ಕನ್ನಡ ಸುದ್ದಿ  /  Nation And-world  /  Lunar Mission News In Kannada Sources Says Japanese Private Company Lunar Lander Crashed Into The Moon Surface Nkn

Japanese Lunar Lander: ಚಂದಿರನ ಅಂಗಳಕ್ಕೆ ಬಿದ್ದ ಜಪಾನ್‌ ಖಾಸಗಿ ಕಂಪನಿ ಬಾಹ್ಯಾಕಾಶ ನೌಕೆ: ಸ್ಪೇಸ್‌ ರೇಸ್‌ ಬಿಡೆವು ಎಂದ ಐಸ್ಪೇಸ್‌

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ಅಂಗಳಕ್ಕೆ, ಜಪಾನ್‌ನ ಐಸ್ಪೇಸ್(ispace) ಹೆಸರಿನ ಸ್ಟಾರ್ಟ್-ಅಪ್ ಸಂಸ್ಥೆ ರವಾನಿಸಿದ್ದ ಬಾಹ್ಯಾಕಾಶ ನೌಕೆಯು ತನ್ನ ಗುರಿಯನ್ನು ತಲುಪುವಲ್ಲಿ ವಿಫಲವಾಗಿದೆ. ಈ ಕುರಿತು ಸ್ವತಃ ಮಾಹಿತಿ ನೀಡಿರುವ ಐಸ್ಪೇಸ್‌ ಕಂಪನಿ, ಚಂದ್ರನ ಮೇಲೆ ಮಾನವರಹಿತ ನೌಕೆ ಇಳಿಸುವ ತನ್ನ ಮೊದಲ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದೆ.

ಕಲಾವಿದನ ಕಲ್ಪನೆಯಲ್ಲಿ ಹಕುಟೊ-ಆರ್ ಮಿಷನ್ 1ಲ್ಯಾಂಡರ್
ಕಲಾವಿದನ ಕಲ್ಪನೆಯಲ್ಲಿ ಹಕುಟೊ-ಆರ್ ಮಿಷನ್ 1ಲ್ಯಾಂಡರ್ (Verified Twitter)

ಟೋಕಿಯೋ: ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ಅಂಗಳಕ್ಕೆ, ಜಪಾನ್‌ನ ಐಸ್ಪೇಸ್(ispace) ಹೆಸರಿನ ಸ್ಟಾರ್ಟ್-ಅಪ್ ಸಂಸ್ಥೆ ರವಾನಿಸಿದ್ದ ಬಾಹ್ಯಾಕಾಶ ನೌಕೆಯು ತನ್ನ ಗುರಿಯನ್ನು ತಲುಪುವಲ್ಲಿ ವಿಫಲವಾಗಿದೆ. ಈ ಮೂಲಕ ಚಂದ್ರನ ನೆಲ ತಲುಪುವ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಯ ಕನಸು ನುಚ್ಚುನೂರಾಗಿದೆ.

ಈ ಕುರಿತು ಸ್ವತಃ ಮಾಹಿತಿ ನೀಡಿರುವ ಐಸ್ಪೇಸ್‌ ಕಂಪನಿ, ಚಂದ್ರನ ಮೇಲೆ ಮಾನವರಹಿತ ನೌಕೆ ಇಳಿಸುವ ತನ್ನ ಮೊದಲ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದೆ. ಹಕುಟೊ-ಆರ್ ಮಿಷನ್ 1ಲ್ಯಾಂಡರ್( Hakuto-R ‌Mission 1 Lander ) ಹೆಸರಿನ ಈ ಮಾನವರಹಿತ ನೌಕೆ, ರಾತ್ರಿಯ ಸಮಯದಲ್ಲಿ ಚಂದ್ರನ ಮೇಲ್ಮೈಯನ್ನು ತಲುಪಬೇಕಾಗಿತ್ತು. ಆದರೆ ಚಂದ್ರನ ನೆಲ ಸ್ಪರ್ಶಿಸಿ 25 ನಿಮಿಷಗಳ ನಂತರ, ಈ ನೌಕೆಯೊಂದಿಗೆ ಐಸ್ಪೇಸ್‌ ಕಂಪನಿ ಸಂಪರ್ಕ ಕಡಿದುಕೊಂಡಿತು.

"ಲ್ಯಾಂಡರ್ ಅಂತಿಮವಾಗಿ ಚಂದ್ರನ ಮೇಲ್ಮೈಯಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ನಾವು ನೌಕೆಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದು, ಮರುಸಂಪರ್ಕ ಸಾಧ್ಯತೆ ತೀ ಕಡಿಮೆ.. " ಎಂದು ಐಸ್ಪೇಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಲ್ಯಾಂಡಿಂಗ್ ಏಕೆ ವಿಫಲವಾಗಿದೆ ಎಂಬುದನ್ನು ಕಂಡುಕೊಳ್ಳಲು ನಮ್ಮ ಎಂಜಿನಿಯರ್‌ಗಳು ಪ್ರಯತ್ನ ಆರಂಭಿಸಿದ್ದಾರೆ ಎಂದು ಸಂಸ್ಥೆ ಹೇಳಿದೆ.

"ನಾವು‌ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಲು ವಿಫಲವಾಗಿದ್ದರೂ, ಈ ಕಾರ್ಯಾಚರಣೆಯ ಮಹತ್ವವನ್ನು ಸಂಪೂರ್ಣವಾಗಿ ಸಾಧಿಸಿದ್ದೇವೆ. ಈ ಜ್ಞಾನ ಮತ್ತು ಕಲಿಕೆಯನ್ನು ಮಿಷನ್ 2 ಕಾರ್ಯಾಚರಣೆಯಲ್ಲಿ ನಾವು ಬಳಸಿಕೊಳ್ಳುತ್ತೇವೆ.." ಎಂದು ಐಸ್ಪೇಸ್ ಸಿಇಒ ಮತ್ತು ಸಂಸ್ಥಾಪಕ ತಕೇಶಿ ಹಕಮಡ ಹೇಳಿದ್ದಾರೆ.

ಸಂಸ್ಥೆಯು ಪ್ರಸ್ತುತ ಚಂದ್ರನ ಮೇಲ್ಮೈಯಲ್ಲಿ ನೌಕೆ ಇಳಿಸಲು, ಇನ್ನೂ ಎರಡು ಪ್ರಯತ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅಲ್ಲದೇ ಮಿಷನ್‌ 1 ಲ್ಯಾಂಡರ್‌ ವಿಫಲತೆ ನಮ್ಮ ಭವಿಷ್ಯದ ಕಾರ್ಯಾಚರಣೆಗಳಿಗೆ ಹಿನ್ನಡೆಯನ್ನುಂಟು ಮಾಡದು ಎಂದು ತಕೇಶಿ ಹಕಮಡ ಸ್ಪಷ್ಟಪಡಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ನಲ್ಲಿ, ಹಕುಟೊ-ಆರ್ ಮಿಷನ್ 1ಲ್ಯಾಂಡರ್ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್‌ ಯುನೈಟೆಡ್ ಅರಬ್ ಎಮಿರೇಟ್ಸ್‌ನ(ಯುಎಇ) ಲೂನಾರ್ ರೋವರ್ ಸೇರಿದಂತೆ, ಹಲವಾರು ದೇಶಗಳ ಪೇಲೋಡ್‌ಗಳನ್ನು ಸಾಗಿಸುತ್ತಿತ್ತು. ಕೇವಲ ಎರಡು ಮೀಟರ್ (6.5 ಅಡಿ) ಎತ್ತರ ಮತ್ತು 340 ಕಿಲೋಗ್ರಾಂಗಳಷ್ಟು (750 ಪೌಂಡ್) ತೂಕವಿರುವ ಈ ಲ್ಯಾಂಡರ್, ಕಳೆದ ತಿಂಗಳು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಚಂದ್ರನ ಮೇಲೆ ಈ ನೌಕೆ ಸ್ವಯಂಚಾಲಿತವಾಗಿ ಇಳಿಯುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿತ್ತು.

ಇಲ್ಲಿಯವರೆಗೆ, ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿವೆ. ಈ ಎಲ್ಲಾ ಯೋಜನೆಗಳು ಆಯಾ ದೇಶಗಳ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಎಂಬುದು ವಿಶೇಷ. ಏಪ್ರಿಲ್ 2019ರಲ್ಲಿ ಇಸ್ರೇಲ್‌ನ ಬಾಹ್ಯಾಕಾಶ ಸಂಸ್ಥೆ SpaceIL ಚಂದ್ರನ ಮೇಲ್ಮೈ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸುವ ವಿಫಲ ಯತ್ನ ನಡೆಸಿತ್ತು. ಈ ನೌಕೆ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದು ನಾಶವಾಗಿತ್ತು.

ಭಾರತವು 2016ರಲ್ಲಿ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಪ್ರಯತ್ನಿಸಿತು. ಆದರೆ ಚಂದ್ರಯಾನ-1 ಬಾಹ್ಯಾಕಾಶ ನೌಕೆ, ಚಂದ್ರನ ಮೇಲ್ಮೈಗೆ ಅಪ್ಪಳಿಸುವ ಮೂಲಕ, ಈ ಯೋಜನೆ ವಿಫಲಗೊಂಡಿತು. ಅದೇ ರೀತಿ ಅಮೆರಿಕದ ಎರಡು ಖಾಸಗಿ ಕಂಪನಿಗಳಾದ ಆಸ್ಟ್ರೋಬಾಟಿಕ್ ಮತ್ತು ಇಂಟ್ಯೂಟಿವ್ ಮೆಷಿನ್ಸ್, ಈ ವರ್ಷದ ಕೊನೆಯಲ್ಲಿ ಚಂದ್ರನ ನೆಲಕ್ಕೆ ತಮ್ಮ ಖಾಸಗಿ ನೌಕೆಗಳನ್ನು ಇಳಿಸಲು ನಿರ್ಧರಿಸಿವೆ.

IPL_Entry_Point

ವಿಭಾಗ