ಮಹಾ ಕುಂಭಮೇಳ 2025: 7,500 ಕೋಟಿ ಬಜೆಟ್ , 2 ಲಕ್ಷ ಕೋಟಿ ರೂ ಆದಾಯ ನಿರೀಕ್ಷೆ; ಉತ್ತರಪ್ರದೇಶಕ್ಕೆ ಹಣದ ಸುರಿಮಳೆ ಹೀಗಿರುತ್ತೆ ನೋಡಿ
ಮಹಾ ಕುಂಭಮೇಳ 2025: ಉತ್ತರ ಪ್ರದೇಶದ ಖಜಾನೆಗೆ ಮಹಾ ಕುಂಭಮೇಳವು ಸುಮಾರು 2 ಲಕ್ಷ ಕೋಟಿ ರೂಪಾಯಿ ಆದಾಯ ತರುವ ನಿರೀಕ್ಷೆಯಿದೆ. ಈ ಕುಂಭಮೇಳಕ್ಕೆ 400 ದಶಲಕ್ಷ ಜನರು ಭೇಟಿ ನೀಡುವ ಸೂಚನೆಯಿದೆ. ಕುಂಭಮೇಳವು ಧಾರ್ಮಿಕ, ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಸ್ಥಳೀಯ ಅರ್ಥವ್ಯವಸ್ಥೆಗೆ ಆರ್ಥಿಕವಾಗಿಯೂ ಮಹತ್ವದ್ದಾಗಿದೆ.

ಮಹಾ ಕುಂಭಮೇಳ 2025: ಪ್ರಧಾನಿ ನರೇಂದ್ರ ಮೋದಿಯವರು ಮಹಾ ಕುಂಭಮೇಳವನ್ನು ಏಕತೆಯ ಮಹಾಯಜ್ಞ ಎಂದು ಬಣ್ಣಿಸಿದ್ದಾರೆ. ಇದು ಸಾಮಾಜಿಕ ಒಗ್ಗಟ್ಟು ಮತ್ತು ಸಮುದಾಯಗಳ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. "ಕುಂಭವು ಸಾಮಾಜಿಕ ಶಕ್ತಿಯ ಜತೆಗೆ ಜನರ ಆರ್ಥಿಕ ಸಬಲೀಕರಣವನ್ನೂ ಒದಗಿಸುತ್ತದೆ" ಎಂದು ನರೇಂದ್ರ ಮೋದಿ ಅವರು ಪ್ರಯಾಗ್‌ರಾಜ್‌ನಲ್ಲಿ 5,500 ಕೋಟಿ ರೂಪಾಯಿ ಮೌಲ್ಯದ 167 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಹೇಳಿದ್ದರು. ಇವರ ಮಾತು ಅಕ್ಷರಶಃ ನಿಜ. ಉತ್ತರ ಪ್ರದೇಶಕ್ಕೆ ಮಹಾ ಕುಂಭಮೇಳವು ಹಣದ ಸುರಿಮಳೆಯನ್ನೇ ಹರಿಸಲಿದೆ.
45 ದಿನಗಳ ಈ ಮಹಾ ಕುಂಭಮೇಳವು ಜಗತ್ತಿನಲ್ಲಿ ಅತ್ಯಧಿಕ ಜನರು ಸೇರುವ ಬೃಹತ್ ಕಾರ್ಯಕ್ರಮವಾಗಿದೆ. ಜನವರಿ 13ರಿಂದ ಆರಂಭವಾದ ಈ ಕುಂಭಮೇಳದಲ್ಲಿ 45 ದಿನಗಳಲ್ಲಿ 400 ದಶಲಕ್ಷ ಅಂದರೆ 40 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 4 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ನಡೆಯುವ ಈ ಕುಂಭಮೇಳದ ಆರ್ಥಿಕತೆಯನ್ನು ಅರ್ಥ ಮಾಡಿಕೊಳ್ಳುವುದು ಸರಳವಲ್ಲ.
2 ಲಕ್ಷ ಕೋಟಿ ಆದಾಯ ನಿರೀಕ್ಷೆ
ಈ ಹಿಂದಿನ ಮಹಾ ಕುಂಭಮೇಳಗಳಂತೆ ಈ ವರ್ಷವೂ ಮಹಾ ಕುಂಭಮೇಳ ಹಣದ ಹೊಳೆಯನ್ನೇ ಹರಿಸಲಿದೆ. ಹಾಲು ಮಾರುವವನಿಂದ ಹಿಡಿದು ಹೆಲಿಕಾಪ್ಟರ್ ನಿರ್ವಹಣೆ ಮಾಡುವ ವ್ಯಕ್ತಿಗಳ ತನಕ ವಿವಿಧ ರೀತಿಯಲ್ಲಿ ಆದಾಯ ಸಂಗ್ರಹವಾಗಲಿದೆ. "ಈ ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್‌ರಾಜ್ 'ಮಹಾಕುಂಭ 2025ನಿಂದ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸುವ ಅಂದಾಜಿದೆ" ಎಂದು ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ನಂದಿ ಹೇಳಿದ್ದಾರೆ.
ದಿನಸಿಯಿಂದ 4000 ಕೋಟಿ ರೂ., ಖಾದ್ಯ ತೈಲದಿಂದ 1000 ಕೋಟಿ ರೂ., ತರಕಾರಿಯಿಂದ 2000 ಕೋಟಿ ರೂ., ಹಾಸಿಗೆಗಳು, ಬೆಡ್‌ಶೀಟ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳಿಂದ 500 ಕೋಟಿ ರೂ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳಿಂದ 4000 ಕೋಟಿ ರೂ. ಮತ್ತು ಆತಿಥ್ಯದಿಂದ 2500 ಕೋಟಿ ರೂಪಾಯಿ ಆದಾಯ ಗಳಿಸಲಿದೆ.
"ಮಹಾ ಕುಂಭಮೇಳ 2025ದಲ್ಲಿ ಬೃಹತ್ ಪ್ರಮಾಣದಲ್ಲಿ ಆರ್ಥಿಕ ಮತ್ತು ವ್ಯಾಪಾರ ಚಟುವಟಿಕೆಗಳು ನಡೆಯಲಿವೆ. ಈ ಧಾರ್ಮಿಕ ಯಾತ್ರೆಗೆ ವ್ಯಕ್ತಿಯೊಬ್ಬರಿಗೆ ಸರಾಸರಿ 5 ಸಾವಿರ ರೂಪಾಯಿ ವೆಚ್ಚವಾಗಲಿದೆ. ಇಲ್ಲಿ ಜನರು ಮಾಡುವ ಒಟ್ಟು ಖರ್ಚು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿರಲಿದೆ. ಅಂದರೆ, ಹೋಟೆಲ್, ಗೆಸ್ಟ್‌ಹೌಸ್, ತಾತ್ಕಾಲಿಕ ವಸತಿ ವ್ಯವಸ್ಥೆಗಳು, ಆಹಾರ, ಧಾರ್ಮಿಕ ಪೂಜಾ ವಸ್ತುಗಳು ಮತ್ತು ಇತರೆ ಸೇವೆಗಳಿಂದ ಸಾಕಷ್ಟು ಹಣ ಸಂಗ್ರಹವಾಗಲಿದೆ" ಎಂದು ಸಿಎಐಐ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್ ಹೇಳಿದ್ದಾರೆ.
ಲಕ್ಷಾಂತರ ಜನರಿಗೆ ಉದ್ಯೋಗ
2013ರ ಮಹಾ ಕುಂಭಮೇಳದಲ್ಲಿ ಸುಮಾರು 6 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಆ ಸಮಯದಲ್ಲಿ 12 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. 2019ರ ಕುಂಭಮೇಳದಲ್ಲಿ 1.2 ಲಕ್ಷ ರೂಪಾಯಿ ಆದಾಯ ಸೃಷ್ಟಿಯಾಗಿತ್ತು ಎಂದು ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ)ನ ಅಧ್ಯಯನವೊಂದು ತಿಳಿಸಿದೆ. 2019ರಲ್ಲಿ ವಿವಿಧ ವಲಯಗಳಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಗೆ ಕುಂಭಮೇಳ ಕಾರಣವಾಗಿತ್ತು.
ಪೂಜಾ ವಸ್ತುಗಳಿಂದಲೇ ಸುಮಾರು 2 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. 45 ದಿನ ಹೂವು ಮಾರಾಟದಿಂದ ಸುಮಾರು 800 ಕೋಟಿ ರೂಪಾಯಿ ಸಂಗ್ರಹವಾಗಲಿದೆ ಎಂದು ಸಿಎಐಐ ಅಂದಾಜಿಸಿದೆ.
ಆತಿಥ್ಯ ವಲಯ ಬೂಮ್
ಮಹಾ ಕುಂಭಮೇಳದ ಸಮಯದಲ್ಲಿ ಆತಿಥ್ಯ ವಲಯ ಬೂಮ್ ಆಗಲಿದೆ. ಪ್ರಯಾಗರಾಜ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಹೋಟೆಲ್‌ಗಳು ಇದ್ದು ಭಕ್ತರು ಮತ್ತು ಪ್ರವಾಸಿಗರಿಗೆ ಸೇವೆ ನೀಡಲಿವೆ. ಪ್ರತಿರಾತ್ರಿ ಲಗ್ಷುರಿ ಟೆಂಟ್‌ನಲ್ಲಿ ಉಳಿಯಲು 18-20 ಸಾವಿರ ರೂಪಾಯಿ ಬೇಕಿರುತ್ತದೆ. ಪ್ರೀಮಿಯಂ ಸೌಕರ್ಯ ಬೇಕಿದ್ದರೆ ಪ್ರತಿರಾತ್ರಿ ಇಬ್ಬರು ಅತಿಥಿಗಳಿಗೆ 1 ಲಕ್ಷ ರೂಪಾಯಿ ಇರುತ್ತದೆ. ಈಗಾಗಲೇ ಸಂಗಮ ನಿವಾಸದಲ್ಲಿರುವ 44 ಸೂಪರ್ ಲಗ್ಷುರಿ ಟೆಂಟ್‌ಗಳು ಈಗಾಗಲೇ ಸೋಲ್ಡ್‌ಔಟ್ ಆಗಿವೆ. ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಟೆಂಟ್‌ಗಳ ದರ ಪ್ರತಿರಾತ್ರಿಗೆ 1500 ರೂಪಾಯಿಯಿಂದ 35 ಸಾವಿರ ರೂಪಾಯಿವರೆಗೆ ಇದೆಯಂತೆ.
ಮಹಾ ಕುಂಭಮೇಳದ ಬಜೆಟ್ ಎಷ್ಟು?
2024-25ರ ರಾಜ್ಯ ಬಜೆಟ್‌ನಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರಕಾರವು ಮಹಾ ಕುಂಭಮೇಳ ಆಯೋಜನೆಗೆ 2500 ಕೋಟಿ ರೂಪಾಯಿ ಬಜೆಟ್ ಹಂಚಿಕೆ ಮಾಡಿದೆ. ಈ ಹಿಂದಿನ ಬಜೆಟ್‌ನಲ್ಲಿಯೂ ಹಣ ಹಂಚಿಕೆ ಮಾಡಲಾಗಿತ್ತು. ಕೇಂದ್ರ ಸರಕಾರವು 2,100 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಲು ಒಪ್ಪಿದೆ. ಒಟ್ಟಾರೆ, ಸುಮಾರು 7,500 ಕೋಟಿ ಬಜೆಟ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತದೆ.
ಮಹಾ ಕುಂಭಮೇಳ 2025ರ ಅಂದಾಜು ಆದಾಯಗಳು
ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ: ಸ್ಥಳೀಯ ಹೋಟೆಲ್‌ಗಳು, ಗೆಸ್ಟ್ ಹೌಸ್‌ಗಳು, ತಾತ್ಕಾಲಿಕ ವಸತಿ ವ್ಯವಸ್ಥೆಗಳಿಂದ ಸುಮಾರು 40 ಸಾವಿರ ಕೋಟಿ ರೂಪಾಯಿ ಆದಾಯ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಆಹಾರ ಮತ್ತು ಪಾನೀಯಗಳು: ಪ್ಯಾಕ್ ಮಾಡಿದ ಆಹಾರಗಳು, ನೀರು, ಬಿಸ್ಕೆಟ್, ಜ್ಯೂಸ್, ಊಟ ಇತ್ಯಾದಿಗಳಿಂದ ಅರ್ಥವ್ಯವಸ್ಥೆಗೆ 20 ಸಾವಿರ ಕೋಟಿ ರೂಪಾಯಿ ಸೇರಲಿದೆ.
ಪೂಜಾ ಸಾಮಾಗ್ರಿಗಳು ಮತ್ತು ಪೂಜಾ ಸೇವೆಗಳು: ಎಣ್ಣೆ, ಬತ್ತಿ, ಗಂಗಾ ಜಲ, ಮೂರ್ತಿಗಳು, ಊದುಬತ್ತಿಗಳು, ಧಾರ್ಮಿಕ ಪುಸ್ತಕಗಳು ಇತ್ಯಾದಿಗಳಿಂದ 20 ಸಾವಿರ ಕೋಟಿ ರೂಪಾಯಿ ಆದಾಯ ದೊರಕುವ ಸಾಧ್ಯತೆಯಿದೆ.
ಸಾರಿಗೆ ಮತ್ತು ಲಾಜಿಸ್ಟಿಕ್: ಸ್ಥಳೀಯ ಮತ್ತು ಅಂತರ್‌ರಾಜ್ಯ ಸಾರಿಗೆ, ವಿಮಾನ ಸೇವೆಗಳು, ಟ್ಯಾಕ್ಸಿಗಳಿಂದ 10 ಸಾವಿರ ಕೋಟಿ ರೂಪಾಯಿ ಆದಾಯ ಸೃಷ್ಟಿಯಾಗಲಿದೆ.
ಪ್ರವಾಸೋದ್ಯಮ ಸೇವೆಗಳು: ಟೂರ್ ಗೈಡ್, ಟ್ರಾವೆಲ್ ಪ್ಯಾಕೇಜ್‌ಗಳು ಮತ್ತು ಇತರೆ ಸೇವೆಗಳಿಂದ 10 ಸಾವಿರ ಕೋಟಿ ರೂಪಾಯಿ ಆದಾಯ ದೊರಕುವ ನಿರೀಕ್ಷೆಯಿದೆ.
ಕರಕುಶಲ ವಸ್ತುಗಳ ಮಾರಾಟ: ಸ್ಥಳೀಯ ಕರಕುಶಲ ವಸ್ತುಗಳು, ಬಟ್ಟೆ, ಆಭರಣಗಳ ಮಾರಾಟದಿಂದ 5 ಸಾವಿರ ಕೋಟಿ ರೂಪಾಯಿ ಆದಾಯ.
ಆರೋಗ್ಯಸೇವೆ: ತಾತ್ಕಾಲಿಕ ಮೆಡಿಕಲ್ ಕ್ಯಾಂಪ್, ಆಯುರ್ವೇದಿಕ್ ಉತ್ಪನ್ನಗಳ ಮಾರಾಟ, ಔಷಧಗಳ ಮಾರಾಟದಿಂದ 3 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ.
ಐಟಿ ಮತ್ತು ಡಿಜಿಟಲ್ ಸರ್ವೀಸ್: ಇ-ಟಿಕೆಟ್, ಡಿಜಿಟಲ್ ಪೇಮೆಂಟ್, ವೈಫೈ ಸರ್ವೀಸಸ್, ಮೊಬೈಲ್ ಚಾರ್ಜಿಂಗ್ ಸ್ಟೇಷನ್ ಇತ್ಯಾದಿಗಳಿಂದ 1 ಸಾವಿರ ಕೋಟಿ
ಮನರಂಜನೆ ಮತ್ತು ಮಾಧ್ಯಮ: ಜಾಹೀರಾತು, ಪ್ರಮೋಷನ್, ಮಾಧ್ಯಮ ಸಂಬಂಧಿ ಸೇವೆಗಳಿಂದ 10 ಸಾವಿರ ಕೋಟಿ ರೂಪಾಯಿ ಆದಾಯ.
ಪೂರಕ ಮಾಹಿತಿ: ದಿ ಮಿಂಟ್ (ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ಪತ್ರಿಕೆ)

ವಿಭಾಗ