LIVE: ಮುನ್ನಡೆ ಕಾಯ್ದುಕೊಂಡ ಎನ್‌ಡಿಎ, 3ನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಬಹುತೇಕ ಖಚಿತ, ಸಂಖ್ಯೆ ಹೆಚ್ಚಿಸಿಕೊಂಡ ಕಾಂಗ್ರೆಸ್
Election Results 2024 Live Updates: ಲೋಕಸಭಾ ಚುನಾವಣೆಯ ಮತ ಎಣಿಕೆ ಇಂದು 8 ಗಂಟೆಗೆ ಆರಂಭವಾಗಿದೆ. ಬಹಳಷ್ಟು ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ತಮಿಳುನಾಡು, ಆಂಧ್ರ, ತೆಲಂಗಾಣ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ಮತಎಣಿಕೆಯ ಲೈವ್ ಅಪ್‌ಡೇಟ್ಸ್ ಇಲ್ಲಿದೆ.

Election Results 2024 Live Updates: ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಆರಂಭವಾಗಿದೆ. ಭಾರತದ ಮುಂದಿನ ಪ್ರಧಾನ ಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಲಿರುವ ಈ ಚುನಾವಣಾ ಫಲಿತಾಂಶವನ್ನು ಜಗತ್ತು ಕುತೂಹಲದಿಂದ ಗಮನಿಸುತ್ತಿದೆ. ಷೇರುಪೇಟೆ ಹೂಡಿಕೆದಾರರು ರಿಸಲ್ಟ್ ಮುನ್ನೋಟಕ್ಕೆ ತಕ್ಕಂತೆ ಷೇರು ಖರೀದಿ ಮಾರಾಟದ ಕೆಲಸದಲ್ಲಿ ನಿರತರಾಗಿದ್ದಾರೆ. ಭಾರತದ ಹಲವು ಸಂಸದರ ಭವಿಷ್ಯ ಬರೆಯಲಿರುವ, ಭಾರತದ ಅಭಿವೃದ್ಧಿ, ಭವಿಷ್ಯದ ಕುರಿತು ಮುನ್ನುಡಿಯಾಗಲಿರುವ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿ ನೀಡಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಹರಿಯಾಣ, ಕೇರಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಓಡಿಶಾ, ಅಸ್ಸಾಂ, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರ ಸೇರಿದಂತೆ ವಿವಿಧ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಲೋಕಸಭಾ ಕ್ಷೇತ್ರಗಳ ಲೈವ್ ಅಪ್‌ಡೇಟ್ಸ್ ಇಲ್ಲಿ ನೀಡಲಾಗುತ್ತಿದೆ. ತಾಜಾ ಮಾಹಿತಿಗಾಗಿ ಈ ಪುಟವನ್ನು ಆಗಾಗ ರಿಫ್ರೆಶ್ ಮಾಡುತ್ತಿರಿ.
01: 25 PM
ಚಂದ್ರಬಾಬು ನಾಯ್ಡು ಸಿಂಎಂ ಆಗಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್
ಆಂಧ್ರಪ್ರದೇಶದ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಮುನ್ನಡೆ ಸಾಧಿಸಿದ್ದು ಆಡಳಿತಾರೂಢ ವೈಎಸ್ಆರ್ ಹಿಂದಿದೆ. ಗೆಲುವು ಖಚಿತ ಎಂಬ ಮಾತುಗಳು ಕೇಳಿಬಂದಿದ್ದು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಜಗನ್ ಮೋಹನ್ ರೆಡ್ಡಿ ರಾಜೀನಾಮೆ ನೀಡಲು ಮುಂದಾಗಿದ್ದು, ಚಂದ್ರಬಾಬು ನಾಯ್ಡು ಸಿಎಂ ಆಗಿ ಪ್ರಮಾಣ ಸ್ವೀಕರಿಸಲು ಮುಹೂರ್ತ ನಿಗದಿ ಆಗಿದೆ. ಜೂನ್ 9 ರಂದು ಚಂದ್ರಬಾಬು ನಾಯ್ಡು ಅಮರಾವತಿಯಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
01:10 PM
ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ
ಎಕ್ಸಿಟ್ ಪೋಲ್ ಭವಿಷ್ಯ ನಿಜವಾಗಿದೆ. ಕೇರಳದಲ್ಲಿ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಖಾತೆ ತೆರೆದಿದೆ. ತ್ರಿಶೂರ್‌ನಲ್ಲಿ ಸುರೇಶ್ ಗೋಪಿ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಗೆಲುವಿಗೆ ಕಾರಣರಾದ ಜನತೆಗೆ ಸುರೇಶ್ ಗೋಪಿ ಧನ್ಯವಾದ ಅರ್ಪಿಸಿದ್ದಾರೆ.
12:55 PM
ಲಖನೌ ಮತ ಎಣಿಕೆ ಕೇಂದ್ರದ ಮುಂದೆ ಕಾರ್ಯಕರ್ತರ ಹೊಡೆದಾಟ
ಉತ್ತರ ಪ್ರದೇಶದ ಲಖನೌ ಮತ ಎಣಿಕೆ ಕೇಂದ್ರದ ಮುಂದೆ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಮತ ಎಣಿಕೆ ಕೇಂದ್ರದ ಮುಂದೆ ಭಾರೀ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದು ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
12:20 PM
ಪಶ್ಚಿಮ ಬಂಗಾಳ ಅಸನ್ಸೋಲ್ ಕ್ಷೇತ್ರದಲ್ಲಿ ನಟ ಶತ್ರುಘ್ನ ಸಿನ್ಹಾ ಮುನ್ನಡೆ
ಪಶ್ಚಿಮ ಬಂಗಾಳ ಅಸನ್ಸೋಲ್ ಲೋಕಸಭೆ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಲಿವುಡ್ ನಟ ನಟ ಶತ್ರುಘ್ನ ಸಿನ್ಹಾ 26,197 ಮತಗಳ ಅಂತರದಿಂದ ಮುಂದಿದ್ದಾರೆ.
11:45 AM
ಆಂಧ್ರಪ್ರದೇಶದಲ್ಲಿ ಟಿಡಿಪಿ ಮುನ್ನಡೆ; ಕುಣಿದು ಕುಪ್ಪಳಿಸಿದ ಮಹಿಳಾ ಕಾರ್ಯಕರ್ತೆಯರು
ಲೋಕಸಭೆ ಚುನಾವಣೆ ಜೊತೆಗೆ ಇಂದು ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮುನ್ನಡೆ ಸಾಧಿಸಿದ್ದು ಆಡಳಿತಾರೂಢ ವೈಎಸ್ಆರ್ ಹಿಂದಿದೆ. ಟಿಡಿಪಿ ಪಕ್ಷದ ಕಚೇರಿ ಎದುರು ಮಹಿಳಾ ಕಾರ್ಯಕರ್ತರು ಆಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
11:15 AM
ಆಂಧ್ರಪ್ರದೇಶ ಪಿಠಾಪುರಂನಲ್ಲಿ ಪವನ್ ಕಲ್ಯಾಣ್ ಭಾರೀ ಅಂತರದಲ್ಲಿ ಮುನ್ನಡೆ
ಆಂಧ್ರಪ್ರದೇಶದಲ್ಲಿ ಅತ್ಯಂತ ಕುತೂಹಲಕಾರಿ ಕ್ಷೇತ್ರವೆಂದೇ ಹೆಸರಾಗಿರುವ ಪಿಠಾಪುರದಿಂದ ಸ್ಪರ್ಧಿಸಿದ್ದ ಜನಸೇನಾ ನಾಯಕ, ತೆಲುಗು ನಟ ಪವನ್ ಕಲ್ಯಾಣ್ ಭಾರಿ ಬಹುಮತದಿಂದ ಗೆಲ್ಲುವ ಸಾಧ್ಯತೆ ಇದೆ. ಪವನ್ ಕಲ್ಯಾಣ್ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಗೆಲುವಿನ ಸಂಭ್ರಮ ಆಚರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
10:40 AM
ಹಿಮಾಚಲಪ್ರದೇಶ ಮಂಡಿ ಕ್ಷೇತ್ರದಲ್ಲಿ ನಟಿ ಕಂಗನಾ ರಣಾವತ್ ಮುನ್ನಡೆ
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರತಿಸ್ಪರ್ಧಿಗಿಂತ 30,254 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದು ನಟಿ ಕಂಗನಾ, ತಮ್ಮ ನಿವಾಸದಲ್ಲಿ ಪೂಜೆ ಸಲ್ಲಿಸಿ ದೇವರಿಗೆ ಪ್ರಾರ್ಥಿಸಿದರು.
10:40 AM
ರಾಯ್‌ಬರೇಲಿ, ವೈನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆ
ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಕೇರಳದ ವೈನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುನ್ನಡೆ ಸಾಧಿಸಿದ್ಧಾರೆ.
10:20 AM
ಲೋಕಸಭಾ ಚುನಾವಣೆ ಮತ ಎಣಿಕೆ ಪರಿಣಾಮ, ಷೇರುಪೇಟೆಯಲ್ಲಿ ತಲ್ಲಣ
ಲೋಕಸಭೆ ಮತಎಣಿಕೆ ಆರಂಭವಾದ ಬೆನ್ನಲ್ಲೇ ಪೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು ಬೆಳಿಗ್ಗೆ 9.15 ರ ಹೊತ್ತಿಗೆ 2.2 ಶೇ 22,779 ರಷ್ಟು ಕುಸಿದಿದೆ ಮತ್ತು ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಶೇ 1.8 ರಷ್ಟು ಕುಸಿದು 75,163 ಕ್ಕೆ ತಲುಪಿದೆ.
9:20 AM
ಮ್ಯಾಜಿಕ್ ನಂಬರ್ ತಲುಪಿದ ಎನ್‌ಡಿಎ
ದೇಶಾದ್ಯಂತ ಎನ್‌ಡಿಎ ಮೈತ್ರಿಕೂಟ 272ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸರಳ ಬಹುಮತಕ್ಕೆ 272 ಕ್ಷೇತ್ರಗಳಲ್ಲಿ ಗೆಲುವು ಅನುವಾರ್ಯ. ಎನ್‌ಡಿಎ ಈಗಾಗಲೇ 272 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.
9:18 AM
ಸಂದೇಶ್‌ಖಲಿಯಲ್ಲಿ ಬಿಜೆಪಿಗೆ ಮುನ್ನಡೆ
ದೇಶದ ಗಮನಸೆಳೆದಿರುವ ಪಶ್ಚಿಮಬಂಗಾಳದ ಸಂದೇಶ್‌ಖಲಿ ಇರುವ ಬಸೀರ್‌ಹತ್ ಕ್ಷೇತ್ರದಲ್ಲಿ ಬಿಜೆಪಿಯ ರೇಖಾ ಪಾತ್ರ ಮುನ್ನಡೆ ಸಾಧಿಸಿದ್ದಾರೆ. ಆರಂಭಿಕ ಟ್ರೆಂಡ್ ಪ್ರಕಾರ ರಾಜ್ಯದಲ್ಲಿ ಬಿಜೆಪಿ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, 8 ಕ್ಷೇತ್ರಗಳಲ್ಲಿ ಟಿಎಂಸಿ ಮುಂದಿದೆ.
9:15 AM
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮುನ್ನಡೆ
ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿರುವ ಸಮಾಜವಾದಿ ಪಕ್ಷದ 15 ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ 9 ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಎಸ್‌ಪಿಯ ವೀರೇಂದ್ರ ಸಿಂಗ್, ಡಿಂಪಲ್ ಯಾದವ್, ಅಕ್ಷಯ್ ಯಾದವ್ ಮುನ್ನಡೆಯಲ್ಲಿದ್ದಾರೆ. ಗೊರಖ್‌ಪುರದಲ್ಲಿ ಬಿಜೆಪಿಯ ರವಿಕಿಶನ್ ಮುನ್ನಡೆ ಸಾಧಿಸಿದ್ದಾರೆ.
8:30 AM
ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ, ವಾರಣಾಸಿಯಲ್ಲಿ ಮೋದಿ ಮುನ್ನಡೆ
ವಾರಣಾಸಿಯಲ್ಲಿ ಪ್ರಧಾನಿ ಮೋದಿ, ವಯನಾಡ್ ಹಾಗೂ ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ, ಲಖ್ನೌದಲ್ಲಿ ರಾಜ್‌ನಾಥ್ ಸಿಂಗ್, ಹಿಮಾಚಲಪ್ರದೇಶದ ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಮುನ್ನಡೆ, ಅಮೇಥಿ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಮುನ್ನಡೆ ಸಾಧಿಸಿದ್ದಾರೆ. ದೇಶಾದ್ಯಂತ 120ಕ್ಕೂ ಅಧಿಕ ಕ್ಷೇತ್ರಗಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. 46 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
8:00 AM
ಚುನಾವಣೆ ಫಲಿತಾಂಶ ಹಿನ್ನೆಲೆ, ಅಭ್ಯರ್ಥಿಗಳ ಟೆಂಪಲ್ ರನ್
ದೇಶಾದ್ಯಂತ ಮತ ಎಣಿಕೆ ಆರಂಭವಾಗಿದೆ. ಇಂದು 8 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಹಿನ್ನೆಲೆ ರಾಜಕೀಯ ನಾಯಕರು ಇಂದು ಬೆಳ್ಳಂ ಬೆಳಗ್ಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
7:30 AM
ಈ ಬಾರಿ ದಾಖಲೆಗೆ ಸಾಕ್ಷಿಯಾದ ಲೋಕಸಭೆ ಚುನಾವಣೆ
ಈ ಬಾರಿ ನಡೆದ 7 ಹಂತದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 64.2 ಕೋಟಿ ಜನರು ತಮ್ಮ ಹಕ್ಕು ಚಲಾಯಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. 31.2 ಕೋಟಿ ಮಹಿಳೆಯರು, 33 ಕೋಟಿ ಪುರುಷರು ಸೇರಿದಂತೆ ಒಟ್ಟು 64.2 ಕೋಟಿ ಮಂದಿ ಮತ ಚಲಾಯಿಸಿದ್ದಾರೆ. ವಿಶ್ವದ ಇತರ ಚುನಾವಣೆಗಳಲ್ಲಿ ಭಾರತದ ಲೋಕಸಭೆ ಚುನಾವಣೆಯಲ್ಲಿ ದಾಖಲಾದ ಅತಿಹೆಚ್ಚು ಮತದಾನವಾಗಿದೆ.
6:50 AM
ನರೇಂದ್ರ ಮೋದಿ 3ನೇ ಬಾರಿ ಅಧಿಕಾರಕ್ಕೆ ಬಂದರೆ ಮೊದಲ ನೂರು ದಿನದ ಯೋಜನೆಗಳು ಹೀಗಿವೆ
ಎಕ್ಸಿಟ್ ಪೋಲ್ ಭವಿಷ್ಯ ನುಡಿದಂತೆ ಮೂರನೇ ಬಾರಿಗೂ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೆ ಯುಪಿಎಸ್‌ಸಿ ಪರೀಕ್ಷೆ ಹಾಗೂ ಕೋರ್ಸ್‌ಗಳ ವಿಚಾರದಲ್ಲಿ ಬದಲಾವಣೆ ತರುವುದು. ನಾರಿಶಕ್ತಿ, ಯುವಶಕ್ತಿ ಹಾಗೂ ಕಿಸಾನ್ ಶಕ್ತಿಯನ್ನು ಮತ್ತಷ್ಟು ಬಲಪಡಿಸುವುದು, ಸೇನೆಗೆ ನೂತನ ಮುಖ್ಯಸ್ಥರು ಆಯ್ಕೆ ಮಾಡುವುದು ಸೇರಿದಂತೆ ಮೊದಲ 100 ದಿನಗಳಲ್ಲಿ ನಾನಾ ಯೋಜನೆಗಳನ್ನು ಈಗಾಗಲೇ ಸಿದ್ಧತೆ ಮಾಡಿಕೊಂಡಿರುವುದು ತಿಳಿದುಬಂದಿದೆ.
6:20 AM
ಮತ ಎಣಿಕೆ ನೇರ ಪ್ರಸಾರ, ಲೈವ್ ಅಪ್‌ಡೇಟ್ಸ್ ಪಡೆಯಲು ಹೀಗೆ ಮಾಡಿ
ಭಾರತದ ಅಧಿಕೃತ ಚುನಾವಣಾ ಆಯೋಗದ (ಇಸಿಐ) ವೆಬ್‌ಸೈಟ್ ಮತ ಎಣಿಕೆಯ ಪ್ರವೃತ್ತಿಗಳು ಮತ್ತು ಫಲಿತಾಂಶಗಳನ್ನು ಪ್ರದರ್ಶಿಸುತ್ತದೆ. ಇವು ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಿಗೆ https://results.eci.gov.in/ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.
6:00 AM
ದೆಹಲಿ ಬಿಜೆಪಿ ಕಚೇರಿಯಲ್ಲಿ ಬಂದೋಬಸ್ತ್
ಇಂದು ಬೆಳಗ್ಗೆ 8 ಗಂಟೆಯಿಂದ ಎಲ್ಲೆಡೆ ಮತ ಎಣಿಕೆ ಆರಂಭವಾಗುತ್ತಿದೆ. ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮತ ಎಣಿಕೆಗೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರು ಮತ ಎಣಿಕೆ ವೀಕ್ಷಿಸಲು ಶಾಮಿಯಾನ ಕೂಡಾ ಅಳವಡಿಸಲಾಗಿದೆ. ಇಂದು ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದ್ದು ಬಿಗಿ ಬಂದೋಬಸ್ತ್ ಮಾಡಲಾಗಿದೆ.
5: 40 AM
ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಫಲಿತಾಂಶ ವೀಕ್ಷಿಸಲು ಎಲ್‌ಇಡಿ ಪರದೆ ವ್ಯವಸ್ಥೆ
ಲೋಕಸಭೆ ಚುನಾವಣೆ ಫಲಿತಾಂಶಕ್ಕಾಗಿ ಭಾರತ ಮಾತ್ರವಲ್ಲ ಇತರ ದೇಶಗಳೂ ಕಾಯುತ್ತಿವೆ. ಈ ಬಾರಿ ಯಾರು ಬಹುಮತ ಪಡೆದು ಪ್ರಧಾನಿ ಆಗಬಹುದು ಎಂಬ ಕುತೂಹಲ ಇದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗುತ್ತಿದ್ದು ದೆಹಲಿ ಕಾಂಗ್ರೆಸ್ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ಫಲಿತಾಂಶ ವೀಕ್ಷಿಸಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

ವಿಭಾಗ