ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನದ ಬಳಿಕ ಇಟಲಿ ಪ್ರಜೆ ಎಮ್ಮಾ ಮನದ ಮಾತು, ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ ಅನ್ಸುತ್ತೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನದ ಬಳಿಕ ಇಟಲಿ ಪ್ರಜೆ ಎಮ್ಮಾ ಮನದ ಮಾತು, ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ ಅನ್ಸುತ್ತೆ

ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನದ ಬಳಿಕ ಇಟಲಿ ಪ್ರಜೆ ಎಮ್ಮಾ ಮನದ ಮಾತು, ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ ಅನ್ಸುತ್ತೆ

Maha Kumbh Mela: ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ಶುರುವಾಗಿದೆ. ಇದು ಜಾಗತಿಕ ಮಟ್ಟದ ಧಾರ್ಮಿಕ ಮಹಾ ಸಮ್ಮೇಳನವಾದ ಕಾರಣ ಹಿಂದೂ ಧರ್ಮದ ಬಗ್ಗೆ ಒಲವಿರುವ ವಿದೇಶಿ ಪ್ರಜೆಗಳೂ ಆಗಮಿಸಿ ಪುಣ್ಯಸ್ನಾನದಲ್ಲಿ ಭಾಗವಹಿಸುತ್ತಿದ್ದಾರೆ. ಈ ರೀತಿ ಬಂದ ಇಟಲಿ ಪ್ರಜೆ ಎಮ್ಮಾ, ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ ಅನ್ಸುತ್ತೆ ಎಂದಿದ್ದಾರೆ.

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿರುವ ವಿದೇಶಿ ಭಕ್ತರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ತಮ್ಮ ಅನುಭವ ಹಂಚಿಕೊಂಡರು.
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿರುವ ವಿದೇಶಿ ಭಕ್ತರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ತಮ್ಮ ಅನುಭವ ಹಂಚಿಕೊಂಡರು. (ANI)

ಉತ್ತರ ಪ್ರದೇಶದಲ್ಲಿ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳ ಪ್ರಯಾಗರಾಜ್‌ನಲ್ಲಿ ಜಗತ್ತಿನ ಅತಿದೊಡ್ಡ ಧಾರ್ಮಿಕ ಸಮಾವೇಶ “ಮಹಾ ಕುಂಭಮೇಳ” ಪೌಷ ಹುಣ್ಣಿಮೆಯಂದು ಶುರುವಾಗಿದೆ. ಉತ್ತರಾಯಣ ಶುರುವಾಗುವ ಹೊತ್ತಿನ ಸಂಕ್ರಮಣದೊಂದಿಗೆ ಆರಂಭವಾಗಿರುವ 45 ದಿನಗಳ ಮಹಾಕುಂಭ ಮೇಳ ಫೆ 26ರ ಶಿವರಾತ್ರಿ ದಿನ ಸಂಪನ್ನವಾಗಲಿದೆ. 144 ವರ್ಷಗಳ ಬಳಿಕ ನಡೆಯುತ್ತಿರುವ ಅಪರೂಪದ ಮಹಾ ಮೇಳ ಇದು. ಹೀಗಾಗಿ ಇದಕ್ಕೆ ವಿಶೇಷ ಮಹತ್ವ ಇದೆ. ಮೊದಲ ದಿನವೇ 3.5 ಕೋಟಿ ಭಕ್ತರು ಶಾಹಿ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಮಹಾ ಕುಂಭಮೇಳದಲ್ಲಿ ವಿದೇಶಿ ಪ್ರಜೆಗಳ ಸಂಭ್ರಮ

ಧಾರ್ಮಿಕ ಮಹತ್ವ ಹೊಂದಿರುವ ಈ ಮಹಾ ಕುಂಭ ಮೇಳದಲ್ಲಿ 40 ಕೋಟಿಗೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದು, ವಿದೇಶಿ ಪ್ರಜೆಗಳೂ ಭಾಗಿಯಾಗುತ್ತಿರುವುದು ವಿಶೇಷ. ಅವರ ಭಾವನೆಗಳು ಕೂಡ ಗಮನಸೆಳೆಯುತ್ತಿವೆ. ಈ ಪೈಕಿ ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ ಎನ್ನುತ್ತಿರುವ ಇಟೆಲಿ ಪ್ರಜೆ ಎಮ್ಮಾ ನಾಡಿನ ಗಮನಸೆಳೆದಿದ್ದಾರೆ.

ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ. ಹಿಂದೂ ಸಂಸ್ಕೃತಿ ಬಗ್ಗೆ ಆಸಕ್ತಿ ಇದ್ದು, ಮೊದಲ ಬಾರಿಗೆ ಮಹಾ ಕುಂಭಮೇಳಕ್ಕೆ ಬಂದಿದ್ದೇನೆ ಎಂದು ಹೇಳಿಕೊಂಡಿರುವ ಎಮ್ಮಾ, ತನ್ನ ಇಬ್ಬರು ಸ್ನೇಹಿತರೊಂದಿಗೆ ಆಗಮಿಸಿದ್ದಾರೆ. ತ್ರಿವೇಣಿ ಸಂಗಮ ಸ್ಥಳದಲ್ಲಿ ಪುಣ್ಯ ಸ್ನಾನ ಮಾಡಿ ಪುಳಕಿತರಾಗಿದ್ದು, ತನ್ನ ಅನುಭವವನ್ನು ಮಾಧ್ಯಮ ಪ್ರತಿನಿಧಿಗಳ ಜತೆಗೆ ಹಂಚಿಕೊಂಡಿದ್ದಾರೆ.

ಹಿಂದಿನ ಜನ್ಮದಲ್ಲಿ ಭಾರತೀಯಳಾಗಿದ್ದೆ - ಇಟಲಿ ಪ್ರಜೆ ಎಮ್ಮಾ

ನಾನು ಪಾಲ್ಗೊಳ್ಳುತ್ತಿರುವ ಮೊದಲ ಮಹಾ ಕುಂಭಮೇಳ ಇದು. ನಾನು ಯೋಗ ಶಿಕ್ಷಕಿ. ನನ್ನ ಅನೇಕ ಸ್ನೇಹಿತರು ಭಾರತೀಯರಿದ್ದಾರೆ. ಭಾರತೀಯ ಸಂಸ್ಕೃತಿ ಬಹಳ ಅಚ್ಚುಮೆಚ್ಚು. ಭಾರತೀಯ ಸಂಗೀತ, ಭಜನೆ, ಸಂಗೀತಗಳನ್ನು ಪ್ರೀತಿಸುತ್ತೇನೆ. ಕೀರ್ತನೆಗಳನ್ನೂ ಕೇಳುತ್ತೇನೆ. ಮಹಾ ಕುಂಭಮೇಳದ ವ್ಯವಸ್ಥೆಗಳು ಅಭೂತಪೂರ್ವ ಮತ್ತು ಅತ್ಯುತ್ತಮವಾಗಿವೆ ಎಂದು ನದಿ ದಂಡೆಯ ಶಿಬಿರದಲ್ಲಿ ತಂಗಿರುವ ಎಮ್ಮಾ ಹೇಳಿದರು.

ಇನ್ನು, ಎಮ್ಮಾ ಜತೆಗೆ ಬಂದಿರುವ ಪಿಯೆಟ್ರೋ, “ನಾನು ಯೋಗ ಸಾಧಕ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಸ್ವಲ್ಪ ತಿಳಿವಳಿಕೆ ಇದೆ. ಕುಂಭಮೇಳವು ಸನಾತನ ಧರ್ಮದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ. ಇಲ್ಲಿಗೆ ನಾನು ಮೊದಲ ಬಾರಿ ಭೇಟಿ ನೀಡಿರುವುದು. ನನ್ನ ಸ್ನೇಹಿತರು ಈ ಪ್ರವಾಸವನ್ನು ಯೋಜಿಸಿದಾಗ, ಈ ಅಸಾಮಾನ್ಯ ಅನುಭವ ಪಡೆಯಲು ನಾನು ಅವರೊಂದಿಗೆ ಸೇರಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

ರಷ್ಯಾ ಪ್ರಜೆ ಸ್ಟೆಫಾನೋ ಅವರು ಕೂಡ ಈ ತಂಡದೊಂದಿಗೆ ಸೇರಿಕೊಂಡಿದ್ದು, ರಷ್ಯನ್ ಸ್ನೇಹಿತರ ಕಥೆಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ, ಹೇಳುತ್ತಿದ್ದ. ರಷ್ಯನ್ ಸ್ನೇಹಿತರು ನಾಗಾ ಸಾಧುಗಳಾಗಿ ಸಾಧನೆ ಮಾಡುತ್ತಿರುವ ಬಗ್ಗೆ ಸ್ಟೆಫಾನೋ ಹೇಳಿಕೊಂಡರು. ಭಾರತಕ್ಕೆ ಮೊದಲ ಬಾರಿ ಬಂದಿದ್ದೇನೆ. ಮಹಾ ಕುಂಭಮೇಳಕ್ಕೂ ಮೊದಲ ಭೇಟಿ. ರಷ್ಯನ್ ಸ್ನೇಹಿತರು ಹೇಳಿದ ಕಥೆಗಳನ್ನು ಆಲಿಸಿದ ಬಳಿಕ ಇಲ್ಲಿಗೆ ಬರುವ ಮನಸ್ಸಾಯಿತು ಎಂದು ಹೇಳಿಕೊಂಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.