ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Breaking News: ಭಾಷಣ ಮಾಡುವಾಗಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

Breaking News: ಭಾಷಣ ಮಾಡುವಾಗಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಲೋಕಸಭೆ ಚುನಾವಣೆ ಪ್ರಚಾರದಲ್ಲಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಏಕಾಏಕಿ ಕುಸಿದು ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡಿದ್ದಾರೆ.

ಪ್ರಚಾರದ ವೇಳೆ ಕುಸಿದು ಬಿದ್ದ ನಿತಿನ್‌ ಗಡ್ಕರಿ
ಪ್ರಚಾರದ ವೇಳೆ ಕುಸಿದು ಬಿದ್ದ ನಿತಿನ್‌ ಗಡ್ಕರಿ (ndtv)

ನಾಗ್ಪುರ: ಮಹಾರಾಷ್ಟ್ರದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಏಕಾಏಕಿ ಕುಸಿದು ಬಿದ್ದ ಘಟನೆ ಯಮತ್ಮಾಳ್‌ನಲ್ಲಿ ನಡೆದಿದೆ. ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಂಡ ಗಡ್ಕರಿ ಅವರು ಪ್ರಚಾರ ಸಭೆಯನ್ನು ಮುಂದುವರೆಸಿದರು. ಏಕಾಏಕಿ ಕುಸಿತಗೊಂಡಿದ್ದರಿಂದ ಅಲ್ಲಿ ಸೇರಿದ್ದವರು ಕೆಲ ಕ್ಷಣ ಆತಂಕಕ್ಕೆ ಒಳಗಾದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ನಿತಿನ್‌ ಗಡ್ಕರಿ ಈಗ ಆರಾಮಾಗಿದ್ದೇನೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಯವತ್ಮಾಳ್‌ ಜಿಲ್ಲೆಯಲ್ಲಿ ಮೈತ್ರಿ ಪಕ್ಷ ಸಿಎಂ ಏಕನಾಥ್‌ ಶಿಂಧೆ ಬಣದ ಅಭ್ಯರ್ಥಿ ರಾಜಶ್ರೀ ಅವರ ಪರವಾಗಿ ಭಾಷಣ ಮಾಡುತ್ತಿದ್ದ ನಿತಿನ್‌ ಗಡ್ಕರಿ ಅವರಿಗೆ ತಲೆ ಸುತ್ತಲು ಆರಂಭಿಸಿತು. ಮಾತನಾಡುತ್ತಲೇ ವೇದಿಕೆಯಲ್ಲಿಯೇ ಅವರು ಕುಸಿಯಲು ಆರಂಭಿಸಿದರು. ಪಕ್ಕದಲ್ಲೇ ನಿಂತಿದ್ದ ಭದ್ರತಾ ಸಿಬ್ಬಂದಿ ಹಾಗೂ ಮುಖಂಡರು ಅವರನ್ನು ಸುತ್ತವರೆದು ಕೆಳಕ್ಕೆ ಬೀಳುವುದನ್ನು ತಪ್ಪಿಸಿದರು. ಅಲ್ಲಿಯೇ ತುರ್ತು ಚಿಕಿತ್ಸೆಯನ್ನು ಅವರಿಗೆ ನೀಡಲಾಯಿತು. ದ್ರವಾಹಾರವನ್ನು ಸೇವಿಸಿದ ನಿತಿನ್‌ ಗಡ್ಕರಿ ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಂಡರು.

ಅಲ್ಲಿಯೇ ಕುಳಿತು ಸುಧಾರಿಸಿಕೊಂಡ ನಿತಿನ್‌ ಗಡ್ಕರಿ ಅವರು ಮತ್ತೆ ವೇದಿಕೆ ಏರಿ ಭಾಷಣ ಮುಂದುವರಿಸಿದರು. ಈ ವೇಳೆ ಅಲ್ಲಿಯೇ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಸ್ಥಳೀಯರನ್ನು ಪೊಲೀಸರು ನಿಯಂತ್ರಿಸಿದರು.

ಆನಂತರ ಮಾತನಾಡಿದ ನಿತಿನ್‌ ಗಡ್ಕರಿ, ಬಿಸಿಲಿನಿಂದ ಈ ರೀತಿ ಆಯಿತು. ಮಾತನಾಡುವಾಗ ಏನಾಯಿತು ಎನ್ನುವುದೇ ತಿಳಿಯಲಿಲ್ಲ. ತಲೆ ಸುತ್ತಿದ್ದರಿಂದ ಕುಸಿದು ಬೀಳುವಂತಾಯಿತು. ಜತೆಗಿದ್ದವರು ಆರೈಕೆ ಮಾಡಿದ್ದರಿಂದ ಚೇತರಿಸಿಕೊಂಡು ಬಂದಿದ್ದೇನೆ ಎಂದು ಗಡ್ಕರಿ ಹೇಳಿದರು.

ಅವರು ಭಾಷಣ ಮಾಡುವಾಗ ಎಕ್ಸ್‌ ಪೋಸ್ಟ್‌ ಸೇರಿದಂತೆ ಹಲವು ಕಡೆ ನೇರ ಪ್ರಸಾರವೂ ಇತ್ತು. ಅವರು ಕುಸಿದು ಬೀಳುತ್ತಿದ್ದುದು, ಅಲ್ಲಿದ್ದವರು ಓಡಿ ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಸಿತ್ತು. ಮತ್ತೆ ಚೇತರಿಸಿಕೊಂಡು ಬಂದಿದ್ದೂ ಪ್ರಸಾರವಾಯಿತು.

ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಗಡ್ಕರಿ, ನಾನು ಚೇತರಿಸಿಕೊಂಡಿದ್ದೇನೆ. ಈಗ ಪ್ರಚಾರ ಮುಗಿಸಿ ಮತ್ತೊಂದು ಕಡೆ ಪ್ರಚಾರಕ್ಕೆ ಹೊರಟಿದ್ದೇನೆ. ಬಿಸಿಲು ಹೆಚ್ಚಾಗಿದೆ. ಅತಿಯಾಗಿ ಪ್ರವಾಸ ಮಾಡಿದ್ದರಿಂದ ಬಳಲಿ ಹೀಗಾಗಿದೆ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಋಣಿ ಎಂದು ಬರೆದುಕೊಂಡಿದ್ದಾರೆ.

ಕೆಲ ವರ್ಷದ ಹಿಂದೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ಅವರು ಇದೇ ರೀತಿ ಕುಸಿದಿದ್ದರು. ಆಗಲೂ ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗಿತ್ತು.ಚೇತರಿಸಿಕೊಂಡಿದ್ದರು. ಇದೇ ರೀತಿಯ ಘಟನೆ ಮತ್ತೆ ಈ ಬಾರಿ ನಡೆದಿದೆ.

ಹಿರಿಯ ಬಿಜೆಪಿ ನಾಯಕರಾಗಿರುವ ನಿತಿನ್‌ ಗಡ್ಕರಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದವರು. ನಾಗ್ಪುರ ಕ್ಷೇತ್ರದಿಂದ ಸಂಸದರಾಗಿ ಕೇಂದ್ರದಲ್ಲಿ ಹತ್ತು ವರ್ಷದಿಂದಲೂ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point