ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Election Result: ಆಂಧ್ರಪ್ರದೇಶ ಲೋಕಸಭಾ ಚುನಾವಣಾ ಫಲಿತಾಂಶ; ಟಿಡಿಪಿ ಮೈತ್ರಿ ಪಕ್ಷಗಳಿಗೆ ಭರ್ಜರಿ ಗೆಲುವು, ಜಗನ್‌ಗೆ ಭಾರಿ ಮುಖಭಂಗ

Election Result: ಆಂಧ್ರಪ್ರದೇಶ ಲೋಕಸಭಾ ಚುನಾವಣಾ ಫಲಿತಾಂಶ; ಟಿಡಿಪಿ ಮೈತ್ರಿ ಪಕ್ಷಗಳಿಗೆ ಭರ್ಜರಿ ಗೆಲುವು, ಜಗನ್‌ಗೆ ಭಾರಿ ಮುಖಭಂಗ

ಆಂಧ್ರಪ್ರದೇಶ ಲೋಕಸಭಾ ಚುನಾವಣೆ 2024: ಆಂಧ್ರಪ್ರದೇಶ ಲೋಕಸಭಾ ಚುನಾವಣೆಯ 2024ರ ಫಲಿತಾಂಶ ಪ್ರಕಟವಾಗಿದ್ದು, ಟಿಡಿಪಿ ಪಕ್ಷವು ಜಯಭೇರಿ ಬಾರಿಸಿದೆ. ಸಿಎಂ ಜಗನ್‌ ಮೋಹನ್‌ ರೆಡ್ಡಿ ನೇತ್ರತ್ವದ ವೈಎಸ್‌ಆರ್‌ಸಿಪಿ 3 ಸ್ಥಾನಗಳಲ್ಲಿ ಗೆಲುವು ಕಾಣುವ ಮೂಲಕ ಭಾರಿ ಮುಖಭಂಗ ಎದುರಿಸಿದೆ.

ಆಂಧ್ರಪ್ರದೇಶ ಲೋಕಸಭಾ ಚುನಾವಣೆ; ಟಿಡಿಪಿ ಮೈತ್ರಿ ಪಕ್ಷಗಳಿಗೆ ಭರ್ಜರಿ ಗೆಲುವು, ಜಗನ್‌ಗೆ ಭಾರಿ ಮುಖಭಂಗ
ಆಂಧ್ರಪ್ರದೇಶ ಲೋಕಸಭಾ ಚುನಾವಣೆ; ಟಿಡಿಪಿ ಮೈತ್ರಿ ಪಕ್ಷಗಳಿಗೆ ಭರ್ಜರಿ ಗೆಲುವು, ಜಗನ್‌ಗೆ ಭಾರಿ ಮುಖಭಂಗ

ಆಂಧ್ರಪ್ರದೇಶ: ಭಾರತದಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯ ಹೊಂದಿರುವ ಪ್ರಮುಖ ರಾಜ್ಯಗಳಲ್ಲಿ ಆಂಧ್ರಪ್ರದೇಶವು ಒಂದು. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಾದ ವೈಎಸ್‌ಆರ್‌ ಹಾಗೂ ಟಿಡಿಪಿ ನಡುವೆ ತೀವ್ರ ಜಿದ್ದಾಜಿದ್ದಿಯ ನಡುವೆ ಟಿಡಿಪಿ ಮೈತ್ರಿ ಪಕ್ಷವು 22 ಸ್ಥಾನ ಗಳಿಸುವ ಮೂಲಕ ಗೆಲುವು ಸಾಧಿಸಿದೆ. ಮೇ 13 ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಇಂದು (ಜೂನ್‌ 4) ಫಲಿತಾಂಶ ಹೊರಬಿದಿದ್ದೆ. ಒಟ್ಟು 25 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಜಗನ್‌ ಮೋಹನ್‌ ರೆಡ್ಡಿ (Jagan mohan reddy) ಹಾಗೂ ಚಂದ್ರಬಾಬು ನಾಯ್ಡು (Chandrababu naidu) ಅವರ ಟಿಡಿಪಿ ಮೈತ್ರಿ (ಟಿಡಿಪಿ-ಜೆಎಸ್‌ಪಿ-ಬಿಜೆಪಿ) ನಡುವೆ ತೀವ್ರ ಪೈಪೋಟಿ ಇತ್ತು.

ಟ್ರೆಂಡಿಂಗ್​ ಸುದ್ದಿ

ಈ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ನಿಂದ 25 ಕ್ಷೇತ್ರಗಳಿಗೂ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಟಿಪಿಡಿ ಮೈತ್ರಿಪಕ್ಷಗಳಿಂದ 17 ಕ್ಷೇತ್ರಗಳಿಗೆ ಟಿಡಿಪಿ, 6 ಬಿಜೆಪಿ ಹಾಗೂ ಇಬ್ಬರು ಅಭ್ಯರ್ಥಿಗಳು ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಕ್ಷದಿಂದ ಸ್ಪರ್ಧಿಸಿದ್ದರು. ಇಂಡಿಯಾ ಮೈತ್ರಿಕೂಟದಿಂದಲೂ ವಿವಿಧ ಪಕ್ಷದವರು 25 ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಜಗನ್‌ ಸಹೋದರಿ ವೈ. ಶರ್ಮಿಳಾ ರೆಡ್ಡಿ ಆಂಧ್ರಪ್ರದೇಶ ಕಾಂಗ್ರೆಸ್‌ನ ನೇತೃತ್ವ ವಹಿಸಿದ್ದು 23 ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾಕ್ಸ್‌ಸಿಸ್ಟ್‌) ಹಾಗೂ ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದಿಂದ ತಲಾ ಒಬ್ಬರು ಸ್ಪರ್ಧಿಸಿದ್ದರು. ಇನ್ನು ಬಹುಜನ ಸಮಾಜ ಪಕ್ಷದಿಂದಲೂ 25 ಅಭ್ಯರ್ಥಿಗಳು ಲೋಕಸಭೆಗೆ ಸ್ಪರ್ಧಿಸಿದ್ದರು. ಅಮಲಾಪುರಂ, ಅನಂತಪುರ, ಬಾಪಟ್ಲ, ಎಲುರು, ಹಿಂದೂಪುರ, ಕಾಕಿನಾಡ, ಮಚಲಿ ಪಟ್ಟಣಂ, ನರಸರಾವ್‌ ಪೇಟ್‌, ನೆಲ್ಲೋರ್‌, ರಾಜಮಂಡ್ರಿ, ಶ್ರೀಕಾಕುಳಂ, ವಿಜಯವಾಡ, ವಿಜಯನಗರಂ, ಅನಕಪಲ್ಲಿ, ಆರುಕು, ಚಿತ್ತೂರ್‌, ಗುಂಟೂರ, ಕಡಪಾ, ಕರ್ನೂಲ್‌, ನಂದ್ಯಾಲ, ನರಸಾಪುರಂ, ಓಂಗೋಲ್‌, ರಾಜಂಪೇಟ, ತಿರುಪತಿ, ವಿಶಾಲಪಟ್ಟಣ ಇವು 25 ಲೋಕಸಭಾ ಕ್ಷೇತ್ರಗಳಾಗಿವೆ.

ಕಣದಲ್ಲಿದ್ದ ಪ್ರಮುಖ ಅಭ್ಯರ್ಥಿಗಳು

ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಿಂಜರಾಪು ರಾಮ್‌ ಮೋಹನ್ ನಾಯ್ಡು, ಮತುಕುಮಿಲ್ಲಿ ಭರತ್, ಮಾಗುಂಟ ಶ್ರೀನಿವಾಸುಲು ರೆಡ್ಡಿ, ವೆಲಗಪಲ್ಲಿ ವರಪ್ರಸಾದ್ ರಾವ್, ವೇಮಿರೆಡ್ಡಿ ಪ್ರಭಾಕರ ರೆಡ್ಡಿ, ಲವು ಶ್ರೀಕೃಷ್ಣ ದೇವರಾಯಲು ಮತ್ತು ಬಿ.ಕೆ.ಪಾರ್ಥಸಾರಥಿ, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅಭ್ಯರ್ಥಿಗಳಾದ ಕೇಸಿನೇನಿ ಶ್ರೀನಿವಾಸ್ ಪಿ.ವಿ.ಮಿಧುನ್ ರೆಡ್ಡಿ, ವಿ.ವಿಜಯಸಾಯಿ ರೆಡ್ಡಿ, ವೈ.ಎಸ್.ಅವಿನಾಶ್ ರೆಡ್ಡಿ, ಪೋಚ ಬ್ರಹ್ಮಾನಂದ ರೆಡ್ಡಿ, ಬೊಚ್ಚಾ ಝಾನ್ಸಿ ಲಕ್ಷ್ಮಿ ಮತ್ತು ಬೆಲ್ಲನ ಚಂದ್ರಶೇಖರ್, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಗಳಾದ ಸಿ.ಎಂ.ರಮೇಶ್, ಕೊತ್ತಪಲ್ಲಿ ಗೀತಾ, ದಗ್ಗುಬಾಟಿ ಪುರಂದೇಶ್ವರಿ ಮತ್ತು ಕಿರಣ್ ಕುಮಾರ್ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿಗಳಾದ ವೈ.ಎಸ್.ಶರ್ಮಿಳಾ, ಎಂ.ಎಂ. ಪಲ್ಲಂ ರಾಜು, ಚಿಂತಾ ಮೋಹನ್ ಮತ್ತು ಜೇಸುದಾಸು ಶೀಲಂ ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರಮುಖರಾಗಿದ್ದಾರೆ.ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವು ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕ್ರಮವಾಗಿ ಮಚಲಿಪಟ್ಟಣಂ ಮತ್ತು ಕಾಕಿನಾಡ ಕ್ಷೇತ್ರಗಳಿಂದ ವಲ್ಲಭನೇನಿ ಬಾಲಸೌರಿ ಮತ್ತು ತಂಗೆಲ್ಲಾ ಉದಯ್ ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿದೆ.

2019 ಹಾಗೂ 2014ರಲ್ಲಿ ಏನಾಗಿತ್ತು?

ಆಂಧ್ರಪ್ರದೇಶದ 2019ರ ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಪಿಸಿ 22 ಸಂಸದೀಯ ಸ್ಥಾನಗಳನ್ನು ಗೆದ್ದು ಜಯ ಗಳಿಸಿತು. ಆದರೆ ಟಿಡಿಪಿ ಕೇವಲ 3 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು. ಇನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಯಾವುದೇ ಸ್ಥಾನ ಗಳಿಸಲು ಸಾಧ್ಯವಾಗಿರಲಿಲ್ಲ. ಇನ್ನೂ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಾಗುವ ಮುನ್ನ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಸಂಸದೀಯ ಸ್ಥಾನಗಳನ್ನು ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಈಗ ಭಾರತ್ ರಾಷ್ಟ್ರ ಸಮಿತಿ) 11 ಸ್ಥಾನಗಳನ್ನು ಗೆದ್ದಿತ್ತು. ವೈಎಸ್‌ಆರ್‌ಸಿಪಿ ಒಂಬತ್ತು ಸ್ಥಾನ, ಬಿಜೆಪಿ ಮೂರು ಸ್ಥಾನ, ಕಾಂಗ್ರೆಸ್ 2 ಸ್ಥಾನ ಮತ್ತು ಎಐಎಂಐಎಂ ಒಂದರಲ್ಲಿ ಗೆಲುವು ಸಾಧಿಸಿತ್ತು.

2024ರ ಎಕ್ಸಿಟ್‌ ಪೋಲ್‌ ಫಲಿತಾಂಶ

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲೂ ಜಯಶಾಲಿಯಾಗಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಹಿನ್ನಡೆ ಕಂಡಿತ್ತು, ಟಿಡಿಪಿ ಮೈತ್ರಿ ಪಕ್ಷಗಳಿಗೆ ಬಹುಮತ ಬರಬಹುದು ಎಂದು ಎಕ್ಸಿಟ್‌ ಪೋಲ್‌ ಫಲಿತಾಂಶಗಳು ಭವಿಷ್ಯ ನುಡಿದಿದ್ದವು.

ಜಗನ್‌ ಸೋಲಿಗೆ ಕಾರಣಗಳು

ಈ ಬಾರಿ ಆಂಧ್ರದಲ್ಲಿ ಜಗನ್‌ ಮೋಹನ್‌ ಸೋಲಿಗೆ ಪ್ರಮುಖ ಕಾರಣ ಚಂದ್ರಬಾಬು ನಾಯ್ಡು ಅವರನ್ನು ಅರೆಸ್ಟ್‌ ಮಾಡಿಸಿದ್ದು ಎನ್ನಲಾಗುತ್ತಿದೆ. ಸಮಾಜ ಕಲ್ಯಾಣ ಕೆಲಸಗಳ ಮೂಲಕ ಬ್ರ್ಯಾಂಡ್‌ ವ್ಯಾಲ್ಯೂ ರೂಪಿಸಿಕೊಂಡ ಜಗನ್‌ ಸರ್ಕಾರಕ್ಕೆ ಚಂದ್ರಬಾಬು ನಾಯ್ಡು ಅವರ ಬಂಧನ ದೊಡ್ಡ ಹೊಡೆತ ನೀಡಿದ್ದು ಸುಳ್ಳಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ಇದರ ಲಾಭ ಪಡೆದುಕೊಂಡು ಬಿಜೆಪಿ ಟಿಡಿಪಿ ಹಾಗೂ ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿತು. ಇದು ಜಗನ್‌ ಹಿನ್ನೆಡೆಗೆ ಕಾರಣವಾಯಿತು.

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಟಿ20 ವರ್ಲ್ಡ್‌ಕಪ್ 2024