ಮಹಾರಾಷ್ಟ್ರ ಫಲಿತಾಂಶ: ಅಧಿಕಾರಕ್ಕೆ ಬರಲು ಬೇಕಾಗುತ್ತೆ ಅಂತ 160ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಬೆಂಬಲ ಪತ್ರ ಸಂಗ್ರಹಿಸಿದ ಮಹಾ ವಿಕಾಸ್ ಅಘಾಡಿ
Maharashtra Election Results 2024: ಮಹಾರಾಷ್ಟ್ರ ಫಲಿತಾಂಶ ಪ್ರಕಟವಾಗುತ್ತಿದ್ದು, ಮತ ಎಣಿಕೆ ಪ್ರಗತಿಯಲ್ಲಿದೆ. ಈ ನಡುವೆ, ಅಧಿಕಾರಕ್ಕೆ ಬರಲು ಬೇಕಾಗುತ್ತೆ ಅಂತ 160ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಬೆಂಬಲ ಪತ್ರ ಸಂಗ್ರಹಿಸಿದ ಮಹಾ ವಿಕಾಸ್ ಅಘಾಡಿ ನಾಯಕರ ನಡೆ ಗಮನಸೆಳೆದಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.
Maharashtra Election Results 2024: ಮಹಾರಾಷ್ಟ್ರ ಫಲಿತಾಂಶ ಪ್ರಕಟವಾಗುತ್ತಿದ್ದು, ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಹಿನ್ನಡೆ ಅನುಭವಿಸಿದೆ. ಆದಾಗ್ಯೂ, ಫಲಿತಾಂಶಕ್ಕೂ ಮೊದಲೇ ಮಹಾ ವಿಕಾಸ್ ಅಘಾಡಿ ತನ್ನ 160ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಬೆಂಬಲ ಪತ್ರವನ್ನು ಮೊದಲೇ ಪಡೆದುಕೊಂಡಿದೆ ಎಂಬ ಸುದ್ದಿ ಗಮನಸೆಳೆದಿದೆ. ಒಂದೊಮ್ಮೆ ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬಂದರೆ ಆಗ ಬೆಂಬಲ ಪತ್ರ ಪಡೆಯುವ ಕಸರತ್ತು ಕಷ್ಟವಾಗಬಹುದು ಎಂಬ ಮುಂದಾಲೋಚನೆಯೊಂದಿಗೆ ಮಹಾ ವಿಕಾಸ್ ಅಘಾಡಿ ನಾಯಕರು ಈ ಕೆಲಸ ಮಾಡಿದ್ದಾಗಿ ಪಿಟಿಐ ವರದಿ ಮಾಡಿದೆ.
160ಕ್ಕೂ ಹೆಚ್ಚು ಅಭ್ಯರ್ಥಿಗಳ ಬೆಂಬಲ ಪತ್ರ ಸಂಗ್ರಹಿಸಿದ ಎಂವಿಎ ನಾಯಕರು
ಮಹಾರಾಷ್ಟ್ರ ಫಲಿತಾಂಶ ಪ್ರಕಟವಾಗುತ್ತಿದ್ದು, ಅದರ ನಡುವೆ ಮಹಾ ವಿಕಾಸ್ ಅಘಾಡಿಯ ನಡೆಯೊಂದು ಈಗ ಗಮನಸೆಳೆದಿದೆ. ಮಹಾರಾಷ್ಟ್ರದ ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (MVA) ತನ್ನ 160 ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಕೆಲವು ಸ್ವತಂತ್ರರಿಂದ ಬೆಂಬಲ ಪತ್ರಗಳನ್ನು ಸಂಗ್ರಹಿಸಿದೆ. ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದಾಗ, ಸರ್ಕಾರ ರಚಿಸುವುದಕ್ಕೆ ಬೆಂಬಲ ಪತ್ರ ಬೇಕಾಗುತ್ತೆ ಎಂದು ಮುಂಚಿತವಾಗಿಯೇ ಅದನ್ನು ಸಂಗ್ರಹಿಸಿದೆ. ಶನಿವಾರ (ನವೆಂಬರ್ 23) ಮತ ಎಣಿಕೆ ಮುಗಿದ ಕೂಡಲೇ ಮಹಾರಾಷ್ಟ್ರ ವಿಕಾಸ್ ಅಘಾಡಿ ಈ ಬೆಂಬಲ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಿ ಸರ್ಕಾರ ರಚನೆಗೆ ಅವಕಾಶ ಕೋರಲಿದೆ ಎಂದು ಮೂಲಗಳು ತಿಳಿಸಿದ್ಧಾಗಿ ಪಿಟಿಐ ವರದಿ ಹೇಳಿದೆ.
ಈ ರೀತಿ ಬೆಂಬಲ ಸಂಗ್ರಹಿಸುವುದು ಹೊಸ ವಿಚಾರವಲ್ಲ. ಮಹಾ ವಿಕಾಸ್ ಅಘಾಡಿಯ ಅಭ್ಯರ್ಥಿಗಳ ಹೊರತಾಗಿ ಗೆಲ್ಲಬಹುದಾದ ಕೆಲವು ಸ್ವತಂತ್ರ ಅಭ್ಯರ್ಥಿಗಳನ್ನು, ಬಂಡಾಯ ಅಭ್ಯರ್ಥಿಗಳನ್ನೂ ಸಂಪರ್ಕಿಸಿ ಅವರಿಂದ ಬೆಂಬಲ ಪತ್ರ ಪಡೆಯಲಾಗಿದೆ ಎಂದು ಮೂಲಗಳು ಹೇಳಿದ್ದಾಗಿ ವರದಿ ವಿವರಿಸಿದೆ. ಮಹಾ ವಿಕಾಸ್ ಅಘಾಡಿಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ (ಯುಬಿಟಿ), ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ (ಎಸ್‌ಪಿ)) ಮತ್ತು ಕಾಂಗ್ರೆಸ್ ಪಕ್ಷಗಳಿವೆ. ಈ ಪೈಕಿ ಕಾಂಗ್ರೆಸ್ 101, ಶಿವ ಸೇನಾ ಯುಬಿಟಿ 95, ಎನ್‌ಸಿಪಿ ಎಸ್‌ಪಿ 86 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇದೇ ವೇಳೆ, ಆಡಳಿತಾರೂಢ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ 149, ಶಿವ ಸೇನಾ 81, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಮಹಾರಾಷ್ಟ್ರ ಫಲಿತಾಂಶ: ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಲಿದೆ ಎಂದ ಶಿವಸೇನಾ (UBT) ಅಭ್ಯರ್ಥಿ
ವಡಾಲದ ಶಿವಸೇನಾ (ಯುಬಿಟಿ) ಅಭ್ಯರ್ಥಿ ಶ್ರದ್ಧಾ ಜಾಧವ್ ಶನಿವಾರ ಮಹಾ ವಿಕಾಸ್ ಅಘಾಡಿ (ಎಂವಿಎ) ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಮತ್ತು ಅವರ ಗೆಲುವು ಖಚಿತ ಎಂದು ಹೇಳಿದರು. ರಾಜ್ಯದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಲಿದೆ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬರಲಿದೆ. ಖಚಿತವಾಗಿ ನಾವು ಗೆಲ್ಲುತ್ತೇವೆ. ಎಂವಿಎ ಸರ್ಕಾರ ರಚಿಸುತ್ತೇವೆ ಎಂದು ಅವರು ಪ್ರತಿಪಾದಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಇನ್ನೊಂದೆಡೆ, ದಿಂಡೋಶಿ ಕ್ಷೇತ್ರದ ಶಿವ ಸೇನಾ ಅಭ್ಯರ್ಥಿ ಸಂಜಯ್ ನಿರುಪಮ್ ಅವರು ಶನಿವಾರ ಬೆಳಗ್ಗೆ ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಪೂಜೆ ಸಲ್ಲಿಸಿದರು. ಮಹಾಯುತಿ ಸರ್ಕಾರ ಮತ್ತೊಮ್ಮೆ ರಚನೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಅವರು ತಿಳಿಸಿದ್ದಾಗಿ ವರದಿ ಹೇಳಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಬುಧವಾರ (ನವೆಂಬರ್ 20) ಮತದಾನ ನಡೆದಿದ್ದು, ಶೇ 66.05ರಷ್ಟು ಮತದಾನವಾಗಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಶೇ 61ರಷ್ಟು ಮತದಾನವಾಗಿತ್ತು. ಹೆಚ್ಚಿದ ಮತದಾನದ ಪ್ರಮಾಣವನ್ನು ಮಹಾಯುತಿ ಮತ್ತು ಎಂವಿಎ ನಾಯಕರು ತಮ್ಮ ಮೈತ್ರಿಗಳಿಗೆ ಧನಾತ್ಮಕ ಸಂಕೇತವೆಂದು ಪರಿಗಣಿಸಿರುವುದು ವಿಶೇಷ. ಇಂದು ಪ್ರಕಟವಾಗಲಿರುವ ಫಲಿತಾಂಶ ಎಲ್ಲವನ್ನೂ ನಿಚ್ಚಳಗೊಳಿಸಲಿದೆ.