ಹೇಗೋ ಎದ್ದು ಹೆತ್ತವರನ್ನು ರಕ್ಷಿಸಿದೆ; ಕುಂಭ ಮೇಳ ಕಾಲ್ತುಳಿತ ಭೀಕರ ಘಟನೆ, ಅವ್ಯವಸ್ಥೆ ವಿವರಿಸಿದ ಪ್ರತ್ಯಕ್ಷದರ್ಶಿಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹೇಗೋ ಎದ್ದು ಹೆತ್ತವರನ್ನು ರಕ್ಷಿಸಿದೆ; ಕುಂಭ ಮೇಳ ಕಾಲ್ತುಳಿತ ಭೀಕರ ಘಟನೆ, ಅವ್ಯವಸ್ಥೆ ವಿವರಿಸಿದ ಪ್ರತ್ಯಕ್ಷದರ್ಶಿಗಳು

ಹೇಗೋ ಎದ್ದು ಹೆತ್ತವರನ್ನು ರಕ್ಷಿಸಿದೆ; ಕುಂಭ ಮೇಳ ಕಾಲ್ತುಳಿತ ಭೀಕರ ಘಟನೆ, ಅವ್ಯವಸ್ಥೆ ವಿವರಿಸಿದ ಪ್ರತ್ಯಕ್ಷದರ್ಶಿಗಳು

Mahakumbh Mela stampede: ಜನವರಿ 29 ರಂದು ನಡೆದ ಮಹಾ ಕುಂಭ ಮೇಳದಲ್ಲಿ ಸಾವಿರಾರು ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕಾಗಿ ಜಮಾಯಿಸಿದ್ದರಿಂದ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿ, 15 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಕುರಿತು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಹೇಗೋ ಎದ್ದು ಹೆತ್ತವರನ್ನು ರಕ್ಷಿಸಿದೆ; ಕುಂಭ ಮೇಳ ಕಾಲ್ತುಳಿತ ಭೀಕರ ಘಟನೆ, ಅವ್ಯವಸ್ಥೆ ವಿವರಿಸಿದ ಪ್ರತ್ಯಕ್ಷದರ್ಶಿಗಳು
ಹೇಗೋ ಎದ್ದು ಹೆತ್ತವರನ್ನು ರಕ್ಷಿಸಿದೆ; ಕುಂಭ ಮೇಳ ಕಾಲ್ತುಳಿತ ಭೀಕರ ಘಟನೆ, ಅವ್ಯವಸ್ಥೆ ವಿವರಿಸಿದ ಪ್ರತ್ಯಕ್ಷದರ್ಶಿಗಳು

Mahakumbh Stampede: ಇಂದು ಮೌನಿ ಅಮವಾಸ್ಯ ಕಾರಣ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕಾಗಿ ಜಮಾಯಿಸಿದ್ದರಿಂದ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಕಾಲ್ತುಳಿತ ದುರಂತಕ್ಕೆ ಕಾರಣವೇನು? ಸಂಗಮದ ಅವ್ಯವಸ್ಥೆ ಕುರಿತು ಭಯಾನಕ ಮಾಹಿತಿಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್​ ಹಾಗೂ ಪ್ರತ್ಯಕ್ಷದರ್ಶಿ ವಿವೇಕ್ ಮಿಶ್ರಾ ಅವರು ಪ್ರಯಾಗ್​ರಾಜ್ ಸಂಗಮದಲ್ಲಿರುವ ಅವ್ಯವಸ್ಥೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. 'ಮುಂಜಾನೆ 2 ಗಂಟೆಗೆ 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕಾಗಿ ಜಮಾಯಿಸಿದ್ದರಿಂದ ಈ ಘೋರ ದುರಂತ ನಡೆಯಿತು' ಎಂದು ಅವರು ಹೇಳಿದ್ದಾರೆ. ‘ಒಂದೇ ಸಮನೆ ಜನರು ನುಗ್ಗಿದ ಕಾರಣ ಪವಿತ್ರ ಸ್ನಾನದ ಬಳಿಕ ಎಲ್ಲಿಗೆ ಹೋಗಬೇಕು ಎನ್ನುವ ಗೊಂದಲ ಉಂಟಾಗಿದ್ದರಿಂದ ಅಪಾರ ಸಾವು-ನೋವು ಸಂಭವಿಸಿದೆ’ ಎನ್ನಲಾಗಿದೆ.

‘ಮುಂಜಾನೆ 2.30ರ ಸುಮಾರಿಗೆ ಸಂಗಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ತಲುಪಿದಾಗ ಈ ಘಟನೆ ನಡೆದಿದೆ. ಸ್ನಾನದ ನಂತರ ಎಲ್ಲಿಗೆ ಹೋಗಬೇಕೆಂದು ಜನಸಮೂಹಕ್ಕೆ ತಿಳಿಯದ ಕಾರಣ ದುರಂತ ಸಂಭವಿಸಿದೆ. ಅನೇಕರು ತಮ್ಮ ಲಗೇಜ್​ ತಲೆಮೇಲಿಟ್ಟುಕೊಂಡಿದ್ದರು. ಈ ವೇಳೆ ಜನಸಂದಣಿ ಹೆಚ್ಚಾದ ಹಿನ್ನೆಲೆ ಕೆಲವು ಜನರು ತಮ್ಮ ಸಮತೋಲನವನ್ನು ಕಳೆದುಕೊಂಡು ಬಿದ್ದರು. ಅವರ ಲಗೇಜ್​ ಕೂಡ ಜನರ ಮೇಲೆ ಬಿತ್ತು. ಲಗೇಜ್​ಗಳು ಚೆಲ್ಲಾಪಿಲ್ಲಿಯಾದವು. ಅಲ್ಲಿದ್ದ ಕಸದ ಬುಟ್ಟಿಗಳೂ ಚೆಲ್ಲಾಪಿಲ್ಲಿಯಾದವು. ನನ್ನ ಕಾಲು ಸಹ ಕಸದ ಬುಟ್ಟಿಗೆ ಸಿಲುಕಿಜೊಂಡಿದ್ದರಿಂದ ಕೆಳಗೆ ಬಿದ್ದೆ’ ಎಂದು ಮಿಶ್ರಾ ಹೇಳಿದ್ದಾರೆ.

'ಆದರೆ ಹೇಗೋ ಎದ್ದು ತನ್ನ ಪೋಷಕರನ್ನು ಮತ್ತು ಇನ್ನೊಬ್ಬರನ್ನು ಉಳಿಸುವಲ್ಲಿ ಯಶಸ್ವಿಯಾದೆ. ನನ್ನ ಬೂಟುಗಳನ್ನು ಕಳೆದುಕೊಂಡೆ. ನನ್ನ ಪಾದಗಳಿಗೆ ಗಾಯವಾಗಿದೆ. ನಾನು ಹೇಗೋ ಎದ್ದು ನಿಂತು ನೆಲದ ಮೇಲೆ ಬಿದ್ದಿದ್ದ ನನ್ನ ಹೆತ್ತವರನ್ನು ಮತ್ತು ಇನ್ನೊಬ್ಬ ಮಹಿಳೆಯನ್ನು ರಕ್ಷಿಸಿದೆ. ಇನ್ನೂ ರಕ್ಷಿಸಲು ಮುಂದಾದೆ. ಆದರೆ, ಆಗ ಗುಂಪಿನಲ್ಲಿದ್ದ ಯುವಕರು ಇತರರನ್ನು ತಳ್ಳಲು ಪ್ರಾರಂಭಿಸಿದರು. ಈ ಪರಿಸ್ಥಿತಿಯೇ ಕಾಲ್ತುಳಿತಕ್ಕೆ ಕಾರಣವಾಯಿತು. ಗ್ರೌಂಡ್ ಝೀರೋದಲ್ಲಿ ನಾನು ಏನನ್ನು ನೋಡಿದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ' ಎಂದು ಮಿಶ್ರಾ ವಿವರಿಸಿದ್ದಾರೆ.

ನಿರ್ಗಮನ ಮಾರ್ಗ ನಿಷೇಧ

ಮತ್ತೊಬ್ಬ ಪ್ರತ್ಯಕ್ಷದರ್ಶಿ ಫತೇಪುರ್ ನಿವಾಸಿ ರಾಮ್ ಸಿಂಗ್ ಅವರು ಮಾತನಾಡಿ, ‘ನಿರ್ಗಮನ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ, ಆದ್ದರಿಂದ ಪರಿಸ್ಥಿತಿ ಹದಗೆಟ್ಟಿದೆ’ ಎಂದು ಹೇಳಿದ್ದಾರೆ. ‘ನಮ್ಮ ಗುಂಪಿನ ನಾಲ್ವರು ಮುಂದೆ ಹೋಗಿದ್ದರು, ಮತ್ತು ನಾವು ಅವರಿಗೆ ನಂದಿನಿ ದ್ವಾರದಲ್ಲಿ ಉಳಿಯಲು ಹೇಳಿದ್ದೆವು. ಆದರೆ ಹಿಂದೆ ಇದ್ದ ನಾವು ನಾಲ್ವರು ಹಿಂದೆ ಸಿಕ್ಕಿಹಾಕಿಕೊಂಡೆವು. ಬಹಳಷ್ಟು ಜನರು ನಮ್ಮ ಮುಂದೆ ಬೀಳುತ್ತಿದ್ದರು. ನೂಕು ನುಗ್ಗಲು ಹೆಚ್ಚಾಯಿತು, ಹೀಗಾಗಿ ಕಾಲ್ತುಳಿತ ಸಂಭವಿಸಿತು’ ಎಂದು ಹೇಳಿದ್ದಾರೆ.

ಕೆಲವರು ತಳ್ಳಿ ನಗುತ್ತಿದ್ದರು ಎಂದ ಮಹಿಳೆ

ಈ ಅವ್ಯವಸ್ಥೆ ವಿವರಿಸಿದ ಮತ್ತೊಬ್ಬ ಪ್ರತ್ಯಕ್ಷದರ್ಶಿ ಬಲ್ಜೀತ್ ಸಿಂಗ್, ‘ಇದ್ದಕ್ಕಿದ್ದಂತೆ, ಭಾರಿ ಜನಸಂದಣಿ ಏರ್ಪಟ್ಟಿತು. ಎಲ್ಲರೂ ನಜ್ಜುಗುಜ್ಜಾದರು. ನಾವು 14 ಜನರಿದ್ದೆವು. ನಾವು ಸ್ನಾನಕ್ಕೆ ಹೋಗುತ್ತಿದ್ದೆವು. ಆದರೆ ಸ್ನಾನದ ಬಳಿಕ ಮರಳುತ್ತಿದ್ದ ಕಾರಣ ಜನಸಂದಣಿ ಹೆಚ್ಚಾಯಿತು. ಈ ವೇಳೆ ನಿಯಂತ್ರಣ ಕಳೆದುಕೊಂಡ ಜನರು ಕೆಳಗೆ ಬೀಳಲು ಆರಂಭಿಸಿದರು. ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ. ಎಲ್ಲಾ ಕಡೆಯಿಂದಲೂ ಒತ್ತಡವಿತ್ತು’ ಎಂದು ಪಿಟಿಐಳಿಗೆ ತಿಳಿಸಿದ್ದಾರೆ. ತಾನು ಎದುರಿಸಿದ ಅಗ್ನಿ ಪರೀಕ್ಷೆ ವಿವರಿಸಿದ ಮಹಿಳೆಯೊಬ್ಬರು, 'ಹೋಗಲು ಎಲ್ಲಿಯೂ ಜಾಗವೇ ಇರಲಿಲ್ಲ. ಮಕ್ಕಳ ಬಗ್ಗೆ ದಯೆ ತೋರಿಸುವಂತೆ ನಾವು ಬೇಡಿಕೊಂಡಾಗ ನಮ್ಮನ್ನು ತಳ್ಳಿದ ಕೆಲವರು ನಗುತ್ತಿದ್ದರು ಎಂದು ಹೇಳಿದ್ದನ್ನು ಪಿಟಿಐ ವರದಿ ಮಾಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.