ಛತ್ತೀಸ್‌ಗಡದ ಬಸ್ತರ್‌ನಲ್ಲಿ ನಕ್ಸಲ್ ನಾಯಕ ಬಸವರಾಜು ಸೇರಿ 27 ನಕ್ಸಲರ ಹತ್ಯೆ; ಅಬೂಜ ಮಾಢ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ ಕಾರ್ಯಾಚರಣೆ
ಛತ್ತೀಸ್‌ಗಡದ ಬಸ್ತರ್‌ನಲ್ಲಿ ಭದ್ರತಾ ಪಡೆ ಬುಧವಾರ (ಮೇ 21) ಕಾರ್ಯಾಚರಣೆ ನಡೆಸಿದ ವೇಳೆ ಪ್ರಮುಖ ನಕ್ಸಲ್ ನಾಯಕ ಬಸವರಾಜು ಅಲಿಯಾಸ್ ನಂಬಾಲಾ ಕೇಶವ್ ರಾವ್ (70) ಸೇರಿ 27 ನಕ್ಸಲರನ್ನು ಹತ್ಯೆ ಮಾಡಿದೆ. ಬಸವರಾಜು ಯಾರು, ಈ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಹೇಳಿದರು- ಇಲ್ಲಿದೆ ವಿವರ.

ಬಸ್ತರ್ (ಛತ್ತೀಸ್‌ಗಡ): ಬಸ್ತರ್‌ನ ಅಬೂಜ ಮಾಢ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಬುಧವಾರ (ಮೇ 21) ಪ್ರಮುಖ ನಕ್ಸಲ್ ನಾಯಕ ಬಸವರಾಜು ಅಲಿಯಾಸ್ ನಂಬಾಲಾ ಕೇಶವ್ ರಾವ್ (70) ಸೇರಿ 27 ನಕ್ಸಲರು ಹತರಾಗಿದ್ದಾರೆ. ಈ ಕಾರ್ಯಾಚರಣೆ ವೇಳೆ ಒಬ್ಬ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವುದಾಗಿ ಛತ್ತೀಸ್‌ಗಡ ಗೃಹ ಸಚಿವ ವಿಜಯ್ ಶರ್ಮಾ ತಿಳಿಸಿದ್ದಾರೆ. ನಕ್ಸಲ್ ಶೋಧ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.
ಛತ್ತೀಸಗಢದ ನಾರಾಯಣಪುರ–ಬಿಜಾಪುರ–ದಂತೆವಾಡಾ ಜಿಲ್ಲೆಗಳಲ್ಲಿ ಹಬ್ಬಿಕೊಂಡಿರುವ ಅಬೂಜ ಮಾಢ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಳೆದ 2 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದವು.
ನಕ್ಸಲ್ ಚಳವಳಿಯ ಬೆನ್ನೆಲುಬು ಬಸವರಾಜು; ಇದು ಐತಿಹಾಸಿಕ ಸಾಧನೆ ಎಂದ ಕೇಂದ್ರ ಗೃಹ ಸಚಿವ
ಬಸವರಾಜು ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಸವರಾಜು ಅವರ ಹತ್ಯೆಯು ಭದ್ರತಾ ಪಡೆಗಳಿಗೆ ದೊರಕಿದ ಗೆಲುವು ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಇದೊಂದು ಐತಿಹಾಸಿಕ ಸಾಧನೆ’ ಎಂದು ಬಣ್ಣಿಸಿದ್ದಾರೆ.
ನಕ್ಸಲಿಸಮ್ ಅನ್ನು ತೊಡೆದುಹಾಕಲು ಯುದ್ಧದಲ್ಲಿ ಒಂದು ಹೆಗ್ಗುರುತು ಸಾಧನೆ. ಇಂದು, ಛತ್ತೀಸ್‌ಗಡದ ನಾರಾಯಣಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ನಮ್ಮ ಭದ್ರತಾ ಪಡೆಗಳು 27 ಭೀಕರ ಮಾವೋವಾದಿಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಈ ಪೈಕಿ ನಕ್ಸಲ್ ಚಳವಳಿಯ ಬೆನ್ನೆಲುಬು ಎಂದು ಗುರುತಿಸಿಕೊಂಡಿದ್ದ ಸಿಪಿಐ-ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಉನ್ನತ ನಾಯಕ ನಂಬಾಲಾ ಕೇಶವ್ ರಾವ್ ಅಲಿಯಾಸ್ ಬಸವರಾಜು ಕೂಡ ಸೇರಿಕೊಂಡಿದ್ದಾರೆ. ಮೂರು ದಶಕಗಳ ನಕ್ಸಲ್ ವಿರೋಧಿ ಸಮರದಲ್ಲಿ ಭದ್ರತಾ ಪಡೆಗಳಿಗೆ ಬಹೊದಡ್ಡ ಯಶಸ್ಸು ಸಿಕ್ಕಿದೆ. ಇದಕ್ಕಾಗಿ ಭದ್ರತಾ ಪಡೆಯನ್ನು ಪ್ರಶಂಸಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆ ಪೂರ್ಣಗೊಳಿಸಿದ ವೇಳೆ 54 ನಕ್ಸಲರನ್ನು ಬಂಧಿಸಲಾಗಿದ್ದು, 84 ನಕ್ಸಲರು ಛತ್ತೀಸ್‌ಗಡ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಶರಣಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2026ರ ಮಾರ್ಚ್ 31ರ ಒಳಗೆ ಭಾರತದಲ್ಲಿ ನಕ್ಸಲ್ ಚಳವಳಿಯನ್ನು ಪೂರ್ಣವಾಗಿ ಇಲ್ಲವಾಗಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಕೂಡ ಗೃಹ ಸಚಿವ ಅಮಿತ್ ಶಾ ಅವರ ಟ್ವೀಟ್ ರೀಟ್ವೀಟ್ ಮಾಡಿ, ನಮ್ಮ ಹೆಮ್ಮೆಯ ಭದ್ರತಾ ಪಡೆಗಳಿಗೆ ಇದು ಐತಿಹಾಸಿಕ ಯಶಸ್ಸಿನ ಗರಿಮೆ. ನಮ್ಮ ಸರ್ಕಾರವು ಮಾವೋವಾದಿ ಸಮಸ್ಯೆಯನ್ನು ದೂರ ಮಾಡುವುದಕ್ಕೆ ಬದ್ಧವಾಗಿದೆ. ನಮ್ಮ ಜನರು ಪ್ರಗತಿ ಹಾಗೂ ಶಾಂತಿಯುತ ಬಾಳುವೆ ನಡೆಸುವುದನ್ನು ಖಾತ್ರಿಗೊಳಿಸುವುದಕ್ಕೂ ಬದ್ಧವಾಗಿದೆ ಎಂದು ಹೇಳಿದ್ದಾರೆ.
ನಕ್ಸಲ್ ನಾಯಕ ನಂಬಲಾ ಕೇಶವರಾವ್ ಅಲಿಯಾಸ್ ಬಸವರಾಜು ಯಾರು
ನಕ್ಸಲ್ ಚಳವಳಿಯ ಬೆನ್ನೆಲುಬು ಎಂದೇ ನಂಬಾಲಾ ಕೇಶವ್ ರಾವ್ ಅಲಿಯಾಸ್ ಬಸವರಾಜು ಅವರನ್ನು ಬಣ್ಣಿಸಲಾಗುತ್ತಿತ್ತು. ಅವರು ನಕ್ಸಲ್ ದಾಳಿಯ ಕಾರ್ಯತಂತ್ರ ರೂಪಿಸುವಲ್ಲಿ ನಿಪುಣರಾಗಿದ್ದರು. ಸರ್ಕಾರವೂ ಬಸವರಾಜು ಅವರನ್ನು ಹುಡುಕಿ ಕೊಟ್ಟವರಿಗೆ 1. 5 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು. ನಂಬಲಾ ಕೇಶವ್ ರಾವ್ ಅವರಿಗೆ ಬಸವರಾಜು, ಗಂಗಣ್ಣ ಮತ್ತು ಪ್ರಕಾಶ್ ಎಂಬ ಹೆಸರುಗಳೂ ಇದ್ದವು. ಆಂಧ್ರಪ್ರದೇಶದ ಶ್ರೀಕಾಕುಳ ಜಿಲ್ಲೆಯ ಜಿಯನ್ನಪೇಟಾ ಎಂಬ ಗ್ರಾಮದಲ್ಲಿ ಕೇಶವ ರಾವ್ ಜನಿಸಿದರು. ವರಂಗಲ್‌ನ ರೀಜನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ಕಾಲೇಜು ದಿನಗಳಲ್ಲಿಯೇ ಎಡಪಂಥೀಯ ವಿದ್ಯಾರ್ಥಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೇಶವ ರಾವ್. ರ್‍ಯಾಡಿಕಲ್ ಸ್ಟೂಡೆಂಟ್ಸ್ ಯೂನಿಯನ್ (ಆರ್‌ಎಸ್‌ಯು) ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಬಸವರಾಜು ನಂತರ ನಕ್ಸಲ್ ಚಳವಳಿಗೆ ಸೇರಿಕೊಂಡರು. 1980ರಲ್ಲಿ ‘ಸಿಪಿಐ (ಮಾರ್ಕ್ಸ್–ಲೆನಿನ್) ಪೀಪಲ್ಸ್ ವಾರ್’ ಪಕ್ಷವನ್ನು ಇತರರ ಜೊತೆ ಸೇರಿಕೊಂಡು ಸ್ಥಾಪಿಸಿದರು. 1992ರಲ್ಲಿ ಇದರ ಕೇಂದ್ರ ಸಮಿತಿಯ ಸದ್ಯಸರಾದರು. 2004ರಲ್ಲಿ ಸಿಪಿಐ (ಮಾವೋವಾದಿ) ಪಕ್ಷದೊಂದಿಗೆ ‘ಸಿಪಿಐ (ಮಾರ್ಕ್ಸ್–ಲೆನಿನ್) ಪೀಪಲ್ಸ್ ವಾರ್’ ವಿಲೀನವಾಯಿತು.
ಛತ್ತೀಸ್‌ಗಡದ ದಂತೇವಾಡದಲ್ಲಿ 2010ರ ನಕ್ಸಲ್ ದಾಳಿಗೆ 76 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದರು. 2013ರ ಜೀರಂ ಘಾಟಿ ದುರಂತದಲ್ಲಿ 27 ಮಂದಿ ಮೃತಪಟ್ಟಿದ್ದರು. ಈ ಎಲ್ಲ ದಾಳಿಗಳ ರೂವಾರಿ ಬಸವರಾಜು ಎಂಬುದು ದೃಢವಾಗಿತ್ತು.