ಮಹಾರಾಷ್ಟ್ರ: ರಸ್ತೆ ಗುಂಡಿಗಳ ನಡುವೆ ಕುಲುಕುತ್ತ ಸಾಗಿದ ಆಂಬುಲೆನ್ಸ್, ಹೃದಯಾಘಾತದಿಂದ ಸತ್ತವ ಎದ್ದು ಕುಳಿತ, ಕೊಲ್ಹಾಪುರದಲ್ಲಿ ವಿಲಕ್ಷಣ ಘಟನೆ
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ಘೋಷಿಸಿದ ಬಳಿಕ, ಆಂಬುಲೆನ್ಸ್‌ನಲ್ಲಿ ಸಾಗುವಾಗ ರಸ್ತೆ ಗುಂಡಿ ಕುಲುಕಾಟಕ್ಕೆ ಎದ್ದು ಕುಳಿತ ವಿಲಕ್ಷಣ ಘಟನೆ ನಡೆದಿದೆ. ಈ ವಿದ್ಯಮಾನಕ್ಕೆ ಸಂಬಂಧಿಸಿ ಸಾವು ಗೆದ್ದು ಬಂದ ವ್ಯಕ್ತಿ ಕೂಡ ಮಾತನಾಡಿದ್ದು, ಅದರ ವಿವರ ಇಲ್ಲಿದೆ.
ಕೊಲ್ಹಾಪುರ: ರಸ್ತೆ ಗುಂಡಿಗಳು ಪ್ರಾಣ ಕಸಿಯುವುದಷ್ಟೇ ಅಲ್ಲ, ಅಪರೂಪಕ್ಕೆ ಪ್ರಾಣ ಉಳಿಸುವ ಕೆಲಸವನ್ನೂ ಮಾಡುತ್ತವೆ. ಅಂಥದ್ದೊಂದು ವಿರಳ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಿಂದ ವರದಿಯಾಗಿದೆ. ಕೊಲ್ಹಾಪುರ ಕಸಬಾ ಬಾವ್ಡಾದ ಪಾಂಡುರಂಗ್ ಉಲ್ಪೆ ಎಂಬ 65 ವರ್ಷದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದ ಬಳಿಕ ಅವರ ಮೃತದೇಹವನ್ನು ವಾಪಸ್ ಆಂಬುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ರಸ್ತೆ ಗುಂಡಿಗೆ ಬಿದ್ದು ಮುಂದೆ ಸಾಗಿದ ಆಂಬುಲೆನ್ಸ್; ಹೃದಯಾಘಾತದಿಂದ ಸತ್ತವ ಎದ್ದು ಕುಳಿತ, ಏನಿದು ಘಟನೆ
ಬಾವ್ಡಾ ಉಪನಗರದ ಪಾಂಡುರಂಗ ಉಲ್ಪೆ (65) ಅವರು ಆಪ್ತರ ವಲಯದಲ್ಲಿ ಪಾಂಡುರಂಗ ತಾತ್ಯಾ ವಾರಕರಿ ಎಂದೇ ಗುರುತಿಸಲ್ಪಟ್ಟವರು. ಹದಿನೈದು ದಿನಗಳ ಹಿಂದೆ ಅವರು ಹರಿನಾಮ ಸ್ಮರಣೆ ಮಾಡುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. 65 ವರ್ಷದ ಪಾಂಡುರಂಗ ತಾತ್ಯಾ ಅವರನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ವೈದ್ಯರು ಅವರ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅಂತಿಮವಾಗಿ ವೈದ್ಯರು ಪಾಂಡುರಂಗ ತಾತ್ಯಾ ವಾರಕರಿ ಮೃತಪಟ್ಟಿರುವುದಾಗಿ ಘೋಷಿಸಿದರು. ಅಂತ್ಯ ಸಂಸ್ಕಾರಕ್ಕಾಗಿ ಅವರ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಕುಟುಂಬ ಸದಸ್ಯರು ಸಿದ್ಧತೆಗಳನ್ನು ಪ್ರಾರಂಭಿಸಿದರು.
ದಾರಿ ಮಧ್ಯೆ ರಸ್ತೆ ಗುಂಡಿಗಳ ನಡುವೆ ಕುಲುಕುತ್ತ ಆಂಬುಲೆನ್ಸ್ ಮುಂದೆ ಸಾಗಿತ್ತು. ಅದಾಗಿ ಸ್ವಲ್ಪ ಹೊತ್ತಿಗೆ ಪಾಂಡುರಂಗ ಅವರ ಶರೀರದಲ್ಲಿ ಚಲನೆ ಕಂಡುಬಂತು. ಕೂಡಲೆ ಆಂಬುಲೆನ್ಸ್ ಅನ್ನು ವಾಪಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಡಾಕ್ಟರ್ ಮತ್ತೆ ಪರಿಶೀಲಿಸಿದಾಗ, ಅವರು ಆರೋಗ್ಯವಾಗಿರುವುದನ್ನು ಖಚಿತಪಡಿಸಿ ಕಳುಹಿಸಿಕೊಟ್ಟರು.
ಪಾಂಡುರಂಗ ಅವರ ಕುಟುಂಬ ಸದಸ್ಯರು ಏನು ಹೇಳಿದರು?
ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಬಿಲ್ ಪಾವತಿಸಿ ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ನಲ್ಲಿ ಕೊಂಡೊಯ್ಯುವಾಗ ಚಾಲಕ ರಸ್ತೆಗಳನ್ನು ತಪ್ಪಿಸುತ್ತ ಸಾಗುತ್ತಿದ್ದ. ಆದರೆ ಅದೊಂದು ಕಡೆಗೆ ರಸ್ತೆಗುಂಡಿಗೆ ಬಿದ್ದು ಮುಂದೆ ಸಾಗಿದೆ ಆಂಬುಲೆನ್ಸ್. ಆಗ, ಅವರ ಶರೀರದಲ್ಲಿ ಚಲನೆ ಕಾಣಿಸಿತು. ಕೈಬೆರಳು ಅಲುಗಾಡಿದ್ದವು ಎಂದು ಪಾಂಡುರಂಗ ಅವರ ಪತ್ನಿ ಮಾಧ್ಯಮಗಳಿಗೆ ತಿಳಿಸಿದರು.
ಕೂಡಲೇ ಅವರನ್ನು ಆಸ್ಪತ್ರೆಗೆ ಮತ್ತೆ ದಾಖಲಿಸಿದ್ದೇವೆ. ಅಲ್ಲಿ ವೈದ್ಯರು ಮತ್ತೆ ಅವರ ಆರೋಗ್ಯ ಪರಿಶೀಲಿಸಿ ಚಿಕಿತ್ಸೆ ನೀಡಿದರು. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ. ಅಲ್ಲಿಂದ ಅವರು ಮನೆಗೆ ವಾಪಸಾಗಿದ್ದಾರೆ.
ಮನೆಗೆ ಬಂದ ಪಾಂಡುರಂಗ ಅವರನ್ನು ಮನೆ ಮಂದಿ ಆರತಿ ಬೆಳಗಿ, ತಿಲಕ ಇಟ್ಟು ಬರಮಾಡಿಕೊಂಡರು. ದುಃಖದ ಮಡುವಿನಲ್ಲಿದ್ದ ಕುಟುಂಬ ಸದಸ್ಯರು ಈಗ ಭಾರಿ ಖುಷಿಯಲ್ಲಿದ್ದಾರೆ. ಪಾಂಡುರಂಗ ಅವರು ಈಗ ಮೊದಲಿನಂತೆ ಆಹಾರ ಸೇವಿಸುತ್ತಿದ್ದಾರೆ. ಎಲ್ಲ ಕೆಲಸ ಮಾಡುತ್ತಿದ್ದಾರೆ. ಆರೋಗ್ಯದಿಂದ ಇದ್ದಾರೆ. ಅವರ ಕುಟುಂಬ ಸದಸ್ಯರು ಇದೊಂದು ಪವಾಡ ಎಂದು ಹೇಳುತ್ತಿದ್ದಾರೆ. ರಸ್ತೆ ಗುಂಡಿ ಇಲ್ಲದೇ ಇದ್ದಿದ್ದರೆ ಪಾಂಡುರಂಗ ಅವರಿಗೆ ಮರುಜೀವ ಸಿಗುತ್ತಿರಲಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಪಾಂಡುರಂಗ ಉಲ್ಪೆ ಏನು ಹೇಳಿದ್ರು?
ಆಂಬುಲೆನ್ಸ್ ರಸ್ತೆಗುಂಡಿಗೆ ಬಿದ್ದು ಮರುಜೀವ ಸಿಕ್ಕಿದ 15 ದಿನಗಳ ಬಳಿಕ ಪಾಂಡುರಂಗ ಉಲ್ಪೆ ಅವರು ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾಗಿ ಮನೆ ಬಂದರು. ಮಸಣ ಸೇರಬೇಕಾಗಿದ್ದ ಪಾಂಡುರಂಗ ಅವರು ಘಟನಾವಳಿಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ."ನಾನು ಡಿಸೆಂಬರ್ 16 ರಂದು ಹರಿನಾಮ ಸ್ಮರಣೆ ಮಾಡ್ತಾ ವಾಕಿಂಗ್ ಮುಗಿಸಿ ಮನೆಗೆ ಬಂದೆ. ಸ್ವಲ್ಪ ಚಹಾ ಸೇವಿಸಿದೆ. ಇದ್ದಕ್ಕಿದ್ದ ಹಾಗೆ ತಲೆಸುತ್ತು ಬಂತು. ಉಸಿರುಗಟ್ಟಿದಂತೆ ಭಾಸವಾಯಿತು. ಬಾತ್‌ರೂಮ್‌ಗೆ ಹೋಗಿ ವಾಂತಿ ಮಾಡಿದೆ. ಮನೆ ಮಂದಿ ನನ್ನನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟೆ, ಮುಂದೇನಾಯಿತು ಗೊತ್ತಿಲ್ಲ" ಎಂದು ಪಾಂಡುರಂಗ ಅವರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಆದಾಗ್ಯೂ, ಪಾಂಡುರಂಗ ಉಲ್ಪೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮೃತಪಟ್ಟಿರುವುದಾಗಿ ಘೋಷಿಸಿದ ಆಸ್ಪತ್ರೆಯವರು ಈ ವಿದ್ಯಮಾನದ ಬಗ್ಗೆ ಇದುವರೆಗೂ ಹೇಳಿಕೆ ನೀಡಿಲ್ಲ ಎಂದು ವರದಿ ವಿವರಿಸಿದೆ.