ಕುಂಭಮೇಳ ಬರೀ ಧಾರ್ಮಿಕ ಚಟುವಟಿಕೆ ಮಾತ್ರವಲ್ಲ, ಉತ್ತರಪ್ರದೇಶ ಆರ್ಥಿಕ ಬೆಳವಣಿಗೆಗೆಗೂ ಮಹಾ ಉತ್ಸವ, ಆದಾಯದ ಲೆಕ್ಕಾಚಾರ ಹೇಗಿದೆ
Maha Kumbh Mela 2025: ಉತ್ತರ ಪ್ರದೇಶದ ಮಹಾ ಕುಂಭಮೇಳವು ಧಾರ್ಮಿಕತೆಯ ಜತೆಜತೆಯಲ್ಲಿ ಆರ್ಥಿಕ ಬೆಳವಣಿಗೆಗೂ ಸಹಕಾರಿ ಎನ್ನುವ ವಿಶ್ಲೇಷಣೆಗಳು ನಡೆದಿವೆ.

Maha Kumbh Mela 2025: ಕೋಟ್ಯಂತರ ಭಕ್ತರನ್ನು ಸೆಳೆಯುವ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಂಗಮ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ 2025ರ ಆರ್ಥಿಕ ವಹಿವಾಟಿನ ಅಂದಾಜು ಎಷ್ಟಿರಬಹುದುಕೊಂಡಿರಿ. ಆರು ವರ್ಷದ ಹಿಂದೆ ನಡೆದಿದ್ದ ಅರ್ಧ ಕುಂಭ ಮೇಳದ ವೇಳೆ ಬಂದ ಆದಾಯಕ್ಕೂ ಈಗಿನ ಆದಾಯಕ್ಕೂ ಎಷ್ಟು ಹೆಚ್ಚಳ ಆಗಬಹುದು ಎನ್ನುವ ಲೆಕ್ಕಾಚಾರ ಇದೆ. ಆರೇ ವರ್ಷದಲ್ಲಿ ಮಹಾ ಕುಂಭಮೇಳಕ್ಕೆ ಬಂದ ಭಕ್ತರ ಪ್ರಮಾಣಕ್ಕೂ ಈಗ ಬರಬಹುದೆಂದು ಅಂದಾಜು ಮಾಡಿರುವ ಭಕ್ತರ ಸಂಖ್ಯೆ ಎಷ್ಟಿರಬಹುದು. ಏಕೆಂದರೆ ಒಂದು ಬಾರಿಯಿಂದ ಇನ್ನೊಂದು ಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆಯೂ ಗಣನೀಯ ಏರಿಕೆ ಕಂಡಿದ್ದು. ಆರ್ಥಿಕ ಬೆಳವಣಿಗೆ ಪ್ರಮಾಣವೂ ಏರುಗತಿಯಲ್ಲಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಎಂಬ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಯ ಸಂಗಮ ಪ್ರದೇಶದಲ್ಲಿ ಮೊದಲ ಪವಿತ್ರ ಸ್ನಾನಕ್ಕಾಗಿಯೇ 50 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದರಲ್ಲೂ ಫೆಬ್ರವರಿ ತಿಂಗಳ ಅಂತ್ಯದವರೆಗೂ ಮಹಾ ಕುಂಭಮೇಳ ಮುಂದುವರಿಯಲಿದೆ. ಈ ಹೊತ್ತಿಗೆ 45 ಕೋಟಿ ಯಷ್ಟು ಭಕ್ತರು ಇಲ್ಲಿಗೆ ಬಂದು ಹೋಗುವ ಅಂದಾಜು ಮಾಡಲಾಗಿದೆ. ಅಂದರೆ ಈ ಪ್ರಮಾಣ ಎಷ್ಟಿದೆ ಎಂದರೆ ಇದು ಅಮೆರಿಕಾ ಹಾಗೂ ರಷ್ಯಾದ ಜನಸಂಖ್ಯೆಗಿಂತ ಹೆಚ್ಚು ಎನ್ನುವುದು ವಿಶೇಷ.
ಭಾರೀ ಸಿದ್ದತೆ
ಶತಮಾನದ ನಂತರ ನಂತರ ನಡೆಯುತ್ತಿರುವ ಮಹಾ ಕುಂಭಮೇಳಕ್ಕಾಗಿ ಸುಮಾರು 4,000 ಹೆಕ್ಟೇರ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಸಾರಿಗೆ ಸೌಲಭ್ಯ, ವಸತಿ ಸೌಲಭ್ಯ, ಊಟೋಪಚಾರ, ಸಹಸ್ರಾರು ಮಳಿಗೆಗಳೊಂದಿಗೆ ಇಡೀ ಪ್ರಯಾಗ್‌ರಾಜ್ ಚಿತ್ರಣವೇ ಈಗ ಬದಲಾಗಿದೆ. ಎಲ್ಲಿ ನೋಡಿದರೂ ಜನ ಸಂದಣಿಯ ದರ್ಶನವೇ ಕಾಣ ಸಿಗುತ್ತಿದೆ. ಕಿ. ಮೀಗಟ್ಟಲೇ ಜನ ನಡೆದುಕೊಂಡೇ ಬಂದು ಪುಣ್ಯ ಸ್ನಾನ ಮಾಡುತ್ತಿದ್ದಾರೆ.
2 ಲಕ್ಷ ಕೋಟಿ ರೂ. ಆರ್ಥಿಕ ವಹಿವಾಟು
ಮಹಾ ಕುಂಭಮೇಳವು ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಭಾರಿ ಉತ್ತೇಜನ ನೀಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಆ ಪ್ರಮಾಣ 2 ಲಕ್ಷ ಕೋಟಿ ರೂಪಾಯಿಗಳವರೆಗೂ ತಲುಪಬಹುದು ಎನ್ನುವ ಅಂದಾಜಿದೆ.
ಮಹಾ ಕುಂಭ 2025 ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಯಲ್ಲಿ 2 ಲಕ್ಷ ಕೋಟಿ ರೂ. ಅಂದಾಜಿನ ಪ್ರಕಾರ, ಪ್ರತಿ 45 ಕೋಟಿ ಸಂದರ್ಶಕರು ಸರಾಸರಿ 4,000 ರೂಪಾಯಿಗಳನ್ನು ಖರ್ಚು ಮಾಡಿದರೆ ಆರ್ಥಿಕ ವಹಿವಾಟು 2 ಲಕ್ಷ ಕೋಟಿ ರೂ.ಗಳನ್ನು ಗಳಿಸಬಹುದು ಎನ್ನುತ್ತಾರೆ ತಜ್ಞರು.
ಯಾವ ವಲಯದಿಂದ ಎಷ್ಟು
ಉದ್ಯಮದ ಅಂದಾಜುಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಐಎಎನ್‌ಎಸ್, ಪ್ರತಿ ವ್ಯಕ್ತಿ ಮಾಡುವ ಸರಾಸರಿ ವೆಚ್ಚವು 10,000 ರೂ.ಗೆ ಏರಬಹುದು. ಒಟ್ಟು ಆರ್ಥಿಕ ಪರಿಣಾಮವು 4 ಲಕ್ಷ ಕೋಟಿ ರೂ.ಗೆ ತಲುಪಬಹುದು. ಆದರೆ 2 ಲಕ್ಷ ಕೋಟಿ ರೂ.ಗಳನ್ನಂತೂ ದಾಟಲಿದೆ ಎಂದು ಹೇಳಿದೆ. ಇದು ಉತ್ತರ ಪ್ರದೇಶದ ಒಟ್ಟು ಜಿಡಿಪಿ ದರದಲ್ಲಿ ಶೇ. 1ರಷ್ಟು ಆಗಬಹುದು,
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿರುವ ಮಾಹಿತಿ ಪ್ರಕಾರ, 2019 ರಲ್ಲಿ ಪ್ರಯಾಗ್‌ರಾಜ್‌ನ ಅರ್ಧ ಕುಂಭಮೇಳವು ರಾಜ್ಯದ ಆರ್ಥಿಕತೆಗೆ 1.2 ಲಕ್ಷ ಕೋಟಿ ರೂ. ತಂದು ಕೊಟ್ಟಿತ್ತು. ಆಗ ಸುಮಾರು 24 ಕೋಟಿ ಯಾತ್ರಾರ್ಥಿಗಳನ್ನು ಆಕರ್ಷಿಸಿತ್ತು. ಈ ವರ್ಷ 45 ಕೋಟಿವರೆಗೂ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯೊಂದಿಗೆ, ಮಹಾಕುಂಭವು 2 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಬೆಳವಣಿಗೆಯನ್ನು ಗಳಿಸುವ ನಿರೀಕ್ಷೆಯಿದೆ ಎನ್ನುತ್ತಾರೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ಪ್ಯಾಕ್ ಮಾಡಿದ ಆಹಾರಗಳು, ನೀರು, ಬಿಸ್ಕತ್ತುಗಳು, ಜ್ಯೂಸ್ ಮತ್ತು ಊಟ ಸೇರಿದಂತೆ ಆಹಾರ ಮತ್ತು ಪಾನೀಯ ವಲಯವು ಒಟ್ಟಾರೆ ವ್ಯಾಪಾರಕ್ಕೆ 20,000 ಕೋಟಿ ರೂಪಾಯಿಗಳನ್ನು ಸೇರಿಸುತ್ತದೆ ಎಂದು ಅಂದಾಜಿಸಲಾಗಿದೆ.
ಧಾರ್ಮಿಕ ಉತ್ಪನ್ನಗಳ ಮಾರಾಟ
ತೈಲ, ದೀಪಗಳು, ಗಂಗಾಜಲ, ವಿಗ್ರಹಗಳು, ಧೂಪದ್ರವ್ಯಗಳು ಮತ್ತು ಧಾರ್ಮಿಕ ಪುಸ್ತಕಗಳಂತಹ ಧಾರ್ಮಿಕ ವಸ್ತುಗಳು ಮತ್ತು ಕೊಡುಗೆಗಳು ಆರ್ಥಿಕ ಚಟುವಟಿಕೆಯ ಮತ್ತೊಂದು ಪ್ರಮುಖ ಕ್ಷೇತ್ರವಾಗಿದ್ದು, ಅಂದಾಜು 20,000 ಕೋಟಿ ರೂ. ವಹಿವಾಟು ಆಗಬಹುದು.
ಸ್ಥಳೀಯ ಮತ್ತು ಅಂತರರಾಜ್ಯ ಸೇವೆಗಳು, ಸರಕು ಸಾಗಣೆ ಮತ್ತು ಟ್ಯಾಕ್ಸಿಗಳು ಸೇರಿದಂತೆ ಸಾರಿಗೆ ಮತ್ತು ಲಾಜಿಸ್ಟಿಕ್ಸ್ 10,000 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ. ಪ್ರವಾಸೋದ್ಯಮ ಸೇವೆಗಳಾದ ಪ್ರವಾಸಿ ಮಾರ್ಗದರ್ಶಿಗಳು, ಪ್ರಯಾಣ ಪ್ಯಾಕೇಜ್‌ಗಳು ಮತ್ತು ಸಂಬಂಧಿತ ಚಟುವಟಿಕೆಗಳು ಇನ್ನೂ 10,000 ಕೋಟಿ ರೂ. ಗಳಿಸಿಕೊಡಬಹುದು ಸಿಎಐಟಿ ಹೇಳಿದೆ.
ತಾತ್ಕಾಲಿಕ ವೈದ್ಯಕೀಯ ಶಿಬಿರಗಳು, ಆಯುರ್ವೇದ ಉತ್ಪನ್ನಗಳು ಮತ್ತು ಔಷಧಗಳು 3,000 ಕೋಟಿ ರೂಪಾಯಿಗಳನ್ನು ತರಬಹುದು. ಅದೇ ರೀತಿ ಇ-ಟಿಕೆಟಿಂಗ್, ಡಿಜಿಟಲ್ ಪಾವತಿಗಳು, ವೈ-ಫೈ ಸೇವೆಗಳು ಮತ್ತು ಮೊಬೈಲ್ ಚಾರ್ಜಿಂಗ್ ಸ್ಟೇಷನ್‌ಗಳಂತಹ ವಲಯಗಳಿಂದ 1,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರವನ್ನು ನಿರೀಕ್ಷಿಸಲಾಗಿದೆ. ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳು ಸೇರಿದಂತೆ ಮನರಂಜನೆ ಮತ್ತು ಮಾಧ್ಯಮಗಳು ವ್ಯಾಪಾರದಲ್ಲಿ 10,000 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಸಿಎಐಟಿ ಹೇಳಿದೆ.
