ಮಧೂರು ಬ್ರಹ್ಮಕಲಶೋತ್ಸವ: ಪಳ್ಳತ್ತಡ್ಕ ದಂಬೆಮೂಲೆಯಲ್ಲಿ ಕಾರ್ಯಾಡು ಕಾಲನಿಯ ನುರಿತರಿಂದ ಬುಟ್ಟಿ ತಯಾರಿ
Madhur Temple Brahmakalashotsava: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಇಂದು (ಮಾರ್ಚ್ 27) ಶುರುವಾಗಿದ್ದು, ಏಪ್ರಿಲ್ 7ರ ತನಕ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪಳ್ಳತ್ತಡ್ಕ ದಂಬೆಮೂಲೆಯಲ್ಲಿ ಕಾರ್ಯಾಡು ಕಾಲನಿಯ ನುರಿತರಿಂದ ಬುಟ್ಟಿ ತಯಾರಿಸಿ ಸಮರ್ಪಿಸಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Madhur Temple Brahmakalashotsava: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಧಾರ್ಮಿಕ ಕಾರ್ಯಗಳಿಗೆ ಹಾಗೂ ಭೋಜನ ವ್ಯವಸ್ಥೆಗೆ ಸ್ಥಳೀಯ ಕಾರ್ಯಾಡು ಕಾಲೊನಿಯ ನುರಿತರಿಂದ ಬುಟ್ಟಿ ತಯಾರಿಸಿ ಸಮರ್ಪಿಸಲಾಯಿತು. ಸುಮಾರು 400ಕ್ಕೂ ಅಧಿಕ ಬುಟ್ಟಿಗಳನ್ನು ಬದಿಯಡ್ಕ ಸಮೀಪದ ಪಳ್ಳತ್ತಡ್ಕ ದಂಬೆಮೂಲೆಯಲ್ಲಿ ನುರಿತ ಕಾರ್ಮಿಕರು ತಯಾರಿಸಿದ್ದರು.
ಮಧೂರು ಬ್ರಹ್ಮಕಲಶೋತ್ಸವಕ್ಕೆ ಪಳ್ಳತ್ತಡ್ಕ ದಂಬೆಮೂಲೆ ಬುಟ್ಟಿ
ಕಾರ್ಯಾಡು ಕಾಲನಿಯ ಬುಟ್ಟಿ ಹೆಣೆಯುವ ಕಾರ್ಮಿಕರ ಸಹಕಾರದಿಂದ ಕಳೆದ ಒಂದು ತಿಂಗಳ ಕಾಲ 400ಕ್ಕೂ ಅಧಿಕ ಬುಟ್ಟಿಗಳನ್ನು ತಯಾರಿಸಲಾಗಿತ್ತು. ಇದಕ್ಕಾಗಿ ವಿವಿಧ ಸ್ಥಳಗಳಿಂದ ಆಯ್ದ ಕಾಡುಬಳ್ಳಿಗಳನ್ನು ತಂದು ಉಪಯೋಗಿಸಲಾಗಿದೆ. ಹೆಣೆದ ಬುಟ್ಟಿಗಳನ್ನು ಬಿಸಿಲಿಗೆ ಒಣಗಿಸಿ, ವಾಹನದ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿಸಲಾಯಿತು. ಬುಟ್ಟಿಯೊಂದಕ್ಕೆ ರೂಪಾಯಿ 300ರಂತೆ ವೆಚ್ಚ ತಗುಲಿದ್ದು, ಅದನ್ನು ಭಗವದ್ಭಕ್ತರು ನಗದು ರೂಪದಲ್ಲಿ ನೀಡಿದ್ದರು. ನಾರಾಯಣ ಭಟ್ಟ ಎಂಬವರ ನೇತೃತ್ವದಲ್ಲಿ ಕಾರ್ಯಾಡು ಕಾಲನಿಯ ಬಟ್ಯ ಎಂಬವರ ಜೊತೆಯಲ್ಲಿ ಚೋಮು, ಚನಿಯ, ಕಮಲ, ಅಂಗಾರೆ, ಕಮಲ ಎಂಬ ಆರು ಮಂದಿ ನುರಿತ ಕಾರ್ಮಿಕರು ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಾಡಿನ ಅನೇಕ ಮಂದಿ ಈ ಬುಟ್ಟಿಗಳಿಗೆ ಪ್ರಾಯೋಜಕತ್ವ ವಹಿಸಿದ್ದಾರೆ.
ಮಾರ್ಚ್ ತಿಂಗಳ 27ರಿಂದ ಏಪ್ರಿಲ್ 7ರ ತನಕ ಮಧೂರು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದೆ. ಮಹಾಗಣಪತಿಗೆ ಮೂಡಪ್ಪ ಸೇವೆ ಎಂದರೆ ಅತೀ ವಿಶೇಷ ಸೇವೆಯಾಗಿದೆ. ಸುತ್ತಲೂ ಕಬ್ಬಿನ ಜೊಲ್ಲೆಯ ಕೋಟೆ ಕಟ್ಟಿ ಗಜಮುಖನ ಕಂಠ ಮಟ್ಟದವರೆಗೆ ಸಾವಿರ ಸಾವಿರ ಅಪ್ಪದಿಂದ ತುಂಬಿ ಪೂಜಿಸುವುದೇ ಈ ಮೂಡಪ್ಪ ಸೇವೆ. ಈ ಅಪ್ಪ ತುಂಬಿ ತರಲು ವಿಶೇಷವಾದ ಕಾಡುಬಳ್ಳಿಗಳಿಂದ ಬುಟ್ಟಿಯನ್ನು ತಯಾರಿಸಲಾಗಿದೆ. ಅನ್ನಪ್ರಸಾದ ವಿತರಣೆಗೆ ಹಾಗೂ ಮೂಡಪ್ಪ ಸೇವೆಯ ಅಪ್ಪ ಸಮರ್ಪಣೆಗೆ ಈ ಬುಟ್ಟಿಗಳನ್ನು ಉಪಯೋಗಿಸಲಾಗುತ್ತದೆ.
ಮಧುವಾಹಿನಿಯಲ್ಲಿ ಬುಟ್ಟಿಗಳು
ಹೊಸ ಬುಟ್ಟಿಗಳನ್ನು ಎರಡು ದಿನಗಳ ಕಾಲ ನೀರಿನಲ್ಲಿ ನೆನೆಸಿಟ್ಟ ಮೇಲೆಯೇ ಉಪಯೋಗಿಸುವುದು ವಾಡಿಕೆಯಾಗಿದೆ. ಬುಟ್ಟಿಯಲ್ಲಿ ಸೇರಿಕೊಂಡ ಮಣ್ಣು, ಕಲ್ಮಶಗಳು, ಕಹಿಯಂಶ ದೂರಗೊಳಿಸಲು ನೀರಿನಲ್ಲಿ ನೆನೆಯಲು ಹಾಕಲಾಗಿದೆ. ಸಮರ್ಪಣೆಯಾದ ಬುಟ್ಟಿಗಳನ್ನು ಶ್ರೀಕ್ಷೇತ್ರದ ವತಿಯಿಂದ ಆತ್ಮೀಯವಾಗಿ ಸ್ವೀಕರಿಸಲಾಯಿತು. ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಶ್ರೀಸನ್ನಿಧಿಯಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು.
ಕೇರಳದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ, ಸೀಮೆಯ ಪ್ರಧಾನ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯಲ್ಲಿ ನಾಡಿನ ಎಲ್ಲಾ ಭಗವದ್ಭಕ್ತರೂ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂಥದ್ದು. ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುವ ಬುಟ್ಟಿ ಸಮರ್ಪಣೆ ನಮ್ಮ ಪಾಲಿಗೆ ಒದಗಿಬಂದಿರುವುದು ಸಂತಸವನ್ನು ತಂದಿದೆ ಎಂದು ನಾರಾಯಣ ಭಟ್ ದಂಬೆಮೂಲೆ ಹೇಳಿದರು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
