Maha Kumbha Mela 2025: ನದಿಯೊಳಗೆ ಡ್ರೋಣ್, ಎಐ ಕ್ಯಾಮರಾಗಳ ಕಣ್ಗಾವಲಿನಲ್ಲಿ ಮಹಾ ಕುಂಭಮೇಳ ಶುರು; 45 ಕೋಟಿ ಭಕ್ತರ ಭಾಗಿ ನಿರೀಕ್ಷೆ
Maha Kumbha Mela 2025: ಪವಿತ್ರ ಸ್ನಾನಕ್ಕೆ ಹೆಸರುವಾಸಿಯಾದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ 2025 ಮೊದಲ ದಿನದ ಪವಿತ್ರ ಸ್ನಾನದೊಂದಿಗೆ ಶುರುವಾಯಿತು.

Maha Kumbha Mela 2025: ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ಭಕ್ತಿಯಿಂದ ನದಿಯಲ್ಲಿ ಮಿಂದೇಳುವ ಭಾರತದ ಮಹಾ ಕುಂಭಮೇಳ 2025 ಸಂಭ್ರಮ ಶುರುವಾಗಿದೆ. ಉತ್ತರ ಪ್ರದೇಶದ ಐತಿಹಾಸಿಕ ತ್ರಿವೇಣಿ ಸಂಗಮ ನಗರಿಯಲ್ಲಿ ಸತತ 45 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳದಲ್ಲಿ ಸೋಮವಾರದ ಮೊದಲ ದಿನವೇ ಸಹಸ್ರಾರು ಭಕ್ತರು ಪುಣ್ಯ ಸ್ನಾನ ಮಾಡಿದರು. ಭಾರತದ ನಾನಾ ಭಾಗದಿಂದ ಆಗಮಿಸಿದ್ದ ಭಕ್ತರಲ್ಲದೇ ವಿದೇಶಿ ಭಕ್ತರು ಕೂಡ ಶಾಹಿ ಸ್ನಾನ ಮಾಡಿದರು. ಕೋಟ್ಯಂತರ ಭಕ್ತರು ನದಿ ಸ್ನಾನ ಮಾಡುವುದರಿಂದ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಅದರಲ್ಲೂ ನದಿಯೊಳಗೆ ವಿಚಕ್ಷಣೆ ಮಾಡುವ ಅತ್ಯಾಧುನಿಕ ಡ್ರೋಣ್, ಐಎ ಕ್ಯಾಮರಾಗಳ ಕಣ್ಗಾವಲು, ಅತ್ಯಾಧುನಿಕ ತಂತ್ರಜ್ಞಾನಗಳ ಉಪಯೋಗವನ್ನು ಪಡೆದುಕೊಳ್ಳಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಐತಿಹಾಸಿಕ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮವಾದ ತ್ರಿವೇಣಿ ಸಂಗಮಕ್ಕೆ ಸೋಮವಾರ ಬೆಳಗ್ಗೆ 'ಪವಿತ್ರ ಸ್ನಾನ ಮಾಡಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದರು. ಕೊರೆಯುತ್ತಿದ್ದ ಚಳಿಯನ್ನೂ ಲೆಕ್ಕಿಸಿದೇ ಸಹಸ್ರಾರು ಭಕ್ತರು ಸ್ನಾನ ಮಾಡಿ ಪುಳಕಿತರಾದರು. ಹಿರಿಯರು, ಮಹಿಳೆಯರು, ಮಕ್ಕಳರು, ಯುವಕರ ಸಹಿತ ಎಲ್ಲಾ ವಯೋಮಾನದವರೂ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ವಿದೇಶದಿಂದಲೂ ಆಗಮಿಸಿದ್ದವರೂ ಚಳಿಯಲ್ಲೇ ನದಿಗೆ ಇಳಿದು ಸ್ನಾನದ ಖುಷಿಯನ್ನು ಅನುಭವಿಸಿದರು. ಇದರೊಂದಿಗೆ ಮಹಾ ಕುಂಭಮೇಳ 2025ಕ್ಕೆ ಚಾಲನೆ ದೊರೆತಂತಾಗಿದೆ. ಇನ್ನೂ ಒಂದೂವರೆ ತಿಂಗಳ ಕಾಲ ತ್ರಿವೇಣಿ ಸಂಗಮ ನಿತ್ಯ ಲಕ್ಷಾಂತರ ಭಕ್ತರ ಪುಣ್ಯಸ್ನಾನ ತಾಣವೂ ಆಗಲಿದೆ.
ಗಣ್ಯರ ನಿರೀಕ್ಷೆ
ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಮಹಾ ಕುಂಭಮೇಳವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಆಚರಣೆಯೂ ಹೌದು. 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯಲಿದೆ.
ಮಹಾಕುಂಭೋತ್ಸವದಲ್ಲಿ ವಿಶ್ವದ ನಾನಾ ಭಾಗಗಳಿಂದ ಸಂತರು ಮತ್ತು ಗಣ್ಯರು ಸೇರಿದಂತೆ 45 ಕೋಟಿಗೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ತಮ್ಮ ಗುರು ಸ್ವಾಮಿ ಕೈಲಾಶಾನಂದಗಿರಿ ಮಹಾರಾಜ್ ಅವರಿಂದ ಕಮಲಾ ಎಂದು ಮರುನಾಮಕರಣಗೊಂಡು ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಕೈಲಾಶಾನಂದ ಗಿರಿ ಪ್ರಕಾರ, ಲಾರೆನ್ ಪೊವೆಲ್ ಜಾಬ್ಸ್ ಅವರು ಕುಂಭದಲ್ಲಿ ಉಳಿಯುತ್ತಾರೆ ಮತ್ತು ಗಂಗಾದಲ್ಲಿ ಸ್ನಾನ ಮಾಡಲು ಯೋಜಿಸುತ್ತಿದ್ದಾರೆ. ನಟ ರಿಚರ್ಡ್ ಗೆರೆ, ಚಲನಚಿತ್ರ ನಿರ್ದೇಶಕ ಡೇವಿಡ್ ಲಿಂಚ್ ಮತ್ತು ಟಿಬೆಟಿಯನ್ ಬೌದ್ಧ ನಾಯಕ ದಲೈ ಲಾಮಾ ಮುಂತಾದ ಸೆಲೆಬ್ರಿಟಿಗಳು ಹಿಂದಿನ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.
ಅತ್ಯಾಧುನಿಕ ಭದ್ರತಾ ವ್ಯವಸ್ಥೆ
ಮಹಾಕುಂಭಮೇಳದ ಸಂದರ್ಭದಲ್ಲಿ ಜನರ ಸುರಕ್ಷತೆಯನ್ನು ಖಾತ್ರಿಪಡಿಸಲು ಉತ್ತರ ಪ್ರದೇಶ ಪೊಲೀಸರು ಪ್ರಯಾಗರಾಜ್ ಹಾಗೂ ಸುತ್ತಮುತ್ತಲೂ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಮೊದಲ ಬಾರಿಗೆ, 100 ಮೀಟರ್ ನೀರಿನೊಳಗೆ ಧುಮುಕಿ ಕಣ್ಗಾವಲು ಇಡಬಲ್ಲ ಸಾಮರ್ಥ್ಯವಿರುವ ನೀರೊಳಗಿನ ಡ್ರೋಣ್‌ಗಗಳನ್ನು ಬಳಕೆ ಮಾಡಲಾಗಿದೆ. ಈ ಡ್ರೋಣ್‌ಗಳು - 120 ಮೀಟರ್‌ಗಳಷ್ಟು ಎತ್ತರವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ.
ಇದರೊಟ್ಟಿಗೆ ರಿಯಲ್-ಟೈಮ್ ಮಾನಿಟರಿಂಗ್ ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಒದಗಿಸುವ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳೊಂದಿಗೆ ಕನಿಷ್ಠ 2,700 ಕ್ಯಾಮೆರಾಗಳನ್ನು ಹಲವು ಭಾಗಗಳಲ್ಲಿ ಬಳಸಲಾಗಿದೆ. ಇದಲ್ಲದೆ 56 ಸೈಬರ್ ಯೋಧರ ತಂಡವು ಆನ್‌ಲೈನ್ ಬೆದರಿಕೆಗಳ ಮೇಲೆ ನಿಗಾ ಇಡಲಿದ್ದು, ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಟೆಂಟ್, ಆಸ್ಪತ್ರೆ
ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು 1,50,000 ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ, ಜೊತೆಗೆ ಹೆಚ್ಚುವರಿ ಶೌಚಾಲಯಗಳು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಕನಿಷ್ಠ 450,000 ಹೊಸ ವಿದ್ಯುತ್ ಸಂಪರ್ಕಗಳನ್ನು ಸ್ಥಾಪಿಸಲಾಗಿದೆ, ಕುಂಭವು ಈ ಪ್ರದೇಶದಲ್ಲಿ 1,00,000 ನಗರ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ತಿಂಗಳಲ್ಲಿ ಬಳಸುವುದಕ್ಕಿಂತ ಹೆಚ್ಚಿನ ವಿದ್ಯುತ್ ಶಕ್ತಿಯನ್ನು ಬಳಸುವ ನಿರೀಕ್ಷೆಯಿದ್ದು, ಉತ್ಸವಕ್ಕಾಗಿ ನಿರಂತರ ವಿದ್ಯುತ್ ಒದಗಿಸಲಾಗುತ್ತಿದೆ.
ಭಕ್ತರಿಗಾಗಿ ಹಲವಾರು ಎಲೆಕ್ಟ್ರಿಕ್ ಬಸ್‌ಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಾರತೀಯ ರೈಲ್ವೆ 98 ವಿಶೇಷ ರೈಲುಗಳನ್ನು ಆರಂಭಿಸಿದ್ದು, ರೈಲುಗಳು ಮಹಾ ಕುಂಭಮೇಳದ ಸಮಯದಲ್ಲಿ 3,300 ಟ್ರಿಪ್ ಒದಗಿಸಲಿವೆ. ಇದಲ್ಲದೆ ನಗರದಲ್ಲಿ 92 ರಸ್ತೆಗಳ ನವೀಕರಣ, 30 ಸೇತುವೆಗಳ ನಿರ್ಮಾಣ ಮತ್ತು 800 ಬಹುಭಾಷಾ ಫಲಕಗಳ ಸ್ಥಾಪನೆಯನ್ನು ಮಾಡಲಾಗಿದೆ. ಆರೋಗ್ಯ ಸೌಲಭ್ಯಗಳಿಗಾಗಿ, ಶಸ್ತ್ರಚಿಕಿತ್ಸಾ ಮತ್ತು ರೋಗನಿರ್ಣಯ ಸೌಲಭ್ಯಗಳನ್ನು ಹೊಂದಿದ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲಾಗಿದೆ.