ಬಿಜೆಪಿ ಕೈಹಿಡಿಯದ ಸಂದೇಶ್‌ಖಲಿ; ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ತಡೆದ ಮಮತಾ ಬ್ಯಾನರ್ಜಿಯ ಟಿಎಂಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಜೆಪಿ ಕೈಹಿಡಿಯದ ಸಂದೇಶ್‌ಖಲಿ; ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ತಡೆದ ಮಮತಾ ಬ್ಯಾನರ್ಜಿಯ ಟಿಎಂಸಿ

ಬಿಜೆಪಿ ಕೈಹಿಡಿಯದ ಸಂದೇಶ್‌ಖಲಿ; ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ತಡೆದ ಮಮತಾ ಬ್ಯಾನರ್ಜಿಯ ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೆ ಮುನ್ನಡೆ ಸಾಧಿಸದೆ. ಲೋಕಸಭಾ ಚುನಾವಣೆಗೆ ಬಿಜೆಪಿ ಕೈಗೊಂಡ ಪ್ರಚಾರ ತಂತ್ರ ವಿಫಲವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ರಾಜ್ಯದಲ್ಲಿ ಮತ್ತೆ ಪ್ರಾಬಲ್ಯ ಮೆರೆದಿದೆ.

ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ತಡೆದ ಮಮತಾ ಬ್ಯಾನರ್ಜಿಯ ಟಿಎಂಸಿ
ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ತಡೆದ ಮಮತಾ ಬ್ಯಾನರ್ಜಿಯ ಟಿಎಂಸಿ (PTI)

ದೇಶದಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಪಶ್ಚಿಮ ಬಂಗಾಳ (West Bengal Lok Sabha Election 2024 Result) ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್, ಲೋಕಸಭೆಯ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸದ್ಯದ ಟ್ರೆಂಡ್‌ ಮುಂದುವರೆದರೆ, ರಾಜ್ಯದಲ್ಲಿ ಮತ್ತೆ ಟಿಎಂಸಿ ಅತಿ ದೊಡ್ಡ ಪಕ್ಷವಾಗಿ ಮುಂದುವರೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಸ್ಥಾನಗಳಿವೆ. ಮಮತಾ ಬ್ಯಾನರ್ಜಿ (Mamata Banerjee) ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ದೀದಿಯ ಪ್ರಭಾವ ಕಡಿಮೆ ಮಾಡಲು ಬಿಜೆಪಿ ತಂತ್ರ ಹೆಣೆದಿತ್ತು. ದೇಶದ ಗಮನ ಸೆಳೆದಿದ್ದ ಸಂದೇಶ್‌ಖಲಿ ಪ್ರಕರಣವನ್ನು ಹಿಡಿದು ಟಿಎಂಸಿ ಸರ್ಕಾರವನ್ನು ಗುರಿಯಾಗಿಸುವುದು ಬಿಜೆಪಿ ಪ್ರಯತ್ನವಾಗಿತ್ತು. ಇತ್ತೀಚೆಗೆ ಪ್ರಕಟವಾದ ಎಕ್ಸಿಟ್‌ ಪೋಲ್‌ನಲ್ಲೂ ಇದೇ ನಿಜವಾಗುವ ಸೂಚನೆ ಇತ್ತು. ಆದರೆ ಈಗ ಆಗಿದ್ದೇ ಬೇರೆ.

ಮಧ್ಯಾಹ್ನ 2 ಗಂಟೆಯವರೆಗಿನ ಟ್ರೆಂಡ್‌ ಪ್ರಕಾರ ಬಿಜೆಪಿ ಕೇವಲ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪ್ರಬಲ ತೃಣಮೂಲ ಕಾಂಗ್ರೆಸ್ 30 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಅತ್ತ ಕಾಂಗ್ರೆಸ್ 1 ಸ್ಥಾನ ಮಾತ್ರ ಗೆಲ್ಲುವ ಸಾಧ್ಯತೆ ಇದೆ.

ಮಧ್ಯಾಹ್ನ 2 ಗಂಟೆಗೆ ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಯ ಪ್ರಕಾರ, ಟಿಎಂಸಿ ಪಕ್ಷ ಪಶ್ಚಿಮ ಬಂಗಾಳದ ಅನೇಕ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಬಹರಾಂಪುರ, ದಮ್ ದಮ್, ಜಾದವ್‌ಪುರ, ಅಸನ್ಸೋಲ್, ಬಿರ್ಭುಮ್, ಕೃಷ್ಣನಗರ ಮತ್ತು ಡೈಮಂಡ್ ಹಾರ್ಬರ್‌ನಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ. ಬಹರಾಂಪುರದಲ್ಲಿ ಟಿಎಂಸಿಯ ಯೂಸುಫ್ ಪಠಾಣ್ ಗಮನಾರ್ಹ ಮುನ್ನಡೆ ಸಾಧಿಸಿದರೆ, ದಮ್ ದಮ್ ಮತ್ತು ಜಾದವ್‌ಪುರದಲ್ಲಿ ಟಿಎಂಸಿ ಅಭ್ಯರ್ಥಿಗಳಾದ ಸೌಗತಾ ರೇ ಮತ್ತು ಸಯಾನಿ ಘೋಷ್ ಕ್ರಮವಾಗಿ ಮುನ್ನಡೆ ಸಾಧಿಸಿದ್ದಾರೆ. ಅಸನ್ಸೋಲ್‌ನಲ್ಲಿ ಟಿಎಂಸಿ ಪರ ಕಣಕ್ಕಿಳಿದ ನಟ ಶತ್ರುಘ್ನ ಪ್ರಸಾದ್ ಸಿನ್ಹಾ ಮುನ್ನಡೆ ಸಾಧಿಸಿದ್ದಾರೆ.

ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಭರ್ಜರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಬರಾಕ್‌ಪುರ, ಹೂಗ್ಲಿ ಮತ್ತು ಮೇದಿನಿಪುರ ಸೇರಿದಂತೆ 10 ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದೆ.

ಕೈಕೊಟ್ಟ ಚುನಾವಣಾ ಬಿಜೆಪಿ ತಂತ್ರಗಳು

ಬಿಜೆಪಿಯು ಚುನಾವಣಾ ಪ್ರಚಾರದ ಸಮಯದಲ್ಲಿ, ಟಿಎಂಸಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿತ್ತು. ತೃಣಮೂಲ ಕಾಂಗ್ರೆಸ್ "ಮುಸ್ಲಿಂ ಮತ ಬ್ಯಾಂಕ್" ಅನ್ನು ತೃಪ್ತಿಪಡಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.‌ ಇವು ಯಾವುದೂ ಪಕ್ಷದ ಕೈಹಿಡಿದಿಲ್ಲ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗಿಂತ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಇದೀಗ ಅದು ಸುಳ್ಳಾಗುವ ಸಾಧ್ಯತೆ ಹೆಚ್ಚಿದೆ.

2019ರ ಲೋಕಸಭಾ ಚುನಾವಣೆಯಲ್ಲಿ, ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು. ಅತ್ತ ಬಿಜೆಪಿ 18 ಸ್ಥಾನಗಳನ್ನು ಗೆದ್ದು ಭಾರಿ ಸಾಧನೆ ಮಾಡಿತ್ತು. ಬರೋಬ್ಬರಿ 16 ಕ್ಷೇತ್ರಗಳಲ್ಲಿ ತನ್ನ ಸಂಸದರನ್ನು ಗೆಲ್ಲಿಸಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.