ಲೋಕಸಭಾ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಲವು ವಿಶೇಷ; ಗಮನಸೆಳೆದ 10 ಅಂಶಗಳಿವು
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿತು. ಅದರಲ್ಲಿ ಹಲವು ವಿಶೇಷಗಳಿವೆ. ಆ ರೀತಿ ಗಮನಸೆಳೆದ 10 ಅಂಶಗಳಿವು.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಎಂಟು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಶುಕ್ರವಾರ ಪ್ರಕಟಿಸಿದೆ. ಛತ್ತೀಸ್‌ಗಡ, ಕರ್ನಾಟಕ, ಕೇರಳ, ಲಕ್ಷದ್ವೀಪ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ ಮತ್ತು ತ್ರಿಪುರಾ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಘೋಷಿಸಿದೆ.
ಲೋಕಸಭಾ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಆದಾಗ್ಯೂ, ಪಕ್ಷಗಳು ಮುಂಚಿತವಾಗಿಯೇ ಚುನಾವಣೆಗೆ ಸಜ್ಜಾಗಿದ್ದು, ಬಿಜೆಪಿ 195 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬೆನ್ನಿಗೆ ಕಾಂಗ್ರೆಸ್ ಕೂಡ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರ ಸೇರಿ 39 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳಿವೆ.
ಎರಡನೇ ಪಟ್ಟಿ ಸೋಮವಾರ ಅಥವಾ ಮಂಗಳವಾರ ಪ್ರಕಟವಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಸೋಮವಾರ ನಡೆಯಲಿದ್ದು, ಅದರ ಬಳಿಕ ಉಳಿದ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯ 10 ಮುಖ್ಯ ಅಂಶಗಳಿವು
1) ಪರಿಶಿಷ್ಟರು, ಒಬಿಸಿ, ಅಲ್ಪಸಂಖ್ಯಾತರಿಗೆ ಮಣೆ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಕಟಿಸಿರುವ 39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಹೆಚ್ಚಿದ್ದಾರೆ. ರಾಹುಲ್ ಗಾಂಧಿ ಅವರ ಪ್ರತಿಪಾದನೆಗೆ ಅನುಗುಣವಾಗಿ ಕಾಂಗ್ರೆಸ್ ಪಕ್ಷದಲ್ಲಿ ಈ ವರ್ಗದವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದನ್ನು ಸಾಬೀತು ಮಾಡುವಂತಿದೆ.
2) ವಯನಾಡ್‌ನಿಂದಲೇ ರಾಹುಲ್ ಗಾಂಧಿ ಸ್ಪರ್ಧೆ: ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಹಾಲಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡ್‌ನಿಂದಲೇ ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ತಿರುವನಂತಪುರದಿಂದ ಶಶಿತರೂರ್, ಕೇರಳದ ಆಲಪ್ಪುಳದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸ್ಪರ್ಧಿಸಲಿದ್ದಾರೆ. ಛತ್ತೀಸ್‌ಗಡದ ರಾಜನಂದಗಾಂವ್‌ನಿಂದ ಮಾಜಿ ಸಿಎಂ ಭೂಪೇಶ್ ಬಘೇಲ್ ಸ್ಪರ್ಧಿಸಲಿದ್ದಾರೆ.
3) ಮಧ್ಯವಯಸ್ಸಿನವರಿಗೆ ಹೆಚ್ಚು ಅವಕಾಶ: 39 ಅಭ್ಯರ್ಥಿಗಳ ಪೈಕಿ 50 ವರ್ಷದೊಳಗಿನವರು 12 ಅಭ್ಯರ್ಥಿಗಳಿದ್ದಾರೆ. 50 -60 ವರ್ಷದೊಳಗಿನ 8 ಅಭ್ಯರ್ಥಿಗಳು, 61 - 70 ವರ್ಷದೊಳಗಿನ 12 ಅಭ್ಯರ್ಥಿಗಳು, 71 ರಿಂಧ 76 ವರ್ಷದೊಳಗಿನ 7 ಸ್ಪರ್ಧಿಗಳು ಇದ್ದಾರೆ ಎಂದು ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.
4) ಕೇರಳದ ಕಣ್ಣೂರಿನಿಂದ ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್, ಶಿಲ್ಲಾಂಗ್‌ನಿಂಧ ಮೇಘಾಲಯ ಘಟಕದ ಮುಖ್ಯಸ್ಥ, ಕೇಂದ್ರದ ಮಾಜಿ ಸಚಿವ ವಿನ್ಸೆಂಟ್ ಪಾಲಾ, ರಾಜ್ಯದ ಏಕೈಕ ಸ್ಥಾನದಿಂದ ಸಿಕ್ಕಿಂ ಘಟಕದ ಮುಖ್ಯಸ್ಥ ಗೋಪಾಲ್ ಚೆಟ್ರಿ, ತ್ರಿಪುರಾ ಪಶ್ಚಿಮದಿಂದ ತ್ರಿಪುರಾ ಮುಖ್ಯಸ್ಥ ಅಸಿಮ್ ಕುಮಾರ್ ಸಹಾ, ಲಕ್ಷದ್ವೀಪದಿಂದ ಮೊಹಮ್ಮದ್ ಹಮ್ದುಲ್ಲಾ ಸಯೀದ್ ಸೇರಿ ಹಲವಾರು ರಾಜ್ಯ ಘಟಕದ ಮುಖ್ಯಸ್ಥರನ್ನು ಪಕ್ಷ ತನ್ನ ಮೊದಲ ಪಟ್ಟಿಯಲ್ಲಿ ಹೆಸರಿಸಿದೆ. ನಾಗಾಲ್ಯಾಂಡ್ ರಾಜ್ಯ ಮುಖ್ಯಸ್ಥ ಎಸ್ ಸುಪೊಂಗ್‌ಮೆರೆನ್ ಜಮೀರ್ ರಾಜ್ಯದ ಏಕೈಕ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ.
5) 39 ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳ ಹಾಲಿ ಸಂಸದರು. ಈ ಪೈಕಿ ಕೇರಳದ 15 ಹಾಲಿ ಸಂಸದರಿದ್ದಾರೆ. ರಾಹುಲ್ ಗಾಂಧಿ, ಕರ್ನಾಟಕ ಡಿಕೆ ಸುರೇಶ್ ಮತ್ತು ಇತರರು ಇದ್ದಾರೆ.
6) ಛತ್ತೀಸ್‌ಗಡದ ಮಾಜಿ ಸಿಎಂ ಭೂಪೇಶ್ ಬಘೇಲ್, ರಾಜ್ಯದ ಮಾಜಿ ಗೃಹ ಸಚಿವ ತಾಮ್ರಧ್ವಜ್ ಸಾಹು ಹೆಸರು ಕೂಡ ಮೊದಲ ಪಟ್ಟಿಯಲ್ಲೇ ಪ್ರಕಟವಾಗಿದೆ.
7) ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕೈಕ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್.
8) ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಅದು ಇಂಡಿಯಾ ಬ್ಲಾಕ್ ಬಿಟ್ಟು ತಾನು ಏಕಾಂಗಿಯಾಗಿ ಸ್ಪರ್ಧಿಸುವ ರಾಜ್ಯಗಳ ಅಭ್ಯರ್ಥಿಗಳ ಹೆಸರುಗಳನ್ನಷ್ಟೇ ಪ್ರಕಟಿಸಿದೆ.
9) ಛತ್ತೀಸ್‌ಗಡದ ಜೋತ್ಸ್ನಾ ಮಹಾಂತ್, ಕರ್ನಾಟಕದ ಗೀತಾ ಶಿವರಾಜ್ ಕುಮಾರ್, ಕೇರಳದ ರಮ್ಯಾ ಹರಿಸದಾಸ್ ಮಹಿಳಾ ಅಭ್ಯರ್ಥಿಗಳಾಗಿ ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
10) ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ 39 ಸ್ಥಾನಗಳ ಪೈಕಿ 28 ದಕ್ಷಿಣ ಭಾರತದ ರಾಜ್ಯದಲ್ಲಿರುವಂಥವು. ಈ ಪೈಕಿ ಕೇರಳದ 16, ಕರ್ನಾಟಕದ 7, ತೆಲಂಗಾಣದ4, ಲಕ್ಷದ್ವೀಪದ ಒಂದು ಸ್ಥಾನಗಳಿವೆ. ವಿಶೇಷವೆಂದರೆ, ಕಾಂಗ್ರೆಸ್ ಪ್ರಸ್ತುತ ದಕ್ಷಿಣ ಭಾರತದ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅಧಿಕಾರದಲ್ಲಿದೆ.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

ವಿಭಾಗ