ನಿಮಗೊಂದು ಸಲಾಂ: ಉಜ್ಜಯಿನಿ ಅತ್ಯಾಚಾರ ಸಂತ್ರಸ್ತೆಯ ಚಿಕಿತ್ಸೆ, ಶಿಕ್ಷಣ, ಮದುವೆಯ ಜವಾಬ್ದಾರಿ ಹೊತ್ತ ಪೊಲೀಸ್ ಅಧಿಕಾರಿ
"ಬಾಲಕಿಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆಯನ್ನು ನಾನು ನೋಡಿಕೊಳ್ಳುತ್ತೇನೆ. ಹೆಚ್ಚಿನ ಚಿಕಿತ್ಸೆಗಾಗಿ ನಾನು ಅವಳನ್ನು ಮತ್ತೊಂದು ಆಸ್ಪತ್ರೆಗೆ ಸೇರಿಸುತ್ತೇನೆ" ಎಂದು ತನಿಖಾಧಿಕಾರಿ ಮತ್ತು ಮಹಾಕಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ವರ್ಮಾ ಹೇಳಿದ್ದಾರೆ.
ಉಜ್ಜಯಿನಿ (ಮಧ್ಯಪ್ರದೇಶ): ಉಜ್ಜಯಿನಿಯಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯ ಭಾಗವಾಗಿದ್ದ ಮಧ್ಯಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
"ಬಾಲಕಿಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆಯನ್ನು ನಾನು ನೋಡಿಕೊಳ್ಳುತ್ತೇನೆ. ಎಲ್ಲಾ ಜವಾಬ್ದಾರಿಗಳನ್ನು ಶೀಘ್ರದಲ್ಲೇ ಪೂರೈಸುವ ಭರವಸೆ ನನಗಿದೆ. ಅಲ್ಲದೇ ಆಕೆಗೆ ಸಹಾಯ ಮಾಡಲು ಇನ್ನೂ ಹಲವರು ಮುಂದೆ ಬರುತ್ತಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ನಾನು ಅವಳನ್ನು ಮತ್ತೊಂದು ಆಸ್ಪತ್ರೆಗೆ ಸೇರಿಸುತ್ತೇನೆ” ಎಂದು ತನಿಖಾಧಿಕಾರಿ ಮತ್ತು ಮಹಾಕಾಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ವರ್ಮಾ ಹೇಳಿದ್ದಾರೆ.
ಸೆಪ್ಟೆಂಬರ್ 25 ರಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಅತ್ಯಾಚಾರ ಘಟನೆ ಇಡೀ ದೇಶಕ್ಕೆ ಆಘಾತವನ್ನುಂಟುಮಾಡಿತ್ತು. ಉಜ್ಜಯಿನಿಯ ಮಹಾಕಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಅರೆಬೆತ್ತಲೆಯಾಗಿ ಬಿದ್ದಿದ್ದ 15 ವರ್ಷದ ಬಾಲಕಿ ತೀವ್ರ ರಕ್ತ ಸ್ರಾವದಿಂದ ನರಳಾಡುತ್ತಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ.
ಸಂತ್ರಸ್ತೆ ಸತ್ನಾ ಜಿಲ್ಲೆಯ ನಿವಾಸಿಯಾಗಿದ್ದು, ಸೆಪ್ಟೆಂಬರ್ 24ರಂದು ಉಜ್ಜಯಿನಿಗೆ ಬಂದಿದ್ದಳು. ಈಕೆಯ ಮೇಲೆ ಎರಗಿದವನು ಆಟೋರಿಕ್ಷಾ ಚಾಲಕ. ಆರೋಪಿಯನ್ನು ಭರತ್ ಸೋನಿ ಎಂದು ಗುರುತಿಸಿ ಬಂಧಿಸಲಾಗಿದ್ದು, ಕೃತ್ಯಕ್ಕೆ ಸಹಾಯ ಮಾಡಿದ ಮತ್ತೊಬ್ಬ ಆರೋಪಿ ರಾಕೇಶ್ ಮಾಳವಿಯಾ ಎಂಬಾತನನ್ನೂ ಬಂಧಿಸಲಾಗಿದೆ.
ಉಜ್ಜಯಿನಿ ರೈಲು ನಿಲ್ದಾಣದ ಬಳಿ ಬಾಲಕಿ ಜೊತೆ ಮಾತನಾಡುತ್ತಿದ್ದದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಎಲ್ಲಿಂದ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರುವ ಭರತ್ ಸೋನಿ ಅತ್ಯಾಚಾರ ಎಸಗಿ ರಸ್ತೆಮೇಲೆ ಎಸೆದುಹೋಗಿದ್ದಾನೆ ಎಂದು ಹೇಳಲಾಗಿದೆ.
ಸದ್ಯ ಬಾಲಕಿ ಇಂದೋರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಂತ್ರಸ್ತ ಬಾಲಕಿಯನ್ನು ಭೇಟಿ ಮಾಡಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಸದಸ್ಯರು ಆಕೆಯ ಸ್ಥಿತಿ ಸುಧಾರಿಸುತ್ತಿದೆ, ಆದಾಗ್ಯೂ, ಮಾನಸಿಕ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.