Maharashtra New Government: ಮಹಾರಾಷ್ಟ್ರ ಹೊಸ ಸರ್ಕಾರ ಪ್ರಮಾಣ ವಚನ ಡಿಸೆಂಬರ್‌ 5ಕ್ಕೆ ನಿಗದಿ, ಸಿಎಂ ಯಾರು ಎನ್ನುವುದೇ ಇನ್ನೂ ಸಸ್ಪೆನ್ಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra New Government: ಮಹಾರಾಷ್ಟ್ರ ಹೊಸ ಸರ್ಕಾರ ಪ್ರಮಾಣ ವಚನ ಡಿಸೆಂಬರ್‌ 5ಕ್ಕೆ ನಿಗದಿ, ಸಿಎಂ ಯಾರು ಎನ್ನುವುದೇ ಇನ್ನೂ ಸಸ್ಪೆನ್ಸ್‌

Maharashtra New Government: ಮಹಾರಾಷ್ಟ್ರ ಹೊಸ ಸರ್ಕಾರ ಪ್ರಮಾಣ ವಚನ ಡಿಸೆಂಬರ್‌ 5ಕ್ಕೆ ನಿಗದಿ, ಸಿಎಂ ಯಾರು ಎನ್ನುವುದೇ ಇನ್ನೂ ಸಸ್ಪೆನ್ಸ್‌

Maharashtra New Government: ಮಹಾರಾಷ್ಟ್ರದ ಮಹಾಯುತಿ ಸರ್ಕಾರ ರಚನೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ದತೆಗಳು ನಡೆದಿದ್ದು, ಡಿಸೆಂಬರ್‌ 5ರಂದು ಹೊಸ ಸಿಎಂ, ಡಿಸಿಎಂಗಳು ಪ್ರಮಾಣ ವಚನ ಸ್ವೀಕರಿಸುವರು.

ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಡಿಸೆಂಬರ್‌  5ರಂದು ನಡೆಯಲಿದ್ದು, ಸಿಎಂ ದೇವೇಂದ್ರ ಫಡ್ನವೀಸ್‌ ಇಲ್ಲವೇ ಏಕನಾಥ್‌ ಶಿಂಧೆಯೋ ಎನ್ನುವ ಕುತೂಹಲವಿದೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಡಿಸೆಂಬರ್‌ 5ರಂದು ನಡೆಯಲಿದ್ದು, ಸಿಎಂ ದೇವೇಂದ್ರ ಫಡ್ನವೀಸ್‌ ಇಲ್ಲವೇ ಏಕನಾಥ್‌ ಶಿಂಧೆಯೋ ಎನ್ನುವ ಕುತೂಹಲವಿದೆ.

ಮುಂಬೈ: ವಾರದ ಹಿಂದೆಯೇ ಭರ್ಜರಿ ಬಹುಮತದೊಂದಿಗೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಶಿವಸೇನೆ ಶಿಂಧೆ ಬಣ ಹಾಗೂ ಎನ್‌ಸಿಪಿ ಅಜಿತ್‌ ಪವಾರ್‌ ಬಣದ ಸಮ್ಮಿಶ್ರ ಮಹಾಯುತಿ ಸರ್ಕಾರ ಪ್ರಮಾಣ ವಚನಕ್ಕೆ ಕೊನೆಗೂ ಮಹೂರ್ತ ನಿಗದಿಯಾಗಿದೆ. ಡಿಸೆಂಬರ್ 5 ರ ಗುರುವಾರದಂದು ಪ್ರಮಾಣ ವಚನ ಸ್ವೀ ಕಾರ ಸಮಯವನ್ನು ಘೋಷಣೆ ಮಾಡಲಾಗಿದೆ. ಅಂದು ಸಂಜೆ 5 ಗಂಟೆಗೆ ಮುಂಬೈನ ಐಕಾನಿಕ್ ಆಜಾದ್ ಮೈದಾನದಲ್ಲಿ ಸಮಾರಂಭ ನಡೆಯುವುದು ನಿಕ್ಕಿಯಾಗಿದೆ. ಆದರೆ ಮುಖ್ಯಮಂತ್ರಿ ಯಾರು ಅಲಂಕರಿಸುವರು ಎನ್ನುವ ಕುತೂಹಲ ಹಾಗೆಯೇ ಉಳಿದುಕೊಂಡಿದೆ. ಬಿಜೆಪಿ ಹೆಚ್ಚು ಸ್ಥಾನ ಪಡೆದು ಗೆದ್ದಿರುವುದರಿಂದ ಸಿಎಂ ಸ್ಥಾನ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದರೆ, ಶಿವಸೇನೆಗೆ ಮೊದಲ ಅಧಿಕಾರ ಬಿಟ್ಟುಕೊಡುವಂತೆ ಒತ್ತಡ ಹೇರಲಾಗುತ್ತಿದೆ. ಇದರಿಂದ ಈ ಕುತೂಹಲಕ್ಕೆ ತೆರೆ ಬೀಳಲು ಇನ್ನು ಎರಡು ಮೂರು ದಿನವಾದರೂ ಬೇಕಾಗಬಹುದು.

ಒಂದು ವಾರದಿಂದ ಮೊದಲು ಯಾವ ಪಕ್ಷದವರು ಸಿಎಂ ಆಗಬೇಕು ಎನ್ನುವ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಶಿವಸೇನೆ ಶಿಂಧೆ ಬಣ ಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದರೆ, ಬಿಜೆಪಿ ಹೆಚ್ಚು ಸ್ಥಾನ ಪಡೆದಿರುವುದರಿಂದ ಸಿಎಂ ಹುದ್ದೆ ಪಡೆಯಲು ಪ್ರಯತ್ನಿಸಿದೆ. ಆದರೆ ಏಕನಾಥ್‌ ಶಿಂಧೆ ಇನ್ನೂ ತಮ್ಮ ಅಭಿಪ್ರಾಯ ತಿಳಿಸಿಲ್ಲ. ಅವರು ತಮ್ಮ ಹುಟ್ಟೂರಿಗೆ ತೆರಳಿದ್ದಾರೆ. ಇದರಿಂದ ಸಿಎಂ ಸ್ಥಾನದ ಆಯ್ಕೆಯಾಗಿಲ್ಲ.

ಮುಂದುವರೆದ ಗೊಂದಲ

ಆದರೆ ಗೊಂದಲ ಆಗಬಾರದು ಎನ್ನುವ ಕಾರಣಕ್ಕೆ ಡಿಸೆಂಬರ್‌ 5 ರಂದು ಪ್ರಮಾಚ ವಚನ ದಿನಾಂಕವನ್ನು ಘೋಷಿಸಲಾಗಿದೆ. ಅದರಲ್ಲೂ ಮಹಾರಾಷ್ಟ್ರದ ನೂತನ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಿಜೆಪಿ ಘೋಷಿಸಿದೆ.ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಡಿಸೆಂಬರ್ 5 ರಂದು ಸಂಜೆ 5 ಗಂಟೆಗೆ ಮುಂಬೈನ ಐಕಾನಿಕ್ ಆಜಾದ್ ಮೈದಾನದಲ್ಲಿ ಸಮಾರಂಭ ನಡೆಯಲಿದೆ ಎನ್ನುವ ಮಾಹಿತಿಯನ್ನಷ್ಟೇ ಅವರು ನೀಡಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನವನ್ನು ಯಾರು ಅಲಂಕರಿಸುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

ಚುನಾವಣಾ ಫಲಿತಾಂಶ ಪ್ರಕಟವಾಗಿ ಏಳು ದಿನ ಕಳೆದರೂ ಬಿಜೆಪಿ ಇನ್ನೂ ತನ್ನ ಚುನಾಯಿತ ಶಾಸಕರ ಸಭೆಯನ್ನು ಕರೆದಿಲ್ಲ. ನೂತನ ಪಕ್ಷದ ಶಾಸಕಾಂಗ ಪಕ್ಷದ ನಾಯಕನನ್ನು ನೇಮಿಸಿಲ್ಲ. ಸಿಎಂ ಸ್ಥಾನದ ಗೊಂದಲ ಬಗೆಹರಿಯದ ಕಾರಣಕ್ಕೆ ಸಭೆ ಕರೆದಿಲ್ಲ. ಬಿಜೆಪಿ ವೀಕ್ಷಕರಾಗಿ ರಾಜನಾಥ ಸಿಂಗ್‌ ಅವರನ್ನು ನೇಮಿಸಲಾಗಿದ್ದು, ಶಿವಸೇನೆ ಶಿಂಧೆ ಬಣದ ತೀರ್ಮಾನ ಆಗದೇ ಗೊಂದಲ ಮುಂದುವರಿದಿದೆ.

ಹುಟ್ಟೂರಲ್ಲಿ ಶಿಂಧೆ

ಹಂಗಾಮಿ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಅವರು ಸತಾರಾ ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲಿದ್ದು, ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ಹೊಸ ಸರ್ಕಾರ ರಚನೆಯಾಗುತ್ತಿರುವ ರೀತಿಯಲ್ಲಿ ಅವರು ಸಂತೋಷವಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನವೆಂಬರ್ 23 ರಂದು ಫಲಿತಾಂಶಗಳನ್ನು ಪ್ರಕಟವಾದಾಗ 288 ಸದಸ್ಯ ಬಲದ ಸದನದಲ್ಲಿ 132 ಸ್ಥಾನಗಳೊಂದಿಗೆ ಬಿಜೆಪಿ ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) - ಇತರ ಸದಸ್ಯರು ಮಹಾಯುತಿ ಮೈತ್ರಿ - ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದಿದೆ. ಮಹಾಯುತಿ ಸ್ಥಾನಗಳ ಸಂಖ್ಯೆ 230. ಬಹುಮತಕ್ಕೆ 145 ಸ್ಥಾನ ಸಾಕು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 16 ಸ್ಥಾನಗಳನ್ನು ಗೆದ್ದುಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ಅದರ ಚುನಾವಣಾ ಸೋಲಿನ ಹಾದಿ ಮುಂದುವರಿದಿದೆ. ಉದ್ಧವ್ ಠಾಕ್ರೆ ನೇತೃತ್ವದ ಸೇನಾ ಬಣ 20 ಸ್ಥಾನಗಳನ್ನು ಮತ್ತು ಶರದ್ ಪವಾರ್ ಅವರ ಪಕ್ಷ, ಇತರ ಎನ್‌ಸಿಪಿ ಬಣ 10 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ ಜೊತೆಗೆ ಎರಡು ಪಕ್ಷಗಳು ಮಹಾ ವಿಕಾಸ್ ಅಘಾಡಿ ಮೈತ್ರಿ ಮಾಡಿಕೊಂಡಿವೆ. ಪ್ರತಿಪಕ್ಷಗಳ ಒಟ್ಟು ಸೀಟುಗಳು ಕೇವಲ 46 ಸ್ಥಾನಗಳಲ್ಲಿವೆ.

ಎನ್‌ಸಿಪಿ ಬೆಂಬಲ

ಅಜಿತ್ ಪವಾರ್ ಅವರ ಪಕ್ಷವು ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ತನಗೆ ಸ್ವೀಕಾರಾರ್ಹ ಎಂದು ಈಗಾಗಲೇ ಹೇಳಿದೆ. ಆದರೆ ಶಿಂಧೆ ಬಣದ ಅಭಿಪ್ರಾಯದ ನಂತರ ಸ್ಪಷ್ಟತೆ ಸಿಗಲಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.