ಮುಸ್ಲಿಂ ರಾಷ್ಟ್ರಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ಮುಖಭಂಗ, ಕಾಶ್ಮೀರ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತವು 3 ದೇಶಗಳು
ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಭಾರತವು ತನ್ನ ನಿಯೋಗವನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಕಳುಹಿಸಿದೆ. ಈ ನಡುವೆ, ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಂಟ್ರೀಸ್ ಸಭೆಯಲ್ಲಿ ಪಾಕಿಸ್ತಾನವು ಮುಂದಿಟ್ಟ ಕಾಶ್ಮೀರ ಪ್ರಸ್ತಾವನೆಗೆ 3 ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಪಾಕ್‌ಗೆ ಮುಖಭಂಗವಾದರೆ, ಭಾರತಕ್ಕೆ ರಾಜತಾಂತ್ರಿಕ ಗೆಲವು ಸಿಕ್ಕಂತಾಗಿದೆ.

ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಸಭೆಯಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಭಾರತದ ವಿರುದ್ಧ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮಂಡಿಸಿದ್ದ ಪ್ರಸ್ತಾವನೆಗೆ ಇಸ್ಲಾಮಿಕ್ ರಾಷ್ಟ್ರಗಳ ಸಭೆಯಲ್ಲಿ ಮೂರು ರಾಷ್ಟ್ರಗಳಿಂದ ವಿರೋಧ ವ್ಯಕ್ತವಾಗಿದ್ದು, ಅವುಗಳನ್ನು ಅದನ್ನು ತಡೆಹಿಡಿದಿವೆ. ಪರಿಣಾಮ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾದರೆ, ಭಾರತಕ್ಕೆ ರಾಜತಾಂತ್ರಿಕ ಜಯ ಸಿಕ್ಕಂತಾಗಿದೆ. ಆದಾಗ್ಯೂ, ಪಾಕಿಸ್ತಾನ ಸರ್ಕಾರ ಮಾತ್ರ ತನಗೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ ಎಂದು ಪ್ರಚಾರ ಮಾಡುತ್ತಿದ್ದು, ಪಾಕಿಸ್ತಾನದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ ಸಭೆಯಲ್ಲಿ ಇಂಡೋನೇಷ್ಯಾ, ಈಜಿಪ್ಟ್ ಮತ್ತು ಬಹರೈನ್ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿದ್ದು, ಪಾಕಿಸ್ತಾನದ ಪ್ರಸ್ತಾವನೆಯನ್ನು ತಡೆದಿವೆ.
ಕಾಶ್ಮೀರ ವಿಚಾರಕ್ಕೆ ಭಾರತಕ್ಕೆ 3 ದೇಶಗಳ ಬೆಂಬಲ
ಜಕಾರ್ತಾದಲ್ಲಿ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಮಹತ್ವದ ಸಭೆ ನಡೆದಾಗ, ಅದರಲ್ಲಿ ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಕಠಿಣ ನಿಲುವು ತಾಳಬೇಕು ಎಂಬ ಪ್ರಸ್ತಾವನೆ ಮಂಡಿಸಿ ಅದನ್ನು ಜಾರಿಗೊಳಿಸಬೇಕು ಎಂದು ಪಾಕಿಸ್ತಾನ ಬಯಸಿತ್ತು. ಅದರಂತೆ ಪ್ರಸ್ತಾವನೆಯನ್ನು ಮಂಡಿಸಿತ್ತಾದರೂ, ಅದನ್ನು ಇಂಡೋನೇಷ್ಯಾ, ಈಜಿಪ್ಟ್ ಮತ್ತು ಬಹರೈನ್ ತಡೆದವು. ಹೀಗಾಗಿ ಸಭೆಯಲ್ಲಿ ಪಾಕಿಸ್ತಾನದ ಪ್ರಸ್ತಾವನೆ ತಿರಸ್ಕೃತವಾಯಿತು. ಇದರೊಂದಿಗೆ ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯಲ್ಲಿ ಪಾಕಿಸ್ತಾನದ ಪ್ರಭಾವ ಗಣನೀಯವಾಗಿ ಕುಸಿದಿರುವುದು ಗಮನಸೆಳೆಯಿತು. ಈ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಇಂಡೋನೇಷ್ಯಾ, ಈಜಿಪ್ಟ್, ಬಹರೈನ್ ರಾಷ್ಟ್ರಗಳು ಬಹಳ ಮಹತ್ವದ ಪಾತ್ರವನ್ನು ನಿರ್ವಹಿಸಿವೆ.
ಮುಸ್ಲಿಂ ರಾಷ್ಟ್ರಗಳ ಸಭೇಲಿ ಪಾಕ್‌ಗೆ ಮುಖಭಂಗ
ಕಾಶ್ಮೀರ ವಿಚಾರದಲ್ಲಿ ಇಂಡೋನೇಷ್ಯಾ ದೇಶವು ಭಾರತವನ್ನು ಬಹಳ ವರ್ಷಗಳಿಂದ ಬೆಂಬಲಿಸುತ್ತ ಬಂದಿದೆ. ಭಾರತದ ಭೌಗೋಳಿಕ ಸಾರ್ವಭೌಮತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಇದು ಬಹಳ ಪ್ರಯೋಜನಕ್ಕೆ ಬಂದಿದೆ. ಇದಕ್ಕೆ ಹೊರತಾಗಿ ಭಾರತ ಹಾಗೂ ಇಂಡೋನೇಷ್ಯಾ ನಡುವೆ ವ್ಯೂಹಾತ್ಮಕ ಪಾಲುದಾರಿಕೆ ಇದ್ದು, ಇದು ಭಾರತದಿಂದ ಆ ದೇಶ ಬ್ರಹ್ಮೋಸ್ ಕ್ಷಿಪಣಿ ಖರೀದಿ ಒಪ್ಪಂದ ಕ್ಷಿಪ್ರವಾಗಿ ನಡೆಯುವಂತೆ ಮಾಡಿದೆ. ರಕ್ಷಣಾ ಒಪ್ಪಂದ, ಹೂಡಿಕೆ ಹಾಗೂ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಪೂರಕವಾಗಿ ಎರಡೂ ದೇಶಗಳು ನಡೆದುಕೊಳ್ಳುತ್ತಿವೆ. ಕಾಶ್ಮೀರ ಮಾದರಿಯ ಸಮಸ್ಯೆಯನ್ನು ಇಂಡೋನೇಷ್ಯಾ ಕೂಡ ಪಪುವಾ ವಿಚಾರದಲ್ಲಿ ಎದುರಿಸುತ್ತಿದೆ. ಭಯೋತ್ಪಾದನೆ ನಿಗ್ರಹದ ವಿಚಾರದಲ್ಲಿ ಭಾರತ ಹಾಗೂ ಇಂಡೋನೇಷ್ಯಾ ನಡುವೆ ಒಂದೇ ರೀತಿಯ ನಿಲುವು ಇದೆ.
ಇಂಡೋನೇಷ್ಯಾ ಅಧ್ಯಕ್ಷರನ್ನು ಭಾರತ ತನ್ನ ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಿದ ವೇಳೆ ಅವರು ತಮ್ಮ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ್ದರು. ಪಹಲ್ಗಾಮ್ ಉಗ್ರ ದಾಳಿಯ ಬಳಿಕ ನ್ಯೂಯಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನದ ಪ್ರತಿನಿಧಿಗಳು ಕಠಿಣವಾಗಿ ನಡೆದುಕೊಂಡಾಗ ಅದನ್ನು ಒಮಾನ್ ದೇಶದ ಪ್ರತಿನಿಧಿಗಳು ತಡೆದಿದ್ದರು. ಇವೆಲ್ಲವೂ ಪಾಕಿಸ್ತಾನದ ಪ್ರಭಾವ ಕ್ಷೀಣಿಸಿದ್ದನ್ನು ತೋರಿಸಿಕೊಡುತ್ತದೆ.
ಇನ್ನು, ಬಾರತ ಹಾಗೂ ಬಹರೈನ್ ನಡುವಿನ ದ್ವಿಪಕ್ಷೀಯ ಒಪ್ಪಂದ ಕಳೆದ 10 ವರ್ಷಗಳ ಅವಧಿಯಲ್ಲಿ ಬಹಳಷ್ಟು ಸುಧಾರಿಸಿದೆ. ಹಲವು ರಕ್ಷಣಾ ಸಹಕಾರ, ವಾಣಿಜ್ಯ ಮತ್ತು ದ್ವಿಪಕ್ಷೀಯ ಒಪ್ಪಂದಗಳಾಗಿವೆ. ಈಜಿಪ್ಟ್ ಮತ್ತು ಭಾರತದ ನಡುವಿನ ಸಂಬಂಧವೂ ಗಟ್ಟಿಯಾಗಿದೆ.
ಪಾಕಿಸ್ತಾನವು ಕಾಶ್ಮೀರದ ವಿಚಾರದಲ್ಲಿ ಒಂದೇ ಬದಿಯ ಕಥೆಯನ್ನು ಹೇಳುತ್ತಿದ್ದು, ಅದನ್ನು ಸಮರ್ಥಿಸಿಕೊಂಡು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ. ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಸದಸ್ಯ ರಾಷ್ಟ್ರಗಳನ್ನೂ ಈ ವಿಚಾರದಲ್ಲಿ ದಾರಿ ತಪ್ಪಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಲೇ ಬಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಮಾತುಗಳಿಗೆ ಪುರಾವೆಗಳು ಇಲ್ಲದೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಿಫಲವಾಗಿ ಮುಖಭಂಗಕ್ಕೆ ಒಳಗಾಗುತ್ತಿರುವುದು ಗಮನಸೆಳೆದಿದೆ.