Maha Kumbha Mela 2025: ಪ್ರಯಾಗ್‌ರಾಜ್ ಮಹಾ ಕುಂಭಮೇಳದ ಉಸ್ತುವಾರಿ ಹೊತ್ತ ಕನ್ನಡದ ಐಎಎಸ್ ಅಧಿಕಾರಿ
Maha Kumbha Mela 2025: ಉತ್ತರ ಪ್ರದೇಶದ ತ್ರಿವೇಣಿ ಸಂಗಮ ನಗರಿ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾಕುಂಭಮೇಳದ ಉಸ್ತುವಾರಿ ಹೊತ್ತಿರುವವರು ಕನ್ನಡದ ಐಎಎಸ್ ಅಧಿಕಾರಿ ವಿಜಯಕಿರಣ್ ಆನಂದ್. ಅವರ ಕುರಿತ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ ಶುರುವಾಗಿದೆ. ಎರಡು ದಿನಗಳಿಂದ ಕೋಟ್ಯಂತರ ಭಕ್ತರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ಧಾರೆ. ಇನ್ನೂ ಒಂದೂವರೆ ತಿಂಗಳ ಕಾಲ ನಡೆಯುವ ವಿಶ್ವದ ಅತಿ ದೊಡ್ಡ ಜನಸಂದಣಿಯ ಉತ್ಸವವನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಅಲ್ಲಿಗೆ ಬರುವ ಭಕ್ತರು, ಗಣ್ಯರು, ಅತಿಗಣ್ಯರಿಗೆ ಸೌಲಭ್ಯಗಳನ್ನು ಕಲ್ಪಿಸುವುದು ಹೇಗೆ ಎಂದು ಒಮ್ಮೆ ಯೋಚಿಸಿ. ಇಂತಹ ಯೋಚನೆಯ ಹಿಂದೆ ಕನ್ನಡದ ಐಎಎಸ್ ಅಧಿಕಾರಿಯೊಬ್ಬರ ಪಾತ್ರವೂ ಹಿರಿದಾದರು. ಉತ್ತರ ಪ್ರದೇಶ ಕೇಡರ್‌ನ ಅಧಿಕಾರಿಯಾಗಿರುವ ಕರ್ನಾಟಕದ ವಿಜಯಕಿರಣ್ ಆನಂದ್ ಅವರಿಗೆ ಇಂತಹದೊಂದು ವಿಶೇಷ ಉತ್ಸವದ ಹೊಣೆ ದೊರೆತಿದೆ.
ಇವರಿಗೆ ಅವಕಾಶ ಏಕೆ?
ಬೆಂಗಳೂರು ಮೂಲದವರಾದ ವಿಜಯಕಿರಣ್ ಆನಂದ್ ಅವರು ಪ್ರಯಾಗ್ ರಾಜ್ ಮಹಾಕುಂಭ ಮೇಳದ ಮುಖ್ಯ ಅಧಿಕಾರಿಯಾಗಿ ವಹಿಸಿಕೊಂಡು ಸಿದ್ದತೆಯನ್ನು ಮಾಡಿಕೊಂಡಿದ್ದರು. ಈಗ ಮೇಳ ಶುರುವಾಗಿರುವುದರಿಂದ ಕೋಟ್ಯಂತರ ಭಕ್ತರು ಸೇರುವ ಮೇಳದಲ್ಲಿ ಗೊಂದಲ ಆಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅದೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ವಿಶೇಷ ಆಸಕ್ತಿ ವಹಿಸಿ ವಿಜಯಕಿರಣ್ ಆನಂದ್ ಅವರಿಗೆ ಈ ಹೊಣೆ ವಹಿಸಿದ್ಧಾರೆ.
ವಿಜಯಕಿರಣ್ ಆನಂದ್ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಅವರು ಮೂಲತಃ ಚಾರ್ಟರ್ಡ್ ಅಕೌಂಟೆಂಟ್. ಕೆಲ ವರ್ಷ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡಿದರೂ ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಕನಸು ಇಟ್ಟುಕೊಂಡವರು. ಕೊನೆಗೆ ಯಶಸ್ವಿಯೂ ಆದರು. ಅವರಿಗೆ ಸಿಕ್ಕಿದ್ದು ಯುಪಿ ಕೇಡರ್. 2009 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ವಿಜಯಕಿರಣ್ ಆನಂದ್ ಕೆಲಸದಲ್ಲಿ ಅಚ್ಚುಕಟ್ಟು. ಸುಮಾರು ಹದಿನೈದು ವರ್ಷಗಳ ಸೇವೆಯಲ್ಲಿ ಉತ್ತರದ ಪ್ರದೇಶ ಹಲವು ಕಡೆಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಆರು ಜಿಲ್ಲೆಗಳಿಗೆ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದು ಅವರ ಹಿರಿಮೆ. ಕೆಲವು ಕಡೆಗಳಲ್ಲಿ ಸ್ವಲ್ಪ ಅವಧಿ ಸಿಕ್ಕರೆ ಇನ್ನು ಕೆಲವು ಭಾಗಗಳಲ್ಲಿ ಹೆಚ್ಚು ಸಮಯ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಎಲ್ಲೆ ಹೋದರೂ ತಮ್ಮ ಛಾಪು ಮೂಡಿಸಿದ್ದಾರೆ, ವಿಜಯಕಿರಣ್.
ಮೊದಲು ಬಾಗ್ಪತ್ ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಎರಡು ವರ್ಷಗಳ ಕಾಲ, ಇದರ ನಂತರ ಬಾರಾಬಂಕಿ ಜಿಲ್ಲೆಯ ಮುಖ್ಯ ಅಭಿವೃದ್ಧಿ ಅಧಿಕಾರಿ ಹುದ್ದೆಯಲ್ಲೂ ಒಂದೂವರೆ ವರ್ಷ ಕೆಲಸ ಮಾಡಿದರು. ವಿಜಯ್ ಕಿರಣ್ ಆನಂದ್ ಅವರು ಮೈನ್‌ಪುರಿ, ಉನ್ನಾವ್, ಫಿರೋಜಾಬಾದ್, ವಾರಣಾಸಿ ಮತ್ತು ಶಹಜಹಾನ್‌ಪುರದಲ್ಲಿ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದರು.
ಪ್ರಧಾನಿಯಿಂದ ಪ್ರಶಸ್ತಿ
ಇದರ ನಡುವೆಯೇ ವಿಜಯಕಿರಣ್ ಅವರು 2017 ಮತ್ತು 2019 ರಲ್ಲಿ, ಅವರು ಕ್ರಮವಾಗಿ ಮಾಘ ಮೇಳ ಮತ್ತು ಅರ್ಧ ಕುಂಭಮೇಳದ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಈ ಅನುಭವವೂ ಅವರಿಗಿತ್ತು. ಐದು ವರ್ಷದ ಹಿಂದೆ ಅವರು ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿನಿಧಿಸುವ ಗೋರಖ್‌ಪುರ್ ಜಿಲ್ಲಾಧಿಕಾರಿಯಾಗಿದ್ದರು. ಗೋರಖ್‌ಪುರದ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕ ಸೇವೆಗಳ ದಿನದಂದು ಅತ್ಯುತ್ತಮ ಡಿಸಿ ಪ್ರಶಸ್ತಿಯನ್ನು ವಿಜಯ್ ಅವರಿಗೆ ನೀಡಿ ಗೌರವಿಸಿದ್ದರು. ಅಲ್ಲಿ ಚೆನ್ನಾಗಿ ಕೆಲಸ ಮಾಡಿದ್ದು. ಹಿಂದೆ ಮೇಳಗಳ ಉಸ್ತುವಾರಿ ಹೊತ್ತಿದ್ದರಿಂದ ಈ ಬಾರಿ ಮಹಾ ಕುಂಭಮೇಳದ ಅಧಿಕಾರಿಯಾಗಿ ವಿಜಯ್ ಅವರನ್ನು ಸಿಎಂ ನಿಯೋಜಿಸಿದ್ದಾರೆ
ಕೆಲ ದಿನಗಳ ಹಿಂದೆ ಅಧಿಕಾರ ವಹಿಸಿಕೊಂಡಿರುವ ವಿಜಯಕಿರಣ್ ಅವರು, ಅಲ್ಲಿ ಬರುವ ಭಕ್ತರಿಗೆ ಉಳಿಯುವ ವ್ಯವಸ್ಥೆ, ಊಟೋಪಚಾರ ಸಹಿತ ಎಲ್ಲಾ ವ್ಯವಸ್ಥೆಗಳ ಉಸ್ತುವಾರಿ ಹೊತ್ತಿದ್ದಾರೆ. ಅಧಿಕಾರಿಗಳ ತಂಡಗಳನ್ನು ನಿಯೋಜಿಸಿ ವಿವಿಧ ತಂಡಗಳು ದಿನದ 24 ಗಂಟೆಯೂ ಕೆಲಸ ಮಾಡುವಂತೆ ಉತ್ತೇಜಿಸುತ್ತಿದ್ದಾರೆ. ಭಕ್ತರಿಗೆ ಸಹಾಯವಾಣಿಗಳು, ವಾಹನ ವ್ಯವಸ್ಥೆಗಳು ಸೇರಿದಂತೆ ಮೌಲಸೌಕರ್ಯಗಳಿ ಸಿಗುವಂತೆ ಒತ್ತು ನೀಡಲಾಗಿದೆ.
