ಕನ್ನಡ ಸುದ್ದಿ  /  Nation And-world  /  Maharashtra Right Wing Activist Sambhaji Bhide Refuses To Speak To Journalist For Not Wearing Bindi

Sambhaji Bhide: ಹಣೆಗೆ ಬಿಂದಿ ಇಡದ ಹೆಣ್ಣಿನ ಜೊತೆ ಮಾತನಾಡಲ್ಲ: ಪತ್ರಕರ್ತೆಗೆ 'ಭಿಡೆ' ಬಿಟ್ಟು ಹೇಳಿದ ಸಂಭಾಜಿಗೆ ನೋಟಿಸ್‌!

ತಮ್ಮನ್ನು ಪ್ರಶ್ನೆ ಕೇಳಲು ಬಂದ ಪತ್ರಕರ್ತೆ ಹಣೆಗೆ ಬಿಂದಿ ಇಡದಿರುವುದನ್ನು ಗಮನಿಸಿದ ಮಹಾರಾಷ್ಟ್ರದ ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ, ನಾನು ಹಣೆಗೆ ಬಿಂದಿ ಇಡದ ಹೆಣ್ಣುಮಕ್ಕಳೊಂದಿಗೆ ಮಾತನಾಡುವುದಿಲ್ಲ ಎಂದು ಹೇಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ತಮ್ಮ ಹೇಳಿಕೆಗೆ ವಿವರಣೆ ನೀಡುವಂಯೆ ಕೋರಿ ಮಹಾರಾಷ್ಟ್ರ ಮಹಿಳಾ ಅಯೋಗ ಸಂಭಾಜಿ ಭಿಡೆ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ಸಂಭಾಜಿ ಭಿಡೆ(ಸಂಗ್ರಹ ಚಿತ್ರ)
ಸಂಭಾಜಿ ಭಿಡೆ(ಸಂಗ್ರಹ ಚಿತ್ರ)

ಮುಂಬೈ: 'ಭಾರತಾಂಬೆ ವಿಧವೆಯಲ್ಲ, ಹೀಗಾಗಿ ನಾನು ಹಣೆಗೆ ಬಿಂದಿ ಇಡದ ಹೆಣ್ಣುಮಕ್ಕಳೊಂದಿಗೆ ನಾನು ಮಾತನಾಡುವುದಿಲ್ಲ..' ಇದು ಬಲಪಂಥೀಯ ಸಾಮಾಜಿಕ ಕಾರ್ಯಕರ್ತ ಸಂಭಾಜಿ ಭಿಡೆ ಅವರು ಪತ್ರಕರ್ತೆಯೋರ್ವಳನ್ನು ಕುರಿತು ಹೇಳಿದ ಮಾತುಗಳು. ಸಂಭಾಜಿ ಅವರ ಈ ಖಡಕ್‌ ಮಾತು ಇದೀಗ ಪರ-ವಿರೋಧ ಚರ್ಚೆಯ ಕಿಡಿ ಹೊತ್ತಿಸಿದೆ.

ತಮ್ಮನ್ನು ಪ್ರಶ್ನೆ ಕೇಳಲು ಬಂದ ಪತ್ರಕರ್ತೆ ಹಣೆಗೆ ಬಿಂದಿ ಇಡದಿರುವುದನ್ನು ಗಮನಿಸಿದ ಮಹಾರಾಷ್ಟ್ರದ ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ, ನಾನು ಹಣೆಗೆ ಬಿಂದಿ ಇಡದ ಹೆಣ್ಣುಮಕ್ಕಳೊಂದಿಗೆ ಮಾತನಾಡುವುದಿಲ್ಲ ಎಂದು ಹೇಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ದಕ್ಷಿಣ ಮುಂಬೈ ರಾಜ್ಯ ಕಾರ್ಯಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ ಬಳಿಕ ಹೊರಬಂದ ಸಂಭಾಜಿ ಭಿಡೆ ಅವರನ್ನು, ಪ್ರಶ್ನೆ ಕೇಳಲೆಂದು ದೃಶ್ಯ ಮಾಧ್ಯಮವೊಂದರ ಪತ್ರಕರ್ತೆಯನ್ನು ತಡೆದ ಸಂಭಾಜಿ ಭಿಡೆ, ಭಾರತಾಂಬೆ ವಿಧವೆಯಲ್ಲ ಹಾಗಾಗಿ ಹಣೆಗೆ ಬಿಂದಿ ಇಡದ ಹೆಣ್ಣುಮಕ್ಕಳೊಂದಿಗೆ ನಾನು ಮಾತನಾಡುವುದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ.

ಸಂಭಾಜಿ ಭಿಡೆ ಅವರು ಪತ್ರಕರ್ತೆಗೆ ಹೀಗೆ ಹೇಳಿದಾಗ ಅವರ ಅಕ್ಕಪಕ್ಕ ನಿಂತಿದ್ದ ಬೆಂಬಲಿಗರು ಕೂಡ ಅವರ ಮಾತಿಗೆ ಸಹಮತಿ ಸೂಚಿಸಿ ತಲೆಯಾಡಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೆಣ್ಣು ಭಾರತ ಮಾತೆ ಇದ್ದಂತೆ. ಆಕೆ ಹಣೆಗೆ ಕುಂಕುಮ ಇರಿಸದೆ 'ವಿಧವೆ' ರೀತಿ ಕಾಣಿಸಬಾರದು ಎಂದು ಸಂಭಾಜಿ ಭಿಡೆ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಿಡೆ ಹೇಳಿಕೆಯ ಪರ ಹಾಗೂ ವಿರೋಧವಾಗಿ ಭಾರೀ ಚರ್ಚೆ ಆರಂಭವಾಗಿದೆ. ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ಭಿಡೆ ಅವರಿಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಾಂಕರ್ ಇದೀಗ ನೋಟಿಸ್ ಜಾರಿ ಮಾಡಿದ್ದಾರೆ.

ಭಿಡೆ ಅವರ ಹೇಳಿಕೆಯನ್ನು ಖಂಡಿಸಿರುವ ರೂಪಾಲಿ ಚಕಾಂಕರ್, ಇದು ಮಹಿಳೆಯ ಹೆಮ್ಮೆ ಹಾಗೂ ಘನತೆಯನ್ನು ಕೀಳಾಗಿ ನೋಡುವಂತಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೋರಿ ಸಂಭಾಜಿ ಭಿಡೆ ಅವರಿಗೆ ನೋಟಿಸ್‌ ಜಾರಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಹೆಣ್ಣಿನ ಘನತೆಯನ್ನು ಕುಗ್ಗಿಸುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ ಎಂದು ರೂಪಾಲಿ ಚಕಾಂಕರ್‌ ಹೇಳಿದ್ದಾರೆ.

ಇನ್ನು ತಮ್ಮೊಂದಿಗೆ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ ನಡೆಯನ್ನು ಖಂಡಿಸಿರುವ ಪತ್ರಕರ್ತೆ, ಈ ಕುರಿತಾದ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಣೆಗೆ ಬಿಂದಿ ಇಡುವುದು ಅಥವಾ ಬಿಡುವುದು ತಮ್ಮ ವೈಯಕ್ತಿಕ ಆಯ್ಕೆ ಎಂದು ಹೇಳಿರುವ ಪತ್ರಕರ್ತೆ, ನಾವು ಜನರನ್ನು ಅವರ ವಯಸ್ಸು ಕಂಡು ಗೌರವಿಸುತ್ತೇವೆ. ಆದರೆ ಕೆಲವು ಜನರು ಈ ಗೌರವಕ್ಕೂ ಅರ್ಹರಾಗಿರುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

2018ರಲ್ಲಿ ಸಂಭಾಜಿ ಭಿಡೆ ಇದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನನ್ನ ತೋಟದಲ್ಲಿ ಬೆಳೆದ ಮಾವಿನ ಹಣ್ಣನ್ನು ತಿಂದ ದಂಪತಿಗಳಿಗೆ ಗಂಡು ಮಕ್ಕಳಾಗಿವೆ. ಗಂಡು ಮಕ್ಕಳನ್ನು ಬಯಸುವವರು ನನ್ನ ತೋಟದ ಮಾವಿನ ಹಣ್ಣನ್ನು ತಿನ್ನಬೇಕು ಎಂದು ಸಂಭಾಜಿ ಭಿಡೆ ಹೇಳಿದ್ದರು.

ಈ ಹೇಳಿಕೆ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ ಬಳಿಕ, ನಾಸಿಕ್ ನಗರ ಪಾಲಿಕೆಯು ಅವರ ವಿರುದ್ಧ ದೂರು ದಾಖಲಿಸಿಕೊಂಡಿತ್ತು.

ಇದೀಗ ಬಿಂದಿ ಇಡದ ಹೆಣ್ಣುಮಕ್ಕಳೊಂದಿಗೆ ನಾನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಸಂಭಾಜಿ ಭಿಡೆ ಮತ್ತೊಂದು ವಿವಾದ ಸೃಷ್ಟಿಸಿದ್ದು, ಇದು ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಶ್ನಿಸಿದಂತಿದೆ ಎಂದು ಉದಾರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

IPL_Entry_Point

ವಿಭಾಗ