇನ್ನೂ ಹೇಳಬೇಕು ಎಂದರೆ ಇಲ್ಲೇ ಪಕ್ಕದಲ್ಲಿರುವ ಮುತ್ತುಮಾರಿಯಮ್ಮ ದೇವಸ್ಥಾನದಲ್ಲೂ ಅಷ್ಟೇ ಆಡಿನ ಮಾಂಸದ ಊಟ ಮಾಡೋದಕ್ಕಾಗಲ್ಲ. ಮೊಸರನ್ನ, ಚಿತ್ರಾನ್ನ, ಸಾಂಬಾರನ್ನ ತಿಂದುಕೊಂಡಿರಬೇಕಾಗುತ್ತದೆ ನೋಡಿ" ಎಂದು ಹೇಳುತ್ತಿರುವುದು ಕಂಡುಬಂದಿದೆ.
ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಚಿತ್ರಣ
ತಮಿಳುನಾಡು ಲೋಕಸಭಾ ಚುನಾವಣೆಯ ಪ್ರಚಾರ ತೀವ್ರಗೊಂಡಿದೆ. ಏಪ್ರಿಲ್ 19ಕ್ಕೆ ಇಲ್ಲಿ ಮತದಾನನಡೆಯಲಿದೆ. ಒಟ್ಟು 39 ಲೋಕಸಭಾ ಕ್ಷೇತ್ರಗಳು ಇಲ್ಲಿವೆ. ಭಾರತದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ 5ನೇ ರಾಜ್ಯ ತಮಿಳುನಾಡು. ಇದರಲ್ಲಿ 7 ಕ್ಷೇತ್ರಗಳು ಪರಿಶಿಷ್ಟ ಜಾತಿಯವರಿಗೆ ಮೀಸಲು. ಉಳಿದವು ಸಾಮಾನ್ಯ ಕ್ಷೇತ್ರಗಳು.
ತಮಿಳುನಾಡಿನಲ್ಲಿ ಹೇಗಾದರೂ ತನ್ನ ಖಾತೆ ತೆರೆಯಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ. ಪಕ್ಷದ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷ ಸಂಘಟನೆ ಮಾಡುತ್ತಿದ್ದು, ಸ್ವತಃ ಕೊಯಮತ್ತೂರಿನಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಅವರು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ತೀರ್ಮಾನದಲ್ಲಿ ಡಿಎಂಕೆಯ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಅದರಿಂದ ತಮಿಳುನಾಡಿನ ಮೀನುಗಾರರು ಎದುರಿಸುತ್ತಿರುವ ಸಂಕಷ್ಟಗಳ ಕಡೆಗೆ ಬೆಳಕು ಚೆಲ್ಲಿದ್ದಾರೆ. ಈ ವಿಚಾರ ಅಲ್ಲಿ ಭಾರಿ ರಾಜಕೀಯ ಸಂಚಲನ ಮೂಡಿಸಿದ್ದು, ಡಿಎಂಕೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದೆ.
ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳದ್ದೇ ಪ್ರಾಬಲ್ಯ. ಬಿಜೆಪಿಗೆ ಇಲ್ಲಿ ಇನ್ನೂ ಖಾತೆ ತೆರೆಯುವುದು ಸಾಧ್ಯವಾಗಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಸೆಕ್ಯುಲರ್ ಪ್ರೋಗ್ರೆಸಿವ್ ಅಲಯನ್ಸ್ 39 ಸ್ಥಾನಗಳ ಪೈಕಿ 38ರಲ್ಲಿ ಗೆಲುವು ಕಂಡಿತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ವಿಭಾಗ