ಮಕರವಿಳಕ್ಕು 2025: ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರಿಗೆ ಮಕರಜ್ಯೋತಿ ದರ್ಶನ, ಸಂಕ್ರಾಂತಿ ದಿನದಂದೇ ಬೆಳಕು ಕಂಡು ಪುಳಕಿತಗೊಂಡ ಭಕ್ತಗಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಕರವಿಳಕ್ಕು 2025: ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರಿಗೆ ಮಕರಜ್ಯೋತಿ ದರ್ಶನ, ಸಂಕ್ರಾಂತಿ ದಿನದಂದೇ ಬೆಳಕು ಕಂಡು ಪುಳಕಿತಗೊಂಡ ಭಕ್ತಗಣ

ಮಕರವಿಳಕ್ಕು 2025: ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರಿಗೆ ಮಕರಜ್ಯೋತಿ ದರ್ಶನ, ಸಂಕ್ರಾಂತಿ ದಿನದಂದೇ ಬೆಳಕು ಕಂಡು ಪುಳಕಿತಗೊಂಡ ಭಕ್ತಗಣ

Makaravilakku 2025: ಕೇರಳದ ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆಯಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿಯೇ ಮಕರಜ್ಯೋತಿ ದರ್ಶನವಾಗಿದೆ.

ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ.
ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ.

Makaravilakku 2025:ಸಹಸ್ರಾರು ಕಿ.ಮಿ. ದೂರದಿಂದ ಭಕ್ತಿ ಭಾವಗಳ ನಡುವೆ ಇರುಮುಡಿ ಕಟ್ಟಿಕೊಂಡು ಬಂದಿದ್ದ ಲಕ್ಷಾಂತರ ಭಕ್ತರು ಆ ಅಪೂರ್ವ ಕ್ಷಣಕ್ಕಾಗಿ ಕಾದಿದ್ದರು. ಅದು ಕೇರಳದ ಪ್ರಸಿದ್ದ ಯಾತ್ರಾ ಸ್ಥಳವಾಗಿರುವ ಶಬರಿಮಲೆ ಬೆಟ್ಟದ ಮೆಟ್ಟಿಲುಗಳನ್ನು ಏರಿ ಬಂದಿದ್ದರು. ಸಂಕ್ರಾಂತಿಯ ದಿನದಂದೇ ಮಕರಜ್ಯೋತಿಯ ಆ ಕ್ಷಣಕ್ಕಾಗಿ ಅವರ ಕಣ್ಣು ನೆಟ್ಟಿತ್ತು. ಶಬರಿಮಲೆ ಬೆಟ್ಟದಿಂದ ಸುಮಾರು ನಾಲ್ಕು ಕಿ.ಮಿ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಕೆಲವೇ ನಿಮಿಷಗಳ ಮಟ್ಟಿಗೆ ಕಾಣುವ ಆ ಮಕರಜ್ಯೋತಿ(ಮಕರವಿಳಕ್ಕು) ದರ್ಶನವೇ ಅವರ ಗುರಿಯೂ ಆಗಿತ್ತು. ಆ ಕ್ಷಣ ಬಂದೇ ಬಿಟ್ಟಿತು. ಮಕರ ಜ್ಯೋತಿ ಸಂಜೆ ರ ಹೊತ್ತಿಗೆ 6.45ರ ಹೊತ್ತಿಗೆ ದರ್ಶನವಾಯಿತು. ಬೆಳಕಿನ ಪ್ರಭೆ ಎದುರಿಗೆ ಕಾಣುತ್ತಿದ್ದಂತೆ ಹೋ ಎನ್ನುವ ಉದ್ಘಾರ. ಅಯ್ಯಪ್ಪ ಸ್ವಾಮಿ ಘೋಷದ ಕ್ಷಣ. ಕರ್ನಾಟಕವೂ ಸೇರಿದಂತೆ ಹಲವು ಭಾಗಗಳಿಂದ ಬೆಟ್ಟದಲ್ಲಿ ಸೇರಿದ್ದ ಭಕ್ತರ ಖುಷಿಗೆ ಪಾರವೇ ಇರಲಿಲ್ಲ.

ಮೂರು ಬಾರಿ ಮಕರ ಜ್ಯೋತಿ ದರ್ಶನವಾದಾಗಲೂ ಭಕ್ತರ ಸಂಭ್ರಮ ಮೇರೆ ಮೇರಿತ್ತು. ಜೈ ಅಯ್ಯಪ್ಪ ಎನ್ನುವ ಶಬ್ದ ಅಲ್ಲಿ ಕೇಳಿ ಬರುತ್ತಲೇ ಇತ್ತು. ಹಲವರು ಅಯ್ಯಪ್ಪ ಸ್ವಾಮಿ ಕುರಿತು ನಿರಂತರವಾಗಿ ಘೋಷಣೆ ಕೂಗುತ್ತಲೇ ಮುಂದೆ ಸಾಗಿದರು. ಶಬರಿಮಲೆಯನ್ಜು ಪೊನ್ನಂಬಲಮೇಡು ಬೆಟ್ಟ ಎಂದು ಕೇರಳದಲ್ಲಿ ಕರೆಯಲಾಗುತ್ತದೆ. ಈ ಬೆಟ್ಟ ಭಕ್ತರಿಂದ ಸಂಪೂರ್ಣ ತುಂಬಿ ಹೋಗಿತ್ತು. ಎಲ್ಲಿ ನೋಡಿದರೂ ಅಯ್ಯಪ್ಪ ಮಾಲೆ ಧಾರಿಗಳು, ಕಪ್ಪು, ನೀಲಿ, ಕೇಸರಿ ಬಟ್ಟೆ ಧರಿಸಿ ಇರುಮುಡಿ ಹೊತ್ತು ಇರುವೆಗಳ ರೀತಿಯಲ್ಲಿ ಸಾಲುಗಟ್ಟಿಹೋಗುತ್ತಿರುವಂತೆಯೇ ದೂರದಿಂದ ನೋಡಿದಾಗ ಭಾಸವಾಗುತ್ತಿತ್ತು.

ದೇಗುಲಕ್ಕೆ ತಿರುವಾಭರಣ 6.40ರ ಹೊತ್ತಿಗೆ ಹದಿನೆಂಟು ಮೆಟ್ಟಿಲೇರಿ ದೇಗುಲ ತಲುಪಿದ ಬಳಿಕ ಪೂಜೆ ಸಲ್ಲಿಸಲಾಯಿತು. ಇದಾಗುತ್ತಲೇ ಮಕರ ಜ್ಯೋತಿ ಶಬರಿಮಲೆಯಿಂದ 4 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡುವಿನಲ್ಲಿರುವ ಬೆಟ್ಟದಲ್ಲಿ ಗೋಚರಿಸಿತು. ಸೂರ್ಯನು ಮಕರ ರಾಶಿಗೆ ಸಂಚರಿಸುವ ಸಮಯದಲ್ಲಿ ಜ್ಯೋತಿ ದರ್ಶನವಾಗುವುದು ವಿಶೇಷ. ಸೂರ್ಯಾಸ್ತವಾದ ಕೆಲವೇ ಸಮಯದಲ್ಲಿ ಈ ಜ್ಯೋತಿ ದರ್ಶನವಾಗಿ ಮೂರು ಬಾರಿ ಕಾಣಿಸಿಕೊಂಡು ಬಳಿಕ ಮಾಯವಾಯಿತು. ನೇರ ದರ್ಶನದ ಕ್ಷಣವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು.

ಸಂಕ್ರಾಂತಿ ದಿನವೇ ಅಯ್ಯಪ್ಪ ಸ್ವಾಮಿ ಮಕರ ಜ್ಯೋತಿ ರೂಪದಲ್ಲಿ ದರ್ಶನ ನೀಡಲಿದ್ದಾರೆ ಎನ್ನುವುದು ಭಕ್ತರ ನಂಬಿಕೆ. ಅದರಲ್ಲೂ ಪ್ರತಿ ವರ್ಷವೂ ಶಬರಿಮಲೆಯ ಪೊನ್ನಂಬಲಮೇಡುವಿನಲ್ಲಿ ಮಕರಜ್ಯೋತಿ ದರ್ಶನವಾಗುತ್ತದೆ. ಇದಕ್ಕಾಗಿಯೇ ಲಕ್ಷಾಂತರ ಭಕ್ತರು ಇಲ್ಲಿ ಸೇರುತ್ತಾರೆ. ಈ ಬಾರಿ ಒಂದು ದಿನ ಮೊದಲೇ ಸಂಕ್ರಾಂತಿ ಬಂದಿದ್ದರಿಂದ ಮಂಗಳವಾರವೇ ಮಕರಜ್ಯೋತಿಯ ದರ್ಶನವಾಯಿತು.

ಆ ಕ್ಷಣಕ್ಕಾಗಿ ಕಾಯುವ ಕಾತುರ

ಮಕರ ಸಂಕ್ರಮಣದ ಮಕರ ಜ್ಯೋತಿ ದರ್ಶನಕ್ಕೆ ಬಂದಿದ್ದರು. ಬೆಳಿಗ್ಗೆಯಿಂದಲೇ ಬೆಟ್ಟವನ್ನು ಇರುಮುಡಿ ಕಟ್ಟಿಕೊಂಡು ಏರುತ್ತಲೇ ಇದ್ದರು. ಸಂಜೆ ಹೊತ್ತಿಗೆ ಜ್ಯೋತಿ ದರ್ಶನವಾಗಲಿ ಎನ್ನುವ ಮನಸಿನ ಬೇಡಿಕೆಯೊಂದಿಗೆ ಬೆಟ್ಟ ಏರಿದವರು ಸಂಜೆ ಹೊತ್ತಿಗೆ ಮೇಲ್ಭಾಗಕ್ಕೆ ಆಗಮಿಸಿದರು. ಈ ವೇಳೆ ಅವರು ಮಕರ ಜೋತಿ ಕಂಡು ಪುಳಕಿತರಾದರು. ಸಹಸ್ರಾರು ಭಕ್ತರ ಮುಖದಲ್ಲಿ ಜ್ಯೋತಿ ದರ್ಶನ ಮಾಡಿದವರಲ್ಲಿ ನಿರುಮ್ಮಳತೆ ಕಂಡು ಬಂದಿತು.

ಇದಕ್ಕಾಗಿ ಹತ್ತಾರು ವರ್ಷದಿಂದ ಮಾಲೆ ಧರಿಸಿ ಬೆಟ್ಟಕ್ಕೆ ಬರುತ್ತಿದ್ದೇನೆ. ಏನೇನೋ ಕಾರಣದಿಂದ ಬೇಗನೇ ಅಯ್ಯಪ್ಪಸ್ವಾಮಿ ದರ್ಶನ ಮಾಡಿ ಹೋಗುತ್ತಿದ್ದೆ. ಈ ಬಾರಿ ಮಕರ ಜ್ಯೋತಿಯ ದರ್ಶನವಾಗಿದ್ದು ನನ್ನ ಬದುಕಿನ ಮುಖ್ಯ ಕ್ಷಣ ಎಂಬ ಭಾವನೆಯಿಂದಲೇ ಹಲವಾರು ಭಕ್ತರು ಪುಳಕಿತಗೊಂಡಿದ್ದರು. ಅಯ್ಯಪ್ಪಸ್ವಾಮಿಗೆ ಜೈಕಾರ ಹಾಕುತ್ತಲೇ ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡು ಅಲ್ಲಿಂದಲೇ ನಮಸ್ಕಾರ ಮಾಡಿದರು.

ಸೀಮಿತ ಬುಕಿಂಗ್‌

ಕೊನೆಯ ದಿನಗಳಲ್ಲಿ ಹೆಚ್ಚಿನ ಭಕ್ತರು ಬರುವುದರಿಂದ ಬುಕಿಂಗ್‌ ಪ್ರಮಾಣವನ್ನು ಮಕರಜ್ಯೋತಿ ದಿನ ತಗ್ಗಿಸಲಾಗಿತ್ತು. ಜನವರಿ 12ರ ಭಾನುವಾರ 60,000 ಭಕ್ತರಿಗೆ, ಜನವರಿ 13ರ ಸೋಮವಾರ 50,000 ಭಕ್ತರಿಗೆ ಬುಕಿಂಗ್‌ ನೀಡಲಾಗಿತ್ತು. ಜನವರಿ 14ರ ಮಂಗಳವಾರ 40,000 ಬುಕಿಂಗ್‌ಗೆ ಸೀಮಿತ ಮಾಡಲಾಗಿದೆ. ಆದರೂ ಬುಕಿಂಗ್‌ ಇಲ್ಲದೇ ಇದ್ದರೂ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟದತ್ತ ನಡೆದು ಹೋಗುತ್ತಿದುದು ಕಂಡು ಬಂದಿತು. ಬೆಟ್ಟದಲ್ಲಿ ಎಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿ ಘೋಷಣೆಯೊಂದಿಗೆ ಹೆಜ್ಜೆ ಹಾಕುತ್ತಿದ್ದರು.. ಮಕರ ಜ್ಯೋತಿ ದರ್ಶನಕ್ಕಾಗಿ ಈಗಾಗಲೇ ಹಲವು ಭಕ್ತರು ಶಬರಿಮಲೆಗೆ ಆಗಮಿಸಿ ಬೀಡು ಬಿಟ್ಟಿದ್ಧಾರೆ. ಅದರಲ್ಲೂ ಸಂಜೆ ವೇಳೆ ಮಕರ ಜ್ಯೋತಿಯ ದರ್ಶನದತ್ತಲೇ ಬಹುತೇಕ ಭಕ್ತರ ದೃಷ್ಟಿ ನೆಟ್ಟಿತ್ತು.

ಸಂಜೆ 6:00 ರಿಂದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ವಿವಿಧ ಕಾರ್ಯಕ್ರಮಗಳು ಆರಂಭಗೊಂಡವು. ಒಂದು ಗಂಟೆಗೂ ಹೆಚ್ಚು ಕಾಲ ವಿವಿಧ ಪೂಜೆಗಳು ನೆರವೇರಿದವು. ದೇಗುಲದಲ್ಲಿ ಪೂಜೆಗಳು ಪೂರ್ಣಗೊಳ್ಳುವ ಹೊತ್ತಿನಲ್ಲಿಯೇ ಬೆಟ್ಟದಲ್ಲಿ ಮಕರಜ್ಯೋತಿ ದರ್ಶನ ವಾಯಿತು. ಇದನ್ನು ಕಂಡು ಕಂಡ ಭಕ್ತರ ಅಯ್ಯಪ್ಪ ಸ್ವಾಮಿ ಉದ್ಘಾರ ಜೋರಾಗಿತ್ತು.

ಮಕರ ಜ್ಯೋತಿ ದರ್ಶನದ ನಂತರ, ಜನವರಿ 19 ರವರೆಗೆ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ರಾಜ ರೂಪದ ದರ್ಶನಕ್ಕೆ ಅವಕಾಶವಿರಲಿದೆ. ಜನವರಿ 20 ರಂದು, ಪಂದಳ ಮಹಾರಾಜರ ಕುಟುಂಬಕ್ಕೆ ವಿಶೇಷ ಪೂಜೆ ಮತ್ತು ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಆ ಕುಟುಂಬದ ಪೂಜೆಯ ಬಳಿಕ ಅದೇ ರಾತ್ರಿ ದೇವಾಲಯವನ್ನು ಮುಚ್ಚಿ ನಂತರ, ಶಬರಿಮಲೆ ದೇವಾಲಯದ ಕೀಲಿಗಳನ್ನು ಪಂಡಲ ಮಹಾರಾಜರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದರೊಂದಿಗೆ ಮಂಡಲ ಮತ್ತು ಮಕರವಿಳಕ್ಕು ಪೂಜಾ ಉತ್ಸವವು ಮುಕ್ತಾಯಗೊಳ್ಳಲಿದೆ ಎನ್ನುವುದು ದೇಗುಲದ ಅಧಿಕಾರಿಗಳು ನೀಡುವ ಮಾಹಿತಿ.

ಹೆಚ್ಚಿದ ಭಕ್ತರ ಸಂಖ್ಯೆ

ಕೇರಳದ ಶಬರಿಮಲೆಯ ಬೆಟ್ಟವನ್ನು ಏರಲು ಕೇರಳ, ಕರ್ನಾಟಕ. ತಮಿಳುನಾಡು. ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸಹಿತ ಭಾರತದ ನಾನಾ ಭಾಗಗಳಿಂದಲೂ ಭಕ್ತರು ಆಗಮಿಸಿದ್ದಾರೆ. ಅದರಲ್ಲೂ ಕೊನೆಯ ದಿನದ ವಿಶೇಷ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಯನ್ನು ಪೂಜಿಸಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆಯಲ್ಲಿ ಸೇರಿದ್ದಾರೆ. ಮಕರವಿಳಕ್ಕು ಉತ್ಸವದ ವೇಳೆ ಸಂಜೆ ಮಕರ ಜ್ಯೋತಿ ದರ್ಶನ ಮಾಡಲು ಭಕ್ತರು ಕಾದುಕೊಂಡಿರುತ್ತಾರೆ. ಈ ಸಮಯದಲ್ಲಿ ಬೆಟ್ಟದಲ್ಲಿಯೇ ಇದ್ದು ಮಕರಜ್ಯೋತಿ ವೀಕ್ಷಣೆ ಮಾಡಿ ಬಂದರೆ ಒಳಿತಾಗಬಹುದು ಎನ್ನುವ ನಂಬಿಕೆ ಹಲವರಲ್ಲಿದೆ. ಇದೇ ಕಾರಣದಿಂದ ಕೆಲವು ಭಕ್ತರು ಶಬರಿಮಲೆ ಪ್ರವಾಸವನ್ನು ಇದೇ ವೇಳೆ ಇಟ್ಟುಕೊಳ್ಳುತ್ತಾರೆ. ಇದರಿಂದಲೂ ಮಕರಜ್ಯೋತಿ ವೇಳೆ ಭಕ್ತರ ಸಂಖ್ಯೆ ಇಲ್ಲಿ ಹೆಚ್ಚುತ್ತದೆ.

ಭಾರೀ ಭದ್ರತೆ

ಶಬರಿಮಲೆ ಬೆಟ್ಟದಲ್ಲಿ ನಡೆಯುವ ಪವಿತ್ರ ಮಕರವಿಳಕ್ಕು ಉತ್ಸವದ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಕೇರಳ ಪೊಲೀಸ್‌ ಇಲಾಖೆ ನೀಡಿದೆ. ಮಕರವಿಳಕ್ಕು ಉತ್ಸವಕ್ಕೂ ಮುನ್ನ ಅಯ್ಯಪ್ಪನ ದರ್ಶನ ಪಡೆಯಲು ಹಾಗೂ ಮಕರವಿಳಕ್ಕು ಉತ್ಸವದಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈಗಾಗಲೇ ಮೂರು ತಿಂಗಳಿನಿಂದ ಶಬರಿಮಲೆ ಬೆಟ್ಟದಲ್ಲಿ ಭದ್ರತೆ ಇದ್ದರೂ ಮಕರಜ್ಯೋತಿ ವೇಳೆ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆ ಇರುವುದರಿಂದಲೇ ಎರಡು ದಿನದಿಂದಲೂ ಭದ್ರತೆ ಪ್ರಮಾಣ ಹೆಚ್ಚಿಸಲಾಗಿದೆ. ಅದರಲ್ಲೂ ಭಕ್ತರ ಸುರಕ್ಷತೆಗಾಗಿ ದೇವಸ್ಥಾನ ಸಮಿತಿಯೊಂದಿಗೆ ಕೇರಳ ಪೊಲೀಸ್‌ ಇಲಾಖೆಯು ವಿಶೇಷ ವ್ಯವಸ್ಥೆ ಮಾಡಿದೆ.

ದೇವಸ್ಥಾನದಲ್ಲಿ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲೆಡೆ ಪೊಲೀಸರೂ ಕಾಣುತ್ತಿದ್ದಾರೆ. ಉತ್ಸವದ ಭದ್ರತೆ ಮತ್ತು ಸುಗಮ ನಿರ್ವಹಣೆಗಾಗಿ ಒಟ್ಟು 5,000 ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.. ಯಾತ್ರಿಕರ ಒಳಹರಿವನ್ನು ನಿರ್ವಹಣೆ ಮಾಡುವ ಜತೆಗೆ ಮತ್ತು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಕಾಲ್ತುಳಿತ ಇಲ್ಲವೇ ನೂಕುನುಗ್ಗಲು ಆಗದಂತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪತ್ತನಮಿತ್ತ ಪೊಲೀಸರು ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

 

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.