ಕನ್ನಡ ಸುದ್ದಿ  /  Nation And-world  /  Man Beat Up Young Woman On Road And Forced Her Into Car Video Went Viral

Delhi Crime: ರಸ್ತೆಯಲ್ಲೇ ಯುವತಿಗೆ ತೀವ್ರವಾಗಿ ಥಳಿಸಿ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡ ಕಿರಾತಕ; ವಿಡಿಯೋ ವೈರಲ್

ಯುವತಿಗೆ ತೀವ್ರವಾಗಿ ಥಳಿಸಿ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಮಹಿಳಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳುತ್ತಿರುವ ಯುವಕ
ಯುವತಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳುತ್ತಿರುವ ಯುವಕ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಅಷ್ಟೊಂದು ಸೇಫ್ ಅಲ್ಲ ಅನ್ನೊಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ನಡು ರಸ್ತೆಯಲ್ಲಿ, ವಾಹನ ದಟ್ಟಣೆಯ ನಡುವೆಯೇ ಕಿರಾತಕನೊಬ್ಬ ಯುವತಿಯನ್ನು ರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿ ಬಲವಂತವಾಗಿ ಕ್ಯಾಬ್‌ಗೆ ಹತ್ತಿಸಿಕೊಂಡು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ಯುವತಿ ಮೇಲೆ ಹಲ್ಲೆ ಮಾಡುತ್ತಿದ್ದರೂ ಯುವಕನ ಜತೆಗಿದ್ದ ಮತ್ತೊಬ್ಬ ವ್ಯಕ್ತಿ ಸೇರಿದಂತೆ ಅಲ್ಲಿದ್ದ ಯಾರೂ ಕೂಡ ಆಕೆಯ ನೆರವಿಗೆ ಬರುವ ಪ್ರಯತ್ನ ಮಾಡಲಿಲ್ಲ. ರಸ್ತೆಯಲ್ಲಿದ್ದ ಇತರೆ ವಾಹನ ಸವಾರರು ಕೃತ್ಯವನ್ನ ಪ್ರಶ್ನೆ ಮಾಡಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯರಿಗೆ ದೆಹಲಿ ಸುರಕ್ಷಿತವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಯುವತಿಗೆ ಹಲವು ಬಾರಿ ಥಳಿಸಿದ ಬಳಿಕ ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳಲಾಗಿದೆ. ಮತ್ತೊಬ್ಬ ಯುವಕ ಕೂಡ ಆ ಕಾರಿನಲ್ಲಿ ತೆರಳಿದ್ದಾನೆ. ಕ್ಯಾಬ್ ಚಾಲಕ ಕೂಡ ದಾಳಿ ತಡೆಯಲು ಪ್ರಯತ್ನಿಸದೆ ಕೃತ್ಯಕ್ಕೆ ಸಹಕರಿಸಿದ್ದಾನೆ.

ಪೊಲೀಸ್ ತನಿಖೆ ಶುರು

ಅತ್ಯಂತ ಅಮಾನವೀಯವಾದ ಈ ಘಟನೆಯು ವಾಯುವ್ಯ ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ನಡೆದಿದೆ. ಯುವಕನೊಬ್ಬ ಬಾಲಕಿಯನ್ನು ಪಾದಚಾರಿ ಮಾರ್ಗದಲ್ಲಿ ಥಳಿಸಿ ಟ್ಯಾಕ್ಸಿಯಲ್ಲಿ ಕರೆದೊಯ್ಯುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕ್ಯಾಬ್‌ನ ನೋಂದಣಿ ಸಂಖ್ಯೆಯನ್ನು ಆಧರಿಸಿ, ಪೊಲೀಸ್ ತಂಡವು ಅದರ ಮಾಲೀಕರ ಮನೆಗೆ ತೆರಳಿದೆ.

ಶನಿವಾರ ರಾತ್ರಿ IFFCO ಚೌಕ್‌ನಲ್ಲಿ ಕ್ಯಾಬ್ ಕೊನೆಯದಾಗಿ ಕಾಣಿಸಿಕೊಂಡಿದೆ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರು ಎಲ್ಲಿಗೆ ತಿರುಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್ ಚಾಲಕ ಬಂಧನ

ಯುವಕರ ಗ್ಯಾಂಗ್ ನಡೆಸಿದ ಅಮಾನವೀಯ ಕೃತ್ಯಕ್ಕೆ ಸಹಕರಿಸಿದ್ದ ಕ್ಯಾಬ್ ಚಾಲಕನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ಪ್ರಯಾಣಿಕರು ಎಲ್ಲಿಗೆ ಟ್ಯಾಕ್ಸಿ ಹತ್ತಿದ್ದಾರೆ, ಎಲ್ಲಿಗೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಈ ಕಿರಾತಕರ ಗ್ಯಾಂಗ್ ರೋಹಿಣಿಯಿಂದ ವಿಕಾಸಪುರಿಗೆ ಈ ಕ್ಯಾಬ್ ಅನ್ನು ಉಬರ್ ಅಪ್ಲಿಕೇಶನ್‌ನಲ್ಲಿ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆ ಪ್ರಯಾಣದ ಮಧ್ಯೆ ರಸ್ತೆಯಲ್ಲಿ ಈ ಕೃತ್ಯ ನಡೆದಿದೆ. ಯುವಕನೊಬ್ಬ ಯುವತಿಗೆ ತೀವ್ರವಾಗಿ ಥಳಿಸಿ ಬಲವಂತವಾಗಿ ಕ್ಯಾಬ್‌ಗೆ ಹತ್ತಿಸಿಕೊಂಡಿದ್ದಾನೆ. ಅವರೊಂದಿಗೆ ಮತ್ತೊಬ್ಬ ಯುವಕ ಇದ್ದಾನೆ.

ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆದ ನಂತರ, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ದೆಹಲಿಯಲ್ಲಿ ಮಹಿಳೆಯರ ಮೇಲಿನ ದಾಳಿಗಳು ಕಾಮನ್ ಆಗಿವೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ನಡುರಸ್ತೆಯಲ್ಲಿ ಇಷ್ಟೆಲ್ಲಾ ನಡೆದರೂ ಯಾರೂ ಸಹಾಯಕ್ಕೆ ಮುಂದಾಗದಿರುವುದು ಅಚ್ಚರಿ ಮೂಡಿಸಿದೆ ಎಂದು ಮತ್ತೊಬ್ಬ ನೆಟಿಜನ್ ಕಮೆಂಟ್ ಮಾಡಿದ್ದಾರೆ. ದಾಳಿಕೋರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಲವು ನೆಟಿಜನ್‌ಗಳು ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗ

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಇವತ್ತು ವೈರಲ್ ಆಗಿರುವ ಈ ವೀಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದಾರೆ.

ಯುವತಿಯನ್ನು ಥಳಿಸಿ ಬಲವಂತವಾಗಿ ಕ್ಯಾಬ್ ಗೆ ಹತ್ತಿಸಿಕೊಂಡಿರುವ ಈ ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರಿಗೆ ನೋಟಿಸ್ ನೀಡುತ್ತಿದ್ದೇನೆ. ಆಯೋಗವು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ವಿಭಾಗ